ಶುಕ್ರವಾರ, ಮಾರ್ಚ್ 31, 2023
32 °C
ಹೆಟ್ಮೆಯರ್‌ ಬಿರುಸಿನ ಅರ್ಧ ಶತಕ

ಎರಡನೇ ಟಿ–20 ಪಂದ್ಯದಲ್ಲೂ ವೆಸ್ಟ್ ಇಂಡೀಸ್‌ಗೆ ಜಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ಶಿಮ್ರಾನ್‌ ಹೆಟ್ಮೆಯರ್‌ (61) ಮತ್ತು ಡ್ವೇನ್‌ ಬ್ರಾವೊ ಸಂಗಡ ಅವರು ಸೇರಿಸಿದ 103 ರನ್‌ಗಳ ಜೊತೆಯಾಟದ ನೆರವಿನಿಂದ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡ ಶನಿವಾರ ನಡೆದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಮೇಲೆ 56 ರನ್‌ಗಳ ಸುಲಭ ಗೆಲುವನ್ನು ದಾಖಲಿಸಿತು.

ವೆಸ್ಟ್‌ ಇಂಡೀಸ್‌ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ.

ಬ್ರಾವೊ 47 ರನ್ ಗಳಿಸಿದ್ದು, ವೆಸ್ಟ್‌ ಇಂಡೀಸ್‌ ತಂಡ 4 ವಿಕೆಟ್‌ಗೆ 196 ರನ್‌ ಗಳಿಸಿತು. ಕಡೆಯ 10 ಓವರ್‌ಗಳಲ್ಲಿ ಪ್ರವಾಸಿ ತಂಡದ ದಾಳಿಯನ್ನು ನುಚ್ಚುನೂರು ಮಾಡಿ 123 ರನ್‌ ಕೂಡಿಹಾಕಿತು. ಆರಂಭದಲ್ಲಿ ಮಿಚೆಲ್‌ ಮಾರ್ಷ್‌ ಆಟದಿಂದ ಕಾಂಗರೂ ಪಡೆ ದಿಟ್ಟ ಉತ್ತರ ನೀಡುವಂತೆ ಕಂಡಿತ್ತು. ಆದರೆ ಉಳಿದವರು ಪ್ರತಿರೋಧ ತೋರದೇ ತಂಡ, ನಾಲ್ಕು ಎಸೆತಗಳು ಬಾಕಿಯಿರುವಂತೆ 140 ರನ್‌ಗಳಿಗೆ ಉರುಳಿತು. ಮೊದಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ್ದ ಮಾರ್ಷ್‌ ಈ ಪಂದ್ಯದಲ್ಲೂ ಸೊಗಸಾದ ಆಟವಾಡಿ 42 ಎಸೆತಗಳಲ್ಲಿ 54 ರನ್‌ ಬಾಚಿದರು.

ವಿಂಡಿಸ್‌ ಪರ ಶೆಲ್ಡನ್‌ ಕಾಟ್ರೆಲ್‌ 22 ರನ್ನಿಗೆ 2 ವಿಕೆಟ್‌ ಪಡೆದರೆ, ಇನಿಂಗ್ಸ್‌ನ ಮಧ್ಯದಲ್ಲಿ ಅಮೋಘ ಲೆಗ್‌ ಸ್ಪಿನ್‌ ದಾಳಿ ಸಂಘಟಿಸಿದ ಹೇಡನ್‌ ವಾಲ್ಶ್‌ 29 ರನ್ನಿಗೆ 3 ವಿಕೆಟ್‌ ಕಿತ್ತರು.

ಲೆಂಡ್ಲ್ ಸಿಮನ್ಸ್‌ 21 ಎಸೆತಗಳಲ್ಲಿ 30 ರನ್‌ ಗಳಿಸಿ ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಇನಿಂಗ್ಸ್‌ಗೆ ಲಂಗರು ಹಾಕಿದ ಹೆಟ್ಮೆಯರ್ ಟಿ–20 ಪಂದ್ಯಗಳಲ್ಲಿ ಎರಡನೇ ಅರ್ಧ ಶತಕ ಗಳಿಸಿದರು. ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಚೆಂಡನ್ನು ಸಿಕ್ಸರ್‌ಗೆತ್ತಿದ ಹೆಟ್ಮೆಯರ್‌ ಈ ಸಾಹಸ ಮಾಡಿದರು. 18ನೇ ಓವರ್‌ನಲ್ಲಿ ರನೌಟ್‌ ಆಗುವ ಮೊದಲು 36 ಎಸೆತಗಳಲ್ಲಿ 61 ರನ್ ಸಿಡಿಸಿದರು.

ಸ್ಕೋರುಗಳು: ವೆಸ್ಟ್ ಇಂಡೀಸ್‌: 20 ಓವರುಗಳಲ್ಲಿ 4 ವಿಕೆಟ್‌ಗೆ 196 (ಸಿಮನ್ಸ್ 30, ಹೆಟ್ಮೆಯರ್ 61, ಡ್ವೇಯ್ನ್ ಬ್ರಾವೊ 47, ಆಂಡ್ರೆ ರಸೆಲ್‌ ಔಟಾಗದೇ 24); ಆಸ್ಟ್ರೇಲಿಯಾ: 19.2 ಓವರುಗಳಲ್ಲಿ 140 (ಮಿಚೆಲ್‌ ಮಾರ್ಷ್‌ 54; ಹೇಡನ್‌ ವಾಲ್ಶ್‌ 29ಕ್ಕೆ3, ಶೆಲ್ಡನ್‌ ಕಾಟ್ರೆಲ್‌ 22ಕ್ಕೆ2).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು