ಸಿಲೆಟ್ (ಬಾಂಗ್ಲಾದೇಶ): ಮಹಿಳೆಯರ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಶ್ರೀಲಂಕಾ, ಫೈನಲ್‌ಗೆ ಲಗ್ಗೆಯಿಟ್ಟಿದೆ.
ಈ ಗೆಲುವು ಲಂಕಾ ಮಹಿಳಾ ಕ್ರಿಕೆಟ್ ಪಾಲಿಗೆ ಅತ್ಯಂತ ಮಹತ್ತರವೆನಿಸಿದ್ದು, 14 ವರ್ಷಗಳ ಬಳಿಕ ಮಹಿಳೆಯರ ಏಷ್ಯಾ ಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಅಲ್ಲದೆ ಜಯದ ಬಳಿಕ ಲಂಕಾ ಆಟಗಾರ್ತಿಯರು ಸಂಭ್ರಮಿಸುತ್ತಿರುವ ವಿಡಿಯೊವನ್ನು ಶ್ರೀಲಂಕಾ ಕ್ರಿಕೆಟ್ ಪೋಸ್ಟ್ ಮಾಡಿದೆ.
ಲಂಕಾ ಒಡ್ಡಿದ 123 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕೊನೆಯ ಓವರ್‌ನಲ್ಲಿ ಒಂಬತ್ತು ಮತ್ತು ಅಂತಿಮ ಎಸೆತದಲ್ಲಿ ಗೆಲುವಿಗೆ ಮೂರು ರನ್‌ಗಳ ಅಗತ್ಯವಿತ್ತು. ಆದರೆ ಅಚಿನಿ ಕುಲಸೂರಿಯ ನಿಖರ ದಾಳಿ ಸಂಘಟಿಸುವ ಲಂಕಾ ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.
ಇದರೊಂದಿಗೆ ಪಾಕಿಸ್ತಾನದ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಅಲ್ಲದೆ ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತದ ಸವಾಲನ್ನು ಎದುರಿಸಲಿದೆ.
ಮಗದೊಂದು ಸೆಮಿಫೈನಲ್ ಮುಖಾಮುಖಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗವು ಥಾಯ್ಲೆಂಡ್ ವಿರುದ್ಧ 74 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.
ನಿಮ್ಮ ಮಾಹಿತಿಗಾಗಿ, ಇತ್ತೀಚೆಗಷ್ಟೇ ಪುರುಷರ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನೇ ಮಣಿಸಿದ್ದ ಶ್ರೀಲಂಕಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದು ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಲಂಕಾ ಕ್ರೀಡೆಯಲ್ಲಿ ಹೊಸ ಹುರುಪನ್ನು ತುಂಬಿತ್ತು.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ ಮಹಿಳೆಯರ ತಂಡ: 122/6 (ಮಾದವಿ 35, ನಶ್ರಾ ಸಂಧು 17/3)
ಪಾಕಿಸ್ತಾನ ಮಹಿಳೆಯರ ತಂಡ: 121/6 (ಬಿಸ್ಮಾ ಮಾರೂಫ್ 42, ಇನೋಕಾ ರಣವೀರ 17/2)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.