ಶನಿವಾರ, ಜುಲೈ 2, 2022
25 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಲೀಗ್‌: ಏಳು ಪಂದ್ಯಗಳಲ್ಲಿ ಸೋಲು ಕಾಣದ ಎಸ್‌ಸಿಇಬಿ

ಬೆಂಗಾಲ್‌ಗೆ ಪ್ಲೇ ಆಫ್ ಕನಸು; ಮುಂಬೈಗೆ ಜಯದ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ, ಗೋವಾ: ಎರಡು ಜಯ ಸೇರಿದಂತೆ ಹಿಂದಿನ ಏಳು ಪಂದ್ಯಗಳಲ್ಲಿ ಸೋಲರಿಯದೆ ಮುನ್ನುಗ್ತುತ್ತಿರುವ ಎಸ್‌ಸಿ ಈಸ್ಟ್ ಬೆಂಗಾಲ್‌ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪ್ಲೇ ಆಫ್‌ ಹಂತಕ್ಕೇರುವ ಕನಸಿನಲ್ಲಿದೆ. ಲೀಗ್‌ ಹಂತದಲ್ಲಿ ಇನ್ನು ಒಂದು ಜಯ ಸಾಧಿಸಿದರೆ ತಂಡದ ಹಾದಿ ಸುಗಮವಾಗಲಿದೆ. ಆದರೆ ಶುಕ್ರವಾರ ತಿಲಕ್‌ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಈ ತಂಡ ಬಲಿಷ್ಠ ಮುಂಬೈ ಸಿಟಿ ಎಫ್‌ಸಿಯ ಸವಾಲು ಮೀರಿ ನಿಲ್ಲಬೇಕಾಗಿದೆ.

ಈ ವರ್ಷ ಇದೇ ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಆಡಲು ಅವಕಾಶ ಪಡೆದಿರುವ ಈಸ್ಟ್ ಬೆಂಗಾಲ್ ಆರಂಭದ ಕೆಲವು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ನಂತರ ಚೇತರಿಕೆ ಕಂಡ ತಂಡ ಈಗ 10ನೇ ಸ್ಥಾನದಲ್ಲಿದ್ದರೂ ಐದನೇ ಸ್ಥಾನದಲ್ಲಿರುವ ತಂಡಕ್ಕಿಂತ ಕೇವಲ ಮೂರು ಪಾಯಿಂಟ್‌ಗಳಿಂದ ಹಿಂದೆ ಉಳಿದಿದೆ. 12 ಪಂದ್ಯಗಳಲ್ಲಿ ಎರಡು ಜಯ ಮತ್ತು ಆರು ಡ್ರಾ ಸಾಧಿಸಿರುವ ತಂಡಕ್ಕೆ ಮುಂಬೈ ಸಿಟಿ ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆ ಇದೆ. 11 ಪಂದ್ಯಗಳಲ್ಲಿ ಎಂಟನ್ನು ಗೆದ್ದಿರುವ ಮುಂಬೈ ಸತತ ನಾಲ್ಕು ಜಯದ ನಂತರ ಕಳೆದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಆದ್ದರಿಂದ ಜಯದ ಲಯಕ್ಕೆ ಮರಳುವ ಭರವಸೆಯಲ್ಲಿದೆ.  

ಬ್ರೈಟ್ ಎನೊಬಖಾರೆ ತಂಡವನ್ನು ಸೇರಿಕೊಂಡ ನಂತರ ಈಸ್ಟ್ ಬೆಂಗಾಲ್‌ನ ಫಾರ್ವರ್ಡ್‌ ವಿಭಾಗಕ್ಕೆ ಹೆಚ್ಚು ಬಲ ಬಂದಿದೆ. ಆದರೆ ಡಿಫೆಂಡರ್‌ಗಳು ಎಡವುತ್ತಿದ್ದಾರೆ. ಬಿಟ್ಟುಕೊಟ್ಟ ಒಟ್ಟು ಗೋಲುಗಳ ಪೈಕಿ 13 ದ್ವಿತೀಯಾರ್ಧದಲ್ಲಿ ದಾಖಲಾಗಿವೆ. ಇತರ ಯಾವ ತಂಡವೂ ದ್ವಿತೀಯಾರ್ಧದಲ್ಲಿ ಇಷ್ಟೊಂದು ಗೋಲುಗಳನ್ನು ಕೊಟ್ಟಿಲ್ಲ. ಆದ್ದರಿಂದ ಮುಂಬೈ ಎದುರಿನ ಪಂದ್ಯಕ್ಕೆ ಗೋಲ್‌ಕೀಪರ್ ದೇಬಜೀತ್ ಮಜುಂದಾರ್‌ ಅವರನ್ನು ಕೋಚ್‌ ಫಾವ್ಲರ್ ಯಾವ ರೀತಿ ಸಜ್ಜುಗೊಳಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಮುಂಬೈ ಸಿಟಿ ಎಫ್‌ಸಿ ತಂಡ ಮೊದಲಾರ್ಧದಲ್ಲಿ ಗೋಲು ಗಳಿಸುವುದರಲ್ಲಿ ಪಳಿಗಿದೆ. ಸರ್ಜಿಯೊ ಲೊಬೆರಾ ಕೋಚ್ ಆಗಿರುವ ಈ ತಂಡ ಮೊದಲಾರ್ಧದಲ್ಲಿ ಗಳಿಸಿದಷ್ಟು ಗೋಲುಗಳನ್ನು ಬೇರೆ ಯಾವ ತಂಡವೂ ಗಳಿಸಲಿಲ್ಲ. ಹಿಂದಿನ 10 ಪಂದ್ಯಗಳಲ್ಲಿ ಈ ತಂಡ ಸೋತಿಲ್ಲ. ಇನ್ನು ಮೂರು ಪಂದ್ಯಗಳಲ್ಲಿ ಇದೇ ಲಯವನ್ನು ಉಳಿಸಿಕೊಂಡರೆ ಲೀಗ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಅಜೇಯವಾಗಿ ಉಳಿದ ತಂಡ ಎಂಬ ಖ್ಯಾತಿ ಗಳಿಸಲಿದೆ. ಸತತ 12 ಪಂದ್ಯಗಳಲ್ಲಿ ಸೋಲರಿಯದ ಎಫ್‌ಸಿ ಗೋವಾ ಸದ್ಯ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.  

‘ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವುದು ನಮ್ಮ ಅತಿದೊಡ್ಡ ಗುರಿ. ಅದಕ್ಕಾಗಿ ತುಂಬ ಬೆವರು ಹರಿಸಬೇಕು ಎಂಬ ಅರಿವು ತಂಡಕ್ಕಿದೆ. ತಂಡದ ಇಲ್ಲಿಯ ವರೆಗಿನ ಸಾಧನೆ ತೃಪ್ತಿಕರವಾಗಿದೆ. ಅತಿ ಹೆಚ್ಚು ಗೋಲು ಗಳಿಸಿದ ತಂಡ, ಅತಿಹೆಚ್ಚು ಕ್ಲೀನ್ ಶೀಟ್ ಹೊಂದಿರುವ ತಂಡ, ಹೆಚ್ಚು ಹೊತ್ತು ಚೆಂಡಿನ ಮೇಲೆ ಹಿಡಿತ ಸಾಧಿಸಿರುವ ತಂಡ ಮುಂತಾದ ಹೆಗ್ಗಳಿಕೆ ನಮ್ಮದಾಗಿದೆ. ಇದೇ ರೀತಿ ಮುಂದೆಯೂ ಆಡಿದರೆ ಪ್ರಶಸ್ತಿ ಗಳಿಸುವುದು ಕಷ್ಟಕರವಾಗಲಾರದು’ ಎಂದು ಸರ್ಜಿಯೊ ಲೊಬೆರಾ  ಹೇಳಿದರು.

‘ಮುಂಬೈ ಸಿಟಿ ಎಫ್‌ಸಿ ಅಸಾಮಾನ್ಯ ಸಾಮರ್ಥ್ಯ ತೋರುತ್ತಿರುವ ತಂಡ. ಆದರೆ ನಾವು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮ್ಮ ತಂಡ ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದು ಅದೇ ಆಟವನ್ನು ಮುಂದುರಿಸಲಿದೆ. ಹಿಂದಿನ ಏಳು ಪಂದ್ಯಗಳಲ್ಲಿ ಆಟಗಾರರು ಸಾಕಷ್ಟು ಪಳಗಿದ್ದು ಎದುರಾಳಿ ತಂಡದ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆದ್ದರಿಂದ ವಿಭಿನ್ನ ತಂತ್ರಗಳನ್ನು ಹೂಡಿ ಶುಕ್ರವಾರ ಕಣಕ್ಕೆ ಇಳಿಯಲಿದ್ದಾರೆ’ ಎಂಬುದು ಈಸ್ಟ್ ಬೆಂಗಾಲ್ ಸಹಾಯಕ ಕೋಚ್‌ ರೆನೆಡಿ ಸಿಂಗ್ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು