ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್, WTC ಗೆದ್ದ ಪ್ಯಾಟ್ ಕಮಿನ್ಸ್‌ ಹೆಗಲಿಗೆ ಸನ್‌ರೈಸರ್ಸ್ ಹೈದರಾಬಾದ್ ಹೊಣೆ

Published 4 ಮಾರ್ಚ್ 2024, 10:09 IST
Last Updated 4 ಮಾರ್ಚ್ 2024, 10:09 IST
ಅಕ್ಷರ ಗಾತ್ರ

ಹೈದರಾಬಾದ್‌: ಆಸ್ಟ್ರೇಲಿಯಾಗೆ ಏಕದಿನ ವಿಶ್ವಕಪ್‌ ಹಾಗೂ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದುಕೊಟ್ಟ ನಾಯಕ ಪ್ಯಾಟ್‌ ಕಮಿನ್ಸ್‌ ಅವರು, ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆವೃತ್ತಿಯಲ್ಲಿ ತಂಡ ಮುನ್ನಡೆಸಲಿದ್ದಾರೆ ಎಂದು ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ಸೋಮವಾರ ಘೋಷಿಸಿದೆ.

2023ರ ಡಿಸೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 30 ವರ್ಷದ ವೇಗಿ ಕಮಿನ್ಸ್‌ ಅವರನ್ನು ಬರೋಬ್ಬರಿ ₹ 20.50 ಕೋಟಿ ನೀಡಿ ಎಸ್‌ಆರ್‌ಎಚ್‌ ಖರೀದಿಸಿತ್ತು. ಇದು ಐಪಿಎಲ್‌ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಮೊತ್ತ ಎನಿಸಿದೆ.

'ಪ್ಯಾಟ್‌ ಕಮಿನ್ಸ್‌ ನಮ್ಮ ಹೊಸ ನಾಯಕ' ಎಂದು ಎಸ್‌ಆರ್‌ಎಚ್‌ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರ ಸಹಿತ ಹಂಚಿಕೊಂಡಿದೆ. ಈ ತಂಡ 2024ರ ಆವೃತ್ತಿಯ ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತದ ಈಡನ್‌ಗಾರ್ಡನ್ಸ್‌ನಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ (ಕೆಕೆಆರ್‌) ವಿರುದ್ಧ ಮಾರ್ಚ್‌ 23ರಂದು ಆಡಲಿದೆ.

ವಿಶೇಷವೆಂದರೆ, ಕಮಿನ್ಸ್‌ ಈವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಥವಾ ಯಾವುದೇ ಲೀಗ್‌ನಲ್ಲಿ ಟಿ20 ತಂಡ ಮುನ್ನಡೆಸಿಲ್ಲ. ಆದರೆ, ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿ ಆಸ್ಟ್ರೇಲಿಯಾಗೆ ಯಶಸ್ಸು ತಂದುಕೊಟ್ಟಿದ್ದಾರೆ. ಕಾಂಗರೂ ಪಡೆ ಅವರ ನಾಯಕತ್ವದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಹಾಗೂ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದಿದೆ. 2023ರಲ್ಲಿ ನಡೆದ ಈ ಎರಡೂ ಟೂರ್ನಿಗಳ ಫೈನಲ್‌ನಲ್ಲಿ ಆಸಿಸ್‌, ಭಾರತವನ್ನು ಮಣಿಸಿತ್ತು.

ಐಪಿಎಲ್‌ನಲ್ಲಿ ಕಮಿನ್ಸ್‌ ಸಾಧನೆ
ಐಪಿಎಲ್‌ನಲ್ಲಿ ಈವರೆಗೆ 42 ಪಂದ್ಯಗಳಲ್ಲಿ ಆಡಿರುವ ಕಮಿನ್ಸ್‌ ಖಾತೆಯಲ್ಲಿ 45 ವಿಕೆಟ್‌ಗಳಿವೆ. ಇನಿಂಗ್ಸ್‌ವೊಂದರಲ್ಲಿ 34 ರನ್‌ ನೀಡಿ 4 ವಿಕೆಟ್‌ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್‌ ಆಗಿದೆ. ಬ್ಯಾಟಿಂಗ್‌ನಲ್ಲಿಯೂ ನೆರವಾಗುವ ಅವರು 18.95ರ ಸರಾಸರಿಯಲ್ಲಿ 379 ರನ್ ಗಳಿಸಿದ್ದಾರೆ. ಮೂರು ಬಾರಿ ಅರ್ಧಶತಕ ಬಾರಿಸಿದ್ದು, 66 ಅವರ ವೈಯಕ್ತಿಕ ಗರಿಷ್ಠ ಮೊತ್ತ.

2014ರಲ್ಲಿ ಕೆಕೆಆರ್‌ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಕಮಿನ್ಸ್‌, ಆ ವರ್ಷ ಒಂದೇ ಒಂದು ಪಂದ್ಯ ಆಡಿದ್ದರು. ನಂತರ 2017ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ (ಈಗ ಡೆಲ್ಲಿ ಕ್ಯಾಪಿಟಲ್ಸ್‌) ಪರ ಆಡಿದ್ದರು. ಇದಾದ ಬಳಿಕ ಕೆಲವು ವರ್ಷ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದರು. 2020ರ ಹರಾಜಿನಲ್ಲಿ ₹ 15.50 ಕೋಟಿ ಪಡೆಯುವ ಮೂಲಕ ದುಬಾರಿ ಆಟಗಾರ ಎಂಬ ಖ್ಯಾತಿಯೊಂದಿಗೆ ಮತ್ತೆ ಕೆಕೆಆರ್‌ ಪರ ಐಪಿಎಲ್‌ಗೆ ಮರಳಿದ್ದರು.

2022ರ ವರೆಗೂ ಕೆಕೆಆರ್‌ನಲ್ಲೇ ಇದ್ದ ಕಮಿನ್ಸ್‌, ಅಂತರರಾಷ್ಟ್ರೀಯ ಕ್ರಿಕೆಟ್‌ನತ್ತ ಗಮನ ಹರಿಸುವ ಸಲುವಾಗಿ 2023ರ ಆವೃತ್ತಿಯಿಂದ ಹೊರಗುಳಿದಿದ್ದರು. ಟೆಸ್ಟ್‌ ಚಾಂಪಿಯನ್‌ಷಿಪ್‌ ಹಾಗೂ ಏಕದಿನ ವಿಶ್ವಕಪ್‌ ಗೆದ್ದ ಗರಿಮೆಯೊಂದಿಗೆ 2024ರ ಆವೃತ್ತಿಗಾಗಿ 2023ರ ಡಿಸೆಂಬರ್‌ನಲ್ಲಿ ನಡೆದ ಹರಾಜಿಗೆ ಮತ್ತೆ ಮರಳಿದ ಅವರು, ಐಪಿಎಲ್‌ ಇತಿಹಾಸದಲ್ಲಿ ₹ 20 ಕೋಟಿಗಿಂತ ಹೆಚ್ಚು ಮೊತ್ತ ಪಡೆದ ಮೊದಲ ಆಟಗಾರ ಎನಿಸಿದರು. ಮಿಚೇಲ್‌ ಸ್ಟಾರ್ಕ್‌ ಅವರು ಅದೇ ಹರಾಜಿನಲ್ಲಿ ₹ 24.75 ಕೋಟಿಗೆ ಕೆಕೆಆರ್‌ ಪಾಲಾಗುವುದರೊಂದಿಗೆ ಕಮಿನ್ಸ್‌ ಹಿಂದಿಕ್ಕಿ ದಾಖಲೆ ಬರೆದರು.

ಮೂರು ಆವೃತ್ತಿ, ಮೂವರು ನಾಯಕರು
2022ರಿಂದ ಈಚೆಗೆ ಎಸ್‌ಆರ್‌ಎಚ್‌ ನಾಯಕನಾಗಿ ಆಯ್ಕೆಯಾದ ಮೂರನೇ ಆಟಗಾರ ಕಮಿನ್ಸ್‌.

2022ರಲ್ಲಿ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ನಾಯಕತ್ವದಲ್ಲಿ ಆಡಿದ್ದ 'ಕೇಸರಿ ಪಡೆ' ಎಂಟನೇ ಸ್ಥಾನ ಪಡೆದಿತ್ತು. ಬಳಿಕ ವಿಲಿಯಮ್ಸನ್‌ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. 2023ರ ಆವೃತ್ತಿಯಲ್ಲಿ ದಕ್ಷಿಣ ಆಪ್ರಿಕಾದ ಏಡನ್‌ ಮರ್ಕ್ರಂ ತಂಡ ಮುನ್ನಡೆಸಿದ್ದರು. ಆಗ ಲೀಗ್‌ ಹಂತದಲ್ಲಿ ಆಡಿದ 14 ಪಂದ್ಯಗಳ ಪೈಕಿ ನಾಲ್ಕರಲ್ಲಷ್ಟೇ ಜಯ ಸಾಧಿಸಿದ್ದ ಎಸ್‌ಆರ್‌ಎಚ್‌, ಕೊನೇ (ಹತ್ತನೇ) ಸ್ಥಾನಕ್ಕೆ ಕುಸಿದಿತ್ತು. ಮರ್ಕ್ರಂ ಆಟಗಾರನಾಗಿ ತಂಡದಲ್ಲಿ ಮುಂದುವರಿಯಲಿದ್ದಾರೆ.

ನಾಯಕತ್ವ ಬದಲಾವಣೆಯಷ್ಟೇ ಅಲ್ಲದೆ, ತಂಡದ ಕೋಚಿಂಗ್‌ ವಿಭಾಗದಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ವೆಸ್ಟ್‌ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಯಾನ್‌ ಲಾರಾ ಬದಲು ನ್ಯೂಜಿಲೆಂಡ್‌ನ ಡೆನಿಯಲ್‌ ವೆಟ್ಟೋರಿ ಅವರು ಮುಖ್ಯ ಕೋಚ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.

ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡರ್‌ ಜೇಮ್ಸ್‌ ಫ್ರಾಂಕ್ಲಿನ್‌ ಅವರನ್ನು ಬೌಲಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌ ಬೌಲಿಂಗ್‌ ಮಾರ್ಗದರ್ಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT