ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ಬಿಟ್ಟಿದ್ದು ವಿರಾಟ್ ತೀರ್ಮಾನ ಸೂಕ್ತ: ರವಿಶಾಸ್ತ್ರಿ

Last Updated 24 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್‌ನ ಎಲ್ಲ ಮಾದರಿಗಳ ತಂಡಗಳ ನಾಯಕತ್ವವನ್ನು ಬಿಟ್ಟುಕೊಟ್ಟ ವಿರಾಟ್ ಕೊಹ್ಲಿಯ ನಿರ್ಧಾರವು ಸೂಕ್ತವಾಗಿದೆ. ಇದು ಕೊಹ್ಲಿಯ ಚಾಣಾಕ್ಷ ತೀರ್ಮಾನವಾಗಿದೆ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

‘ನಾಯಕತ್ವದ ಒತ್ತಡಗಳನ್ನು ದೂರ ಮಾಡಿಕೊಂಡು ಆಡುವುದರಿಂದ ಯಶಸ್ಸು ಲಭಿಸುತ್ತದೆ. ಅಲ್ಲದೇ ತಂಡದಲ್ಲಿರುವ ಬೇರೆಯವರಿಗೂ ನಾಯಕರಾಗುವ ಅವಕಾಶ ಸಿಗುತ್ತದೆ. ಆದರೆ ಟೆಸ್ಟ್ ತಂಡದ ನಾಯಕತ್ವದಲ್ಲಿ ಇನ್ನಷ್ಟು ಕಾಲ ಅವರು ಮುಂದುವರಿಯಬಹುದೆಂಬ ನಿರೀಕ್ಷೆ ಇತ್ತು. ಬಿಟ್ಟುಕೊಟ್ಟಿದ್ದು ಅವರ ವೈಯಕ್ತಿಕ ನಿರ್ಧಾರವಾಗಿತ್ತು’ ಎಂದು ಶಾಸ್ತ್ರಿ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಡಾಟ್ ಕಾಮ್‌ನಲ್ಲಿ ತಿಳಿಸಿದ್ದಾರೆ.

ವಿರಾಟ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನೂ ಬಿಟ್ಟಿದ್ದಾರೆ. ಈಚೆಗಷ್ಟೇ ತಂಡಕ್ಕೆ ಫಫ್ ಡುಪ್ಲೆಸಿ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ.

‘ರಾಷ್ಟ್ರೀಯ ತಂಡದ ನಾಯಕನಾಗಿ ಕಾರ್ಯನಿರ್ವಹಿಸುವುದು ಸುಲಭವಲ್ಲ. ಮೂರು ಮಾದರಿಗಳಲ್ಲಿಯೂ ಯಶಸ್ವಿಯಾಗಿ ತಂಡವನ್ನು ಮುನ್ನಡೆಸುವುದು ಅಪಾರ ಒತ್ತಡದ ಕೆಲಸ. ನಾಯಕತ್ವದೊಂದಿಗೆ ವೈಯಕ್ತಿಕ ಆಟವನ್ನು ಲಯದಲ್ಲಿಟ್ಟುಕೊಳ್ಳುವುದು ಕೂಡ ಸವಾಲು. ಭಾರತ ತಂಡದ ನಾಯಕರಿಗೆ ಮಾತ್ರ ಇಂತಹ ಒತ್ತಡ ಇದೆ. ಬೇರೆ ದೇಶಗಳಲ್ಲಿ ಈ ರೀತಿ ಕಾಣದು. ಇಲ್ಲಿ ಕ್ರಿಕೆಟ್‌ಗೆ ಜನಮನ್ನಣೆ, ಖ್ಯಾತಿ ಉತ್ತುಂಗದಲ್ಲಿರುವುದು ಅದಕ್ಕೆ ಕಾರಣ’ ಎಂದು ಅಭಿಪ್ರಾಯಪಟ್ಟರು.

ಮೋಯಿನ್ ಅಲಿಗೆ ವೀಸಾ ಲಭ್ಯ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಮೋಯಿನ್ ಅಲಿ ಅವರಿಗೆ ವೀಸಾ ಲಭ್ಯವಾಗಿದೆ. ಇದರಿಂದಾಗಿ ಅವರು ಐಪಿಎಲ್‌ನಲ್ಲಿ ಎರಡನೇ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ ಎಂದು ತಂಡದ ಮೂಲಗಳು ತಿಳಿಸಿವೆ. ಇಂಗ್ಲೆಂಡ್‌ನ ಮೋಯಿನ್ ಅಲಿ ಸೋಮವಾರವೇ ಭಾರತಕ್ಕೆ ಬರಬೇಕಿತ್ತು. ಆದರೆ ವೀಸಾ ಲಭಿಸಿರಲಿಲ್ಲ. ಇದರಿಂದಾಗಿ ಅವರು ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗಿಲ್ಲ. ಅವರು ಶುಕ್ರವಾರ ಬೆಳಗಿನ ಜಾವ ಭಾರತಕ್ಕೆ ಬರಲಿದ್ದು, ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸುವರು ಎಂದೂ ಮೂಲಗಳು ತಿಳಿಸಿವೆ.

ಪಿಚ್‌ ಬದಲಾಗುವ ಸಾಧ್ಯತೆ: ಮಿಚೆಲ್
ಮುಂಬೈ (ಪಿಟಿಐ):
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳು ನಡೆಯುವ ಪಿಚ್‌ಗಳು ದಿನಗಳೆದಂತೆ ಮಂದಗತಿಯ ಬೌಲಿಂಗ್‌ಗೆ ನೆರವಾಗುವ ಸಾಧ್ಯತೆ ಇದೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಆಲ್‌ರೌಂಡರ್ ಡೆರಿಲ್ ಮಿಚೆಲ್ ಹೇಳಿದ್ದಾರೆ.

‘ಟೂರ್ನಿಯಲ್ಲಿ ದಿನಗಳೆದಂತೆ ಪಿಚ್‌ಗಳು ನಿಧಾನಗತಿಗೆ ತಿರುಗಲಿವೆ. ಆದ್ದರಿಂದ ಇಂತಹ ಅಂಗಣಗಳಲ್ಲಿ ಆಡಲು ಆಟಗಾರರು ಸಿದ್ಧತೆ ಮಾಡಿಕೊಳ್ಳಬೇಕು. ಆರಂಭದ ಕೆಲವು ಪಂದ್ಯಗಳಲ್ಲಿರುವಂತೆ ಪಿಚ್‌ಗಳು ನಂತರದ ದಿನಗಳಲ್ಲಿ ಇರುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT