ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS | ವಾರ್ನರ್, ಫಿಂಚ್ ಶತಕಗಳ ಭರಾಟೆಯಲ್ಲಿ ಕಳೆದುಹೋದ ಬೌಲರ್‌ಗಳು

ಕೊಹ್ಲಿ ಪಡೆಗಿಲ್ಲ ಸಂಕ್ರಾಂತಿ ಸಡಗರ
Last Updated 15 ಜನವರಿ 2020, 6:52 IST
ಅಕ್ಷರ ಗಾತ್ರ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ವಿರಾಟ್ ಕೊಹ್ಲಿ ಅವರ ಯಾವುದೇ ಯೋಜನೆಯೂ ಫಲಿಸಲಿಲ್ಲ. ಡೇವಿಡ್ ವಾರ್ನರ್ ಮತ್ತು ಆ್ಯರನ್ ಫಿಂಚ್ ಅವರ ಅಜೇಯ ಶತಕಗಳ ಭರಾಟೆಯಲ್ಲಿ ಆತಿಥೇಯ ಬೌಲರ್‌ಗಳು ಕಳೆದುಹೋದರು.

ಇದರಿಂದಾಗಿ ಭಾರತ ತಂಡವು ಸಂಕ್ರಾಂತಿಗೆ ಗೆಲುವಿನ ಸಿಹಿಯ ಬದಲಿಗೆ ಸೋಲಿನ ಕಹಿ ಅನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತವು ನೀಡಿದ 255 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡವು ಒಂದೂ ವಿಕೆಟ್ ಕಳೆದುಕೊಳ್ಳದೇ ಸಾಧಿಸಿತು. 37.2 ಓವರ್‌ಗಳಲ್ಲಿ 258 ರನ್‌ ಗಳಿಸಿ ಗೆದ್ದಿತು. 2005ರ ನಂತರ ಭಾರತವು ಮೊದಲ ಬಾರಿಗೆ 10 ವಿಕೆಟ್‌ಗಳ ಅಂತರದ ಸೋಲನುಭವಿಸಿತು.

ಈಚೆಗಷ್ಟೇ ಶ್ರೀಲಂಕಾ ಮತ್ತು ಅದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡಗಳ ಎದುರು ತವರಿನಲ್ಲಿ ಸರಣಿ ಗೆದ್ದಿದ್ದ ವಿರಾಟ್ ಕೊಹ್ಲಿ ಬಳಗವು ಇಲ್ಲಿ ತೀರಾ ಪೇಲವವಾಗಿ ಕಂಡಿತು.

ವಾರ್ನರ್ (ಔಟಾಗದೆ 128; 112ಎಸೆತ, 17ಬೌಂಡರಿ, 3ಸಿಕ್ಸರ್) ಮತ್ತು ಫಿಂಚ್ (ಔಟಾಗದೆ 110; 114ಎಸೆತ, 13ಬೌಂಡರಿ, 2ಸಿಕ್ಸರ್) ಇಬ್ಬರೇ ಸೇರಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಐಸಿಸಿ ಏಕದಿನ ರ‍್ಯಾಂಕಿಂಗ್‌ ಪಟ್ಟಿಯ ಅಗ್ರಸ್ಥಾನದಲ್ಲಿರುವ ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಐವರು ಬೌಲರ್‌ಗಳಿಗೂ ಈ ಜೋಡಿ ಜಗ್ಗಲಿಲ್ಲ. ವಾರ್ನರ್ ಮತ್ತು ಫಿಂಚ್ ತಲಾ ಒಂದು ಬಾರಿ ಎಲ್‌ಬಿಡಬ್ಲ್ಯು ಅಪಾಯದಿಂದ ಪಾರಾದರು. ಯುಡಿಆರ್‌ಎಸ್‌ ಕೂಡ ಅವರ ಪರ ವಾಲಿತು. ಇವರಿಬ್ಬರೂ ಸೇರಿ ಒಟ್ಟು ಮೂವತ್ತು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಸಿಡಿಸಿದರು.

ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಿದ ಪಿಚ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಭಾರತವು ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಣಕ್ಕಿಳಿಸಿತು.

‌ರೋಹಿತ್ ಶರ್ಮಾ ಜೊತೆಗೆ ಶಿಖರ್ ಧವನ್ ಇನಿಂಗ್ಸ್‌ ಆರಂಭಿಸಿದರು. ಕೆ.ಎಲ್. ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಿದರು. ಅವರಿಗಾಗಿ ವಿರಾಟ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಆದರೆ ರೋಹಿತ್ ತಮ್ಮ ತವರಿನ ಅಂಗಳದಲ್ಲಿ ಬ್ಯಾಟ್ ಬೀಸಲಿಲ್ಲ. ಕೇವಲ ಹತ್ತು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಶಿಖರ್ (74; 91ಎ, 9ಬೌಂ, 1ಸಿ) ಮತ್ತು ರಾಹುಲ್ (47;61ಎ, 4ಬೌಂ) ತಮ್ಮ ಮೇಲಿನ ವಿಶ್ವಾಸ ಉಳಿಸಿಕೊಂಡರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 121 ರನ್ ಸೇರಿಸಿದರು. ತಾಳ್ಮೆಯ ಆಟವಾಡಿದ ಇಬ್ಬರೂ ಇದ್ದಷ್ಟು ಹೊತ್ತು ತಂಡವು ಉತ್ತಮ ಮೊತ್ತ ಗಳಿಸುವ ನಿರೀಕ್ಷೆ ಇತ್ತು. 28ನೇ ಓವರ್‌ನಲ್ಲಿ ಆಷ್ಟನ್ ಆಗರ್ ಎಸೆತದಲ್ಲಿ ಔಟಾದರು. ಈ ಹಂತದಿಂದ ಪ್ರವಾಸಿ ಬೌಲರ್‌ಗಳ ಪಾರಮ್ಯ ಆರಂಭವಾಯಿತು.

ನಂತರದ ಓವರ್‌ನಲ್ಲಿ ಶಿಖರ್‌ ಆಟಕ್ಕೆ ವೇಗಿ ಪ್ಯಾಟ್ ಕಮಿನ್ಸ್‌ ತಡೆಯೊಡ್ಡಿದರು. ನಾಯಕ ವಿರಾಟ್ ಕೊಹ್ಲಿ (16 ರನ್) ಲಯ ಕಂಡುಕೊಂಡಿದ್ದರು. ಆದರೆ 32ನೇ ಓವರ್‌ನಲ್ಲಿ ಆ್ಯಡಂ ಜಂಪಾ ಎಸೆತದಲ್ಲಿ ಅವರಿಗೇ ಸುಲಭ ಕ್ಯಾಚಿತ್ತ ವಿರಾಟ್ ಮರಳಿದರು. ಶ್ರೇಯಸ್ ಅಯ್ಯರ್ ಆಟ ನಡೆಯಲು ಸ್ಟಾರ್ಕ್‌ ಬಿಡಲಿಲ್ಲ. ರಿಷಭ್ ಪಂತ್ (28 ರನ್) ಮತ್ತು ರವೀಂದ್ರ ಜಡೇಜ (25) ಇಬ್ಬರೂ ಸ್ವಲ್ಪ ಹೊತ್ತು ಹೋರಾಟ ಮಾಡಿದರು. ಇವರಿಬ್ಬರ ವಿಕೆಟ್ ಉರುಳಿದ ನಂತರ ಕುಲದೀಪ್ ಯಾದವ್ (17 ರನ್) ಅವರ ಆಟವು ಗಮನ ಸೆಳೆಯಿತು. ಆದರೆ, ದೊಡ್ಡ ಮೊತ್ತ ಗಳಿಸುವ ಭಾರತದ ಪ್ರಯತ್ನ ಕೈಗೂಡಲಿಲ್ಲ.

ರಿಷಭ್ ಪಂತ್ ತಲೆಗೆ ಪೆಟ್ಟು
ಬ್ಯಾಟಿಂಗ್ ವೇಳೆ ರಿಷಭ್ ಪಂತ್ ಅವರ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿತು. ಇದರಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಯಿತು.

ಅವರ ಬದಲಿಗೆ ಕೆ.ಎಲ್. ರಾಹುಲ್ ವಿಕೆಟ್‌ಕೀಪಿಂಗ್ ನಿರ್ವಹಿಸಿದರು. ಮನೀಷ್ ಪಾಂಡೆ ಬದಲೀ ಫೀಲ್ಡರ್ ಆಗಿ ಆಡಿದರು. ಪ್ಯಾಟ್ ಕಮಿನ್ಸ್‌ ಅವರ ಎಸೆತವೊಂದು ನಿರೀಕ್ಷೆಗಿಂತ ಹೆಚ್ಚು ಎತ್ತರ ಪುಟಿದು ರಿಷಭ್ ಹೆಲ್ಮೆಟ್‌ಗೆ ಬಡಿಯಿತು. ಅವರು ಈ ಪಂದ್ಯದಲ್ಲಿ 33 ಎಸೆತಗಳಲ್ಲಿ 28 ರನ್ ಗಳಿಸಿದರು.

‘ತಜ್ಞ ವೈದ್ಯರು ರಿಷಭ್ ಅವರ ತಪಾಸಣೆ ಮಾಡಿದ್ದಾರೆ. ಬುಧವಾರ ಬೆಳಿಗ್ಗೆಯವರೆಗೂ ಅವರ ಮೇಲೆ ವೈದ್ಯರು ವಿಶೇಷ ನಿಗಾ ಇಟ್ಟಿದ್ದು, ಆರೈಕೆ ಮಾಡುತ್ತಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT