ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಮನೀಷ್ ಪಾಂಡೆಗೆ ’ಟೆಸ್ಟ್‌‘ ಯಾಕಿಲ್ಲ?

Last Updated 17 ನವೆಂಬರ್ 2020, 8:35 IST
ಅಕ್ಷರ ಗಾತ್ರ
ADVERTISEMENT
""
""

ಮನೀಷ್ ಪಾಂಡೆ..

ಈ ಹೆಸರು ಕೇಳಿದಾಕ್ಷಣ ಟ್ವೆಂಟಿ–20 ಕ್ರಿಕೆಟ್‌ನ ಅಬ್ಬರ, ಏಕದಿನ ಕ್ರಿಕೆಟ್‌ನ ಜಿಗುಟುತನದ ಆಟ ಕಣ್ಣ ಮುಂದೆ ಕುಣಿಯುತ್ತವೆ. ತಾವು ಆಡುವ ಅಂಗಳದಲ್ಲಿಯೇ ’ನೋಡು ಮಾಮ್, ಇವನು ವಿಕೆಟ್ ಕೊಡ್ತಾನೆ ನಿಂಗೆ..‘, ’ಓಡು ಮಾಮ್, ಎರಡ್ ಬರುತ್ತೆ.. ಓಡು. ಓಡು..‘ ಎಂದೆಲ್ಲ ತನ್ನೊಂದಿಗೆ ತಂಡದಲ್ಲಿರುವ ಕನ್ನಡದ ಹುಡುಗರನ್ನು ಕನ್ನಡದಲ್ಲಿಯೇ ಹುರಿದುಂಬಿಸುತ್ತಾರೆ. ಐಪಿಎಲ್, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಈ ಕನ್ನಡ ಧ್ವನಿ ಆಗಾಗ ಕೇಳಿ ಬರುತ್ತಲೇ ಇರುತ್ತದೆ.

ಅದೀರಲಿ; ಸೀಮಿತ ಓವರ್‌ಗಳ ಮಾದರಿಗಳಿಗಿಂತಲೂ ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಮನೀಷ್ ಆಟದ ಸೊಬಗು ಇನ್ನೂ ಸುಂದರ. ಅವರ ಪ್ರಥಮ ದರ್ಜೆ ದಾಖಲೆಗಳನ್ನು ನೋಡಿ.

91 ಪಂದ್ಯಗಳು, 6,389 ರನ್‌ಗಳು, 19 ಶತಕ ಮತ್ತು 29 ಅರ್ಧಶತಕ ಮತ್ತು ಶ್ರೇಷ್ಠ ಸ್ಕೋರ್ 238!

ಇಷ್ಟೇ ಅಲ್ಲ; ಕರ್ನಾಟಕ ತಂಡವು ಕಳೆದ ಏಳು ವರ್ಷಗಳಲ್ಲಿ ಗೆದ್ದ ಎರಡು ರಣಜಿ ಟ್ರೋಫಿ, ಎರಡು ಇರಾನಿ ಟ್ರೋಫಿ, ಮೂರು ವಿಜಯ್ ಹಜಾರೆ ಟ್ರೋಫಿ, ಮೂರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವಿಜಯದ ಸಾಧನೆಗಳಲ್ಲಿ ಮನೀಷ್ ಕಾಣಿಕೆ ಮಹತ್ವದ್ದು. ಆದರೂ ಅವರಿಗೆ ಇನ್ನೂ ಭಾರತ ತಂಡದ ’ಟೆಸ್ಟ್ ಕ್ಯಾಪ್‌‘ ಧರಿಸುವ ಭಾಗ್ಯ ಬಂದೇ ಇಲ್ಲ. ಅವರನ್ನು ಸೀಮಿತ ಓವರ್‌ಗಳ ಆಟಕ್ಕೆ ಸೀಮಿತ ಮಾಡಲಾಗಿರುವುದು ವಿಚಿತ್ರ.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಜೊತೆಗೆ ಮನೀಷ್ ಪಾಂಡೆ –ಪಿಟಿಐ ಚಿತ್ರ

ಇದೀಗ ಆಸ್ಟ್ರೇಲಿಯಾದಲ್ಲಿ ಸರಣಿ ಆಡಲು ತೆರಳಿರುವ ಭಾರತ ತಂಡದ ಏಕದಿನ ಮತ್ತು ಟಿ20 ತಂಡಗಳಲ್ಲಿ ಮನೀಷ್ ಇದ್ದಾರೆ. ಆದರೆ ಟೆಸ್ಟ್ ಸರಣಿ ಆರಂಭವಾಗುವಾಗ ಅವರು ಬೆಂಗಳೂರಿಗೆ ಮರಳುತ್ತಾರೆ. ಕಳೆದ ಐದು ವರ್ಷಗಳಿಂದ ಇದೇ ರೀತಿ ನಡೆಯುತ್ತಲೇ ಇದೆ. ಅವರನ್ನು ಭಾರತ ತಂಡಕ್ಕೆ ಪರಿಗಣಿಸಿದ್ದೇ ತಡವಾಗಿ. ಆದರೆ ಸಿಕ್ಕ ಅವಕಾಶವನ್ನು ಅವರು ಸಮರ್ಥವಾಗಿಯೇ ಬಳಸಿಕೊಂಡರು.

ಮನೀಷ್ ಅವರ ತಂದೆ ಕೃಷ್ಣಾನಂದ ಭಾರತೀಯ ಸೇನೆಯ ಅಧಿಕಾರಿ. ಮನೀಷ್ ಜನಿಸಿದ್ದು ಉತ್ತರಾಖಂಡದ ನೈನಿತಾಲ್‌ನಲ್ಲಿ. ಆದರೆ, ಅವರ ತಂದೆಗೆ ಬೆಂಗಳೂರಿಗೆ ವರ್ಗವಾಗಿ ಬಂದಿದ್ದು ಕರ್ನಾಟಕದ ಕ್ರಿಕೆಟ್‌ಗೆ ಒಳ್ಳೆಯದಾಯಿತು. ಮಗ ಸೇನೆಗೆ ಸೇರಬೇಕೆಂಬ ದೊಡ್ಡ ಆಸೆ ಅವರಿಗೆ ಇತ್ತು. ಆದರೆ, ಮನೀಷ್ ಎಎಸ್‌ಸಿ ಸೆಂಟರ್‌ನಲ್ಲಿರುವ ಕೇಂದ್ರಿಯ ವಿದ್ಯಾಲಯದಲ್ಲಿ ಓದುವಾಗಲೇ ಕ್ರಿಕೆಟ್‌ ನತ್ತ ಆಕರ್ಷಿತರಾದರು. ಮಗನ ಪ್ರತಿಭೆ ಮತ್ತು ಹುಮ್ಮಸ್ಸಿಗೆ ಅಪ್ಪ ಅಡ್ಡಿಯಾಗಲಿಲ್ಲ. ಉತ್ತಮ ಕೋಚ್‌ಗಳಿಂದ ತರಬೇತಿಯ ವ್ಯವಸ್ಥೆ ಮಾಡಿದರು.

ಒಂದೊಂದೇ ಮೆಟ್ಟಿಲೇರಿದ ಮನೀಷ್, ಕರ್ನಾಟಕ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದ್ದು 2008ರಲ್ಲಿ. ಭಾರತ ಏಕದಿನ ತಂಡಕ್ಕೆ ಅವಕಾಶ ಪಡೆದಿದ್ದು 2015ರಲ್ಲಿ. ಆದರೆ ರಾಜ್ಯ ತಂಡದಲ್ಲಿ ಅವರಿಗಿಂತ ಎರಡು ವರ್ಷ ತಡವಾಗಿ ಪದಾರ್ಪಣೆ ಮಾಡಿದ್ದ ಕೆ.ಎಲ್. ರಾಹುಲ್ 2014ರಲ್ಲಿಯೇ ಟೆಸ್ಟ್ ತಂಡಕ್ಕೆ ಆಯ್ಕೆಯಾದರು. ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದು ಮತ್ತು ರನ್‌ ಗಳಿಕೆಯೂ ಚೆನ್ನಾಗಿದ್ದ ಕಾರಣ ಅದೃಷ್ಟ ಒಲಿಯಿತು. ಆದರೆ ಮಧ್ಯಮ ಕ್ರಮಾಂಕದ ಮನೀಷ್ ಪಾಂಡೆ ಹಲವಾರು ಪಂದ್ಯಗಳ ಗೆಲುವಿನ ರೂವಾರಿಯಾದರೂ ಕಾಯಬೇಕಾಯಿತು.

ಐಪಿಎಲ್ ಪಂದ್ಯವೊಂದರಲ್ಲಿ ಮನಿಶ್‌ ಪಾಂಡೆ ಅವರಿಂದ ಕ್ಯಾಚ್‌ ಹಿಡಿಯುವ ಪ್ರಯತ್ನ (ಪಿಟಿಐ ಚಿತ್ರ)

2015ರಲ್ಲಿ ಜಿಂಬಾಬ್ವೆ ಎದುರಿನ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ ಆಡುವ ಅವಕಾಶ ಲಭಿಸಿತು. ಅದರಲ್ಲಿ ಅವರು ಹೊಡೆದ 71 ರನ್‌ಗಳು ಮತ್ತು ಕೇದಾರ್ ಜಾಧವ್ ಅವರೊಂದಿಗಿನ ಜೊತೆಯಾಟವನ್ನು ಕ್ರಿಕೆಟ್‌ ಪ್ರಿಯರು ಮರೆಯುವುದಿಲ್ಲ. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದ ಆ ಪಂದ್ಯದಲ್ಲಿ ಮನೀಷ್ ಮಿಂಚಿದ್ದರು. ಆದರೆ 2016ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಅವರು ಹೊಡೆದಿದ್ದ ಶತಕದ ಬಲದಿಂದ ಭಾರತ ತಂಡವು 330 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಜಯಿಸಿತ್ತು. 84 ಎಸೆತಗಳಲ್ಲಿ ಹೊಡೆದಿದ್ದ ಆ ಮಿಂಚಿನ ಶತಕಕ್ಕೆ ಆಸ್ಟ್ರೇಲಿಯಾದ ಬೌಲರ್‌ಗಳು ಬೆಚ್ಚಿ ಬಿದ್ದಿದ್ದರು. ಮನೀಷ್ ಪಂದ್ಯಶ್ರೇಷ್ಠರಾಗಿದ್ದರು. ಆದರೂ ಅವರ ಸ್ಥಾನ ತಂಡದಲ್ಲಿ ಭದ್ರವಾಗಲಿಲ್ಲ. ಸರಿಯಾದ ಅವಕಾಶಗಳು ಸಿಗಲಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಮಿಂಚುವುದನ್ನು ಬಿಡಲಿಲ್ಲ.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಾಗಿ ಹುಡುಕಾಟ ನಡೆದಾಗಲೂ ಮನೀಷ್ ಅವರನ್ನು ಸ್ಥಿರವಾಗಿ ಬಳಸಿಕೊಳ್ಳುವತ್ತ ಚಿಂತಿಸಲಿಲ್ಲ. ಅಂಬಟಿ ರಾಯುಡು, ಕೇದಾರ್ ಜಾಧವ್, ರಿಷಭ್ ಪಂತ್, ವಿಜಯಶಂಕರ್ ಅವರನ್ನೆಲ್ಲ ಪ್ರಯೋಗಿಸಲಾಯಿತು. ಆ ಪಂದ್ಯದ ನಂತರ ಅವರಿಂದ ಮತ್ತೆ ಶತಕ ದಾಖಲಾಗಿಲ್ಲ ನಿಜ. ಆದರೆ, ತಂಡದ ಜಯದಲ್ಲಿ ಅವರು ತಮ್ಮ ಮಹತ್ವದ ಕಾಣಿಕೆ ನೀಡಿದ್ದಾರೆ. ಭಾರತದ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಯೂ ಅವರದ್ದು. ರಣಜಿ, ಏಕದಿನ, ಟಿ20 ಯಾವುದೇ ಇರಲಿ ಅವರ ಫೀಲ್ಡಿಂಗ್‌ನ ಚುರುಕುತನ ಬದಲಾಗಲ್ಲ. ಬೌಂಡರಿಲೈನ್ ಕ್ಯಾಚಿಂಗ್‌ನಲ್ಲಿ ಹಿಂದೆ ಬೀಳಲ್ಲ

ಆದರೂ ಅವರಿಗೆ ಟೆಸ್ಟ್ ನಲ್ಲಿ ಅವಕಾಶ ಕೊಡಬೇಕು ಎನ್ನುವತ್ತ ಚರ್ಚೆಯೇ ನಡೆಯುತ್ತಿಲ್ಲ. ಐಪಿಎಲ್‌ನಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್, ಸೀಮಿತ ಓವರ್‌ಗಳಲ್ಲಿ 40–50 ರನ್‌ ಹೊಡೆದು ತಂಡದ ಜಯಕ್ಕೆ ಬಲ ತುಂಬುತ್ತಾರೆ ಎಂಬ ಕಾರಣಗಳಿಗೆ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಪರಿಗಣಿಸದಿರುವುದು ಎಷ್ಟು ಸರಿ? ಪ್ರತಿಭೆಗಳ ಪ್ರವಾಹವೇ ಹರಿದು ಬರುತ್ತಿರುವ ಈ ಹೊತ್ತಿನಲ್ಲಿ ಪಾಂಡೆ ತಾವಿರುವ ತಂಡಗಳಲ್ಲಿಯೇ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡಬೇಕಿದೆ. ಯಾವುದೇ ಕ್ರಿಕೆಟಿಗನಿಗೂ ಇರುವಂತೆ 31 ವರ್ಷದ ಪಾಂಡೆಗೂ ತಾವು ಶ್ವೇತವರ್ಣದ ದಿರಿಸಿನಲ್ಲಿ ಭಾರತ ತಂಡಕ್ಕೆ ಆಡಬೇಕೆಂಬ ದೊಡ್ಡ ಕನಸಿದೆ. ಮುಂಬೈ, ದೆಹಲಿ ಆಟಗಾರರಿಗೆ ಅವಕಾಶಗಳು ಸಿಗದಿದ್ದರೆ ದೊಡ್ಡ ಧ್ವನಿಯಲ್ಲಿ ಚರ್ಚೆಗಳು ನಡೆಯುತ್ತವೆ. ಆದರೆ, ಪಾಂಡೆ ಪರವಾಗಿ ಅಂತಹದೊಂದು ’ಧ್ವನಿ‘ ಕೇಳಿ ಬಂದಿಲ್ಲವೆನ್ನುವುದೇ ಸೋಜಿಗದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT