ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಏಕದಿನ ಪಂದ್ಯ: ‘ಮಹಿ’ ತವರಿನಲ್ಲಿ ಜಯದ ‘ಸಿಹಿಗನಸು’

ಸರಣಿ ಕೈವಶಕ್ಕೆ ಭಾರತದ ಛಲ
Last Updated 7 ಮಾರ್ಚ್ 2019, 18:28 IST
ಅಕ್ಷರ ಗಾತ್ರ

ರಾಂಚಿ: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಫಿನಿಷರ್ ಮಹೇಂದ್ರಸಿಂಗ್ ಧೋನಿ ಹುಟ್ಟಿ ಬೆಳೆದ ಊರು ರಾಂಚಿ. ಇದೀಗ ಅವರ ತವರೂರಿನ ಜಾರ್ಖಂಡ್‌ ಕ್ರಿಕೆಟ್ ಸಂಸ್ಥೆ (ಜೆಸಿಎ) ಕ್ರೀಡಾಂಗಣದಲ್ಲಿ ಅಭಿಮಾನಿಗಳ ದಂಡು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿದೆ.

ಶುಕ್ರವಾರ ಇಲ್ಲಿಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಪಂದ್ಯ ನಡೆಯಲಿದೆ. ಬಹುಶಃ ಇದು ಧೋನಿಗೆ ತಮ್ಮ ತವರಿನಲ್ಲಿ ಆಡಲು ಲಭಿಸಲಿರುವ ಕೊನೆಯ ಪಂದ್ಯವಾಗಲಿದೆ. ಏಕೆಂದರೆ ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಸರಣಿಯ ನಂತರ ಭಾರತದಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಇಲ್ಲ. ಮೇ 30ರಿಂದ ಇಂಗ್ಲೆಂಡ್‌ನಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಆ ಟೂರ್ನಿಯ ನಂತರ ಧೋನಿ ನಿಗದಿಯ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ. ಐದು ವರ್ಷಗಳ ಹಿಂದೆಯೇ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. ಆದ್ದರಿಂದ ರಾಂಚಿ ಅಂಗಳದಲ್ಲಿ ಅವರಿಗೆ ಇದು ಬಹುತೇಕ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ.

ಈ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ ತಂಡವು ಈ ಪಂದ್ಯದಲ್ಲಿಯೂ ಜಯಿಸಿ ಸರಣಿಯನ್ನು ಕೈವಶ ಮಾಡಿಕೊಳ್ಳುವುದರ ಜೊತೆಗೆ ತನ್ನ ‘ಮಾಜಿ ನಾಯಕ’ ಧೋನಿಗೆ ಗೆಲುವಿನ ಕಾಣಿಕೆ ನೀಡುವ ಉತ್ಸಾಹದಲ್ಲಿದೆ. ಧೋನಿ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಅವರು ಕೇದಾರ್ ಜಾಧವ್ ಜೊತೆಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ರನ್ ಗಳಿಸಿರಲಿಲ್ಲ. ನಾಯಕ ವಿರಾಟ್ ಕೊಹ್ಲಿಯ ಶತಕದ ಅಬ್ಬರಕ್ಕೆ ಆಸ್ಟ್ರೇಲಿಯಾ ಶರಣಾಗಿತ್ತು. ಮಧ್ಯಮವೇಗಿ ವಿಜಯ್ ಶಂಕರ್ ಅವರ ಆಲ್‌ರೌಂಡ್ ಆಟವು ತಂಡದ ಜಯಕ್ಕೆ ಕಾರಣವಾಗಿತ್ತು.

ಆದರೆ, ತಂಡದ ಪ್ರಮುಖ ಚಿಂತೆ ಎಂದರೆ, ಆರಂಭಿಕ ಜೋಡಿಯು ನಿರೀಕ್ಷೆಗೆ ತಕ್ಕಂತೆ ಆಡದಿರುವುದು. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರು ಉತ್ತಮ ಆರಂಭ ನೀಡುವಲ್ಲಿ ಎಡವುತ್ತಿದ್ದಾರೆ. ಹೊಸ ಚೆಂಡಿನ ವೇಗ ಮತ್ತು ಲಯ ಗುರುತಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ತಂಡವು ವಿರಾಟ್ ಮೇಲೆಯೇ ಹೆಚ್ಚು ನಿರೀಕ್ಷೆ ಇಟ್ಟಿದೆ. ಎರಡೂ ಪಂದ್ಯಗಳಲ್ಲಿ ವಿಫಲರಾಗಿರುವ ಶಿಖರ್ ಧವನ್ ಅವರನ್ನು ಕೈಬಿಟ್ಟು ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ. ಟ್ವೆಂಟಿ–20 ಸರಣಿಯಲ್ಲಿ ರಾಹುಲ್ ಉತ್ತಮವಾಗಿ ಆಡಿದ್ದರು. ಅಂಬಟಿ ರಾಯುಡು ಬದಲಿಗೆ ರಿಷಭ್ ಪಂತ್ ಸ್ಥಾನ ಪಡೆದರೆ ಅಚ್ಚರಿಯೇನಿಲ್ಲ.

‘ಹೋದ ಎರಡೂ ಪಂದ್ಯಗಳಲ್ಲಿ ಬೌಲರ್‌ಗಳು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಇಲ್ಲಿಯೂ ಅವರು ತಮ್ಮ ಹೊಣೆಯನ್ನು ಚೆನ್ನಾಗಿ ನಿಭಾಯಿಸಬಲ್ಲರು’ ಎಂದು ನಾಯಕ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ವೆಂಟಿ–20 ಸರಣಿ ಗೆದ್ದು ಸಂತಸದಲ್ಲಿ ತೇಲಾಡುತ್ತಿದ್ದ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ನಲ್ಲಿ ಜಯದ ಲಯ ಕಂಡುಕೊಳ್ಳಲು ಪರದಾಡುತ್ತಿದೆ. ಆದರೆ ಈ ಪಂದ್ಯದಲ್ಲಿ ಗೆದ್ದು, ಸರಣಿ ಜಯದ ಅವಕಾಶವನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಆರಂಭಿಕ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್ ಅವರು ನಿರೀಕ್ಷೆಗೆ ತಕ್ಕಂತೆ ರನ್‌ಗಳ ಹೊಳೆ ಹರಿಸುತ್ತಿಲ್ಲ. ಅದರಿಂದಾಗಿ ದೊಡ್ಡ ಮೊತ್ತ ಪೇರಿಸಲು ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಬೌಲಿಂಗ್‌ನಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಸ್ಪಿನ್ನರ್ ಆ್ಯಡಂ ಜಂಪಾ ಅವರು ತಮ್ಮ ಚುರುಕಾದ ದಾಳಿಯಿಂದ ಎದುರಾಳಿಗಳಿಗೆ ಸವಾಲೊಡ್ಡುತ್ತಿದ್ದಾರೆ.

ತಂಡಗಳು ಇಂತಿವೆ
ಭಾರತ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಶಿಖರ್ ಧವನ್, ಅಂಬಟಿ ರಾಯುಡು, ವಿಜಯ ಶಂಕರ್, ಕೇದಾರ್ ಜಾಧವ್, ಮಹೇಂದ್ರಸಿಂಗ್ ಧೋನಿ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್, ರಿಷಭ್ ಪಂತ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ನೇಥನ್ ಕೌಲ್ಟರ್ ನೈಲ್, ಪ್ಯಾಟ್ ಕಮಿನ್ಸ್‌, ನೇಥನ್ ಲಯನ್, ಆ್ಯಡಂ ಜಂಪಾ, ಆ್ಯಂಡ್ರ್ಯೂ ಟೈ, ಆ್ಯಷ್ಟನ್ ಟರ್ನರ್, ಜೇಸ್ ಬೆಹ್ರನ್‌ಡಾರ್ಫ್, ಜೈ ರಿಚರ್ಡ್ಸನ್.

ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

MUST WATCH - The @msdhoni aura in Ranchi 😎😎

In this video capsule, we try to capture the euphoria around MS Dhoni in the dressing room & his aura in his hometown in Ranchi - by @28anand

📹📹https://t.co/CtSlWl1i8H pic.twitter.com/VudCr9VbIo

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT