ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ನಿರೀಕ್ಷೆಯಲ್ಲಿ ಬೆಂಗಳೂರು ಎಫ್‌ಸಿ

Last Updated 27 ನವೆಂಬರ್ 2020, 15:39 IST
ಅಕ್ಷರ ಗಾತ್ರ

ಪತೋ‌ರ್ಡ: ಮೊದಲ ಪಂದ್ಯದಲ್ಲಿ ಆತಿಥೇಯ ಗೋವಾ ಎದುರು ಡ್ರಾ ಗಳಿಸಿ ನಿರಾಸೆಗೆ ಒಳಗಾಗಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ವಿರುದ್ಧ ಶನಿವಾರ ಸೆಣಸಲಿದೆ.

ಹೈದರಾಬಾದ್ ಕಳೆದ ವರ್ಷವಷ್ಟೇ ಐಎಸ್‌ಎಲ್ ಟೂರ್ನಿಗೆ ಪ್ರವೇಶ ಪಡೆದಿತ್ತು. ಹಿಂದಿನ ಸಾಲಿನ ದೌರ್ಬಲ್ಯಗಳನ್ನು ಮೆಟ್ಟನಿಂತು ಸುಧಾರಣೆಯತ್ತ ಸಾಗುತ್ತಿರುವುದ ಲಕ್ಷಣವನ್ನು ಅದು ಈ ಬಾರಿ ಮೊದಲ ಪಂದ್ಯದಲ್ಲೇ ಪ್ರಕಟಪಡಿಸಿದೆ. ಒಡಿಶಾ ಎದುರಿನ ಪಂದ್ಯದಲ್ಲಿ ಅಮೋಘ ಆಟವಾಡಿ ಜಯ ಸಾಧಿಸಿದೆ. ಬಿಎಫ್‌ಸಿ ಮೊದಲ ಪಂದ್ಯದ ಆರಂಭದಲ್ಲಿ ಆತಿಥೇಯರನ್ನು ಕಂಗೆಡಿಸಿತ್ತು. ನಂತರ ತಂಡದ ರಕ್ಷಣಾ ವಿಭಾಗ ಮಂಕಾಗಿತ್ತು. ಹೀಗಾಗಿ ಕೋಚ್ ಕಾರ್ಲಸ್‌ ಕ್ವದ್ರತ್ ಶನಿವಾರ ಹೊಸ ತಂತ್ರದೊಂದಿಗೆ ತಂಡವನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಬಿಎಫ್‌ಸಿಯ ಸಾಮರ್ಥ್ಯ ಗೊತ್ತಿರುವ ಹೈದರಾಬಾದ್ ಕೋಚ್ ಮ್ಯಾನ್ಯುಯೆಲ್ ಮಾರ್ಕೆಜ್ ಕೂಡ ಭಾರಿ ರಣತಂತ್ರಗಳನ್ನು ಹೆಣೆಯಲಿದ್ದಾರೆ. ಹೀಗಾಗಿ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

ಗೋವಾ ಎದುರಿನ ಪಂದ್ಯ 2–2ರ ಸಮಬಲದಲ್ಲಿ ಮುಕ್ತಾಯಗೊಂಡಿತ್ತು. ಮೊದಲ ಎರಡು ಗೋಲು ಗಳಿಸಿ ಮುನ್ನಡೆ ಸಾಧಿಸಿದ್ದ ಬೆಂಗಳೂರು ನಂತರ ಎರಡು ಗೋಲುಗಳನ್ನು ಬಿಟ್ಟುಕೊಟ್ಟು ನಿರಾಸೆ ಅನುಭವಿಸಿತ್ತು. ಆ ಪಂದ್ಯದಲ್ಲಿ ಗೋಲು ಗಳಿಸಿದ ಕ್ಲೀಟನ್ ಕ್ಲೀಟನ್ ಸಿಲ್ವಾ ಮತ್ತು ಜುವಾನನ್ ಮೇಲೆ ಬಿಎಫ್‌ಸಿ ಭರವಸೆ ಇರಿಸಿಕೊಂಡಿದೆ. ನಾಯಕ ಸುನಿಲ್ ಚೆಟ್ರಿ ಮೇಲೆಯೂ ನಿರೀಕ್ಷೆ ಇದೆ. ಆದರೆ ರಕ್ಷಣಾ ವಿಭಾಗದ ಜಾವೊ ವಿಕ್ಟರ್ ಮತ್ತು ಒಡೀ ಒನೇಂಡಿಯಾ, ಗೋಲ್‌ಕೀಪರ್ ಸುಬ್ರತಾ ಪಾಲ್ ಅವರನ್ನು ವಂಚಿಸಿ ಗೋಲು ಗಳಿಸುವುದು ಸುಲಭಸಾಧ್ಯವಲ್ಲ.

ಮೊದಲ ಪಂದ್ಯದಲ್ಲಿ ಏಕೈಕ ಗೋಲು ಗಳಿಸಿ ಹೈದರಾಬಾದ್‌ ತಂಡಕ್ಕೆ ಜಯ ತಂದುಕೊಟ್ಟ ಲಿಸನ್ ಕೊಲ್ಯಾಕೊ ಅವರೊಂದಿಗೆ ಅರಿದಾನ ಸಂಟಾನ ಕೂಡ ಫಾರ್ವರ್ಡ್‌ ವಿಭಾಗದ ಭರವಸೆಯಾಗಿದ್ದಾರೆ. ಅಭಿಷೇಕ್ ಹಲ್ದರ್‌, ಹಾಲಿಚರಣ್ ನಜರೆ ಮತ್ತು ಸೌವಿಕ್ ಚಕ್ರವರ್ತಿ ಅವರ ಬಲ ಮಿಡ್‌ಫೀಲ್ಡ್‌ ವಿಭಾಗದಲ್ಲಿದೆ. ಗಾಯಗೊಂಡಿರುವ ಫ್ರಾನ್ಸಿಸ್ಕೊ ಸಾಂಡಾಸ ಶನಿವಾರ ಹೈದರಾಬಾದ್ ತಂಡಕ್ಕೆ ಲಭ್ಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT