ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಸುಲಭ ಜಯದ ಮೇಲೆ ಇಂಗ್ಲೆಂಡ್ ಕಣ್ಣು

ಕ್ರಿಕೆಟ್: ಅಚ್ಚರಿ ಫಲಿತಾಂಶ ನೀಡುವತ್ತ ಅಫ್ಗಾನಿಸ್ತಾನ ಚಿತ್ತ
Published 14 ಅಕ್ಟೋಬರ್ 2023, 12:34 IST
Last Updated 14 ಅಕ್ಟೋಬರ್ 2023, 12:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಭಾನುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವನ್ನು ಎದುರಿಸಲಿದೆ.

ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಈ ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಆಘಾತ ಅನುಭವಿಸಿತ್ತು. ಆದರೆ  ತನ್ನ ಎರಡನೇ ಪಂದ್ಯದಲ್ಲಿ ಪುಟಿದೆದ್ದ ಬಟ್ಲರ್ ಬಳಗವು ಬಾಂಗ್ಲಾದೇಶ ಎದುರು 137 ರನ್‌ಗಳ ಜಯ ಸಾಧಿಸಿತ್ತು.

ಇದರಿಂದಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ  ತಂಡವು ಅಫ್ಗಾನಿಸ್ತಾನದ ಎದುರು ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.  ಅಲ್ಲದೇ ತನ್ನ ನೆಟ್‌ ರೆನ್‌ರೇಟ್ ಕೂಡ ಉತ್ತಮಪಡಿಸಿಕೊಳ್ಳುವತ್ತಲೂ ಚಿತ್ತ ನೆಟ್ಟಿದೆ.

ನಾಯಕ ಬಟ್ಲರ್, ರೂಟ್, ಡೇವಿಡ್ ಮಲಾನ್, ಜಾನಿ ಬೆಸ್ಟೊ ಅವರು ರನ್‌ಗಳ ಬೆಟ್ಟವನ್ನೇ ನಿರ್ಮಿಸಬಲ್ಲ ಸಮರ್ಥರು. ಉತ್ತಮ ಲಯದಲ್ಲಿಯೂ ಇದ್ದಾರೆ.

ಆದರೆ ಅನುಭವಿ ಬೌಲರ್‌ಗಳಾದ ಮಾರ್ಕ್ ವುಡ್, ಕ್ರಿಸ್ ವೋಕ್ಸ್‌, ಸ್ಯಾಮ್ ಕರನ್, ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಅವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೌಲಿಂಗ್ ಮಾಡಿದರೆ ಅಫ್ಗನ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಬಹುದು.

ಅಫ್ಗಾನಿಸ್ತಾನ ತಂಡವು ಕಳೆದ ಎರಡೂ ಪಂದ್ಯಗಳಲ್ಲಿ ಸೋತಿದೆ. ತಂಡದ ಎಲ್ಲ ವಿಭಾಗಗಳಲ್ಲಿಯೂ ಸುಧಾರಣೆಯ ಅಗತ್ಯವಿದೆ. ತಂಡದ ಆರಂಭಿಕ ಬ್ಯಾಟರ್‌ಗಳಾದ ರೆಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ್ ಜದ್ರಾನ್ ಅವರು ಉತ್ತಮ ಆರಂಭ ನೀಡುವಲ್ಲಿ ವಿಫಲರಾಗಿದ್ದಾರೆ.  ನಾಯಕ ಹಷ್ಮತ್‌ ಉಲ್ಲಾ ಮತ್ತು ಬ್ಯಾಟರ್ ಅಜ್ಮತ್‌ವುಲ್ಲಾ ಅವರು ಮಾತ್ರ ಕಷ್ಟದ ಸಂದರ್ಭದಲ್ಲಿಯೂ ಅರ್ಧಶತಕ ಹೊಡೆದು ಭರವಸೆ ಮೂಡಿಸಿದ್ದರು.

ಬಿಗಿ ದಾಳಿ ನಡೆಸುವಲ್ಲಿ  ಬೌಲರ್‌ಗಳು ಎಡವುತ್ತಿದ್ದಾರೆ. ಎದುರಾಳಿ ತಂಡದ ಜೊತೆಯಾಟಗಳನ್ನು ಮುರಿಯುವಲ್ಲಿ ಬೌಲರ್‌ಗಳು ಯಶಸ್ಸು ಸಾಧಿಸಿಲ್ಲ. ಫೀಲ್ಡಿಂಗ್‌ನಲ್ಲಿಯೂ ಚುರುಕುತನ ತೋರಿದರೆ ಇಂಗ್ಲೆಂಡ್‌ಗೆ ಕಠಿಣ ಸ್ಪರ್ಧೆಯೊಡ್ಡಬಹುದು.

ಇದೇ ಅಂಗಳದಲ್ಲಿ ಅಫ್ಗನ್ ತಂಡವು ಈಚೆಗೆ ಭಾರತದ ವಿರುದ್ಧ ಸೋತಿತ್ತು. 

ತಂಡಗಳು

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ/ವಿಕೆಟ್‌ಕೀಪರ್), ಜೋ ರೂಟ್, ಜಾನಿ ಬೆಸ್ಟೊ (ವಿಕೆಟ್‌ಕೀಪರ್), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಕ್ರಿಸ್ ವೋಕ್ಸ್, ಸ್ಯಾಮ್ ಕರನ್, ಡೇವಿಡ್ ವಿಲಿ, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟಾಪ್ಲಿ, ಗಸ್ ಅಟ್ಕಿನ್ಸನ್.

ಅಫ್ಗಾನಿಸ್ತಾನ: ಹಷ್ಮತ್‌ಉಲ್ಲಾ ಶಾಹೀದಿ (ನಾಯಕ), ರೆಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರೆಹಮತ್ ಷಾ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್‌ಝೈ, ರಶೀದ್ ಖಾನ್, ಮುಜೀಬ್ ಉರ್ ರೆಯಮಾನ್, ನೂರ್ ಅಹಮದ್, ಫಜಲ್‌ಹಕ್ ಫಾರೂಕಿ, ಅಬ್ದುಲ್ ರೆಹಮಾನ್, ನವೀನ್ ಉಲ್ ಹಕ್.

ಪಂದ್ಯ ಆರಂಭ: ಮಧ್ಯಾಹ್ನ 2

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್.

ಅಫ್ಗಾನಿಸ್ತಾನ ನಾಯಕ ಹಷ್ಮತ್‌ಉಲ್ಲಾ ಶಾಹೀದಿ   –ಎಎಫ್‌ಪಿ ಚಿತ್ರ
ಅಫ್ಗಾನಿಸ್ತಾನ ನಾಯಕ ಹಷ್ಮತ್‌ಉಲ್ಲಾ ಶಾಹೀದಿ   –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT