ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಭಾರತ–ಇಂಗ್ಲೆಂಡ್ | ನಿಜವಾಗುತ್ತಾ ಗೂಗಲ್ ಸಿಇಒ ಭವಿಷ್ಯ

ವಿಶ್ವಕಪ್ 2019
Last Updated 7 ಜುಲೈ 2019, 14:01 IST
ಅಕ್ಷರ ಗಾತ್ರ

ವಾಷಿಂಗ್ಟನ್: ಗೂಗಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸುಂದರ್ ಪಿಚ್ಚೈ ಅವರು, ‘ಈ ಬಾರಿಯ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ’ ಎಂದು ನುಡಿದಿದ್ದ ಭವಿಷ್ಯ ನಿಜವಾಗಲಿದೆಯೇ?

ಹೀಗೊಂದು ಪ್ರಶ್ನೆ ಈಗ ಕ್ರಿಕೆಟ್‌ ವಲಯದಲ್ಲಿ ಗರಿಗೆದರಿದೆ.

ಸದ್ಯ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ 46 ವರ್ಷದ ಸುಂದರ್, ಗ್ಲೋಬಲ್ ಲೀಡರ್‌ಷಿಪ್ ಪುರಸ್ಕಾರ ಸ್ವೀಕಾರ ಸಂದರ್ಭದಲ್ಲಿ ‘ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡಗಳು ಆಡುವ ಸಾಧ್ಯತೆಯೇ ಹೆಚ್ಚು. ಆದರೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಕೂಡ ಉತ್ತಮವಾಗಿವೆ’ ಎಂದು ಹೇಳಿದ್ದರು.

ಅವರ ಮಾತಿನಂತೆ ಈ ನಾಲ್ಕು ತಂಡಗಳೇ ಸೆಮಿಫೈನಲ್‌ ಪ್ರವೇಶಿಸಿವೆ.

ರೌಂಡ್‌ ರಾಬಿನ್‌ ಹಂತ ಕೊನೆಯ ಎರಡು ಪಂದ್ಯಗಳು(ಭಾರತ vs ಶ್ರೀಲಂಕಾ, ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ) ಮುಗಿಯುವ ಮುನ್ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಆಸ್ಟ್ರೇಲಿಯಾ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಮೊದಲ ಸೆಮಿಫೈನಲ್‌ನಲ್ಲಿ ಮತ್ತು ಎರಡನೇ ಸ್ಥಾನದಲ್ಲಿರುವ ಭಾರತ ಹಾಗೂ ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ ಎರಡನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ ಎಂಬ ಲೆಕ್ಕಾಚಾರ ಇತ್ತು.

ಆದರೆ, ಕೊನೆ ಪಂದ್ಯಗಳ ಫಲಿತಾಂಶ ಹೊರಬಿದ್ದ ನಂತರ ಈ ಲೆಕ್ಕಾಚಾರವೂ ಉಲ್ಟಾ ಆಗಿದೆ. ರೌಂಡ್‌ ರಾಬಿನ್‌ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಭಾರತ, ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತನ್ನ ಪಾಲಿನ ಒಟ್ಟು 9 ಪಂದ್ಯಗಳಲ್ಲಿ ಏಳು ಗೆಲುವು ಹಾಗೂ ಒಂದು ಸೋಲು ಕಂಡಿದೆ. ಉಳಿದ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಟೀಂ ಇಂಡಿಯಾ ಖಾತೆಯಲ್ಲಿ ಒಟ್ಟು 15 ಪಾಯಿಂಟ್‌ಗಳಿವೆ.

ಇತ್ತ ಆಸ್ಟ್ರೇಲಿಯಾ ಕೊನೆಯ ಪಂದ್ಯದಲ್ಲಿ ದಕ್ಷಿಣಆಫ್ರಿಕಾ ವಿರುದ್ಧ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಆ್ಯರನ್ ಫಿಂಚ್‌ ನೇತೃತ್ವದ ಆಸಿಸ್‌ ಒಂಬತ್ತು ಪಂದ್ಯಗಳಲ್ಲಿ ಏಳನ್ನು ಗೆದ್ದು ಎರಡು ಸೋಲು ಅನುಭವಿಸಿದೆ. ಹೀಗಾಗಿ ಈ ತಂಡದ ಖಾತೆಯಲ್ಲಿ 14 ಅಂಕಗಳು ಇವೆ.

ಹೀಗಾಗಿ ನಿಯಮದಂತೆ ಒಂದು ಹಾಗೂ ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ ಮತ್ತು ಎರಡು, ಮೂರನೇ ಸ್ಥಾನದಲ್ಲಿರುವ ತಂಡಗಳು ಎರಡನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ರೌಂಡ್‌ ರಾಬಿನ್‌ ಹಂತದ ತನ್ನ ಪಾಲಿನ ಕೊನೆಯ ಮೂರೂ ಪಂದ್ಯಗಳನ್ನು ಸೋತಿರುವ ಕಿವೀಸ್‌ ಬಳಗವನ್ನು ಕೊಹ್ಲಿಪಡೆ ಹಣಿದು ಫೈನಲ್‌ ಪ್ರವೇಶಿಸಿದರೆ ಹಾಗೂ ಆತಿಥೇಯ ಆಂಗ್ಲರು ಹಾಲಿ ಚಾಂಪಿಯನ್ನರನ್ನು ಮಣಿಸಿದರೆ ಗೂಗಲ್‌ ಸಿಇಒ ನುಡಿದಿರುವ ಭವಿಷ್ಯ ನಿಜವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT