ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಸಿಕ್ಸರ್ ಚಚ್ಚಿಸಿಕೊಂಡಿದ್ದ ಬ್ರಾಡ್ ‘500 ವಿಕೆಟ್’ ಸಾಧನೆ ಬಗ್ಗೆ ಯುವಿ ಏನಂದರು?

Last Updated 29 ಜುಲೈ 2020, 9:15 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ ತಂಡದ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಅವರು 2007ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಇಂಗ್ಲೆಂಡ್‌ ವಿರುದ್ಧದ ಪಂದ್ಯದ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಸಿಡಿಸಿದ್ದರು. ಆಗ ಯುವಿಗೆ ಬೌಲಿಂಗ್‌ ಮಾಡಿದ್ದ ವೇಗಿ ಸ್ಟುವರ್ಟ್‌ ಬ್ರಾಡ್‌ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ.

ಬ್ರಾಡ್‌ ಸಾಧನೆ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಯುವರಾಜ್‌ ಸಿಂಗ್‌, ‘ನಾನು ಸಾಕಷ್ಟು ಸಲ ಸ್ಟುವರ್ಟ್‌ ಬ್ರಾಡ್‌ ಬಗ್ಗೆ ಬರೆದಾಗಲೂ, ಜನರು ಅದನ್ನು ನಾನು ಅವರಬೌಲಿಂಗ್‌ನಲ್ಲಿ ಬಾರಿಸಿದ್ದ 6 ಸಿಕ್ಸರ್‌ಗಳೊಂದಿಗೆ ಸಂಬಂಧ ಕಲ್ಪಿಸಿದ್ದಾರೆಂಬ ಖಾತ್ರಿಯಿದೆ ನನಗೆ. ಇಂದು ಆತ ಏನು ಸಾಧಿಸಿದ್ದಾರೋ ಅದನ್ನು ಶ್ಲಾಘಿಸುವಂತೆ ನಾನು ನನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. 500 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸುವುದು ತಮಾಷೆಯ ಸಂಗತಿಯಲ್ಲ. ಅದಕ್ಕಾಗಿ ಕಠಿಣ ಶ್ರಮ. ಸಮರ್ಪಣೆ ಮತ್ತು ದೃಢ ನಿರ್ಧಾರವಿರಬೇಕು. ಬ್ರಾಡ್‌ ನೀವು ದಂತಕತೆ! ಹ್ಯಾಟ್ಸ್‌ ಆಫ್’‌ ಎಂದು ಬರೆದುಕೊಂಡಿದ್ದಾರೆ.

2007ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬ್ರಾಡ್‌ ಇದುವರೆಗೆ 140 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 501 ವಿಕೆಟ್‌ ಗಳಿಸಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ 7ನೇ ಬೌಲರ್‌ ಮತ್ತು ನಾಲ್ಕನೇ ವೇಗಿ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಕೊರೊನಾ ಕಾಲದಲ್ಲಿ ನಡೆದ ಮೊದಲ ಟೆಸ್ಟ್ ಕ್ರಿಕೆಟ್‌ ಟೂರ್ನಿಯಲ್ಲಿ ಸೆಣಸಿದವು. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಮುನ್ನಡೆಸಿದ್ದರು. ಈ ಪಂದ್ಯದಿಂದ ಬ್ರಾಡ್‌ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಗಿತ್ತು. ಪಂದ್ಯವನ್ನು ಪ್ರವಾಸಿ ಪಡೆ‌ 4 ವಿಕೆಟ್‌ ಅಂತರದಲ್ಲಿ ಗೆದ್ದುಕೊಂಡಿದ್ದರಿಂದ ನಾಯಕನ ನಿರ್ಧಾರಕ್ಕೆ ಟೀಕೆ ವ್ಯಕ್ತವಾಗಿತ್ತು. ಅದಾದ ನಂತರ ಉಳಿದ ಪಂದ್ಯಗಳಲ್ಲಿ ಸ್ಥಾನ ಗಳಿಸಿದ ಬ್ರಾಡ್‌, 16 ವಿಕೆಟ್‌ ಉರುಳಿಸಿ ಸರಣಿ ಶ್ರೇಷ್ಠ ಎನಿಸಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ 500ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು

ಬೌಲರ್‌ ದೇಶ ಪಂದ್ಯ ವಿಕೆಟ್‌
ಮುತ್ತಯ್ಯ ಮುರುಳಿಧರನ್ ಶ್ರೀಲಂಕಾ 133 800
ಶೇನ್‌ ವಾರ್ನ್‌ ಆಸ್ಟ್ರೇಲಿಯಾ 145 708
ಅನಿಲ್‌ ಕುಂಬ್ಳೆ ಭಾರತ 132 619
ಜೇಮ್ಸ್‌ ಆ್ಯಂಡರ್ಸನ್‌ ಇಂಗ್ಲೆಂಡ್‌ 153 589
ಗ್ಲೇನ್‌ಮೆಕ್‌ಗ್ರಾತ್‌ ಆಸ್ಟ್ರೇಲಿಯಾ 124 563
ಕರ್ಟ್ನಿ ವಾಲ್ಷ್ ವೆಸ್ಟ್‌ ಇಂಡೀಸ್‌ 132 519
ಸ್ಟುವರ್ಟ್‌ ಬ್ರಾಡ್‌* ಇಂಗ್ಲೆಂಡ್‌ 140 500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT