ಶನಿವಾರ, ಏಪ್ರಿಲ್ 1, 2023
25 °C

ಮಹಿಳಾ ಪ್ರೀಮಿಯರ್ ಲೀಗ್ | ಗುಜರಾತ್ ಎದುರು ಸೋಫಿ ಡಿವೈನ್ ಅಬ್ಬರ: ಆರ್‌ಸಿಬಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕೇವಲ ಒಂದು ರನ್‌ನಿಂದ ಶತಕ ತಪ್ಪಿಸಿಕೊಂಡ ಸೋಫಿ ಡಿವೈನ್ (99 ರನ್‌) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್‌) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಶನಿವಾರ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಸತತ ಎರಡನೇ ಜಯ ದಾಖಲಿಸಿತು.

ಗುಜರಾತ್ ನೀಡಿದ 189 ರನ್‌ಗಳ ‌ಗುರಿ ಬೆನ್ನತ್ತಿದ ಆರ್‌ಸಿಬಿ 15.3 ಓವರ್‌ಗಳಲ್ಲಿ 2 ವಿಕೆಟ್‌ ‌ಕಳೆದುಕೊಂಡು ಗೆಲುವು ಸಾಧಿಸಿತು. ಸೋಫಿ ಹಾಗೂ ನಾಯಕಿ ಸ್ಮೃತಿ ಮಂದಾನ (37) ಮೊದಲ ವಿಕೆಟ್‌ ಜೊತೆಯಾಟದಲ್ಲಿ 125 ರನ್‌ ಗಳಿಸಿದರು. 36 ಎಸೆತಗಳನ್ನು ಎದುರಿಸಿದ ಸೋಫಿ ಅವರ ಇನಿಂಗ್ಸ್‌ನಲ್ಲಿ 9 ಬೌಂಡರಿ ಎಂಟು ಸಿಕ್ಸರ್ ಇದ್ದವು. ಇವರಿಬ್ಬರು ಔಟಾದ ಬಳಿಕ ಎಲಿಸ್‌ ಪೆರಿ (ಔಟಾಗದೆ 19) ಮತ್ತು ಹೀದರ್ ನೈಟ್‌ (ಔಟಾಗದೆ 22) ತಂಡವನ್ನು ಜಯದ ದಡ ಸೇರಿಸಿದರು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್‌ ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಡ್ ಅಬ್ಬರದ ಅರ್ಧಶತಕದ ಬಲದಿಂದ (68; 42ಎ, 4X9, 6X2) 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 188 ರನ್ ಗಳಿಸಿತ್ತು.  ಮೇಘನಾ (31),  ಆ್ಯಷ್ಲಿ ಗಾರ್ಡನರ್(41) ತಂಡವು 150ರ ಗಡಿ ದಾಟಲು ಕಾರಣರಾದರು. ಆರ್‌ಸಿಬಿಯ ಶ್ರೇಯಾಂಕಾ ಪಾಟೀಲ 2 ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರು
ಗುಜರಾತ್ ಜೈಂಟ್ಸ್:
20 ಓವರ್‌ಗಳಲ್ಲಿ 4 ವಿಕೆಟ್‌ಗೆ 188 (ಲಾರಾ ವೊಲ್ವಾರ್ಡ್ 68, ಎಸ್‌. ಮೇಘನಾ 31, ಆ್ಯಷ್ಲಿ ಗಾರ್ಡನರ್ 41; ಸೋಫಿ ಡಿವೈನ್‌ 23ಕ್ಕೆ 1, ಪ್ರೀತಿ ಬೋಸ್‌ 23ಕ್ಕೆ 1, ಶ್ರೇಯಾಂಕಾ ಪಾಟೀಲ್ 17ಕ್ಕೆ 2).

ರಾಯಲ್ ಚಾಲೆಂಜರ್ಸ್ ಬೆಂಗಳೂರು: 15.3 ಓವರ್‌ಗಳಲ್ಲಿ 2 ವಿಕೆಟ್‌ಗೆ 189 (ಸ್ಮೃತಿ ಮಂದಾನ 37, ಸೋಫಿ ಡಿವೈನ್‌ 99, ಎಲಿಸ್ ಪೆರಿ ಔಟಾಗದೆ 19, ಹೀದರ್ ನೈಟ್‌ ಔಟಾಗದೆ 22; ಕಿಮ್‌ ಗರ್ತ್‌ 32ಕ್ಕೆ 1; ಸ್ನೇಹ್ ರಾಣಾ 25ಕ್ಕೆ 1).

ಫಲಿತಾಂಶ: ಆರ್‌ಸಿಬಿಗೆ 8 ವಿಕೆಟ್‌ ಜಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು