ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ಗೆ 'ಯುವ’ ನಾಯಕ ಉನ್ಮುಕ್ತ್ ಚಾಂದ್ ವಿದಾಯ

Last Updated 13 ಆಗಸ್ಟ್ 2021, 16:34 IST
ಅಕ್ಷರ ಗಾತ್ರ

ಮುಂಬೈ: ಒಂಬತ್ತು ವರ್ಷಗಳ ಹಿಂದೆ 19 ವರ್ಷದೊಳಗಿನವರ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕರಾಗಿದ್ದ ಉನ್ಮುಕ್ತ್ ಚಾಂದ್ ಎಲ್ಲ ಮಾದರಿಗಳ ಕ್ರಿಕೆಟ್‌ಗೆ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ.

2012ರಲ್ಲಿ ಚಾರಿತ್ರಿಕ ಸಾಧನೆ ಮಾಡಿದರೂ ಭಾರತ ತಂಡದಲ್ಲಿ ಆಡುವ ಅವಕಾಶ ಚಾಂದ್‌ಗೆ ಸಿಕ್ಕಿರಲಿಲ್ಲ. ದೇಶಿ ಕ್ರಿಕೆಟ್ ಟೂರ್ನಿಗಳಿಗೆ ಮಾತ್ರ ಸೀಮಿತರಾದರು. 28 ವರ್ಷದ ಚಾಂದ್ ಸರಣಿ ಟ್ವೀಟ್‌ಗಳ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ. ವಿಶ್ವಕಪ್ ವಿಜಯದ ಸ್ಮರಣೀಯ ವಿಡಿಯೊ ತುಣುಕುಗಳನ್ನೂ ಅವುಗಳೊಂದಿಗೆ ಲಗತ್ತಿಸಿದ್ದಾರೆ.

ಅವರು ಅಮೆರಿಕದಲ್ಲಿ ನಡೆಯಲಿರುವ ಟಿ20 ಲೀಗ್‌ನಲ್ಲಿ ಆಡುವ ಸಾಧ್ಯತೆ ಇದೆ. ಅವರ ಸಹ ಆಟಗಾರ ಸ್ಮಿತ್ ಪಟೇಲ್ ಈಗಾಗಲೇ ಅಮೆರಿಕದಲ್ಲಿ ಆಡುತ್ತಿದ್ದಾರೆ. ಅಲ್ಲಿಗೆ ತೆರಳಲು ಬಿಸಿಸಿಐನಿಂದ ನಿರಾಕ್ಷೇಪಣ ಪತ್ರ ಪಡೆಯುವುದು ಅವಶ್ಯಕ. ಅದಕ್ಕಾಗಿ ಇಲ್ಲಿ ರಾಜೀನಾಮೆ ನೀಡುವುದು ಕಡ್ಡಾಯ.

‘ಈ ನಿರ್ಧಾರ ತೆಗೆದುಕೊಳ್ಳುವುದು ಮನಸ್ಸಿಗೆ ಹಿತವೆನಿಸುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಅವಕಾಶಗಳು ಮುಕ್ತವಾಗಿಲ್ಲ. ಆದರೂ ಇಲ್ಲಿಯವರೆಗಿನ ಪಯಣ ಬೆಳ್ಳಿಗೆರೆಯಂತೆ ಇದೆ. ಅತ್ಯುತ್ತಮ ನೆನಪುಗಳು ನನ್ನೊಂದಿಗಿವೆ‘ ಎಂದು ಉನ್ಮುಕ್ತ್ ಬರೆದಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಮತ್ತು ಆಫ್‌ಬ್ರೇಕ್ ಬೌಲರ್‌ ಚಾಂದ್ ನಾಯಕತ್ವದ ತಂಡವು 2012ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಜಯಿಸಿತ್ತು. ಫೈನಲ್‌ ನಲ್ಲಿ ಅಜೇಯ ಶತಕ (111) ಬಾರಿಸಿದ್ದ ಚಾಂದ್, ಪಂದ್ಯಶ್ರೇಷ್ಠ ಗೌರವ ಗಳಿಸಿದ್ದರು.

‘ಹಲವು ಶಿಬಿರಗಳು, ಟೂರ್ನಿಗಳ ಮೂಲಕ ನನ್ನ ಪ್ರತಿಭೆಯನ್ನು ಸಾಬೀತುಪಡಿಸಲು ಅವಕಾಶ ಕೊಟ್ಟ ಬಿಸಿಸಿಐಗೆ ಧನ್ಯವಾದಗಳು. ವಯೋಮಿತಿಯ ಟೂರ್ನಿ ಗಳು ಮತ್ತು ಐಪಿಎಲ್‌ ಟೂರ್ನಿಗಳಲ್ಲಿ ಆಡಲು ಅವಕಾಶ ನೀಡಿದೆ’ ಎಂದು ಹೇಳಿದ್ದಾರೆ.

ಚಾಂದ್ 67 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 3379 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ ಎಂಟು ಶತಕ ಮತ್ತು 16 ಅರ್ಧಶತಕಗಳು ಇವೆ.

ಅವರು ದೆಹಲಿ ತಂಡದಲ್ಲಿ ಆಡಿದ್ದರು. ನಂತರ ಕೆಲಕಾಲ ಉತ್ತರಾಖಂಡ ತಂಡದ ನಾಯಕರೂ ಆಗಿದ್ದರು.

ಟಾಕ್ ಶೋ ವಿವಾದ: ಉನ್ಮುಕ್ತ್ ಚಾಂದ್ ಅವರು ಭಾರತ ‘ಎ’ ತಂಡದ ಶಿಬಿರದಲ್ಲಿದ್ದ ಸಂದರ್ಭದಲ್ಲಿ ಖಾಸಗಿ ಟಿವಿ ವಾಹಿನಿಯ ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದರು. ಶಿಬಿರದ ಮಧ್ಯದಲ್ಲಿ ನಿಯಮ ಮೀರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುರಿತು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಟೀಕಿಸಿದ್ದರು. ಅದೇ ಸಂದರ್ಭದಲ್ಲಿ ಸೀನಿಯರ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಸಂದೀಪ್ ಪಾಟೀಲ ಅವರು ಚಾಂದ್ ಅವರನ್ನು 2015ರಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವಣ ಸರಣಿಗೆ ಚಾಂದ್ ಆಯ್ಕೆ ಮಾಡಿದ್ದರು. ಆದರೆ, ನಂತರ ಚಾಂದ್‌ಗೆ ಅವಕಾಶ ಕೈತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT