ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಯೊಂದಿಗೆ ಅವರ ನಂ.7 ಜೆರ್ಸಿಗೂ ವಿದಾಯ?

Last Updated 16 ಆಗಸ್ಟ್ 2020, 10:24 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ವಿಶ್ವಕಪ್ ವಿಜೇತ ನಾಯಕ ಮಹೇಂದ್ರಸಿಂಗ್‌ ಧೋನಿ ಅವರು ಶನಿವಾರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ತಂಡದಲ್ಲಿ ಅವರು ಧರಿಸುತ್ತಿದ್ದ ಏಳನೇ ನಂಬರ್‌ ಜೆರ್ಸಿಗೂ ವಿದಾಯ ಹೇಳಬೇಕೆ?.. ಇಂತಹ ಒತ್ತಾಯವು ಈಗ ಕೇಳಿಬರುತ್ತಿದೆ. ಜೆರ್ಸಿ ಕೈಬಿಡುವುದಕ್ಕೆ ಒತ್ತಾಯ ಇರುವುದು ನಿಜವೆಂದು ಬಿಸಿಸಿಐನ ಪ್ರಮುಖರು ಒಪ್ಪಿಕೊಂಡಿದ್ದಾರೆ.

ಭಾರತ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ ಅವರು ಭಾನುವಾರ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2019ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ವೇಳೆ ತಾವು ಧೋನಿಯೊಂದಿಗೆ ಇದ್ದ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಕಾರ್ತಿಕ್‌ ‘ಈ ಪ್ರಯಾಣದಲ್ಲಿ ಸಾಕಷ್ಟು ಸುಂದರ ನೆನಪುಗಳಿವೆ. ಧೋನಿ ಅವರು ಧರಿಸುತ್ತಿದ್ದ ಏಳನೇ ನಂಬರ್‌ನ ಜೆರ್ಸಿಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದಬಿಸಿಸಿಐ ವಿದಾಯ ಹೇಳಲಿದೆ ಎಂಬ ವಿಶ್ವಾಸವಿದೆ‘ ಎಂದು ಬರೆದುಕೊಂಡಿದ್ದಾರೆ.

#RetireTheNumber7Jersey 🇮🇳🏏

A post shared by Dinesh Karthik (@dk00019) on

ಧೋನಿ 2004ರಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂರು ತಿಂಗಳು ಮುನ್ನ ಕಾರ್ತಿಕ್‌ ಅವರು ಭಾರತ ತಂಡ ಸೇರಿದ್ದರು. ಇದುವರೆಗೆ 26 ಟೆಸ್ಟ್‌, 94 ಏಕದಿನ ಹಾಗೂ 32 ಟ್ವೆಂಟಿ–20 ಪಂದ್ಯಗಳಲ್ಲಿ ಅವರು ಆಡಿದ್ದಾರೆ.

‘ನಿಮ್ಮ (ಧೋನಿ) ಜೀವನದ ಎರಡನೇ ಇನಿಂಗ್ಸ್‌ಗೆ ಶುಭಹಾರೈಕೆಗಳು. ಅಲ್ಲಿಯೂ ನಮಗೆ ನೀವು ಬಹಳಷ್ಟು ಅಚ್ಚರಿಗಳನ್ನು ನೀಡುವಿರೆಂದು ಖಾತ್ರಿಯಿದೆ‘ ಎಂದು ಕಾರ್ತಿಕ್‌ ಹೇಳಿದ್ದಾರೆ.

ಧೋನಿ ಅವರ ಜೆರ್ಸಿಗೆ ವಿದಾಯ ಹೇಳುವ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐನ ಅಪೆಕ್ಸ್‌ ಕೌನ್ಸಿಲ್‌ ಸದಸ್ಯೆ ಶಾಂತಾ ರಂಗಸ್ವಾಮಿ ಅವರು ‘ಈ ಗೌರವಕ್ಕೆ ಧೋನಿ ಅರ್ಹರು‘ ಎಂದಿದ್ದಾರೆ.

‘ನಿವೃತ್ತಿ ಕುರಿತು ಮಾತುಗಳು ಕೇಳಿಬರುತ್ತಿರುವಾಗಲೇ ಧೋನಿ ವಿದಾಯ ಪ್ರಕಟಿಸಿದ್ದಾರೆ ಎಂಬುದು ಖುಷಿಯ ಸಂಗತಿ. ಆಟಗಾರ ಹಾಗೂ ನಾಯಕನಾಗಿ ಅವರ ಕೊಡುಗೆ ಅಪಾರವಾಗಿದೆ. ಇದನ್ನು ಪರಿಗಣಿಸಿ ಜೆರ್ಸಿಗೆ ವಿದಾಯ ಹೇಳಿದರೆ ಅವರಿಗೆ ಸೂಕ್ತ ಗೌರವ ದೊರೆತಂತಾಗುತ್ತದೆ‘ ಎಂದು ಶಾಂತಾ ಹೇಳಿದ್ದಾರೆ.

ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರ ನಿವೃತ್ತಿಯೊಂದಿಗೆ ಅವರು ಜೆರ್ಸಿಗೂ ವಿದಾಯ ಹೇಳಲಾಗಿದೆ. ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಸಚಿನ್‌ ಅವರಿಗೆ ಮಾತ್ರ ಈ ಗೌರವ ಲಭಿಸಿದೆ.

ಸಚಿನ್ ನಿವೃತ್ತಿಯಾದ ನಾಲ್ಕು ವರ್ಷಗಳ ಬಳಿಕ 2017ರಲ್ಲಿ ಅವರು ಧರಿಸುತ್ತಿದ್ದ 10ನೇ ನಂಬರ್‌ ಜೆರ್ಸಿಗೆ ವಿದಾಯ ಹೇಳಲಾಗಿತ್ತು. ಭಾರತ ತಂಡದ ಶ್ರೀಲಂಕಾ ಪ್ರವಾಸದ ವೇಳೆ ಶಾರ್ದೂಲ್‌ ಠಾಕೂರ್‌ ಅವರು ತಮ್ಮ ಪದಾರ್ಪಣೆ ಪಂದ್ಯದಲ್ಲಿ ಈ ನಂಬರ್‌ನ‌ ಜೆರ್ಸಿ ಧರಿಸಿ ಆಡಿದ್ದರು. ಇದಕ್ಕೆ ಹಲವರ ಆಕ್ರೋಶವನ್ನು ಅವರು ಎದುರಿಸಬೇಕಾಯಿತು.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಈ ಕುರಿತು ಈ ನಿರ್ಧಾರ ತೆಗೆದುಕೊಳ್ಳಲು ಆಯಾ ಕ್ರಿಕೆಟ್‌ ಮಂಡಳಿಗೆ ಅಧಿಕಾರ ನೀಡಿದೆ.

ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಅಲ್ಲದೆ ಧೋನಿ ಅವರ ಅಪಾರ ಅಭಿಮಾನಿಗಳು ‘ಏಳನೇ ನಂಬರ್‌ ಜೆರ್ಸಿಯು ಧೋನಿ ಅವರಿಗೆ ಮಾತ್ರ ಸೇರಿದ್ದು‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT