ವರುಷ ಹತ್ತು ವಿರಾಟ್ ಗಮ್ಮತ್ತು..

7

ವರುಷ ಹತ್ತು ವಿರಾಟ್ ಗಮ್ಮತ್ತು..

Published:
Updated:
Deccan Herald

2012ರ ಆ ಸಂಜೆ. ಢಾಕಾದ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಎದುರು ಭಾರತದ ಅಮೋಘ ಜಯ ದಾಖಲಾಗಿತ್ತು. ಆ ಪಂದ್ಯದಲ್ಲಿ ‘ಮಾಸ್ಟರ್‌ ಬ್ಲಾಸ್ಟರ್‌’ ಸಚಿನ್ ತೆಂಡೂಲ್ಕರ್ ಅರ್ಧಶತಕ ಗಳಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಅಬ್ಬರದ ಶತಕ (183 ರನ್) ಹೊಡೆದಿದ್ದರು. ಆ ಪಂದ್ಯವು ಸಚಿನ್‌ ವೃತ್ತಿಜೀವನದ ಕೊನೆಯ ಏಕದಿನ ಅಂತರರಾಷ್ಟ್ರೀಯ ಪಂದ್ಯವಾಗಿತ್ತು.  ಆ ದಿನವೇ ಕೆಲವರು ಸಚಿನ್ ದಾಖಲೆಗಳನ್ನು ಮುರಿಯುವ ಶಕ್ತಿ ವಿರಾಟ್‌ಗಲ್ಲದೇ ಇನ್ನಾರಿಗೂ ಇಲ್ಲ ಎಂದಿದ್ದರು.

ಆ ಮಾತು ಈಗ ನಿಜವಾಗುತ್ತಿದೆ. ಬದಲಾದ ಕಾಲಕ್ಕೆ ತಕ್ಕಂತೆ ವಿರಾಟ್ ಅವರು ಸಚಿನ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗುವ ನಿರೀಕ್ಷೆ ಮೂಡಿಸಿದ್ದಾರೆ. ‘ದಾಖಲೆಗಳು ಇರುವುದೇ ಮುರಿಯಲು’ ಎಂಬ ಮಾತನ್ನು ನಿಜ ಮಾಡುತ್ತಿದ್ದಾರೆ. ಇದೀಗ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಒಂದು ದಶಕ ಕಳೆದಿದೆ. ಇದೇ ಸಂದರ್ಭದಲ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಹತ್ತು ಸಾವಿರ ರನ್‌ಗಳನ್ನು ಗಳಿಸಿದ ದಾಖಲೆ ಮಾಡಿದ್ದಾರೆ.  ಅದೂ ಕೇವಲ 213 ಪಂದ್ಯಗಳಲ್ಲಿ. ಇಷ್ಟೊಂದು ವೇಗದಲ್ಲಿ ಇಲ್ಲಿಯವರೆಗೆ ಯಾರೂ ಇಷ್ಟು ರನ್‌ಗಳ ರಾಶಿ ಪೇರಿಸಿಲ್ಲ. ದಾಖಲೆಗಳ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಅಬ್ಬರಕ್ಕೆ ಬೆರಗಾಗಿದ್ದಾರೆ.

ವಿರಾಟ್ ದಶಕದ ಹಾದಿ
2008ರಲ್ಲಿ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ವಿರಾಟ್ ಪದಾರ್ಪಣೆ ಮಾಡಿದ್ದರು. ಆಗಿನಿಂದಲೂ ಅವರ ಮತ್ತು ಸಚಿನ್ ನಡುವಣ ಹೋಲಿಕೆಯ ಕುರಿತ ಚರ್ಚೆಗಳು ನಡೆಯುತ್ತಲೇ ಇವೆ. ಏಕೆಂದರೆ ಆ ಪಂದ್ಯದಲ್ಲಿ ಸಚಿನ್ ಆಡಿರಲಿಲ್ಲ. ಅವರ ಬದಲಿಗೆ ವಿರಾಟ್ ಅವರು ತಮ್ಮ ‘ಸ್ನೇಹಿತ’ ಗೌತಮ್ ಗಂಭೀರ್ ಜೊತೆಗೆ  ಇನಿಂಗ್ಸ್‌ ಆರಂಭಿಸಿದ್ದರು. ಕೇವಲ 12 ರನ್‌ ಗಳಿಸಿದ್ದರು. 146 ರನ್‌ ಗಳಿಸಿದ್ದ ಭಾರತ ತಂಡ ಸೋತಿತ್ತು.

ಆ ಕಾಲಘಟ್ಟದಲ್ಲಿ ಒಬ್ಬರಿಗಿಂತ ಒಬ್ಬ ಪ್ರತಿಭಾನ್ವಿತರು ಇದ್ದರು. ಸಚಿನ್ ತೆಂಡೂಲ್ಕರ್,ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಯುವರಾಜ್ ಸಿಂಗ್, ರೋಹಿತ್ ಶರ್ಮಾ ಮಿಂಚುತ್ತಿದ್ದ ಕಾಲವದು. 19 ವರ್ಷದೊಳಗಿನವರ ವಿಶ್ವಕಪ್ ಗೆದ್ದಿದ್ದ ಭಾರತ ತಂಡದ ನಾಯಕತ್ವ ವಹಿಸಿದ್ದ ವಿರಾಟ್ ಕೂಡ ಉತ್ತಮ ಬ್ಯಾಟ್ಸ್‌ಮನ್‌ ಎಂಬ ಹೆಸರು ಗಳಿಸಿದ್ದವರು. ಜೊತೆಗೆ ‘ಮುಂಗೋಪಿ’ ಎಂಬ ಆರೋಪವೂ ಅವರ ಮೇಲಿತ್ತು. ಅದಕ್ಕೆ ತಕ್ಕಂತೆ ಕೆಲವು ಕಹಿ ಘಟನೆಗಳೂ ನಡೆದಿದ್ದವು. ಕೆಲವು ಪಂದ್ಯಗಳಲ್ಲಿ ಬೆಂಚ್ ಕಾದಿದ್ದೂ ಆಯಿತು. ಬ್ಯಾಟ್ಸ್‌ಮನ್‌ಗಳಿಗೆ ನೀರು ಕುಡಿಸಿ ಬರುವ ಕೆಲಸವನ್ನೂ ಮಾಡಿದ್ದರು. ಆದರೆ ಆ ಸಂದರ್ಭವನ್ನು ಅವರು ತಮ್ಮ ಕಲಿಕೆಗಾಗಿ ಬಳಸಿಕೊಂಡಿದ್ದು ದಾರಿದೀಪವಾಯಿತು.

2009ರಲ್ಲಿ ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ ಶ್ರೀಲಂಕಾ ಎದುರು ಅವರು ಬಾರಿಸಿದ ಚೊಚ್ಚಲ ಶತಕ ಬದುಕು ಬದಲಿಸಿತು. ಟೀಕಾಕಾರರ ಬಾಯಿ ಮುಚ್ಚಿದವು. ತಂಡದಲ್ಲಿದ್ದ ಹಿರಿಯರಿಂದ ಕಲಿಯುತ್ತ, ಸಮಕಾಲೀನರು ಮತ್ತು ಕಿರಿಯರೊಂದಿಗೆ ಬೆರೆಯುತ್ತ ಬೆಳೆಯತೊಡಗಿದರು. 2011ರ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡದಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡರು. ಅದರಲ್ಲಿ ಸಿಕ್ಕ ಒಂಬತ್ತು ಪಂದ್ಯಗಳಲ್ಲಿ 282 ರನ್‌ಗಳನ್ನು ಗಳಿಸಿದರು. ಅದರಲ್ಲಿ ಒಂದು ಶತಕವೂ ಇತ್ತು.

‘ವಿಶ್ವಕಪ್ ಆಡಿದ ಅನುಭವವೇ ನನ್ನ ಸಾಮರ್ಥ್ಯ ವೃದ್ಧಿಸಲು ಕಾರಣ. ನನ್ನನ್ನು ಸಮರ್ಥ ಆಟಗಾರನನ್ನಾಗಿ ರೂಪಿಸಿದ್ದು 2011ರ ವಿಶ್ವಕಪ್ ಟೂರ್ನಿ’ ಎಂದು ವಿರಾಟ್ ಹಿಂದೊಮ್ಮೆ ಹೇಳಿದ್ದರು.

ಫಿಟ್‌ನೆಸ್‌ ಟ್ರೆಂಡ್ ಹುಟ್ಟು ಹಾಕಿದ ಆಟಗಾರ
ಹೆಚ್ಚುತ್ತಿರುವ ಸ್ಪರ್ಧೆ, ಎಲ್ಲ ಮಾದರಿಗಳಲ್ಲಿ ಆಡುವ ಒತ್ತಡ, ವೇಳಾಪಟ್ಟಿಯ ಒತ್ತಡಗಳನ್ನು ನಿಭಾಯಿಸಲು ದೈಹಿಕ ಕ್ಷಮತೆ ಮುಖ್ಯ ಎಂಬುದನ್ನು ಮನಗಂಡ ಅವರು ‘ಫಿಟ್‌ನೆಸ್‌ ಕ್ರಾಂತಿ’ಯನ್ನೇ ಹುಟ್ಟುಹಾಕಿದ್ದಾರೆ. ಕೆಲವು ವರ್ಷಗಳ ಹಿಂದೆ ಗ್ರೆಗ್ ಚಾಪೆಲ್ ಕೋಚ್ ಅಗಿದ್ದಾಗ ಭಾರತದ ಆಟಗಾರರು ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಮತ್ತು ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರ ಸಾಮಿಪ್ಯದಲ್ಲಿ ವಿರಾಟ್ ಫಿಟ್‌ನೆಸ್‌ ಮಂತ್ರ ಕಲಿತುಕೊಂಡರು.

ಇವತ್ತು ವಯೋಮಿತಿಯ ಕ್ರಿಕೆಟ್‌ನಲ್ಲಿ ಆಡುವ ಮಕ್ಕಳು ಕೂಡ ವಿರಾಟ್ ಅವರ ಫಿಟ್‌ನೆಸ್ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಬ್ಯಾಟ್ಸ್‌ಮನ್ ಆಗಿ ಶತಕ ಹೊಡೆಯುವುದರ ಜೊತೆಗೆ ಫೀಲ್ಡರ್‌ ಆಗಿ ರನ್‌ ಉಳಿಸುವುದು ಕೂಡ ಪ್ರಮುಖವಾದದ್ದು ಎಂದು ಕೊಹ್ಲಿ ನಂಬಿದ್ದಾರೆ.

‘ಅಗತ್ಯ ಬಿದ್ದರೆ ಒಂದು ಓವರ್‌ನ ಎಲ್ಲ ಎಸೆತಗಳಲ್ಲಿಯೂ ನಾನು ಡೈವ್ ಮಾಡಿ ಚೆಂಡನ್ನು ತಡೆಯಲು ಸಿದ್ಧವಾಗಿದ್ದೇನೆ’ ಎಂದು ವಿರಾಟ್ ಹೇಳುತ್ತಾರೆ. ಪಿಚ್‌ನಲ್ಲಿ ರನ್‌ಗಾಗಿ ಓಡುವ ಅವರ ವೇಗ ಅಮೋಘವಾದದ್ದು. ಧೋನಿ ಮಾತ್ರ ಅವರನ್ನು ಸರಿಗಟ್ಟಬಲ್ಲರು. ಅವರೊಂದಿಗೆ ಬ್ಯಾಟಿಂಗ್ ಮಾಡುವ ಕೆಲವು ಬ್ಯಾಟ್ಸ್‌ಮನ್‌ಗಳು ವಿರಾಟ್ ವೇಗ ಸರಿಗಟ್ಟಲು ಪರದಾಡುತ್ತಾರೆ. 

‘ಜೀವನದಲ್ಲಿ ಎದುರಾದ ಕಠಿಣ ಸವಾಲುಗಳನ್ನು ದಿಟ್ಟವಾಗಿ ಎದುರಿಸುವುದನ್ನು ಬಾಲ್ಯದಿಂದಲೇ ರೂಢಿಸಿಕೊಂಡವರು ವಿರಾಟ್. ಆದ್ದರಿಂದಲೇ ಅವರಿಗೆ ಈ ಸಾಧನೆ ಮಾಡಲು ಸಾಧ್ಯವಾಗುತ್ತದೆ. 2006ರಲ್ಲಿ ಕರ್ನಾಟಕದ ಎದುರಿನ ರಣಜಿ ಟ್ರೋಫಿ ಪಂದ್ಯ ದೆಹಲಿಯಲ್ಲಿ ನಡೆದಿತ್ತು. ಎರಡನೇ ದಿನದಾಟದ ರಾತ್ರಿ ವಿರಾಟ್ ತಂದೆ ಪ್ರೇಮ್ ಕೊಹ್ಲಿ ನಿಧನರಾದರು. ಮಾರನೇ ದಿನ ವಿರಾಟ್ ಬ್ಯಾಟ್‌ ಹಿಡಿದು ಮೈದಾನಕ್ಕೆ ಹಾಜರಾಗಿದ್ದರು. ರಾತ್ರಿಯಿಡೀ ಕಣ್ಣೀರು ಹಾಕಿದ್ದ ಕುರುಹುಗಳು ಮುಖದಲ್ಲಿದ್ದವು. ಆದರೆ ಆ ದಿನ ತಮ್ಮ ತಂಡವು ಸೋಲುವುದನ್ನು ತಪ್ಪಿಸಿದರು. 281 ಎಸೆತಗಳಲ್ಲಿ 90 ರನ್‌ ಗಳಿಸಿದರು. ತಂಡ ಸೋಲಿನ ಭೀತಿಯಿಂದ ತಪ್ಪಿಸಿಕೊಂಡಿತ್ತು. ಎಲ್‌ಬಿಡಬ್ಲ್ಯು ಆಗಿ ಪೆವಿಲಿಯನ್‌ಗೆ ಮರಳಿದ್ದ 17 ವರ್ಷದ ಹುಡುಗ ವಿರಾಟ್ ತನ್ನ ಪ್ಯಾಡ್‌, ಗ್ಲೌಸ್‌, ಬಿಚ್ಚಿಟ್ಟು ಅಪ್ಪನ ಅಂತ್ಯಸಂಸ್ಕಾರಕ್ಕೆ ತೆರಳಿದ್ದ. ಅವರ ಕ್ರಿಕೆಟ್ ಪ್ರೀತಿ ಮತ್ತು ಬದ್ಧತೆಯೇ ಅವರನ್ನು ಇಂದು ಶ್ರೇಷ್ಠ ಆಟಗಾರನನ್ನಾಗಿ ಮಾಡಿದೆ’ ಎಂದು ಆಗ ತಂಡದ ಕೋಚ್ ಆಗಿದ್ದ ಚೇತನ್ ಚೌಹಾಣ್ ನೆನಪಿಸಿಕೊಳ್ಳುತ್ತಾರೆ.

ಬ್ರ್ಯಾಂಡ್‌ ಮೌಲ್ಯದ ಸರದಾರ
ಸಚಿನ್ ಕೂಡ ಕೆಲವು ವರ್ಷ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆದರೆ ಆ ಸಂದರ್ಭದಲ್ಲಿ ಅವರ ಬ್ಯಾಟಿಂಗ್‌ ಲಯ ತಪ್ಪಿತ್ತು. ಈ ವಿಷಯದಲ್ಲಿ ವಿರಾಟ್ ಅವರು ಸಚಿನ್‌ಗಿಂತ ಬಹುದೂರ ಸಾಗಿದ್ದಾರೆ. ನಾಯಕನಾದ ನಂತರವೇ ಹೆಚ್ಚು ಯಶಸ್ಸು ಸಾಧಿಸಿದ್ದಾರೆ. 2012ರಲ್ಲಿ ಟೆಸ್ಟ್ ಪದಾರ್ಪಣೆಯ ಅವಕಾಶ ಕೊಹ್ಲಿಗೆ ಸಿಕ್ಕಿತ್ತು. ಅದಾಗಿ ಎರಡು ವರ್ಷಗಳ ನಂತರ ಟೆಸ್ಟ್ ತಂಡದ ನಾಯಕತ್ವ ಹೊಣೆಯನ್ನು ನೀಡಲಾಯಿತು. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಮಧ್ಯ ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತಿ ಘೋಷಿಸಿದಾಗ ವಿರಾಟ್ ಜವಾಬ್ದಾರಿ ವಹಿಸಿಕೊಂಡರು. ಆಗ ತಂಡದಲ್ಲಿ ತಾರಾ ವರ್ಚಸ್ಸಿನ ಆಟಗಾರರ ಕೊರತೆ ಇತ್ತು. ಅದು ಈಗಲೂ ಇದೆ. ಆದರೆ ಇದರಿಂದ ತಮ್ಮ ಆಟದ ಮೇಲೆ ಕೆಟ್ಟ ಪರಿಣಾಮವಾಗದಂತೆ ಅವರು ಎಚ್ಚರ ವಹಿಸಿದರು.

ಈ ವಿಷಯದಲ್ಲಿ ಅವರಿಗೆ ಬಾಲ್ಯದ ಕೋಚ್ ರಾಜಕುಮಾರ್ ಶರ್ಮಾ ಮತ್ತು ಆಗ ಸ್ನೇಹಿತೆ (ಈಗ ಪತ್ನಿ) ಅನುಷ್ಕಾ ಶರ್ಮಾ ಅವರು ಕೊಹ್ಲಿಗೆ ಬೆಂಬಲವಾಗಿ ನಿಂತರು. ಅವರ ಅಗ್ರೆಸಿವ್‌ ವ್ಯಕ್ತಿತ್ವವನ್ನು ತಿದ್ದುವತ್ತ ಶ್ರಮಿಸಿದರು.  ಅಂಗಳದಲ್ಲಿ ಆಡುವಾಗ ವಿರಾಟ್‌, ತಮ್ಮ ಆಕ್ರಮಣಶೀಲ ಗುಣವನ್ನು ಸದುಪಯೋಗ ಪಡಿಸಿಕೊಳ್ಳುವ ಕಲೆ ಕಲಿತುಕೊಂಡರು. ಆವರು ನಾಯಕತ್ವ ವಹಿಸಿಕೊಂಡ ಆರಂಭದ ದಿನಗಳ ಪತ್ರಿಕಾಗೋಷ್ಠಿಯ ಹೇಳಿಕೆಗಳು ಮತ್ತು ತೀರಾ ಇತ್ತೀಚಿನ ಹೇಳಿಕೆಗಳನ್ನು ಹೋಲಿಕೆ ಮಾಡಿದರೆ ಈ ವ್ಯತ್ಯಾಸ ತಿಳಿಯುತ್ತದೆ.

ಇದೆಲ್ಲದರ ಫಲವಾಗಿ ಅವರು ಈಗ ಕಾರ್ಪೊರೇಟ್ ಜಗತ್ತಿನ ಅಚ್ಚುಮೆಚ್ಚಿನ ಆಟಗಾರನಾಗಿದ್ದಾರೆ. ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರನ್ನೂ ಆದಾಯದಲ್ಲಿ ಮೀರಿಸಿದ್ದಾರೆ. ವಿರಾಟ್ ಅದಾಯವು ಈಗ ದಿನವೊಂದಕ್ಕೆ ಐದು ಕೋಟಿ ರೂಪಾಯಿಯಂತೆ!

ಸದ್ಯ ನಡೆಯುತ್ತಿರುವ ವೆಸ್ಟ್‌ ಇಂಡೀಸ್ ಎದುರಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ನೋಡಿದವರಿಗೆ ಅಚ್ಚರಿಯಾಗಿದ್ದು ನಿಜ. ಏಕೆಂದರೆ ಅವರ ಆಟದ ವೈಖರಿಯೇ ಬದಲಾಗಿದೆ. ಅವರ ಹೊಡೆತಗಳು, ಪಾದಚಲನೆಗಳಲ್ಲಿ ಹೊಸ ಬಿಸುಪು ಕಾಣುತ್ತಿದೆ. ಕಡಿಮೆ ಶಕ್ತಿ ಮತ್ತು ನಿಖರ ಟೆಕ್ನಿಕ್‌ನೊಂದಿಗೆ ಚೆಂಡನ್ನು ಬೌಂಡರಿ ದಾಟಿಸುತ್ತಿರುವ ಅವರ ಆಟಕ್ಕೆ ಬೌಲರ್‌ಗಳು ಬಸವಳಿಯುತ್ತಿದ್ದಾರೆ. ಅವರ ಆಟ ಹೀಗೆ ಮುಂದುವರಿದರೆ ಮತ್ತಷ್ಟು ದಾಖಲೆಗಳು ಸೂರೆಯಾಗಬಹುದು.  ವಿರಾಟ್ ಸ್ವತಃ ‘ಮೈಲ್‌ಸ್ಟೋನ್’ ಆಗಬಹುದು. 

ವಿವಾದಗಳ ಸುತ್ತ
ಆಟದಲ್ಲಿ ಅದ್ವಿತೀಯನಾಗಿ ಮೆರೆಯುತ್ತಿರುವ ವಿರಾಟ್ ವಿವಾದಗಳಿಂದ ಮುಕ್ತವಾಗಿಲ್ಲ. ವಿದೇಶದಲ್ಲಿ ನಡೆಯುವ ಸರಣಿಗಳಿಗೆ ಪತ್ನಿಯನ್ನು ಕರೆದುಕೊಂಡು ಹೋಗುವ ವಿಚಾರದ ಕುರಿತು ಬಿಸಿಸಿಐ ಮತ್ತು ಅವರ ನಡುವಣ ಸ್ವಲ್ಪ ಇರಿಸುಮುರಿಸು ಉಂಟಾಗಿತ್ತು.

ಇಂಗ್ಲೆಂಡ್‌ನಲ್ಲಿ ಸರಣಿ ನಡೆಯುವ ಸಂದರ್ಭದಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರನ್ನು ರಾಯಭಾರ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಅದಲ್ಲಿ ಹೈಕಮಿಷನರ್ ಜೊತೆಗೆ ತಂಡವು ತೆಗೆಸಿಕೊಂಡ ಭಾವಚಿತ್ರದಲ್ಲಿ ಅನುಷ್ಕಾ ಇದ್ದಿದ್ದು ವಿವಾದಕ್ಕೆ ಕಾರಣವಾಗಿತ್ತು.

2017ರಲ್ಲಿ ಚಾಂಪಿಯನ್ಸ್‌ ಟ್ರೋಫಿಯ ನಂತರ ಆಗ ತಂಡದ ಕೋಚ್ ಅನಿಲ್‌ ಕುಂಬ್ಳೆ ರಾಜೀನಾಮೆ ನೀಡಿದ್ದರು. ವಿರಾಟ್ ಅವರ ಧೋರಣೆಯೇ ಇದಕ್ಕೆ ಕಾರಣವಾಗಿತ್ತು ಎಂಬ ಚರ್ಚೆಗಳು ನಡೆದಿದ್ದವು.

ನಾಯಕತ್ವದ ಪ್ರಮುಖ ದಾಖಲೆಗಳು
* ಟೆಸ್ಟ್‌ನಲ್ಲಿ ಸತತ ಒಂಬತ್ತು ಸರಣಿಗಳಲ್ಲಿ ಜಯ. ರಿಕಿ ಪಾಂಟಿಂಗ್ ಸಾಧನೆಯನ್ನು ಸರಿಗಟ್ಟಿದರು

* ನಾಯಕತ್ವ ವಹಿಸಿದ ಕೂಡಲೇ ಆಡಿದ ಸತತ ಮೂರು ಇನಿಂಗ್ಸ್‌ ಗಳಲ್ಲಿ ಶತಕ ಬಾರಿಸಿದ್ದರು.

* ವಿದೇಶದ ನೆಲದಲ್ಲಿ ಹೆಚ್ಚು ದ್ವಿಶತಕ ಬಾರಿಸಿದ ಭಾರತ ತಂಡದ ಮೊದಲ ನಾಯಕ

* ಸತತ ನಾಲ್ಕು ಟೆಸ್ಟ್‌ ಸರಣಿಗಳಲ್ಲಿ ದ್ವಿಶತಕ ದಾಖಲಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್

* ಒಂದೇ ವರ್ಷದಲ್ಲಿ ಹತ್ತು ಶತಕಗಳನ್ನು ಬಾರಿಸಿದ  ಆಟಗಾರ.

* ಭಾರತ ತಂಡವು ಎರಡು ಬಾರಿ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತು.

ಮಾಡಬೇಕಿರುವ ಹತ್ತು ಪ್ರಮುಖ ಸಾಧನೆಗಳು
* ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ರನ್‌ (ಇನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಶ್ರೇಷ್ಠ) ದಾಖಲೆ. ವೆಸ್ಟ್‌ ಇಂಡೀಸ್‌ನ ಬ್ರಯನ್ ಲಾರಾ ಒಬ್ಬರೇ ಆ ಸಾಧನೆ ಮಾಡಿದ್ದಾರೆ.

* ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕದ ದಾಖಲೆ, ಭಾರತದ ವೀರೇಂದ್ರ ಸೆಹ್ವಾಗ್ ಎರಡು ಮತ್ತು ಕರುಣ್ ನಾಯರ್ ಒಂದು ತ್ರಿಶತಕ ದಾಖಲಿಸಿದ್ದಾರೆ

* ಎಲ್ಲ ಮಾದರಿಗಳಲ್ಲಿಯೂ ಸೇರಿಸಿ ಒಟ್ಟು 100 ಶತಕಗಳ ಗಳಿಕೆ. ಸದ್ಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಈ ದಾಖಲೆ ಇದೆ. ವಿರಾಟ್ 61 ಗಳಿಸಿದ್ದಾರೆ.

* ಮೂರು ಮಾದರಿಗಳಲ್ಲಿ ಸೇರಿ ಸಚಿನ್ ದಾಖಲಿಸಿರುವ 34,357 ರನ್‌ಗಳ ಮೈಲುಗಲ್ಲು. ಸದ್ಯ  ವಿರಾಟ್ 18,509 ರನ್‌ ಗಳಿಸಿದ್ದಾರೆ.

* ನಾಯಕರಾಗಿ ಭಾರತ ತಂಡಕ್ಕೆ ಏಕದಿನ ಮತ್ತು ಟ್ವೆಂಟಿ–20 ಮಾದರಿಯಲ್ಲಿ ವಿಶ್ವಕಪ್ ಗೆಲುವು. ಮಹೇಂದ್ರಸಿಂಗ್ ಧೋನಿ ಈ ಸಾಧನೆ ಮಾಡಿದ್ದಾರೆ.

* ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ದ್ವಿಶತಕ ಸಾಧನೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ (3 ಸಲ), ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್, ವೆಸ್ಟ್‌ ಇಂಡೀಸ್‌ನ ಕ್ರಿಸ್ ಗೇಲ್, ಪಾಕಿಸ್ತಾನದ ಫಕ್ರ್‌ ಜಮಾನ್ ಈ ಸಾಧನೆ ಮಾಡಿದ್ದಾರೆ.

* ಅಂತರರಾಷ್ಟ್ರೀಯ ಟ್ವೆಂಟಿ –20 ಕ್ರಿಕೆಟ್‌ ಪಂದ್ಯದಲ್ಲಿ ಶತಕ ಗಳಿಕೆ.

* ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರ ನಾಯಕತ್ವದ ತಂಡಕ್ಕೆ ಪ್ರಶಸ್ತಿ ಗೆಲುವು.

* ಏಕದಿನ ಮತ್ತು ಟ್ವೆಂಟಿ–20 ಮಾದರಿಯ ಪಂದ್ಯಗಳ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳು. ಯುವರಾಜ್ ಸಿಂಗ್ ಮತ್ತು ಹರ್ಷಲ್ ಗಿಬ್ಸ್‌ ಈ ಸಾಧನೆ ಮಾಡಿದ್ದಾರೆ.

* ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಹೆಸರಿನಲ್ಲಿರುವ ಗರಿಷ್ಠ ರನ್‌ ಗಳಿಕೆ ಸರಾಸರಿ 99.94 ದಾಖಲೆ.


19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !