ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಹಿಂಪಡೆಯಲು ಯುವರಾಜ್ ಸಿಂಗ್ ನಿರ್ಧಾರ

Last Updated 9 ಸೆಪ್ಟೆಂಬರ್ 2020, 17:45 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ ನಿವೃತ್ತಿಯನ್ನು ಹಿಂಪಡೆದು, ಪಂಜಾಬ್ ಕ್ರಿಕೆಟ್ ತಂಡಕ್ಕೆ ಆಡಲು ಸಜ್ಜಾಗಿದ್ದಾರೆ.

ತಮ್ಮ ನಿವೃತ್ತಿಯನ್ನು ಹಿಂಪಡೆಯಲು ಅವಕಾಶ ನೀಡಬೇಕು ಎಂದು ಯುವಿ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಪತ್ರ ಬರೆದಿದ್ದಾರೆ. 2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತವು ಪ್ರಶಸ್ತಿ ಜಯಿಸುವಲ್ಲಿ ಯುವಿ ಪಾತ್ರ ಮಹತ್ವದ್ದಾಗಿತ್ತು. ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೂ ಅವರು ಪಾತ್ರರಾಗಿದ್ದರು.

ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಪುನೀತ್ ಬಾಲಿ ಅವರು ಈಚೆಗೆ ಯುವರಾಜ್ ಸಿಂಗ್ ಅವರೊಂದಿಗೆ ಮಾತನಾಡಿ, ತವರು ರಾಜ್ಯ ಪಂಜಾಬ್ ತಂಡಕ್ಕೆ ಆಡಲು ಮನವಿ ಮಾಡಿದ್ದರು. ದೇಶಿ ಟಿ20 ಟೂರ್ನಿಯಲ್ಲಿ ಪಂಜಾಬ್ ಪರವಾಗಿ ಆಡಲು ಯುವಿ ಒಪ್ಪಿದ್ದಾರೆ.

‘ಮೊದಮೊದಲು ನಾನು ಮತ್ತೆ ಕಣಕ್ಕೆ ಮರಳುವ ಖಚಿತತೆ ಇರಲಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ನಾನು ಆಟ ಮುಗಿಸಿದ್ದೇನೆ. ಬಾಲಿ ಅವರ ಮನವಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಮೂರ್ನಾಲ್ಕು ವಾರಗಳ ಕಾಲ ಯೋಚನೆ ಮಾಡಿದ ಮೇಲೆ ಈ ನಿರ್ಧಾರಕ್ಕೆ ಬರುತ್ತಿದ್ದೇನೆ. ಬಿಸಿಸಿಐ, ದೇಶಿ ಕ್ರಿಕೆಟ್‌ನಲ್ಲಿ ಫ್ರ್ಯಾಂಚೈಸ್ ಆಧಾರಿತ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡಬೇಕು’ ಎಂದು ಯುವಿ ಹೇಳಿದ್ದಾರೆ.

ಪಂಜಾಬ್‌ ತಂಡದ ಯುವ ಆಟಗಾರರಾದ ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಪ್ರಭಸಿಮ್ರನ್ ಸಿಂಗ್ ಮತ್ತು ಅನ್ಮೋಲ್‌ಪ್ರೀತ್ ಸಿಂಗ್ ಅವರೊಂದಿಗೆ ಯುವಿ ಕೆಲವು ದಿನಗಳಿಂದ ಅಭ್ಯಾಸ ಮಾಡಿದ್ದರು.

‘ಜೀವನದ ಇನ್ನೊಂದು ವರ್ಷವನ್ನು ಪಂಜಾಬ್‌ ಕ್ರಿಕೆಟ್‌ಗೆ ನೀಡಿ ಎಂದು ಯುವರಾಜ್‌ ಸಿಂಗ್ ಅವರನ್ನು ಕೇಳಿಕೊಂಡಿದ್ದೆ. ಅವರು ತಂಡಕ್ಕೆ ಮರಳಿದರೆ, ಯುವ ಆಟಗಾರರಿಗೆ ಪ್ರೇರಣೆ ಸಿಗುತ್ತದೆ. ಅವರಿಂದ ಬಹಳಷ್ಟು ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಯುವಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಅವರಿಗೆ ಪತ್ರ ಬರೆದಿರುವ ವಿಷಯ ತಿಳಿದಿದೆ’ ಎಂದು ಬಾಲಿ ಹೇಳಿದ್ದಾರೆ.

ಹೋದ ವರ್ಷ ಯುವರಾಜ್ ಸಿಂಗ್ ಅವರು ಕ್ರಿಕೆಟ್‌ನ ಎಲ್ಲ ಮಾದರಿಗಳಿಂದ ನಿವೃತ್ತಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT