ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಗೋವಾ–ಈಸ್ಟ್ ಬೆಂಗಾಲ್ ಪಂದ್ಯ ಡ್ರಾ

Last Updated 6 ಜನವರಿ 2021, 18:20 IST
ಅಕ್ಷರ ಗಾತ್ರ

ವಾಸ್ಕೊ, ಗೋವಾ: ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಮತ್ತು ಆತಿಥೇಯ ಎಫ್‌ಸಿ ಗೋವಾ ತಂಡಗಳು ಡ್ರಾಗೆ ಸಮಾಧಾನಪಟ್ಟುಕೊಂಡವು. ತಿಲಕ್ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯ 1–1ರ ಸಮಬಲದಲ್ಲಿ ಮುಕ್ತಾಯಗೊಂಡಿತು.

ದ್ವಿತೀಯಾರ್ಧದ ಮೋಹಕ ಗೋಲು ಗಳಿಸಿದ ಬ್ರೈಟ್ ಎನೊಬಕಾರೆ, ಈಸ್ಟ್ ಬೆಂಗಾಲ್‌ ತಂಡದ ಖಾತೆ ತೆರೆದರೆ, ಎರಡೇ ನಿಮಿಷಗಳಲ್ಲಿ ತಿರುಗೇಟು ನೀಡಿದ ದೇವೇಂದ್ರ ಮರ್ಗಾಂವ್ಕರ್ ಅವರು ಗೋವಾ ತಂಡದ ಕೈ ಹಿಡಿದರು.

ನಾಲ್ಕನೇ ನಿಮಿಷದಲ್ಲಿ ಗೋವಾ ತಂಡಕ್ಕೆ ಫ್ರೀ ಕಿಕ್ ಅವಕಾಶ ಲಭಿಸಿತ್ತು. ಆದರೆ ಅದರ ಲಾಭ ಪಡೆದುಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. ಐದನೇ ನಿಮಷದಲ್ಲಿ ಬ್ರೆಂಡನ್ ಫರ್ನಾಂಡಸ್ ಅವರ ದಾಳಿಯನ್ನು ತಡೆದು ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಈಸ್ಟ್ ಬೆಂಗಾಲ್ ಗೋಲ್‌ಕೀಪರ್ ದೇವಜೀತ್ ಮಜುಂದಾರ್ ಯಶಸ್ವಿಯಾದರು. ಮರುಗಳಿಗೆಯಲ್ಲಿ ಲಭಿಸಿದ ಕಾರ್ನರ್ ಕಿಕ್ ಕೂಡ ಗೋವಾದ ಕೈಹಿಡಿಯಲಿಲ್ಲ. 36 ಮತ್ತು 46ನೇ ನಿಮಿಷದಲ್ಲೂ ದೇವಜೀತ್ ಅವರು ಚಾಣಾಕ್ಷತನ ಮೆರೆದು ತಂಡಕ್ಕೆ ನೆರವಾದರು.

ಪಂದ್ಯ ಮುಂದೆ ಸಾಗಿದಂತೆ ಉಭಯ ತಂಡಗಳ ಹೋರಾಟದ ಕಾವು ಹೆಚ್ಚಿತು. 56ನೇ ನಿಮಿಷದಲ್ಲಿ ಈಸ್ಟ್‌ ಬೆಂಗಾಲ್ ಡಿಫೆಂಡರ್‌ ಡ್ಯಾನಿ ಫಾಕ್ಸ್‌ ಕೆಂಪು ಕಾರ್ಡ್‌ ಪಡೆದು ಹೊರನಡೆದರು. 10 ಆಟಗಾರರೊಂದಿಗೆ ಹೋರಾಡಿದರೂ ಬೆಂಗಾಲ್ ಭರವಸೆ ಕಳೆದುಕೊಳ್ಳಲಿಲ್ಲ.79ನೇ ನಿಮಿದಲ್ಲಿ ಬ್ರೈಟ್ ಮೋಹಕವಾಗಿ ಚೆಂಡನ್ನು ಡ್ರಿಬಲ್ ಮಾಡುತ್ತ ಬಂದು ಎದುರಾಳಿ ತಂಡದ ಮೂರು–ನಾಲ್ಕು ಮಂದಿಗೆ ಚಳ್ಳೆಹಣ್ಣು ತಿನ್ನಿಸಿ ಮುನ್ನುಗ್ಗಿದರು. ಗೋಲುಪೆಟ್ಟಿಗೆಯ ಸಮೀಪಕ್ಕೆ ಬಂದ ಅವರು ಚೆಂಡನ್ನು ಸುಲಭವಾಗಿ ಗುರಿಯತ್ತ ತಳ್ಳಿದರು. ಆದರೆ 81ನೇ ನಿಮಿಷದಲ್ಲಿ ದೇವೇಂದ್ರ ಚೆಂಡಿನ ಮೇಲೆ ಹಿಡಿತ ಸಾಧಿಸಿ ಮೋಹಕ ಗೋಲು ಗಳಿಸಿ ಮಿಂಚಿದರು. ರಕ್ಷಣಾ ವಿಭಾಗದಲ್ಲಿ ಒಬ್ಬ ಆಟಗಾರನ ಕೊರತೆ ಇದ್ದದ್ದು ಬೆಂಗಾಲ್‌ಗೆ ಮಾರಕವಾಯಿತು.

ಬೆಂಗಾಲ್‌ ಒಂಬತ್ತು ಪಂದ್ಯಗಳಲ್ಲಿ ಏಳು ಪಾಯಿಂಟ್‌ ಗಳಿಸಿದ್ದು ಪಾಯಿಂಟ್‌ ಪಟ್ಟಿಯಲ್ಲಿ 10ನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ಜಿಗಿಯಿತು. 10 ಪಂದ್ಯಗಳಿಂದ 15 ಪಾಯಿಂಟ್ ಸಂಪಾದಿಸಿರುವ ಗೋವಾ ಮೂರನೇ ಸ್ಥಾನ ಉಳಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT