ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Sunil Narine: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸುನಿಲ್ ನರೈನ್ ವಿದಾಯ

Published 6 ನವೆಂಬರ್ 2023, 2:46 IST
Last Updated 6 ನವೆಂಬರ್ 2023, 2:46 IST
ಅಕ್ಷರ ಗಾತ್ರ

ಬೆಂಗಳೂರು: ವೆಸ್ಟ್‌ ಇಂಡೀಸ್‌ನ ಸ್ಪಿನ್‌ ಬೌಲರ್‌ ಸುನಿಲ್‌ ನರೈನ್‌ ಅವರು ಭಾನುವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

2012 ಟಿ–20 ವಿಶ್ವಕಪ್‌ ಗೆದ್ದ ವೆಸ್ಟ್‌ ಇಂಡೀಸ್‌ ತಂಡದ ಸದಸ್ಯರಾಗಿದ್ದ ನರೈನ್‌ ಅವರು, 2019 ಆಗಸ್ಟ್‌ನಲ್ಲಿ ಭಾರತದ ವಿರುದ್ಧ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ನಿವೃತ್ತಿ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಅವರು, ‘ವೆಸ್ಟ್‌ ಇಂಡೀಸ್‌ ಪರವಾಗಿ ಕೊನೆಯ ಬಾರಿ ಆಡಿ ನಾಲ್ಕು ವರ್ಷಗಳಾಗಿವೆ. ಇಂದು ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಸಾರ್ವಜನಿಕವಾಗಿ ನಾನು ಮಿತಭಾಷಿ. ಆದರೆ ಖಾಸಗಿಯಾಗಿ ನನ್ನ ವೃತ್ತಿ ಜೀವನದಲ್ಲಿ ಹಾಗೂ ವೆಸ್ಟ್‌ ಇಂಡೀಸ್‌ ಪರ ಆಡುವಲ್ಲಿ ಹಲವು ಮಂದಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿರುವ ನರೈನ್‌, ತಮ್ಮ ತಂದೆ, ಕುಟುಂಬಸ್ಥರಿಗೆ ಧನ್ಯವಾದ ಅರ್ಪಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ಕ್ರಿಕೆಟ್ ಮಂಡಳಿ, ಕೋಚಿಂಗ್‌ ಸಿಬ್ಬಂದಿ, ಉತ್ಸಾಹಿ ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ಪ್ರೇಮಿಗಳಿಗೆ ಹಾಗೂ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನರೈನ್ ಸದ್ಯ ಟ್ರಿನಿಡಾಡ್ ಹಾಗೂ ಟೊಬಾಗೋ ಪರ ಸೂಪರ್‌ 50 ಕಪ್ ಪಂದ್ಯಾವಳಿ ಆಡುತ್ತಿದ್ದು, ಇದು ತಮ್ಮ ಕೊನೆಯ ದೇಶಿಯ ಟೂರ್ನಿ ಆಗಲಿದೆ ಎಂದಿದ್ದಾರೆ. ಆದರೆ ಫ್ರಾಂಚೈಸಿ ಕ್ರಿಕೆಟ್‌ ಆಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.‌

2011ರಲ್ಲಿ ಚಾಂ‍ಪಿಯನ್ಸ್‌ ಲೀಗ್‌ನಲ್ಲಿ ಟ್ರಿನಿಡಾಡ್‌ ಪರ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದ ನರೈನ್, ಅದೇ ವರ್ಷ ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.

ಈವರೆಗೆ 65 ಏಕದಿನ ಪಂದ್ಯಗಳನ್ನು ಆಡಿರುವ ಅವರು 92 ವಿಕೆಟ್‌ಗಳನ್ನು ಗಳಿಸಿದ್ದಾರೆ. 6 ಟೆಸ್ಟ್‌ಗಳಲ್ಲಿ ಹಾಗೂ 51 ಟಿ–20 ಪಂದ್ಯಗಳಲ್ಲಿ ಕೆರಿಬಿಯನ್ ಪಡೆಯನ್ನು ಪ್ರತಿನಿಧಿಸಿದ್ದ ಅವರು ಕ್ರಮವಾಗಿ 21 ಹಾಗೂ 52 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ನರೈನ್‌ ಪ್ರತಿನಿಧಿಸುತ್ತಿದ್ದಾರೆ. ಟಿ–20 ಮಾದರಿಯ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಮೂಲಕವೂ ಗಮನಸೆಳೆದಿದ್ದರು.

ಹಿಂದೊಮ್ಮೆ ಅವರ ಬೌಲಿಂಗ್ ಶೈಲಿ ಅಕ್ರಮವಾಗಿದೆ ಎಂದು ಅಮಾನತಿಗೂ ಒಳಗಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT