ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಸರಣಿ ಜಯದತ್ತ ವಿರಾಟ್ ಚಿತ್ತ

Last Updated 3 ಡಿಸೆಂಬರ್ 2020, 17:41 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ’ಏಕದಿನ ಸರಣಿಯ ಕೊನೆಯ ಪಂದ್ಯದ ಗೆಲುವು ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದೆ. ಈಗ ಏನಿದ್ದರೂ ಟ್ವೆಂಟಿ–20 ಕ್ರಿಕೆಟ್‌ ಸರಣಿಯತ್ತ ಚಿತ್ತ ಹರಿಸುತ್ತೇವೆ‘–

ಕೊರೊನಾ ಕಾಲಘಟ್ಟದ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ಹೇಳಿದ್ದ ಮಾತಿದು.

ಶುಕ್ರವಾರ ಇಲ್ಲಿ ಮನುಕಾ ಓವಲ್‌ನಲ್ಲಿ ನಡೆಯಲಿರುವ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಜಯಿಸುವ ಭರ್ತಿ ವಿಶ್ವಾಸದಲ್ಲಿ ಕೊಹ್ಲಿ ಇದ್ದಾರೆ.ಹೋದ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಕೊಹ್ಲಿ ಬಳಗವು ಜಯಿಸಿತ್ತು. ಆದ್ದರಿಂದ ಚುಟುಕು ಮಾದರಿಯಲ್ಲಿ ಆಸ್ಟ್ರೇಲಿಯಾಕ್ಕೆ ಸೋಲಿನ ಕಹಿಯುಣಿಸುವ ವಿಶ್ವಾಸದಲ್ಲಿದೆ.

ಬುಧವಾರ ಮುಕ್ತಾಯವಾದ ಏಕದಿನ ಕ್ರಿಕೆಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತು, ಮೂರನೇಯದ್ದರಲ್ಲಿ ಗೆದ್ದಿತ್ತು. ಆ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಮಧ್ಯಮವೇಗಿ ಟಿ. ನಟರಾಜನ್ ಎರಡು ವಿಕೆಟ್ ಗಳಿಸಿದ್ದರು. ಶಾರ್ದೂಲ್ ಠಾಕೂರ್ ತಮಗೆ ಲಭಿಸಿದ್ದ ಅವಕಾಶದಲ್ಲಿಯೂ ಮೂರು ವಿಕೆಟ್ ಪಡೆದು ಮಿಂಚಿದ್ದರು. ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್ ಅವರ ಅನುಪಸ್ಥಿತಿಯಲ್ಲಿಯೂ ಬೌಲಿಂಗ್ ಪಡೆಯು ಚೆನ್ನಾಗಿ ಆಡಿತ್ತು.

ಟೆಸ್ಟ್ ಸರಣಿಯಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳುವ ದೃಷ್ಟಿಯಿಂದ ಜಸ್‌ಪ್ರೀತ್ ಬೂಮ್ರಾ ಟಿ20 ಸರಣಿಯಲ್ಲಿ ಎಲ್ಲ ಪಂದ್ಯಗಳಲ್ಲಿಯೂ ಆಡಲಿಕ್ಕಿಲ್ಲ. ಆದ್ದರಿಂದ ನವದೀಪ್ ಸೈನಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಸ್ಪಿನ್ನರ್ ವಾಷಿಂಗ್ಟನ್ ಸುಂದರ್‌ ಕೂಡ ಕಣಕ್ಕಿಳಿಯಬಹುದು.

ಬ್ಯಾಟಿಂಗ್‌ನಲ್ಲಿ ಆರಂಭಿಕ ಜೋಡಿಯ ಸಮಸ್ಯೆ ಬಗೆಹರಿಯಬೇಕಾಗಿದೆ. ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಮಯಂಕ್ ಅಗರವಾಲ್ ಮತ್ತು ಶಿಖರ್ ಧವನ್ ಇನಿಂಗ್ಸ್ ಆರಂಭಿಸಿದ್ದರು. ಮೂರನೇ ಪಂದ್ಯದಲ್ಲಿ ಮಯಂಕ್ ಬದಲು ಶುಭಮನ್ ಗಿಲ್‌ಗೆ ಅವಕಾಶ ನೀಡಲಾಗಿತ್ತು. ಅವರು ಭರವಸೆಯ ಆಟವಾಡಿದ್ದರು. ಕಳೆದ ಐಪಿಎಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಮಯಂಕ್ ಅಗರವಾಲ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆಯ ಅವಕಾಶ ಗಿಟ್ಟಿಸುವ ನಿರೀಕ್ಷೆ ಇದೆ. ತಂಡದಲ್ಲಿರುವ ಸಂಜು ಸ್ಯಾಮ್ಸನ್‌ ಒಂದೊಮ್ಮೆ ಅವಕಾಶ ಪಡೆದರೆ, ಮಯಂಕ್ ಆಡುವ ಸಾಧ್ಯತೆ ಕ್ಷೀಣಿಸಲಿದೆ.

50–50 ಮಾದರಿಯಲ್ಲಿ 12 ಸಾವಿರ ರನ್ ಗಳಿಸಿರುವ ವಿರಾಟ್, ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿರುವ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಉತ್ತಮ ಲಯದಲ್ಲಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಲಯಕ್ಕೆ ಕುದುರಿಕೊಂಡಿಲ್ಲ. ಅವರ ಬದಲಿಗೆ ಮನೀಷ್ ಪಾಂಡೆಯನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ.

ಆತಿಥೇಯ ಬಳದಲ್ಲಿ ಡೇವಿಡ್ ವಾರ್ನರ್ ಅಲಭ್ಯರಾಗುವ ಆತಂಕ ಕಾಡುತ್ತಿದೆ. ಆ್ಯರನ್ ಫಿಂಚ್ ಮತ್ತು ಸ್ಟೀವನ್ ಸ್ಮಿತ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಬೌಲಿಂಗ್‌ನಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೆ ಬುಧವಾರದ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು. ಅವರು ಈ ಸರಣಿಯಲ್ಲಿ ಮರಳುವ ಕುರಿತು ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT