ಶನಿವಾರ, ಫೆಬ್ರವರಿ 27, 2021
30 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ

ಬಿಎಫ್‌ಸಿಗೆ ಕೇರಳ ಬ್ಲಾಸ್ಟರ್ಸ್ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್‌: ಗೆಲುವಿನ ಹಾದಿಗೆ ಮರಳಲು ತವಕಿಸುತ್ತಿರುವ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡವು ಬುಧವಾರ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ತಂಡವನ್ನು ಎದುರಿಸಲಿದೆ. ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯವು ಇಲ್ಲಿಯ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇತರೆ ಸಂದರ್ಭದಲ್ಲಿ ಈ ತಂಡಗಳ ನಡುವೆ ಪಂದ್ಯ ನಡೆದಿದ್ದರೆ, ಗ್ಯಾಲರಿಗಳಲ್ಲಿ ಪ್ರೇಕ್ಷಕರು ತುಂಬಿ ತುಳುಕುತ್ತಿದ್ದರು. ಕೇರಳದ ಕೊಚ್ಚಿಯ ಜವಾಹರಲಾಲ್‌ ನೆಹರೂ ಕ್ರೀಡಾಂಗಣ ಅಥವಾ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕಲರವ ಕಾಣಸಿಗುತ್ತಿತ್ತು. ಈಗ ಕೋವಿಡ್‌–19 ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿಲ್ಲ.

ಈ ಹಿಂದಿನ ಐದು ಪಂದ್ಯಗಳಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ತಂಡವು ಗೆಲುವು ಕಂಡಿಲ್ಲ. ನಾಲ್ಕರಲ್ಲಿ ಸೋಲು ಅನುಭವಿಸಿದ್ದರೆ, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ನೂತನ ಕೋಚ್ ನೌಶಾದ್ ಮೂಸಾ ತಂಡದ ಸಾಮರ್ಥ್ಯ ಸುಧಾರಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಕಳೆದ ಋತುವಿನಲ್ಲಿ ನೀಡಿದ ಗೋಲುಗಳಿಗಿಂತ ಹೆಚ್ಚಿನ ಗೋಲುಗಳನ್ನು (16) ಎದುರಾಳಿಗಳಿಗೆ ಈಗಾಗಲೇ ಬಿಎಎಫ್‌ಸಿ ಆಟಗಾರರು ನೀಡಿದ್ದು ಚಿಂತೆಗೆ ಕಾರಣವಾಗಿದೆ.

‘ತಂಡದಲ್ಲಿ ಈಗ ಬಹಳಷ್ಟು ಸಕಾರಾತ್ಮಕ ಸಂಗತಿಗಳು ಕಂಡುಬಂದಿವೆ. 5–6 ದಿನ ನಮಗೆ ತರಬೇತಿಗೆ ಅವಕಾಶ ಸಿಕ್ಕಿದೆ. ಕೇರಳದ ವಿರುದ್ಧ ಉತ್ತಮ ಆಟ ಆಡಲಿದ್ದೇವೆ‘ ಎಂದು ನೌಶಾದ್ ಮೂಸಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಎಫ್‌ಸಿ ತಂಡದ ಮಿಡ್‌ಫೀಲ್ಡರ್ ದಿಮಾಸ್ ಡೆಲ್ಗಾಡೊ ಕೌಟುಂಬಿಕ ಕಾರಣಕ್ಕಾಗಿ ತವರು ರಾಷ್ಟ್ರ ಸ್ಪೇನ್‌ಗೆ ಮರಳಿದ್ದಾರೆ.

‘ಡೆಲ್ಗಾಡೊ ನಮ್ಮ ತಂಡದ ಪ್ರಮುಖ ಆಟಗಾರ ಎನ್ನುವುದರಲ್ಲಿ ಸಂಶಯವಿಲ್ಲ. ಆದರೂ ಅವರ ಸ್ಥಾನವನ್ನು ತುಂಬುವ ಆಟಗಾರರು ನಮ್ಮಲ್ಲಿ ಇದ್ದಾರೆ‘ ಎಂದು ಮೂಸಾ ಹೇಳಿದರು.

ಕಳೆದ ಪಂದ್ಯದಲ್ಲಿ ಇಂಜುರಿ ಅವಧಿಯಲ್ಲಿ ಗೋಲು ಬಿಟ್ಟುಕೊಟ್ಟು ಡ್ರಾಕ್ಕೆ ಸಮಾಧಾನಪಟ್ಟುಕೊಂಡಿದ್ದ ಕೇರಳ ತಂಡವು ಲಯಕ್ಕೆ ಮರಳುವ ಹಂಬದಲ್ಲಿದೆ. ಹೀಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ಸಂಜೆ 7.30

ಸ್ಥಳ: ಜಿಎಂಸಿ ಕ್ರೀಡಾಂಗಣ, ಬ್ಯಾಂಬೊಲಿಮ್‌

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು