ಮಂಗಳವಾರ, ಮೇ 26, 2020
27 °C

ವಿಶ್ವಕಪ್ ಅಂಗಣಗಳ ‘ಸೃಷ್ಟಿ’: ಚೀನಾದ ದೂರದೃಷ್ಟಿ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

prajavani

ಕೊರೊನಾ ಹಾವಳಿಗೆ ತತ್ತರಿಸಿ ಕ್ರೀಡಾ ಜಗತ್ತು ಸ್ತಬ್ಧವಾಗಿದ್ದರೆ, ಇತ್ತ ಕೊರೊನಾದ ‘ಜನಕ’ ಚೀನಾಗೆ ಫುಟ್‌ಬಾಲ್ ಅಂಗಣಗಳನ್ನು ನಿರ್ಮಿಸುವ ಧಾವಂತ. 2022ರ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ನಡೆಯಲಿರುವ ಕತಾರ್‌ನಲ್ಲಿ ಸಿದ್ಧಗೊಳ್ಳುತ್ತಿರುವ ಕ್ರೀಡಾಂಗಣಗಳಲ್ಲೂ ಚೀನಾ ಕಂಪನಿ ಮತ್ತು ವಿನ್ಯಾಸಕಾರರ ಕೈ ಚಳಕವಿದೆ!

ಹಡಗಿನ ಬಿಡಿಭಾಗಗಳನ್ನು ಬಳಸಿ ಫುಟ್‌ಬಾಲ್ ಕ್ರೀಡಾಂಗಣ ನಿರ್ಮಿಸಲು ಸಾಧ್ಯವೇ..? ನಿರುಪಯುಕ್ತ ವಸ್ತುಗಳಿಂದಲೇ ಕ್ರೀಡಾಂಗಣ ಎದ್ದು ನಿಲ್ಲಬಹುದೇ...? ಚೀನಾದ ನಿರ್ಮಾಣ ಮತ್ತು ತಾಂತ್ರಿಕ ಕೌಶಲದ ಮುಂದೆ ಇಂಥ ಪ್ರಶ್ನೆಗಳಿಗೆ ಮಹತ್ವವೇ ಇಲ್ಲ. ಯಾಕೆಂದರೆ ಅಲ್ಲಿನ ಬೃಹತ್ ಕಂಪನಿಗಳು ಇವೆಲ್ಲವೂ ಸಾಧ್ಯ ಎಂಬುದನ್ನು ಮಾಡಿತೋರಿಸುತ್ತಿವೆ. ಕತಾರ್‌ನ ದೋಹಾದಲ್ಲಿ 2022ರಲ್ಲಿ ನಡೆಯಲಿರುವ ವಿಶ್ವಕಪ್ ಫುಟ್‌ಬಾಲ್ ಟೂರ್ನಿಗೆ ಸಜ್ಜಾಗುತ್ತಿರುವ ಕ್ರೀಡಾಂಗಣಗಳಲ್ಲಿ ಇಂಥ ವಿಶಿಷ್ಟ ನಿರ್ಮಾಣಗಳೂ ಇವೆ.

ಜಗತ್ತಿನ ಕ್ರೀಡಾಶಕ್ತಿ ಎನಿಸಿರುವ ರಾಷ್ಟ್ರಗಳೆಲ್ಲವೂ ಲಾಕ್‌ಡೌನ್‌ನಿಂದಾಗಿ ಕ್ರೀಡಾಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದರೆ, ಚೀನಾವು ಬೃಹತ್ ಫುಟ್‌ಬಾಲ್ ಕ್ರೀಡಾಂಗಣಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಏಷ್ಯಾ ಫುಟ್‌ಬಾಲ್‌ನ ಶಕ್ತಿಕೇಂದ್ರ ಆಗುವ ಹೆಬ್ಬಯಕೆಯೊಂದಿಗೆ ಹೆಜ್ಜೆ ಇರಿಸಿರುವ ಚೀನಾ 10 ವರ್ಷಗಳ ನಂತರ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಆತಿಥ್ಯ ವಹಿಸುವ ಅವಕಾಶಕ್ಕಾಗಿ ಹೆಣೆದಿರುವ ತಂತ್ರಗಳ ಭಾಗವೇ ಈ ನಿರ್ಮಾಣ ಕಾರ್ಯ ಎಂದು ಹೇಳಲಾಗುತ್ತದೆ.

ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಕ್ರೀಡಾಂಗಣಗಳಲ್ಲೂ ತನ್ನ ಛಾಪು ಮೂಡಿಸಲು ಚೀನಾ ಮುಂದಾಗಿರುವುದರ ಹಿಂದೆ ಕೂಡ 2030ರ ವಿಶ್ವಕಪ್ ಆತಿಥ್ಯದ ಆಸೆ ಅಡಗಿದೆ ಎಂಬ ವಿಶ್ಲೇಷಣೆಗಳೂ ಫುಟ್‌ಬಾಲ್ ವಲಯದಲ್ಲಿ ಕೇಳಿಬಂದಿವೆ.

2022ರ ವಿಶ್ವಕಪ್‌ ಟೂರ್ನಿಗೆ ಕತಾರ್‌‌ನಲ್ಲಿ ಎಂಟು ಕ್ರೀಡಾಂಗಣಗಳನ್ನು ಬಳಸಲು ನಿರ್ಧರಿಸಲಾಗಿದೆ. ಇವುಗಳ ಪೈಕಿ ಅಲ್ ಖಲೀಫಾ ಮತ್ತು ಅಲ್ ಜನಾಬ್ ಕ್ರೀಡಾಂಗಣವನ್ನು ಈಗಾಗಲೇ ಉದ್ಘಾಟಿಸಲಾಗಿದೆ. ಉಳಿದ ಆರರ ಕಾಮಗಾರಿ ಕೊರೊನಾ ಹಾವಳಿಯ ನಡುವೆಯೂ ನಿರಾತಂಕವಾಗಿ ನಡೆದಿವೆ.


ನಗರದ ಮಧ್ಯದಲ್ಲಿ ಕಂಗೊಳಿಸುತ್ತಿರುವ ಲುಸೇಲ್ ಕ್ರೀಡಾಂಗಣ –ಎಎಫ್‌ಪಿ ಚಿತ್ರ

ಕ್ರೀಡಾಂಗಣಗಳ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್‌ಗಳಲ್ಲಿ ಬಹುಪಾಲು ಚೀನಾ ಕಂಪನಿಗಳ ಪಾಲಾಗಿವೆ. ಗ್ವಾಂಗ್ಡಾಂಗ್‌ನಲ್ಲಿರುವ ಚೀನಾ ಇಂಟರ್‌ನ್ಯಾಷನಲ್ ಮರೇನ್ ಕಂಟೈನರ್ ಕಂಪನಿ ಈ ಪೈಕಿ ಹೆಚ್ಚು ಉತ್ಸಾಹ ತೋರಿದ್ದು ರಾಸ್ ಅಬು ಅಬೌದ್ ಕ್ರೀಡಾಂಗಣವನ್ನು ‘ಮ್ಯಾಜಿಕ್ ಸ್ಟೇಡಿಯಂ’ ಆಗಿಸುವುದಾಗಿ ಭರವಸೆ ನೀಡಿದೆ. ‘ಏಳು ಮಹಡಿಯ ಕ್ರೀಡಾಂಗಣವನ್ನು ನಿರ್ಮಿಸುವುದಲ್ಲ, ಸೃಷ್ಟಿಸುವ ಕಾರ್ಯವನ್ನು ನಾವು ಮಾಡಲಿದ್ದೇವೆ. ವಿಶ್ವಕಪ್ ಇತಿಹಾಸದಲ್ಲಿ ಇದು ಮೊತ್ತಮೊದಲ ಹಸಿರು ಕ್ರೀಡಾಂಗಣ ಆಗಿರಲಿದೆ’ ಎಂದು ಕಂಪನಿ ಹೇಳಿಕೊಂಡಿದೆ.

ಲಘು ಕೈಗಾರಿಕಾ ಉತ್ಪನ್ನಗಳಿಂದ ನಿರ್ಮಾಣದತ್ತ

ಫುಟ್‌ಬಾಲ್‌ಗೆ ಸಂಬಂಧಿಸಿ ಲಘು ಕೈಗಾರಿಕಾ ಉತ್ಪನ್ನಗಳಾದ ರಾಷ್ಟ್ರೀಯ ಧ್ವಜ, ಮ್ಯಾಸ್ಕಟ್, ಲಾಂಛನ, ಅಭಿಮಾನಿಗಳು ಧರಿಸುವ ಪೋಷಾಕು ಇತ್ಯಾದಿಗಳ ತಯಾರಿಯಲ್ಲಿ ಹೆಸರು ಮಾಡಿರುವ ಚೀನಾ ಈಗ ಬೃಹತ್ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ. ಚೀನಾ ರೈಲ್ವೆ ಕನ್‌ಸ್ಟ್ರಕ್ಷನ್ ಕಾರ್ಪೊರೇಷನ್, ಕತಾರ್ ವಿಶ್ವಕಪ್‌ನ ಮುಖ್ಯ ಕ್ರೀಡಾಂಗಣ ನಿರ್ಮಾಣ ಕಾರ್ಯದ ಹೊಣೆ ಹೊತ್ತುಕೊಂಡಿದೆ.

ವಿಶ್ವಕಪ್ ಕ್ರೀಡಾಂಗಣಗಳು

ಅಲ್ ಖಲೀಫಾ: ದೋಹಾದಲ್ಲಿ 1976ರಲ್ಲಿ ನಿರ್ಮಿಸಿದ, 40 ಸಾವಿರ ಆಸನಗಳ ಈ ಕ್ರೀಡಾಂಗಣವನ್ನು ಈಗ ಸಂಪೂರ್ಣವಾಗಿ ಮರುನಿರ್ಮಾಣ ಮಾಡಲಾಗಿದೆ.

ಅಲ್ ಜನಾಬ್: ಅಲ್ ವಕ್ರಾದಲ್ಲಿರುವ ಇದು ನಿರುಪಯುಕ್ತ ವಸ್ತುಗಳನ್ನು ಬಳಿಸಿ ನಿರ್ಮಿಸಿದ ಮೊದಲ ಕ್ರೀಡಾಂಗಣವಾಗಿದ್ದು 40 ಸಾವಿರ ಆಸನಗಳನ್ನು ಹೊಂದಿದೆ.

ಎಜುಕೇಷನ್ ಸಿಟಿ: ದೋಹಾದಲ್ಲಿರುವ ಈ ಕ್ರೀಡಾಂಗಣದಲ್ಲೂ 40 ಸಾವಿರ ಆಸನಗಳಿದ್ದು ಕ್ವಾರ್ಟರ್ ಫೈನಲ್ ವರೆಗಿನ ವಿವಿಧ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಅಲ್ ಬೈತ್: ಅರಬ್‌ ವಿನ್ಯಾಸದ ವಿಶ್ವದ ಮೊದಲ ಕ್ರೀಡಾಂಗಣವೆಂಬ ಖ್ಯಾತಿ ಗಳಿಸಿರುವ ಇದು ಇರುವುದು ಅಲ್ ಖೊರ್ ನಗರದಲ್ಲಿ. 60 ಸಾವಿರ ಆಸನಗಳ ಕ್ರೀಡಾಂಗಣ ಸೆಮಿಫೈನಲ್ ವರೆಗಿನ ವಿವಿಧ ಪಂದ್ಯಗಳಿಗೆ ವೇದಿಕೆಯಾಗಲಿದೆ.

ಅಲ್ ರಯಾನ್: ಪಶ್ಚಿಮ ಕತಾರ್‌ನ ಮರಳು ಬಳಸಿ ನಿರ್ಮಿಸಿರುವ ಕ್ರೀಡಾಂಗಣ ಅಲ್ ರಯಾನ್ ನಗರದಲ್ಲಿದೆ. 40 ಸಾವಿರ ಆಸನಗಳನ್ನು ಹೊಂದಿದೆ.

ಲುಸೇಲ್: 80 ಸಾವಿರ ಆಸನಗಳ ಇದು ಕತಾರ್‌ನ ಅತಿದೊಡ್ಡ ಕ್ರೀಡಾಂಗಣ. ಲುಸೇಲ್ ನಗರದಲ್ಲಿ ನಿರ್ಮಿಸಲಾಗಿದ್ದು ಉದ್ಘಾಟನಾ ಪಂದ್ಯ ಮತ್ತು ಫೈನಲ್ ನಡೆಯವುದು ಇಲ್ಲೇ.

ಅಲ್ ತುಮಾಮ: ಅರಬ್ ಮತ್ತು ಕತಾರ್‌ನ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕ್ರೀಡಾಂಗಣ 40 ಸಾವಿರ ಆಸನಗಳನ್ನು ಹೊಂದಿದೆ. ಕ್ವಾರ್ಟರ್ ಫೈನಲ್ ವರೆಗಿನ ಪಂದ್ಯಗಳ ಪೈಕಿ ಕೆಲವು ಹಣಾಹಣಿ ಇಲ್ಲಿ ನಡೆಯಲಿದೆ. 

‘ಸಂಚಾರಿ’ ಕ್ರೀಡಾಂಗಣ!

ದೋಹಾದಲ್ಲಿ ನಿರ್ಮಾಣವಾಗಿರುವ ರಾಸ್ ಅಬು ಅಬೌದ್ ಕ್ರೀಡಾಂಗಣ ವಿಶಿಷ್ಟವಾದುದು. ಹಡಗಿನ ಬಿಡಿಭಾಗಗಳು ಮತ್ತು ಮೋಡ್ಯುಲರ್ ಬ್ಲಾಕ್‌ಗಳನ್ನು (ಒಂದರೊಳಗೊಂದನ್ನು ಜೋಡಿಸಲಾಗುವ ಇಟ್ಟಿಗೆ) ಬಳಸಿ ನಿರ್ಮಿಸಿರುವ ಈ ಕ್ರೀಡಾಂಗಣ 40 ಸಾವಿರ ಆಸನಗಳನ್ನು ಹೊಂದಿದೆ. ಈ ಕ್ರೀಡಾಂಗಣವನ್ನು ಪೂರ್ತಿ ಕಳಚಿ ಬೇರೆಡೆಗೆ ತೆಗೆದುಕೊಂಡು ಹೋಗಿ ಮರುನಿರ್ಮಾಣ ಮಾಡಬಹುದಾಗಿದೆ. ಆಯ್ದ ಭಾಗಗಳನ್ನು ಮಾತ್ರ ಕಳಚಿ ಸಣ್ಣ ಅಂಗಣಗಳನ್ನೂ ನಿರ್ಮಿಸಬಹುದಾಗಿದೆ ಎಂಬುದು ಇದರ ವೈಶಿಷ್ಟ್ಯ. ಕ್ವಾರ್ಟರ್ ಫೈನಲ್ ವರೆಗಿನ ವಿವಿಧ ಪಂದ್ಯಗಳು ಇಲ್ಲಿ ನಡೆಯಲಿವೆ. 

***

ಕೊರೊನಾ ವೈರಾಣು ವಿಶ್ವವನ್ನೇ ನಡುಗಿಸಿದ್ದರೂ ಇಲ್ಲಿ ಕ್ರೀಡಾಂಗಣಗಳ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಆಗಲಿಲ್ಲ. ಈ ವರೆಗೆ ಎಲ್ಲವೂ ಸುಸೂತ್ರವಾಗಿ ನಡೆದಿದ್ದು, 728 ಕಂಟೇನರ್‌ಗಳು ವೈರಸ್ ಹಾವಳಿ ಹೆಚ್ಚಾಗುವ ಮೊದಲೇ ಇಲ್ಲಿಗೆ ತಲುಪಿವೆ. 170 ಕಂಟೇನರ್‌ಗಳು ನಂತರ ಬಂದಿವೆ. ಆದ್ದರಿಂದ ನಿರ್ಮಾಣ ಸಾಮಗ್ರಿಗಳಿಗೆ ಅಭಾವ ಆಗಲಿಲ್ಲ.

- ಮೊಹಮ್ಮದ್ ಅಬ್ದುಲ್ಲ ಅಲ್ ಮುಲ್ಲ, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು