ಸೋಮವಾರ, ಸೆಪ್ಟೆಂಬರ್ 27, 2021
21 °C

ತಾಲಿಬಾನ್‌ ಬೆದರಿಕೆ: ಪಾಕ್‌ಗೆ ತೆರಳಿದ ಅಫ್ಗಾನ್ ಫುಟ್‌ಬಾಲ್ ಆಟಗಾರ್ತಿಯರು

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ತಾಲಿಬಾನ್‌ನಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದ ಅಫ್ಗಾನಿಸ್ತಾನದ 32 ಮಂದಿ ಫುಟ್‌ಬಾಲ್ ಆಟಗಾರ್ತಿಯರು ತಮ್ಮ ಕುಟುಂಬ ಸಮೇತ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಮಾನವೀಯ ನೆಲೆಯಲ್ಲಿ ಪಾಕ್ ಸರ್ಕಾರ ಅವರಿಗೆ ತುರ್ತು ವೀಸಾಗಳನ್ನು ನೀಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ರಾಷ್ಟ್ರೀಯ ಜೂನಿಯರ್ ಬಾಲಕಿಯರ ತಂಡಕ್ಕೆ ಸೇರಿದ ಫುಟ್‌ಬಾಲ್ ಆಟಗಾರ್ತಿಯರು ಈ ಮೊದಲೇ ಕತಾರ್‌ಗೆ ಪ್ರಯಾಣಿಸಬೇಕಾಗಿತ್ತು, ಆದರೆ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ತೆರಳಲು ಸಾಧ್ಯವಾಗಿರಲಿಲ್ಲ.

ಆಗಸ್ಟ್‌ನಲ್ಲಿ ತಾಲಿಬಾನ್ ಉಗ್ರರು ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ಬಳಿಕ ಈ ಆಟಗಾರ್ತಿಯರು ತಾಲಿಬಾನ್‌ನಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದರು.

32 ಫುಟ್‌ಬಾಲ್ ಆಟಗಾರ್ತಿಯರನ್ನು ಪಾಕಿಸ್ತಾನಕ್ಕೆ ಕರೆತರುವ ಕ್ರಮವನ್ನು ಅಲ್ಲಿನ ಸರ್ಕಾರ ಮತ್ತು ಪಾಕಿಸ್ತಾನ ಫುಟ್‌ಬಾಲ್ ಫೆಡರೇಶನ್ (ಪಿಎಫ್ಎಫ್) ಸಹಯೋಗದೊಂದಿಗೆ ಬ್ರಿಟಿಷ್ ಮೂಲದ ಎನ್‌ಜಿಒ ಫುಟ್ಬಾಲ್ ಫಾರ್ ಪೀಸ್ ಕೈಗೊಂಡಿದೆ.

ಕಳೆದ ವಾರ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ದೋಹಾ ಪ್ರವಾಸದ ವೇಳೆ ಅಫ್ಗಾನ್ ನಿರಾಶ್ರಿತರನ್ನು ಭೇಟಿ ಮಾಡಿದ್ದರು. ಆದರೆ, ಅಫ್ಗಾನಿಸ್ತಾನದಲ್ಲೇ ಉಳಿದಿದ್ದ ಫುಟ್‌ಬಾಲ್ ಆಟಗಾರ್ತಿಯರ ನೆರವಿಗೆ ಬಾರದ ಜಾಗತಿಕ ಫುಟ್‌ಬಾಲ್ ಸಂಸ್ಥೆ ತನ್ನ ನಿಷ್ಕ್ರಿಯತೆಗಾಗಿ ಟೀಕೆಗೆ ಗುರಿಯಾಗಿದೆ.

ಫುಟ್‌ಬಾಲ್ ಆಟಗಾರ್ತಿಯರು ಪೇಶಾವರದಿಂದ ಲಾಹೋರ್‌ಗೆ ತೆರಳಲಿದ್ದು, ಅಲ್ಲಿ ಅವರನ್ನು ಪಿಎಫ್‌ಎಫ್ ಪ್ರಧಾನ ಕಚೇರಿಯಲ್ಲಿ ಇರಿಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು