ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮಂಕಡಿಂಗ್: ರನೌಟ್ ಆದರಷ್ಟೇ ಸಾಕೇ? ಬೌಲರ್‌ಗೆ ವಿಕೆಟ್ ಕೊಡಬೇಕೆ?

Last Updated 3 ಅಕ್ಟೋಬರ್ 2022, 0:00 IST
ಅಕ್ಷರ ಗಾತ್ರ

ವಿನೂ ಮಂಕಡ್ ಆರಂಭಿಸಿದ್ದ ಅಭಿಯಾನವೊಂದಕ್ಕೆ ಆರ್. ಅಶ್ವಿನ್ ತಾತ್ವಿಕ ಅಂತ್ಯ ಕೊಡಿಸಲು ಮಾಡಿದ ಪ್ರಯತ್ನಕ್ಕೆ ಮಂಕಡಿಂಗ್ ನಿಯಮ ಪರಿಷ್ಕರಣೆಗೊಂಡಿದೆ. ನಾನ್‌ಸ್ಟ್ರೈಕರ್ ಬ್ಯಾಟರ್‌ಗಳು ಈಗ ಕ್ರೀಸ್‌ ಬಿಟ್ಟು ಮುಂದೆ ಹೆಜ್ಜೆ ಹಾಕಲು ಹಲವು ಬಾರಿ ಯೋಚಿಸಬೇಕಿದೆ. ಕ್ರಿಕೆಟ್‌ ನಲ್ಲಿ ಇಂತಹದೊಂದು ಕ್ರಾಂತಿಕಾರಕ ನಿಯಮ ರೂಪುಗೊಳ್ಳಲು ಭಾರತವೇ ಕಾರಣವಾಗಿರುವುದು ಹೆಮ್ಮೆಯ ವಿಷಯ

ಕ್ರಿಕೆಟ್‌ನಲ್ಲಿ ಬ್ಯಾಟರ್ ಮುನ್ನುಗ್ಗಿ ಹೊಡೆಯಲು ಹೋಗಿ ಬೀಟ್ ಆದಾಗ ಚೆಂಡನ್ನು ನಿಯಂತ್ರಣಕ್ಕೆ ಪಡೆಯುವ ವಿಕೆಟ್‌ಕೀಪರ್ ಬೇಲ್ಸ್ ಹಾರಿಸುತ್ತಾರೆ. ಆಗ ಅದು ಸ್ಟಂಪ್ಡ್‌ಔಟ್ ಆಗಿ ವಿಕೆಟ್‌ಕೀಪರ್ ಹಾಗೂ ಬೌಲರ್‌ ಖಾತೆ ಸೇರುತ್ತದೆ. ಆದರೆ ಇತ್ತೀಚೆಗೆ ಪರಿಷ್ಕರಣೆಗೊಂಡ ‘ಮಂಕಡಿಂಗ್’ ನಿಯಮದಲ್ಲಿ ನಾನ್‌ಸ್ಟ್ರೈಕರ್ ಬ್ಯಾಟರ್ ಎಸೆತಕ್ಕೂ ಮುನ್ನವೇ ಕ್ರೀಸ್‌ ಬಿಟ್ಟಾಗ ಬೌಲರ್ ಔಟ್ ಮಾಡಿದರೆ ರನೌಟ್ ಎಂದು ಘೋಷಣೆಯಾಗುತ್ತದೆ. ಇಲ್ಲಿ ಚಾಕಚಕ್ಯತೆ ತೋರುವ ಬೌಲರ್‌ಗೆ ವಿಕೆಟ್‌ ಶ್ರೇಯ ಬೇಡವೇ?

ಹೌದು; ಇಂತಹದೊಂದು ಪ್ರಶ್ನೆಯನ್ನು ಈಗ ಎತ್ತಿದವರು ಬೇರೆ ಯಾರೂ ಅಲ್ಲ. ಭಾರತದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್.ಇತ್ತೀಚೆಗಷ್ಟೇ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್‌ನಲ್ಲಿ ಮಹಿಳೆಯರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತದ ದೀಪ್ತಿ ಶರ್ಮಾ ಅವರು ನಾನ್‌ಸ್ಟ್ರೈಕರ್‌ನಲ್ಲಿದ್ದಇಂಗ್ಲೆಂಡ್‌ನ ಬ್ಯಾಟರ್ ಚಾರ್ಲಿಡೀನ್ ಅವರನ್ನು ರನೌಟ್ ಮಾಡಿದ್ದರು. ಅದರಿಂದಾಗಿ ನಡೆಯುತ್ತಿರುವ ಚರ್ಚೆಯನ್ನು ಮತ್ತೊಂದು ಹಂತಕ್ಕೆ ಒಯ್ಯುವತ್ತ ಅಶ್ವಿನ್ ಮಾತು ದಿಕ್ಸೂಚಿಯಾಗಿದೆ.

ಏಕೆಂದರೆ ‘ನ್ಯಾಯಸಮ್ಮತವಲ್ಲದ ಆಟ’ದ ನಿಯಮದಡಿಯಲ್ಲಿ ನೋಡಲಾಗುತ್ತಿದ್ದ ‘ಮಂಕಡಿಂಗ್‌’ ಅನ್ನು ಈಚೆಗೆ ಮೆರಿಲ್‌ಬೊನ್ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಬದಲಾಯಿಸಿದೆ. ಅದನ್ನು ರನೌಟ್ ಎಂದು ‘ನ್ಯಾಯಬದ್ಧ’ಗೊಳಿಸಿತು. ಆದ್ದರಿಂದ ಈಗಲೂ ಅದನ್ನು ವಿರೋಧಿಸುತ್ತಿರುವ ಇಂಗ್ಲೆಂಡ್‌ನ ಮಾಜಿ–ಹಾಲಿ ಆಟಗಾರರ ಮಾತಿಗೆ ಕಿವಿಗೊಡದೇ ಮುಂದಿನ ಹಂತದ ಚರ್ಚೆಗೆ ಅಶ್ವಿನ್ ನಾಂದಿ ಹಾಡಿದ್ದಾರೆ.

ಈ ನಿಯಮ ಪರಿಷ್ಕರಣೆಗೊಳ್ಳಲು ಅಶ್ವಿನ್ ಅವರೇ ಕಾರಣವೆಂದರೆ ಅತಿಶಯೋಕ್ತಿಯಲ್ಲ. ಭಾರತದ ದಿಗ್ಗಜ ಕ್ರಿಕೆಟಿಗ ವಿನೂ ಮಂಕಡ್ ಅವರ ಹೆಸರಿನಲ್ಲಿ ಕ್ರಿಕೆಟ್ ಜನಕ ‘ಬಿಳಿಯರು’ 1947ರಿಂದಲೂ ಮಾಡುತ್ತಿದ್ದ ಗೇಲಿಗೆ ಈಗ ಪೂರ್ಣವಿರಾಮ ಬಿದ್ದಿದೆ. 2019ರಲ್ಲಿ ನಡೆದಿದ್ದ ಐಪಿಎಲ್‍ಪಂದ್ಯದಲ್ಲಿ ಆಗ ಪಂಜಾಬ್ ಕಿಂಗ್ಸ್‌ನಲ್ಲಿದ್ದ ಅಶ್ವಿನ್ ಅವರು ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್ ಜಾಸ್ ಬಟ್ಲರ್ ಅವರನ್ನು ಔಟ್ ಮಾಡಿದ್ದರು. ಆಗ ಭುಗಿಲೆದ್ದ ಚರ್ಚೆ ಹಲವು ಆಯಾಮಗಳಲ್ಲಿ ನಡೆದಿತ್ತು. ಇಂಗ್ಲೆಂಡ್‌ನ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಅಶ್ವಿನ್ ಮೇಲೆ ಟೀಕೆಗಳ ಮಳೆಯನ್ನೇ ಸುರಿಸಿದ್ದರು.

‘ಅಶ್ವಿನ್ ಒಬ್ಬ ನಾಯಕನಾಗಿ ಮತ್ತು ಕ್ರೀಡಾಪಟುವಾಗಿ ಈ ರೀತಿ ಮಾಡಿರುವುದು ಬೇಸರ ಮೂಡಿಸಿದೆ. ಕ್ರೀಡಾ ಸ್ಫೂರ್ತಿಯಿಂದ ಆಡುವುದಾಗಿ ಐಪಿಎಲ್‌ ಗೋಡೆಯ ಮೇಲೆ ಹಸ್ತಾಕ್ಷರ ಮಾಡಿದ್ದಾರೆ. ಇದನ್ನು ಡೆಡ್ ಬಾಲ್ ಎಂದು ಕರೆಯಬಹುದಾಗಿತ್ತು. ಇದು ಐಪಿಎಲ್‌ ಘನತೆಗೆ ತಕ್ಕುದಲ್ಲ. ಬಿಸಿಸಿಐ ಗಂಭೀರವಾಗಿ ಪರಿಶೀಲಿಸಬೇಕು’ ಎಂದು ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಟೀಕಿಸಿದ್ದರು.

ಬ್ಯಾಟರ್‌ ಪ್ರಧಾನ ಕ್ರಿಕೆಟ್‌ನ ಕಳಂಕ: ಬ್ಯಾಟರ್‌ ಪ್ರಧಾನ ಕ್ರಿಕೆಟ್‌ನಲ್ಲಿ ಬೌಲರ್‌ಗಳಿಗೆ ಹೆಚ್ಚು ಸ್ವಾತಂತ್ರ್ಯವಿಲ್ಲ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಈ ಮಂಕಡಿಂಗ್ ನಿಯಮವೂ ಒಂದು.ನಾನ್‌ಸ್ಟ್ರೈಕರ್‌ನಲ್ಲಿರುವ ಬ್ಯಾಟರ್‌ಗಳು ಬೌಲರ್‌ ಕೈಯಿಂದ ಚೆಂಡು ಪ್ರಯೋಗವಾಗುವ ಮುನ್ನವೇ ಕ್ರೀಸ್‌ನಿಂದ ನಾಲ್ಕೈದು ಅಡಿ ಓಡಲು ಅವಕಾಶವಿತ್ತು. ಇದು ಒಂದು ರೀತಿಯಲ್ಲಿ ‘ಅಸಮಾನತೆ’ಯ ನಡೆ ಎಂಬ ಟೀಕೆಗಳು ಇದ್ದವು. ಆದರೆ, ಸಭ್ಯರ ಆಟವೆನಿಸಿಕೊಂಡ ಕ್ರಿಕೆಟ್‌ನಲ್ಲಿ ನಾನ್‌ಸ್ಟ್ರೈಕರ್‌ ಬ್ಯಾಟರ್‌ಗೆ ಇಂತಹ ಸಂದರ್ಭದಲ್ಲಿ ಮೊದಲೇ ಎಚ್ಚರಿಕೆ ನೀಡಬೇಕು. ನಂತರವೂ ಔಟಾದರೆ ಬೌಲರ್‌ ರಾಜಿ ಮಾಡಿಕೊಳ್ಳಬೇಕು ಎಂಬ ಅಲಿಖಿತ ನಿಯಮವಿತ್ತು.

1992–93ರಲ್ಲಿ ನಡೆದ ಘಟನೆ ಇದಕ್ಕೊಂದು ಉತ್ತಮ ನಿದರ್ಶನ. ಪೋರ್ಟ್‌ ಎಲಿಜಬೆತ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಪೀಟರ್ ಕರ್ಸ್ಟನ್ ಅವರಿಗೆ ಕಪಿಲ್ ದೇವ್ ಮೊದಲ ಬಾರಿಗೆ ಎಚ್ಚರಿಕೆ ಕೊಟ್ಟಿದ್ದರು. ಆದರೆ ಪೀಟರ್ ನಿರ್ಲಕ್ಷ್ಯ ಮಾಡಿದ್ದರು. ಆದರೆ, ಎರಡನೇ ಬಾರಿ ಕಪಿಲ್ ಔಟ್ ಮಾಡಿದರು. ಅಂಪೈರ್‌ಗೆ ವಿಕೆಟ್‌ಗಾಗಿ ಮನವಿಯನ್ನೂ ಮಾಡಿದ್ದರು. ಪೀಟರ್ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸುತ್ತಲೇ ಪೆವಿಲಿಯನ್‌ನತ್ತ ಹೆಜ್ಜೆಹಾಕಿದ್ದರು. ಆಗಲೂ ಕಪಿಲ್ ಬಗ್ಗೆ ಕೆಲವು ವಿದೇಶಿ ಆಟಗಾರರು ಟೀಕೆಗಳ ಮಳೆ ಸುರಿಸಿದ್ದರು. ಕೆಲವು ವರ್ಷಗಳ ಹಿಂದೆ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಬೌಲಿಂಗ್ ಮಾಡುತ್ತ ಈ ನಿಯಮವನ್ನು ಅಣಕ ಮಾಡಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ನೋಡುಗರಿಗೆ ಅಚ್ಚುಮೆಚ್ಚು.

ಅದು ಆಗಿನ ಮಾತಾಯಿತು. ಆದರೆ ಇದೀಗ ಎಂಸಿಸಿಯೇ ನಿಯಮ ಬದಲಾಯಿಸಿದರೂ ಟೀಕಿಸುವುದನ್ನು ನಿಲ್ಲಿಸಿಲ್ಲ.

‘ನಾನು ಇಂತಹ ಔಟ್ ಮಾಡುವ ಅವಕಾಶ ಪಡೆದಿದ್ದರೆ ಬ್ಯಾಟರ್‌ನನ್ನು ಮರಳಿ ಕರೆಯುತ್ತೇನೆ. ಆಟ ಮುಂದುವರಿಸಲು ಅವಕಾಶ ಕೊಡುತ್ತೇನೆ. ಅದು ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವೇ ಆಗಿರಬಹುದು’ ಎಂದು ಇಂಗ್ಲೆಂಡ್‌ನ ಬಟ್ಲರ್ ಈಚೆಗೆ ಹೇಳಿದ್ದಾರೆ. ಅವರಿಗೆ ಮೋಯಿನ್ ಅಲಿ ಕೂಡ ದನಿಗೂಡಿಸಿದ್ದಾರೆ.

‘ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಯಾವ ಕ್ರೀಡೆಯಲ್ಲೂ ಈ ರೀತಿ ಮಾಡುವುದು ಸ್ವೀಕಾರಾರ್ಹವಲ್ಲ’ ಎಂದು ಸ್ಯಾಮ್ ಬಿಲ್ಲಿಂಗ್ಸ್ ಟ್ವೀಟ್ ಮಾಡಿದ್ದರು.

ಇದು ಬ್ಯಾಟರ್‌ಗಳ ಆಟವೆಂಬ ಮನೋಭಾವನೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಬೌಲರ್‌ಗಳಿಗೂ ಸಮಾನ ಗೌರವ ಇರಬೇಕು ಎಂದು ಪ್ರತಿಪಾದಿಸುವವರ ಒಂದು ವರ್ಗವೂ ಇದೆ. ಅವರಿಗೆ ಅಶ್ವಿನ್ ಛಲದ ಹೋರಾಟವು ದನಿ ನೀಡಿದ್ದು ಸುಳ್ಳಲ್ಲ. ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಪ್ರಯೋಗಿಸಲು ‘360 ಡಿಗ್ರಿ’ ಚಲನೆಯನ್ನೂ ಮಾಡಬಹುದು. ಬಲಗೈ ಅಥವಾ ಎಡಗೈ ಬ್ಯಾಟರ್‌ಗಳು ತಮ್ಮ ಸ್ಟ್ಯಾನ್ಸ್‌ ಬದಲಿಸಿ, ಸ್ವಿಚ್ ಹಿಟ್, ರಿವರ್ಸ್ ಸ್ವೀಪ್ ಇತ್ಯಾದಿಗಳನ್ನು ಆಡುವ ಸ್ವಾತಂತ್ರ್ಯವಿದೆ. ಆದರೆ ಬೌಲಿಂಗ್‌ನಲ್ಲಿ ಆ ರೀತಿಯಾಗುವುದಿಲ್ಲ. ನೋಬಾಲ್ ಮಾಡಿದರೆ ಬ್ಯಾಟರ್‌ಗೆ ಫ್ರೀಹಿಟ್ ಅವಕಾಶ ಸಿಗುತ್ತದೆ. ಚೆಂಡು ಪ್ಯಾಡ್‌ಗೆ ಬಡಿದು ಅಥವಾ ಬಡಿಯದೇ ಸಾಗಿದರೂ ಇತರೆ ರನ್‌ ಗಳಿಸುವ ಅವಕಾಶ ಬ್ಯಾಟಿಂಗ್ ತಂಡಕ್ಕೆ ಸಿಗುತ್ತದೆ. ಆದರೆ ಬೌಲರ್‌ಗಳಿಗೆ ಇಂತಹ ಯಾವುದೇ ಅವಕಾಶಗಳಿಲ್ಲ.

ಅದಕ್ಕಾಗಿಯೇ ಅಶ್ವಿನ್ ಈಗ ದನಿಯೆತ್ತಿದ್ದಾರೆ. ನಾನ್‌ಸ್ಟ್ರೈಕರ್ ಕ್ರೀಸ್‌ ಬಿಟ್ಟರೆ ಔಟ್ ಮಾಡುವ ಬೌಲರ್‌ ಖಾತೆಗೆ ವಿಕೆಟ್ ದಕ್ಕಬೇಕು ಎಂಬುದು ಅವರ ವಾದ. ವಿನೂ ಮಂಕಡ್ ಅವರು ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮಾಡಿದ ಪ್ರಯೋಗಕ್ಕೆ ಅಶ್ವಿನ್ ತಾತ್ವಿಕ ಅಂತ್ಯ ಬಯಸಿದ್ದಾರೆ. ಇದಕ್ಕೆ ಐಸಿಸಿ ಹಾಗೂ ಎಂಸಿಸಿ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಚಾಹರ್ ‘ಡೆಡ್‌ಬಾಲ್’

ಹೋದ ತಿಂಗಳು ಜಿಂಬಾಬ್ವೆಯಲ್ಲಿ ಇನ್ನೊಂದು ಘಟನೆ ನಡೆದಿತ್ತು. ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದಿದ್ದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್ ದೀಪಕ್ ಚಾಹರ್, ಮಂಕಡಿಂಗ್ ಮಾಡಿದರೂ ಎದುರಾಳಿ ತಂಡದ ಬ್ಯಾಟರ್‌ಗೆ ಮಗದೊಂದು ಅವಕಾಶ ನೀಡಿದ್ದರು. ಎಸೆತ ಹಾಕುವ ಮುನ್ನವೇ ನಾನ್ ಸ್ಟೈಕರ್ ಕ್ರೀಸ್ ಬಿಟ್ಟಿದ್ದನ್ನು ಗಮನಿಸಿದ ದೀಪಕ್ ಚಾಹರ್ ಬೇಲ್ಸ್ ಹಾರಿಸಿದರು. ಆದರೆ ಔಟ್‌ಗಾಗಿ ಅಪೀಲ್ ಮಾಡಲಿಲ್ಲ.

ನಿಯಮ ಬದಲಾವಣೆ ಬೇಕಿತ್ತಾ?

ಇವತ್ತು ಕ್ರಿಕೆಟ್ ಪ್ರಮುಖ ವಾಣಿಜ್ಯ ಚಟುವಟಿಕೆಯಾಗಿ ಬೆಳೆದಿದೆ. ಸಾವಿರಾರು ಕೋಟಿ ರೂಪಾಯಿಯ ವ್ಯವಹಾರ ಇದಾಗಿದೆ. ‘ಫೇರ್‌ ಪ್ಲೇ’ ಎಂಬುದು ಹಿಂದೆಂದಿಗಿಂತಲೂ ಇಂದು ಮುಖ್ಯವಾಗಿದೆ. ಆದ್ದರಿಂದ ಕಾಲಕಾಲಕ್ಕೆ ನಿಯಮಗಳಲ್ಲಿ ಬದಲಾವಣೆಗಳು ಅಗತ್ಯವಾಗಿ ಆಗುತ್ತಿವೆ. ಒಂದು ಸಮಯದಲ್ಲಿ ಅಂಪೈರ್ ನಿರ್ಣಯವೇ ಅಂತಿಮ ಎನ್ನುವ ಮಾತಿತ್ತು. ಆದರೆ ಈಗ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ಜಾರಿಯಾಗಿದೆ. ಟಿ20 ಕ್ರಿಕೆಟ್ ಕಾಲಘಟ್ಟದಲ್ಲಿ ಪ್ರತಿಯೊಂದು ರನ್‌ ಅಥವಾ ಎಸೆತ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲವು. ಇಂತಹ ಪರಿಸ್ಥಿತಿಯಲ್ಲಿ ಬೌಲರ್ ಎಸೆತ ಹಾಕುವ ಮುನ್ನವೇ ನಾನ್‌ಸ್ಟ್ರೈಕರ್ ಬ್ಯಾಟರ್ ಕಾಲು ಭಾಗ ಪಿಚ್‌ ದಾಟಿ ಓಡಿದ್ದರೆ, ಅತ್ತಣಿಂದ ಬ್ಯಾಟರ್ ಚೆಂಡನ್ನು ಹೊಡೆದು ಓಡಿದಾಗ ಒಂದು ರನ್ ಪಡೆಯುವುದು ಸುಲಭ. ನಾನ್‌ಸ್ಟ್ರೈಕರ್‌ ಓಡುವ ದಿಕ್ಕು ಯಾವಾಗಲೂ ಸುರಕ್ಷಿತ ವಲಯವೇ ಆಗಿರುವುದು ಹೆಚ್ಚು. ಆದ್ದರಿಂದ ಮಂಕಡಿಂಗ್ ನಿಯಮದಲ್ಲಿ ಬದಲಾವಣೆ ಅಪೇಕ್ಷಣಿಯವೇ ಆಗಿತ್ತು. ಆದರೆ ಇಂಗ್ಲೆಂಡ್‌ ತಂಡದ ಆಟಗಾರರೇ ಇದಕ್ಕೆ ಹೆಚ್ಚು ವಿರೋಧ ವ್ಯಕ್ತಪಡಿಸುವುದು ಬ್ಯಾಟರ್‌ಗಳ ಪ್ರತಿಷ್ಠೆಯೂ ಕಾರಣವಾಗಿರಬಹುದು. ಆದರೆ, ಆಟದಲ್ಲಿ ಆರೋಗ್ಯಕರ ಸ್ಪರ್ಧೆ ಇರುವಂತೆ ನೋಡಿಕೊಳ್ಳುವ ಎಂಸಿಸಿ ನಿಯಮಗಳನ್ನು ಪರಿಷ್ಕರಿಸಲು ಹಿಂಜರಿದಿಲ್ಲ ಎಂಬುದು ಕೂಡ ಇಲ್ಲಿ ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT