ಬುಧವಾರ, ಆಗಸ್ಟ್ 17, 2022
30 °C
ಎಲ್ಲ ಮಾದರಿಗಳಿಗೂ ನಿವೃತ್ತಿ ಘೋಷಿಸಿದ ಗುಜರಾತ್ ಆಟಗಾರ

ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ವಿದಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ತಂಡದ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಬುಧವಾರ ಎಲ್ಲ ಮಾದರಿಗಳ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಗುಜರಾತ್‌ನ 35 ವರ್ಷದ  ಎಡಗೈ ಬ್ಯಾಟ್ಸ್‌ಮನ್ ಪಾರ್ಥಿವ್, ’ಹೆಮ್ಮೆ ಮತ್ತು ಶಾಂತಚಿತ್ತದಿಂದ ನಿರ್ಗಮಿಸುತ್ತಿದ್ದೇನೆ. 18 ವರ್ಷಗಳ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ. ಈ ಸುದೀರ್ಘ ಪಯಣದಲ್ಲಿ ನಾನು ಬಹಳಷ್ಟು ಜನರಿಗೆ ಆಭಾರಿಯಾಗಿದ್ದೇನೆ‘ ಎಂದು  ಟ್ವೀಟ್ ಮಾಡಿದ್ದಾರೆ.

ಪಾರ್ಥಿವ್ ತಮ್ಮ 17ನೇ ವಯಸ್ಸಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಗ ಸೌರವ್ ಗಂಗೂಲಿ ತಂಡದ ನಾಯಕರಾಗಿದ್ದರು. ಟೆಸ್ಟ್ ಗೆ ಪದಾರ್ಪಣೆ ಮಾಡಿದ ಕಿರಿಯ ಆಟಗಾರನೆಂಬ ಹೆಗ್ಗಳಿಕೆ ಅವರದ್ದಾಗಿತ್ತು.

ಪಾರ್ಥಿವ್ 25 ಟೆಸ್ಟ್, 38 ಏಕದಿನ ಹಾಗೂ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ಟೆಸ್ಟ್ ಹಾಗೂ ಏಕದಿನದಲ್ಲಿ  ಕ್ರಮವಾಗಿ ಆರು ಹಾಗೂ ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಈಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಅವರಿಗೆ ಒಂದೂ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ.

194 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಾರ್ಥಿವ್ ಪಟೇಲ್ 11 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕ ಹಾಗೂ 67 ಅರ್ಧಶತಕಗಳು ಸೇರಿವೆ. ಹಾಗೆಯೇ 486 ಕ್ಯಾಚ್ ಹಾಗೂ 77 ಸ್ಟಂಪಿಂಗ್ ಸಾಧನೆ ಮಾಡಿದ್ದಾರೆ.  2016-17ನೇ ಸಾಲಿನಲ್ಲಿ ಗುಜರಾತ್‌ಗೆ ಚೊಚ್ಚಲ ರಣಜಿ ಟ್ರೋಫಿ ಜಯದ ಕಾಣಿಕೆ ನೀಡುವಲ್ಲಿ  ದೊಡ್ಡ ಪಾತ್ರ ವಹಿಸಿದ್ದರು. 

ಧೋನಿ ಆಗಮನಕ್ಕೂ ಮುನ್ನ
2002ರಲ್ಲಿಯೇ ಟೆಸ್ಟ್ ಪದಾರ್ಪಣೆ ಮಾಡಿದ್ದ ಪಾರ್ಥಿವ್ ಪಟೇಲ್ ವಿಕೆಟ್‌ಕೀಪಿಂಗ್ ಮತ್ತು ಎಡಗೈ ಬ್ಯಾಟಿಂಗ್‌ನೊಂದಿಗೆ ಗಮನ ಸೆಳೆದಿದ್ದರು. ಆದರೆ, ಮಹೇಂದ್ರಸಿಂಗ್ ಧೋನಿಯ ಭಾರತ ತಂಡದ ವಿಕೆಟ್‌ಕೀಪಿಂಗ್‌ನಲ್ಲಿ ಮಿಂಚತೊಡಗಿದ ನಂತರ ಪಾರ್ಥಿವ್ ಸೇರಿದಂತೆ ಕೆಲವು ವಿಕೆಟ್‌ಕೀಪರ್‌ಗಳು ಅವಕಾಶ ಪಡೆಯುವಲ್ಲಿ ಹಿಂದೆ ಬಿದ್ದರು.

ಎರಡನೇ ವಿಕೆಟ್‌ಕೀಪರ್ ಆಗಿ ಹಲವು ಸರಣಿಗಳಲ್ಲಿ ಪಾರ್ಥಿವ್ ಆಡಿದರು.  ಆರಂಭಿಕ ಬ್ಯಾಟ್ಸ್‌ಮನ್ ಆಗಿಯೂ ಮಿಂಚಿದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಆರ್‌ಸಿಬಿ ತಂಡಗಳಲ್ಲಿ ಆಡಿದ್ದರು.

’ಐಪಿಎಲ್‌ನಲ್ಲಿ ಆಡಲು ಅವಕಾಶ ಕೊಟ್ಟ ತಂಡಗಳ ಮಾಲೀಕರಿಗೆ ಧನ್ಯವಾದಗಳು.  ಆ ತಂಡಗಳು ನನ್ನನ್ನು ಚೆನ್ನಾಗಿ ನೋಡಿಕೊಂಡವು‘ ಎಂದು ಪಟೇಲ್ ಹೇಳಿದ್ದಾರೆ.

’ಪಾರ್ಥೀವ್ ಭಾರತೀಯ ಕ್ರಿಕೆಟ್‌ನ ರಾಯಭಾರಿಯಾಗಿದ್ದಾರೆ.  ತಂಡದಲ್ಲಿ ಎಲ್ಲರ ಅಚ್ಚುಮೆಚ್ಚಿನ ಹುಡುಗನಾಗಿದ್ದ ಅವರು ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದಾರೆ. ನನ್ನ ನಾಯಕತ್ವದಲ್ಲಿ ಅವರು ತಮ್ಮ 17ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ‘ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಅಮೋಘವಾದ ವೃತ್ತಿಜೀವನ ನಿಮ್ಮದು. ನಿಮ್ಮ ಕಠಿಣ ಪರಿಶ್ರಮ ಎಲ್ಲರಿಗೂ ಅನುಕರಣೀಯ. ನಿಮ್ಮ ನಿವೃತ್ತಿಜೀವನವೂ ಸಂತಸಮಯವಾಗಿರಲಿ ನಿಕ್ಕಿ.
–ವೀರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟಿಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು