ದುಬೈ: ಶ್ರೀಲಂಕಾ ತಂಡದ ದುನಿತ್ ವೆಲ್ಲಾಳಗೆ ಮತ್ತು ಹರ್ಷಿತಾ ಸಮರವಿಕ್ರಮ ಅವರು ಕ್ರಮವಾಗಿ ಐಸಿಸಿ ತಿಂಗಳ ಆಟಗಾರ ಮತ್ತು ಆಟಗಾರ್ತಿ ಗೌರವಕ್ಕೆ ಭಾಜನರಾಗಿದ್ದಾರೆ.
ಭಾರತ ವಿರುದ್ಧದ ಸ್ವದೇಶಿ ಏಕದಿನ ಸರಣಿ ಗೆಲುವಿನಲ್ಲಿ ಸ್ಪಿನ್ನರ್ ವೆಲ್ಲಾಳಗೆ ನಿರ್ಣಾಯಕ ಪಾತ್ರ ವಹಿಸಿದ್ದರು. ಹರ್ಷಿತಾ ಅವರು ಐರ್ಲೆಂಡ್ ಪ್ರವಾಸದ ವೇಳೆ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.
ಒಂದೇ ದೇಶದ ಇಬ್ಬರು ಈ ಪ್ರಶಸ್ತಿಗೆ ಆಯ್ಕೆಯಾಗುತ್ತಿರುವುದು ಇದು ಎರಡನೇ ಉದಾಹರಣೆಯಾಗಿದೆ. ಈ ಮೊದಲು ಜೂನ್‌ನಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಮೃತಿ ಮಂದಾನ ‘ತಿಂಗಳ’ ಗೌರವಕ್ಕೆ ಪಾತ್ರವಾಗಿದ್ದರು.
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಮತ್ತು ವೆಸ್ಟ್ ಇಂಡೀಸ್ ವೇಗದ ಬೌಲರ್ ಜೇಡನ್ ಸೀಲ್ಸ್ ಅವರು ಪ್ರಶಸ್ತಿಯ ರೇಸ್‌ನಲ್ಲಿದ್ದರು. ಅವರನ್ನು ಹಿಂದಿಕ್ಕಿ ವೆಲ್ಲಾಳಗೆ ಪ್ರಶಸ್ತಿ ಗೆದ್ದರು.
21 ವರ್ಷ ವಯಸ್ಸಿನ ವೆಲ್ಲಾಳಗೆ ಭಾರತದ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ ಒಟ್ಟು 7 ವಿಕೆಟ್ ಪಡೆಯುವ ಜೊತೆಗೆ 108 ರನ್ ಗಳಿಸಿ ಸರಣಿಯ ಆಟಗಾರನಾಗಿ ಹೊರಹೊಮ್ಮಿದ್ದರು. ಈ ಸರಣಿಯನ್ನು ಲಂಕಾ ಕಡೆ 2–0 ಅಂತರದಲ್ಲಿ ಗೆದ್ದುಕೊಂಡಿತ್ತು.
ತಿಂಗಳ ಪ್ರಶಸ್ತಿ ಗೆದ್ದ ಲಂಕಾದ ಐದನೇ ಆಟಗಾರ ಅವರಾಗಿದ್ದಾರೆ. ಈ ಮೊದಲು ಏಂಜೆಲೊ ಮ್ಯಾಥ್ಯೂಸ್ (ಮೇ 2022), ಪ್ರಭಾತ್ ಜಯಸೂರ್ಯ (ಜುಲೈ 2022), ವನಿಂದು ಹಸರಂಗ (ಜೂನ್ 2023) ಮತ್ತು ಕಮಿಂದು ಮೆಂಡಿಸ್ (ಮಾರ್ಚ್ 2024) ಪ್ರಶಸ್ತಿ ಗೆದ್ದಿದ್ದರು.
ಮಹಿಳೆಯರ ವಿಭಾಗದಲ್ಲಿ ಐರ್ಲೆಂಡ್‌ನ ಓರ್ಲಾ ಪ್ರೆಂಡರ್‌ಗಾಸ್ಟ್ ಮತ್ತು ಗ್ಯಾಬಿ ಲೆವಿಸ್ ಅವರನ್ನು ಹಿಂದಿಕ್ಕಿ ಹರ್ಷಿತಾ ಪ್ರಶಸ್ತಿ ತಮ್ಮದಾಗಿಸಿಕೊಂಡರು.
26 ವರ್ಷ ವಯಸ್ಸಿನ ಎಡಗೈ ಆಟಗಾರ್ತಿ ಹರ್ಷಿತಾ ಎರಡು ಟಿ20 ಪಂದ್ಯದಲ್ಲಿ 151 ರನ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ 172 ರನ್ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ 105 ರನ್ ಚಚ್ಚಿದ್ದರು. ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಲಂಕಾ ಮೂರನೇ ಬ್ಯಾಟರ್ ಅವರಾಗಿದ್ದಾರೆ.
ತಿಂಗಳ ಗೌರವ ಪಡೆದ ಲಂಕಾದ ಎರಡನೇ ಆಟಗಾರ್ತಿ ಅವರು. ಈ ಮೊದಲು ನಾಯಕಿ ಚಾಮರಿ ಅತ್ತಪತ್ತು (ಮೇ ಮತ್ತು ಜುಲೈ, 2024) ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.