ಟಾಸ್‌ ಗೆದ್ದ ಪಾಕಿಸ್ತಾನ ಫೀಲ್ಡಿಂಗ್‌; ಭಾರತ ಬ್ಯಾಟಿಂಗ್‌

ಗುರುವಾರ , ಜೂಲೈ 18, 2019
23 °C
ಉತ್ಸಾಹದಲ್ಲಿ ಕೊಹ್ಲಿ ಬಳಗ; ಪುಟಿದೇಳುವ ನಿರೀಕ್ಷೆಯಲ್ಲಿ ಸರ್ಫರಾಜ್‌ ಪಡೆ

ಟಾಸ್‌ ಗೆದ್ದ ಪಾಕಿಸ್ತಾನ ಫೀಲ್ಡಿಂಗ್‌; ಭಾರತ ಬ್ಯಾಟಿಂಗ್‌

Published:
Updated:

ಮ್ಯಾಂಚೆಸ್ಟರ್‌: ಓಲ್ಡ್‌ ಟ್ರಾಫರ್ಡ್‌ನಲ್ಲಿ ಪಾಕಿಸ್ತಾನ ತಂಡ ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ವಿರಾಟ್‌ ಬಳಗ ಬ್ಯಾಟಿಂಗ್‌ ನಡೆಸಲು ಅಣಿಯಾಗಿದೆ.

ಕ್ಷಣಕ್ಷಣದ ಸ್ಕೋರ್‌: https://bit.ly/2X9OQP1

ವಿಶ್ವಕಪ್ ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವೆಂದರೆ ಎರಡೂ ದೇಶಗಳ ಅಭಿಮಾನಿಗಳ ವಲಯದಲ್ಲಿ ‘ದೇಶಭಕ್ತಿ’ಯ ಪರಾಕಾಷ್ಠೆ ಆಗಸಕ್ಕೇರುತ್ತದೆ. ಅದರಲ್ಲೂ ಈ ಬಾರಿ ಕಾವು ತುಸು ಹೆಚ್ಚಾಗಿಯೇ ಇದೆ. ಆ ಬೆಂಕಿಯನ್ನು ತಣ್ಣಗೆ ಮಾಡಲು ಮಳೆರಾಯ ಕಾಯುತ್ತಿದ್ದಾನೆ!

ಟಿವಿ ಜಾಹೀರಾತುಗಳು, ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ತಂಡಗಳು ಪರಸ್ಪರ ಅಣಕವಾಡುವ ದೃಶ್ಯಗಳು ವಿಜೃಂಭಿಸುತ್ತಿವೆ. ವಿಂಗ್ ಕಮಾಂಡರ್ ಅಭಿನಂದನ್ ಅವರ ಮೀಸೆಯೇ ಈಗ ಕೇಂದ್ರಬಿಂದು. ಭಾರತ ಪಡೆಯೇ ಗೆದ್ದು ಮೀಸೆ ಹುರಿಗೊಳಿಸಿಕೊಳ್ಳಲಿ ಎನ್ನುವ ‘ಜೋಶ್’ ಎಲ್ಲೆಡೆ ಇದೆ.

ಇದೆಲ್ಲದರ ನಡುವೆ ಈ ಬಾರಿ  ಒಂದು ಅಪರೂಪದ ವಿಷಯವಿದೆ. ಉಭಯ ತಂಡಗಳ ಅಭಿಮಾನಿಗಳು ಒಂದೇ ಪ್ರಾರ್ಥನೆ ಮಾಡುತ್ತಿದ್ದಾರೆ. ‘ಭಾನುವಾರ ಮಳೆ ಬರದಿರಲಿ. ಪಂದ್ಯ ನಡೆಯಲಿ’ ಎಂಬುದೇ ಆ ಹಾರೈಕೆ. ಆದರೆ ಹವಾಮಾನ ವರದಿಗಳ ಮೇಲೆ ಕಣ್ಣಾಡಿಸಿದರೆ ಮಳೆಯಾಟ ಖಚಿತ. ಆದರೂ ಪಂದ್ಯ ಸಂಪೂರ್ಣ ರದ್ದಾಗುವ ಸಾಧ್ಯತೆ ಕಡಿಮೆ. ಕೆಲವು ಓವರ್‌ಗಳ ಸೆಣಸಾಟವಾದರೂ ನಡೆಯುವ ನಿರೀಕ್ಷೆ ಇದೆ ಎನ್ನುವ ಮಾತುಗಳೂ ಇವೆ. ನಾಲ್ಕು ದಿನಗಳ ಹಿಂದೆ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯವು ಮಳೆಗೆ ಆಹುತಿಯಾಗಿತ್ತು.

ಅದೇನೆ ಇರಲಿ; ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕ್ ಎದುರು ತನ್ನ ಅಜೇಯ ಓಟ ಎದುರಿಸಲು ವಿರಾಟ್ ಕೊಹ್ಲಿ ಬಳಗವು ಸಿದ್ಧವಾಗಿದೆ. ಹಿಂದಿನ ಎಲ್ಲ ದಾಖಲೆಗಳ ಪ್ರಕಾರ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಈ ಟೂರ್ನಿಯ ಮೊದಲ ಎರಡೂ ಪಂದ್ಯಗಳಲ್ಲಿ ಭಾರತ ತಂಡ ಜಯಗಳಿಸಿದೆ. ಆದರೆ ಸರ್ಫರಾಜ್ ಬಳಗವು ಸ್ಥಿರವಾದ ಆಟವಾಡುವಲ್ಲಿ ಯಶಸ್ವಿಯಾಗಿಲ್ಲ. ಮೊದಲ ಪಂದ್ಯದಲ್ಲಿ ಕೇವಲ 105 ರನ್‌ ಗಳಿಸಿತ್ತು. ಆದರೆ ನಂತರದ ಪಂದ್ಯದಲ್ಲಿ ಬಲಾಢ್ಯ ಇಂಗ್ಲೆಂಡ್ ಎದುರು 348 ರನ್‌ಗಳ ಮೊತ್ತ ದಾಖಲಿಸಿತ್ತು ಮತ್ತು ಗೆಲುವು ದಾಖಲಿಸಿತ್ತು. ಆದರೆ, ಮತ್ತೆ ಆಸ್ಟ್ರೇಲಿಯಾ ಎದುರು ಸೋತಿತ್ತು. ಆ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಅಮೀರ್ ಐದು ವಿಕೆಟ್ ಗಳಿಸಿದ್ದರು. ಫೀಲ್ಡಿಂಗ್‌ನಲ್ಲಿ ಮತ್ತು ಬ್ಯಾಟಿಂಗ್‌ನಲ್ಲಿ ಪಾಕ್ ಆಟ ಕಳಪೆಯಾಗಿತ್ತು.

ಭಾರತ ತಂಡದಲ್ಲಿ ಸದ್ಯ ಅಂತಹ ದೊಡ್ಡ ಲೋಪಗಳು ಕಂಡುಬಂದಿಲ್ಲ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಅರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರು ಗಾಯಗೊಂಡಿದ್ದು ಈ ಪಂದ್ಯದಲ್ಲಿ ಆಡುವುದಿಲ್ಲ. ಅವರ ಬದಲಿಗೆ ಕನ್ನಡಿಗ ಕೆ.ಎಲ್. ರಾಹುಲ್ ಅವರು ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್‌ ಆರಂಭಿಸುವರು.

ಯುವ ಎಡಗೈ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಮ್ಯಾಂಚೆಸ್ಟರ್ ತಲುಪಿದ್ದಾರೆ. ಆದರೆ, ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಖಚಿತವಾಗಿಲ್ಲ. ಇದರಿಂದಾಗಿ ದಿನೇಶ್ ಕಾರ್ತಿಕ್ ಅಥವಾ ವಿಜಯಶಂಕರ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ಇಬ್ಬರು ಸ್ಪಿನ್ನರ್ ಮತ್ತು ಮೂವರು ಮಧ್ಯಮ ವೇಗಿಗಳ ಸಂಯೋಜನೆಯೊಂದಿಗೆ ಕೊಹ್ಲಿ ಬಳಗ ಕಣಕ್ಕಿಳಿಯುವುದು ಖಚಿತ.

ಎರಡು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿಯೇ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಕೊಹ್ಲಿ ನಾಯಕತ್ವದ ತಂಡವನ್ನು ಸರ್ಫರಾಜ್ ಮುಂದಾಳತ್ವದ ಪಾಕ್ ಪರಾಭವಗೊಳಿಸಿತ್ತು. ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲೂ ಭಾರತಕ್ಕೆ ಇದು ಸದವಕಾಶವಾಗಿದೆ. ಅದಕ್ಕಾಗಿ ವಿರಾಟ್ ಬಳಗವು ಸಿದ್ಧವಾಗಿದೆ. ಮಳೆರಾಯ ಅವಕಾಶ ಕೊಟ್ಟರೆ, ಅಭಿಮಾನಿಗಳ ಅಬ್ಬರ ಮುಗಿಲು ಮುಟ್ಟಬಹುದು!

ಭಾನುವಾರದ ಪಂದ್ಯ ಟೂರ್ನಿಯ ಅಂತ್ಯವಲ್ಲ: ವಿರಾಟ್‌ ಕೊಹ್ಲಿ
ಮ್ಯಾಂಚೆಸ್ಟರ್:
ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಫಲಿತಾಂಶ ಏನೇ ಆಗಲಿ, ಅದು ಟೂರ್ನಿಯ ಮುಕ್ತಾಯವಲ್ಲ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಂದ್ಯವು ನಿಗದಿತ ವೇಳೆಗೆ ಶುರುವಾಗುತ್ತೆ ಮತ್ತು ಮುಕ್ತಾಯವಾಗುತ್ತದೆ. ಅದರಲ್ಲಿ ನಾವು ಅಥವಾ ಅವರು ಚೆನ್ನಾಗಿ ಆಡಬಹುದು. ಇಲ್ಲವೇ ಆಡಲಿಕ್ಕೂ ಇಲ್ಲ. ಆದರೆ ಅದು ಜೀವನದ ಅಂತ್ಯವಲ್ಲ. ಟೂರ್ನಿ ಕೂಡ ಇನ್ನೂ ಸುದೀರ್ಘವಾಗಿದೆ. ಪ್ರತಿಯೊಂದು ಪಂದ್ಯ ಗೆಲ್ಲುವತ್ತ ನಮ್ಮ ಗಮನವಿರುತ್ತದೆ’ ಎಂದು ಕೊಹ್ಲಿ ಹೇಳಿದರು.‘ಹವಾಮಾನ ಯಾರದೇ ನಿಯಂತ್ರಣದಲ್ಲಿಯೂ ಇಲ್ಲ. ಎಷ್ಟು ಪ್ರಮಾಣದಲ್ಲಿ ಆಡಲು ಅವಕಾಶ ಸಿಗುತ್ತದೆ ಎಂದಷ್ಟೇ ನಾವು ಲೆಕ್ಕಾಚಾರ ಹಾಕುತ್ತೇವೆ. ಯಾವುದೇ ಸಂದರ್ಭವನ್ನು ಎದುರಿಸಲು ನಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆ’ ಎಂದರು.

ಇದು ಕೊಹ್ಲಿ ಮತ್ತು ಮೊಹಮ್ಮದ್ ಅಮೀರ್ ನಡುವಿನ ಪೈಪೋಟಿಯೇ ಎಂದು ವಿದ್ಯುನ್ಮಾನ ಮಾಧ್ಯಮಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಟಿಆರ್‌ಪಿ ಸ್ಟಷ್ಟಿಸಿಕೊಳ್ಳುವ ಕುರಿತು ನಾನು ಏನೂ ಹೇಳುವುದಿಲ್ಲ. ನಾನು ಯಾವುದೇ ಬೌಲರ್‌ಗಳನ್ನು ಎದುರಿಸುವಾಗಲೂ ಕೇವಲ ಕೆಂಪು ಅಥವಾ ಬಿಳಿ ಬಣ್ಣದ ಚೆಂಡಿನ ಮೇಲಷ್ಟೇ ಗಮನ ಕೇಂದ್ರಿಕರಿಸುತ್ತೇನೆ. ಬೌಲರ್‌ಗಳ ಕೌಶಲ್ಯವನ್ನು ಗೌರವಿಸುತ್ತೇನೆ. ಈ ಹಿಂದೆ ಕಗಿಸೊ ರಬಾಡ ಕುರಿತು ಇದನ್ನೇ ಹೇಳಿದ್ದೆ’ ಎಂದರು.

ಈ ಪಂದ್ಯವನ್ನು ಹೇಗೆ ಸ್ಮರಿಸಲು ಇಚ್ಛಿಸುತ್ತೀರಿ?
ಮ್ಯಾಂಚೆಸ್ಟರ್:
‘ಭಾನುವಾರ ಭಾರತ ಎದುರಿನ ಪಂದ್ಯವನ್ನು ನೀವು ನಿಮ್ಮ ಜೀವನದಲ್ಲಿ ಯಾವ ರೀತಿಯಲ್ಲಿ ನೆನಪಿಟ್ಟುಕೊಳ್ಳಲು ಬಯಸುತ್ತೀರಿ?’ ಎಂದು ಪಾಕಿಸ್ತಾನ ತಂಡದ ಆಟಗಾರರಿಗೆ ಕೋಚ್ ಮಿಕಿ ಆರ್ಥರ್ ಕೇಳಿದ್ದಾರೆ.

‘ನಮ್ಮ ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಅವರ ಸ್ಫೂರ್ತಿಯನ್ನು ಹೆಚ್ಚಿಸಲು ಇಂತಹ ಪ್ರಶ್ನೆಗಳನ್ನು ಹಾಕುತ್ತೇವೆ. 2019ರ ಪೀಳಿಗೆ ನೀವು. ಇತಿಹಾಸದ ಪುಟಗಳಲ್ಲಿ ಯಾವ ರೀತಿ ಸ್ಥಾನ ಪಡೆಯಲು ಇಚ್ಛಿಸುತ್ತೀರಿ? ಎಂದು ಕೇಳುತ್ತೇವೆ. ಅದರಿಂದ ಅವರಲ್ಲಿ ಗೆಲುವಿನ ಕನಸುಗಳು ಚಿಗುರೊಡೆಯುತ್ತವೆ. ಚೆನ್ನಾಗಿ ಆಡಲು ಪ್ರೇರಣೆ ಸಿಗುತ್ತದೆ’ ಎಂದರು.

‘ಇದು ಮನೋಬಲದ ಪೈಪೋಟಿ. ಗಟ್ಟಿ ಆತ್ಮವಿಶ್ವಾಸ ಇರುವವರು ಮಾತ್ರ ಜಯಿಸಲು ಸಾಧ್ಯವಿದೆ. ಭಾನುವಾರ ನೀವೇ ಹೀರೊಗಳಾಗಲಿದ್ದೀರಿ. ನಿಮ್ಮ ಇಡೀ ಜೀವನಕ್ಕೆ ಅರ್ಥಪೂರ್ಣ ತಿರುವು ಪಡೆಯುವ ಅವಕಾಶ ಇದು’ ಎಂದು ಆಟಗಾರರಿಗೆ ಹೇಳಿದ್ದೇನೆ ಎಂದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !