ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಟೇಜ್ ವಿನ್ನರ್ಸ್...

Last Updated 20 ಜನವರಿ 2019, 19:45 IST
ಅಕ್ಷರ ಗಾತ್ರ

‘ತಂಡದ ನಾಯಕತ್ವ ಬಿಟ್ಟು ಹೋಯಿತಲ್ಲ. ಇನ್ನಾದರೂ ಇವರು ನಿವೃತ್ತಿ ಪಡೆಯುವುದು ಒಳ್ಳೆಯದು. ಯುವಕರಿಗೆ ಅವಕಾಶ ಕೊಡಬಹುದು’–

ಇಂತಹ ವ್ಯಂಗ್ಯಭರಿತ ಸಲಹೆಗಳನ್ನೂ ಈ ಮೂವರು ಆಟಗಾರರು ಕಳೆದ ಕೆಲವು ದಿನಗಳಲ್ಲಿ ಹಲವು ಬಾರಿ ಕೇಳಿದವರು. ಆದರೆ, ಮನಸ್ಸಿಗೆ ಹಚ್ಚಿಕೊಂಡವರಲ್ಲ. ತಮ್ಮ ಆಟದ ಮೂಲಕವೇ ಟೀಕೆಗಳಿಗೆ ಉತ್ತರ ಕೊಟ್ಟರು. ತಂಡಗಳಿಗೆ ಗೆಲುವಿನ ಕಾಣಿಕೆ ನೀಡಿದರು. ತಮ್ಮ ಅವಕಾಶಕ್ಕೆ ‘ಇವರು’ ಅಡ್ಡಿಯಾಗಿದ್ದಾರೆ ಎಂದುಕೊಳ್ಳುವ ಯುವ ಆಟಗಾರರಿಗೆ ‘ಛಲದ ಪಾಠ’ ಹೇಳಿದರು. ‘ಮ್ಯಾರಥಾನ್’ ಸಾಮರ್ಥ್ಯದ ಪರಿಚಯ ಮಾಡಿಕೊಟ್ಟರು.

ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಹೊಡೆದ ಮಹೇಂದ್ರಸಿಂಗ್ ಧೋನಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನದ ಎದುರಿನ ರಣಜಿ ಕ್ವಾರ್ಟರ್‌ಫೈನಲ್‌ನಲ್ಲಿ ದಿಟ್ಟ ಆಟವಾಡಿ ಕರ್ನಾಟಕವನ್ನು ಗೆಲ್ಲಿಸಿದ ಆರ್. ವಿನಯಕುಮಾರ್ ಮತ್ತು ನಾಗಪುರದಲ್ಲಿ ಉತ್ತರಾಖಂಡದ ವಿರುದ್ಧ ದ್ವಿಶತಕ ಬಾರಿಸಿದ ವಾಸೀಂ ಜಾಫರ್ ಅವರೇ ಆ ತ್ರಿಮೂರ್ತಿಗಳು.

ಈ ಮೂವರೂ ಆಡುತ್ತಿರುವ ದರ್ಜೆಗಳು ಬೇರೆ ಬೇರೆ ಇರಬಹುದು. ಆದರೆ ಇವರಲ್ಲಿ ಒಂದು ಸಾಮ್ಯತೆ ಎಂದರೆ, ವಯಸ್ಸು ಮತ್ತು ಪರಿಸ್ಥಿತಿಯನ್ನು ಮೀರಿ ಬೆಳೆಯುವ ಗುಣ. ಅದರೊಂದಿಗೆ ಆಟದೊಂದಿಗೆ ಇರುವ ಅದಮ್ಯ ಪ್ರೀತಿ. ಕ್ರಿಕೆಟ್‌ನೊಂದಿಗೆ ನಂಟನ್ನು ಸದಾ ಬೆಸೆದಿಟ್ಟುಕೊಳ್ಳಲು ಫಿಟ್‌ನೆಸ್‌ ಕಾಪಾಡಿಕೊಳ್ಳುವಲ್ಲಿಯೂ ಅವರದ್ದು ವಿಶೇಷ ಕಾಳಜಿ.

ಆದರೆ, ಅವರು ಒಂದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸುವುದೇ ತಡ. ‘ವಯಸ್ಸಾಗಿದೆ. ತಂಡದಿಂದ ಕಿತ್ತಾಕಿ. ರಿಟೈರ್ ಆಗಲಿ’ ಎಂಬ ಮಾತುಗಳು ಕೇಳಿ ಬರುತ್ತವೆ. ಬಹುತೇಕ ಎಲ್ಲ ಕ್ರೀಡಾಪಟುಗಳೂ 35ರ ಆಸುಪಾಸಿನಲ್ಲಿದ್ದಾಗ ಕೇಳುವ ಸಾಮಾನ್ಯ ಟೀಕೆಗಳು ಇವು. ಬಾಲ್ಯದಿಂದಲೇ ಸ್ಪರ್ಧಾತ್ಮಕ ಟೂರ್ನಿಗಳಲ್ಲಿ ಆಡುತ್ತ ಬೆಳೆಯುವ ಆಟಗಾರರು ಸಾಧಿಸಿದಷ್ಟೂ ಅವರ ಮೇಲೆ ನಿರೀಕ್ಷೆ ಹೆಚ್ಚುತ್ತಲೇ ಹೋಗುತ್ತದೆ. ಆದ್ದರಿಂದಲೇ 40ರ ಆಟಗಾರರನ್ನು ಯುವ ಅಥವಾ ಮಧ್ಯವಯಸ್ಕರಲ್ಲ ಎಂಬ ಭಾವನೆ ಬೇರುಬಿಟ್ಟಿದೆ. ಆದರೂ ಈ ಮನಸ್ಥಿತಿಯನ್ನು ಮೀರಿಯೂ ಮಿಂಚಿದ ದಿಗ್ಗಜರು ಬಹಳಷ್ಟು ಜನರಿದ್ದಾರೆ.

ಭಾರತ ಟೆಸ್ಟ್ ತಂಡದ ಮೊದಲ ನಾಯಕ ಕರ್ನಲ್ ಸಿ.ಕೆ. ನಾಯ್ಡು ತಮ್ಮ 60ನೇ ವಯಸ್ಸಿನಲ್ಲಿಯೂ ರಣಜಿ ಆಡಿದ್ದರಂತೆ. 1963ರಲ್ಲಿ ನಡೆದಿದ್ದ ಗವರ್ನರ್ಸ್‌ ಇಲೆವನ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಇಲೆವನ್ ತಂಡಗಳ ನಡುವಣ ಸಹಾಯಾರ್ಥ ಪಂದ್ಯದಲ್ಲಿ ಆಡಿದ್ದ ನಾಯ್ಡು ಅವರಿಗೆ 69 ತುಂಬಿತ್ತು. ಅದು ಅವರ ಜೀವನದ ಕೊನೆಯ ಕ್ರಿಕೆಟ್ ಪಂದ್ಯವಾಯಿತು. 72ನೇ ವಯಸ್ಸಿನಲ್ಲಿ ಅವರು ನಿಧನರಾದರು.

16ನೇ ವಯಸ್ಸಿಗೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಚಿನ್, ನಿವೃತ್ತಿ ಘೋಷಿಸಿದ್ದು ತಮ್ಮ ನಲ್ವತ್ತರ ಹರೆಯದಲ್ಲಿ. ಕರ್ನಾಟಕದ ಸ್ಪಿನ್ನರ್ ಸುನಿಲ್‌ ಜೋಶಿ, 41ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 90ರ ದಶಕದ ನಂತರ ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯಲು ಮತ್ತು ಅದನ್ನು ಉಳಿಸಿಕೊಳ್ಳುವ ಪೈಪೋಟಿ ದಿನದಿಂದ ದಿನಕ್ಕೆ ಹೆಚುತ್ತಿದೆ.

ತಮ್ಮ ಜೂನಿಯರ್ ಮತ್ತು ಸಮಕಾಲೀನ ಪ್ರತಿಭೆಗಳೊಂದಿಗೆ ತುರುಸಿನ ಪೈಪೋಟಿ ನಡೆಸಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕು. ಈಗಂತೂ ಟೀನ್‌ ಏಜ್ ಪ್ರತಿಭೆಗಳ ದಂಡು ಕ್ರಿಕೆಟ್‌ ಅಂಗಳಕ್ಕೆ ಲಗ್ಗೆ ಹಾಕುತ್ತಿದೆ. ಅವರೊಂದಿಗೆ ಸ್ಪರ್ಧಿಸಿ ಸ್ಥಾನ ಉಳಿಸಿಕೊಳ್ಳುವ ಮಾನಸಿಕ ಮತ್ತು ದೈಹಿಕ ತಾಕತ್ತು ಕೂಡ ಅಗತ್ಯ. ಧೋನಿಗೆ ರಿಷಭ್ ಪಂತ್ ಅವರಂತಹ ಪ್ರತಿಸ್ಫರ್ಧಿ ಇದ್ದಾರೆ. ಕರ್ನಾಟಕದಲ್ಲಿ ವಿನಯ್‌ಗೆ ರೋನಿತ್ ಮೋರೆ, ಪ್ರಸಿದ್ಧ ಕೃಷ್ಣ ಇದ್ದಾರೆ. ಮುಂಬೈ ತಂಡದಲ್ಲಿ ರಾಜನಂತೆ ಮೆರೆದು, ರನ್‌ ಯಂತ್ರವಾಗಿದ್ದ ಜಾಫರ್‌ ಈಗ ವಿದರ್ಭ ತಂಡದಲ್ಲಿ ಮಿಂಚುತ್ತಿದ್ದಾರೆ. ಆಯಾ ರಾಜ್ಯಗಳಲ್ಲಿ ಅವರಿಗೂ ಯುವ ಓಪನಿಂಗ್ ಬ್ಯಾಟ್ಸ್‌ಮನ್‌ಗಳ ಸ್ಪರ್ಧೆ ಖಂಡಿತವಾಗಿಯೂ ಇದೆ. ಆದರೆ, ಅವರು 40 ದಾಟಿದ ನಂತರವೂ ಎರಡು ದ್ವಿಶತಕ ಹೊಡೆದ ಅಪರೂಪದ ದಾಖಲೆಯನ್ನು ಮಾಡಿದ್ದಾರೆ.

‘ಫಿನಿಷರ್’ ಖ್ಯಾತಿಯ ಧೋನಿ ಸುಮಾರು 380 ದಿನಗಳ ನಂತರ ಅರ್ಧಶತಕ ಹೊಡೆದಿದ್ದರು. ಸಿಡ್ನಿಯಲ್ಲಿ ಅವರು 96 ಎಸೆತಗಳಲ್ಲಿ 53 ರನ್‌ ಹೊಡೆದಿದ್ದರು. ಆ ಪಂದ್ಯದಲ್ಲಿ ಭಾರತ ಸೋತಿತ್ತು. ಆಗಲೂ ಅವರು ಟೀಕೆಗಳನ್ನು ಎದುರಿಸಿದ್ದರು. ಹೆಚ್ಚು ಎಸೆತಗಳನ್ನು ಆಡಿ ತಂಡದ ಸೋಲಿಗೆ ಕಾರಣರಾದರು ಎಂಬ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಆ ಸಂದರ್ಭದಲ್ಲಿ ಅವರ ಅಂತಹ ತಾಳ್ಮೆಯ ಅಟದ ಅಗತ್ಯವಿತ್ತು ಎಂಬ ವಾದಗಳೂ ನಡೆದಿದ್ದವು. ಆದರೆ ಅವರ ನಿಜವಾದ ಆಟ ಮೂಡಿಬಂದಿದ್ದು ಎರಡನೇ ಪಂದ್ಯದಲ್ಲಿ. ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಜಯದ ದಡ ಸೇರಿಸಿದ್ದರು. ಮೂರನೇ ಪಂದ್ಯದಲ್ಲಿ ತಾಳ್ಮೆಯ ಅರ್ಧಶತಕಕ್ಕೆ ಗೆಲುವು ಒಲಿದಿತ್ತು. ಭಾರತ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿಯ ಕಿರೀಟ ಧರಿಸಿತ್ತು.

ಹೋದ ತಿಂಗಳು 37 ವಸಂತಗಳನ್ನು ಪೂರೈಸಿರುವ ಧೋನಿ ವಿಕೆಟ್‌ಕೀಪಿಂಗ್‌ನಲ್ಲಿಯೂ ತಮ್ಮ ಚುರುಕುತನ ಮೆರೆದಿದ್ದಾರೆ. ಅವರ ಶರವೇಗದ ಸ್ಟಂಪಿಂಗ್‌ಗಳ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣ
ಗಳಲ್ಲಿ ಅಪಾರ ಮೆಚ್ಚುಗೆ ಗಳಿಸುತ್ತಿವೆ. ಈ ವರ್ಷದ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಆಡಬೇಕು ಎಂದು ಹೇಳುವ ದೊಡ್ಡ ಬಳಗವೇ ಇದೆ.

ಮುಂದಿನ ತಿಂಗಳು ವಿನಯಕುಮಾರ್ 35ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ರಣಜಿ ಟ್ರೋಫಿಗೆ ಮುತ್ತಿಡುವ ಆಸೆ ಅವರದ್ದು. ರಾಜ್ಯ ತಂಡಕ್ಕೆ ನಾಯಕನಾಗಿ ಎರಡು ರಣಜಿ ಟ್ರೋಫಿ ಗೆದ್ದುಕೊಟ್ಟ ಹೆಗ್ಗಳಿಕೆ ವಿನಯಕುಮಾರ್ ಅವರದ್ದು. ದಾವಣಗೆರೆಯ ನೆಲದಿಂದ ಬೆಳೆದು ರಾಜ್ಯ ತಂಡದಲ್ಲಿ ಮಧ್ಯಮವೇಗಿ ಬೌಲರ್‌ ಆಗಿ ಪ್ರವೇಶಿಸಿದ ವಿನಯ್ ಕಂಡ ಏಳುಬೀಳುಗಳು ಹಲವು. ಆದರೆ, ಕರ್ನಾಟಕ ಕ್ರಿಕೆಟ್ ಪರಂಪರೆಯ ಭವ್ಯತೆಯನ್ನು ಉಳಿಸಿಕೊಂಡ ಶ್ರೇಯ ಅವರಿಗೆ ಸಲ್ಲುತ್ತದೆ. ಕರ್ನಾಟಕವು ರೋಜರ್ ಬಿನ್ನಿ, ಜಾವಗಲ್ ಶ್ರೀನಾಥ್, ದೊಡ್ಡಗಣೇಶ, ಡೇವಿಡ್ ಜಾನ್ಸನ್, ವೆಂಕಟೇಶಪ್ರಸಾದ್ ಅವರಂತಹ ಪ್ರತಿಭಾವಂತ ಮಧ್ಯಮವೇಗಿಗಳನ್ನು ದೇಶಕ್ಕೆ ಕಾಣಿಕೆಯಾಗಿ ಕೊಟ್ಟಿದೆ. ಆ ಸಾಲಿನಲ್ಲಿ ವಿನಯ್‌ ಕೂಡ ಸ್ಥಾನ ಪಡೆದಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ನಿರಂತರವಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ದೇಶಿ ಕ್ರಿಕೆಟ್‌ನಲ್ಲಿ ಅವರ ಸಾಧನೆ ದೊಡ್ಡದು. 100ಕ್ಕೂ ಹೆಚ್ಚು ರಣಜಿ ಪಂದ್ಯಗಳನ್ನು ಆಡಿರುವ ಅವರ ಆತ್ಮವಿಶ್ವಾಸ ಈಗ ಮೇರುಮಟ್ಟದಲ್ಲಿದೆ.

ತಾವು ಕೇವಲ ಬೌಲರ್‌ ಅಲ್ಲ. ಆಲ್‌ರೌಂಡರ್‌ ಕೂಡ ಹೌದು ಎಂಬುದನ್ನು ಅವರು ಅಗತ್ಯವಿದ್ದಾಗಲೆಲ್ಲ ತೋರಿಸಿಕೊಟ್ಟಿದ್ದಾರೆ. ಈ ಋತುವಿನಲ್ಲಿ ಮೂರು ಅರ್ಧಶತಕಗಳು ಅವರ ಖಾತೆಗೆ ಸೇರಿವೆ. ಅದರಲ್ಲೂ ಲೀಗ್ ಹಂತದಲ್ಲಿ ಛತ್ತೀಸಗಡ ಎದುರಿನ ಮೊದಲ ಇನಿಂಗ್ಸ್‌ನಲ್ಲಿ (ಅಜೇಯ 90) ಮತ್ತು ಎಂಟರ ಘಟ್ಟದ ಪಂದ್ಯದಲ್ಲಿ (ಅಜೇಯ 83) ಅವರ ಆಟಗಳು ತಂಡದ ಗೆಲುವಿಗೆ ಕಾರಣವಾಗಿದ್ದವು. ಬೌಲಿಂಗ್‌ನಲ್ಲಿಯೂ ಮೊನಚು ಕಳೆದುಕೊಂಡಿಲ್ಲ.

ಈ ಬಾರಿಯ ರಣಜಿ ಟೂರ್ನಿಯ ಮಧ್ಯದಲ್ಲಿಯೇ ಅವರನ್ನು ನಾಯಕತ್ವದಿಂದ ಬದಲಿಸಲಾಗಿತ್ತು. ಮನೀಷ್ ಪಾಂಡೆ ನಾಯಕರಾಗಿದ್ದರು. ಇದರಿಂದ ಎದೆಗುಂದದ ವಿನಯ್ ತಮ್ಮ ಆರ್ಭಟ ಮುಂದುವರಿಸಿದ್ದಾರೆ. ಪಂದ್ಯಗಳಲ್ಲಿ ಫೀಲ್ಡಿಂಗ್ ಮಾಡುವಾಗಲೂ ಸ್ಟ್ರೆಚ್ಚಿಂಗ್ ವ್ಯಾಯಾಮಗಳನ್ನು ಮಾಡುವ ಅವರು ದೇಹದ ಕ್ಷಮತೆಯನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿಕೊಂಡಿದ್ದಾರೆ. ಇದು ಅವರಿಗೆ ವರದಾನವಾಗಿದೆ.

‘ಸಾಧನೆಗೆ ವಯಸ್ಸು ಮುಖ್ಯವಲ್ಲ. ಶ್ರದ್ಧೆ, ಶಿಸ್ತು ಮತ್ತು ಆಟದ ಮೇಲಿನ ಪ್ರೀತಿ ಅಗತ್ಯ. ಮನೋಬಲ ಗಟ್ಟಿಯಾಗಿದ್ದರೆ ಎಲ್ಲವೂ ಸಾಧ್ಯ’ ಎನ್ನುವ ಟೆನಿಸ್ ತಾರೆ, 37ರ ಹರೆಯದ ರೋಜರ್ ಫೆಡರರ್ ಮಾತುಗಳು ಕ್ರಿಕೆಟ್ ವಲಯಕ್ಕೂ ಅನ್ವಯಿಸುತ್ತದೆ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT