ಶನಿವಾರ, ಅಕ್ಟೋಬರ್ 1, 2022
20 °C
ಏನು ಪರಿಣಾಮ?

ಎಐಎಫ್‌ಎಫ್‌ ಅಮಾನತುಗೊಳಿಸಿದ ಫಿಫಾ: ಭಾರತದ ಫುಟ್‌ಬಾಲ್‌ಗೆ ‘ಕರಾಳ ದಿನ’

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನವದೆಹಲಿ: ಆಡಳಿತದಲ್ಲಿ ತಲೆದೋರಿರುವ ಗೊಂದಲವನ್ನು ನಿಗದಿತ ಗಡುವಿನೊಳಗೆ ಬಗೆಹರಿಸದ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ಅನ್ನು (ಎಐಎಫ್‌ಎಫ್‌) ಅಂತರರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ಅಮಾನತು ಮಾಡಿದೆ.

ದೇಶದ ಫುಟ್‌ಬಾಲ್‌ ಕ್ಷೇತ್ರಕ್ಕೆ ಬಲವಾದ ಪ್ರಹಾರ ನೀಡುವಂತಹ ಈ ನಿರ್ಧಾರವನ್ನು ಫಿಫಾ ಮಂಗಳವಾರ ಬೆಳಿಗ್ಗೆ ತೆಗೆದುಕೊಂಡಿದೆ. ‘ಆಡಳಿತದಲ್ಲಿ ಅನ್ಯರ ಅತಿಯಾದ ಹಸ್ತಕ್ಷೇ‍ಪ‘ದ ಕಾರಣ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

17 ವರ್ಷದೊಳಗಿನ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯನ್ನು ‘ನಿಗದಿತ ವೇಳಾಪಟ್ಟಿಯಂತೆ ಭಾರತದಲ್ಲಿ ಆಯೋಜಿಸಲು ಸಾಧ್ಯವಿಲ್ಲ’ ಎಂದಿದೆ. ಈ ಟೂರ್ನಿ ಅಕ್ಟೋಬರ್‌ 11 ರಿಂದ 30ರ ವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಎಐಎಫ್‌ಎಫ್‌ ತನ್ನ 85 ವರ್ಷಗಳ ಇತಿಹಾಸದಲ್ಲಿ ಫಿಫಾದಿಂದ ಅಮಾನತಿಗೆ ಒಳಗಾದದ್ದು ಇದೇ ಮೊದಲು.

‘ಎಐಎಫ್‌ಎಫ್‌ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲು ಬ್ಯೂರೊ ಆಫ್‌ ಫಿಫಾ ಕೌನ್ಸಿಲ್‌ ಸರ್ವಾನುಮತದಿಂದ ನಿರ್ಧರಿಸಿದೆ. ಫೆಡರೇಷನ್‌ನ ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪವು ಫಿಫಾ ನಿಯಮಗಳ ಉಲ್ಲಂಘನೆಯಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಫೆಡರೇಷನ್‌ನ ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವು ನ್ಯಾಯಾಲಯ ನೇಮಿಸಿರುವ ಮೂವರು ಸದಸ್ಯರ ಆಡಳಿತ ಸಮಿತಿಯ (ಸಿಒಎ) ಕೈಯಿಂದ ಎಐಎಫ್‌ಎಫ್‌ ತೆಕ್ಕೆಗೆ ಬರುವವರೆಗೂ ಅಮಾನತು ಜಾರಿಯಲ್ಲಿರುತ್ತದೆ’ ಎಂದು ಹೇಳಿದೆ.

‘ಸುಪ್ರೀಂ’ನಲ್ಲಿ ವಿಚಾರಣೆ ಇಂದು: ಈ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಎಐಎಫ್‌ಎಫ್‌ಗೆ ಸಂಬಂಧಪಟ್ಟ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಮನವಿ ಮಾಡಿತು.

ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಮಂಗಳವಾರ ನಡೆದ ಬೆಳವಣಿಗೆಗಳನ್ನು ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠದ ಮುಂದಿಟ್ಟರು.

‘ವಿವಾದ ಬಗೆಹರಿಸಲು ಫಿಫಾ ಪ್ರತಿನಿ ಧಿಗಳು ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳ ನಡುವೆ ಶುಕ್ರವಾರ ಮತ್ತು ಸೋಮವಾರ ಮಾತುಕತೆ ನಡೆದಿತ್ತು. ಒಮ್ಮತದ ತೀರ್ಮಾನ ಹೊರಬೀಳುವ ನಿರೀಕ್ಷೆಯಿತ್ತು. ಆದರೆ ಸೋಮವಾರ ಮಧ್ಯರಾತ್ರಿಯ ಬಳಿಕ ಫಿಫಾ ಅಮಾನತು ನಿರ್ಧಾರ ತೆಗೆದುಕೊಂಡಿದೆ’ ಎಂದು ವಿವರಿಸಿದರು.

ಅದಕ್ಕೆ ಪೀಠವು, ‘ಈ ಪ್ರಕರಣವನ್ನೇ ಬುಧವಾರ ಮೊದಲನೆಯದಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿತು.

ಮೇ 18ರಿಂದಲೇ ಕಾಡುತ್ತಿದ್ದ ಆತಂಕ: ರಾಷ್ಟ್ರೀಯ ಕ್ರೀಡಾ ನೀತಿಯನ್ನು ಜಾರಿಗೊಳಿಸದೇ ಇದ್ದುದ್ದಕ್ಕೆ ಪ್ರಫುಲ್‌ ಪಟೇಲ್‌ ಅವರನ್ನು ಎಐಎಫ್‌ಎಫ್‌ ಅಧ್ಯಕ್ಷ ಸ್ಥಾನದಿಂದ ಸುಪ್ರೀಂ ಕೋರ್ಟ್‌ ಕೆಳಗಿಳಿಸಿತ್ತು. ಫೆಡರೇಷನ್‌ನ ದೈನಂದಿನ ವ್ಯವಹಾರ ನೋಡಿಕೊಳ್ಳಲು ಆಡಳಿತ ಸಮಿತಿ ನೇಮಿಸಿ ಮೇ 18 ರಂದು ಆದೇಶ ಹೊರಡಿಸಿತ್ತು. ಆ ಬೆಳವಣಿಗೆ ನಡೆದ ದಿನದಿಂದಲೇ ಎಐಎಫ್‌ಎಫ್‌ಗೆ ಅಮಾನತು ಶಿಕ್ಷೆಯ ಆತಂಕ ಕಾಡುತ್ತಿತ್ತು.

ಫಿಫಾ ಮತ್ತು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್‌ (ಎಎಫ್‌ಸಿ) ರೂಪಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಐಎಫ್‌ಎಫ್‌ನ ನಿಯಮಾವಳಿಗಳನ್ನು ರೂಪಿಸಬೇಕು. ಅದನ್ನು ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಇಲ್ಲದೆಯೇ, ಎಐಎಫ್‌ಎಫ್‌ ಆಡಳಿತ ಮಂಡಳಿ ಅನುಮೋದಿಸಬೇಕು ಎಂದು ಫಿಫಾ ಈ ಹಿಂದೆಯೇ ಸ್ಪಷ್ಟಪಡಿಸಿತ್ತು.

ಸಚಿವಾಲಯದ ಜತೆ ಮಾತುಕತೆ; ‘ಭಾರತದ ಕ್ರೀಡಾ ಸಚಿವಾಲಯದ ಜತೆ ನಾವು ರಚನಾತ್ಮಕವಾಗಿ ಸಂಪರ್ಕದಲ್ಲಿದ್ದೇವೆ. ಈ ವಿವಾದ ಶೀಘ್ರದಲ್ಲೇ ಬಗೆಹರಿಯುವ ವಿಶ್ವಾಸವಿದೆ‘ ಎಂದು ಫಿಫಾ ಹೇಳಿದೆ.

ಚುನಾವಣೆ ಮೇಲೆ ಕರಿನೆರಳು: ಸುಪ್ರೀಂ ಕೋರ್ಟ್‌ನ ಆದೇಶದಂತೆ ಆ.28 ಎಐಎಫ್‌ಎಫ್‌ ಚುನಾವಣೆ ನಡೆಯಲಿದೆ. ಇದೀಗ ಮಾನ್ಯತೆ ರದ್ದಾಗಿರುವುದರಿಂದ ಚುನಾವಣೆಯ ಮೇಲೆ ಕರಿನೆರಳು ಬಿದ್ದಿದೆ. ಚುನಾವಣೆ ಪ್ರಕ್ರಿಯೆ ಆ.13ರಂದು ಆರಂಭವಾಗಿತ್ತು. ಸಿಒಎ ಸಿದ್ಧಪಡಿಸಿದ್ದ ಚುನಾವಣೆಯ ವೇಳಾಪಟ್ಟಿಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿತ್ತು.

ಇದನ್ನೂ ಓದಿ: 

ಭಾರತದ ಫುಟ್‌ಬಾಲ್‌ ಮೇಲೆ ಏನು ಪರಿಣಾಮ?
ಫಿಫಾ ಅಮಾನತು ನಿರ್ಧಾರ ದೀರ್ಘ ಅವಧಿಗೆ ಮುಂದುವರಿದರೆ ಭಾರತದ ಫುಟ್‌ಬಾಲ್‌ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಲಿದೆ. ಫಿಫಾದ ಸದಸ್ಯನಾಗಿ ಅನುಭವಿಸುತ್ತಿದ್ದ ಎಲ್ಲ ಹಕ್ಕುಗಳನ್ನು ಎಐಎಫ್‌ಎಫ್‌ ಕಳೆದುಕೊಳ್ಳಲಿದೆ.

‘ಭಾರತದ ಕ್ಲಬ್‌ಗಳು ಮತ್ತು ಪ್ರತಿನಿಧಿಗಳು (ಆಟಗಾರರು, ರೆಫರಿ, ಅಧಿಕಾರಿಗಳು) ಯಾವುದೇ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ’ ಎಂದು ಫಿಫಾ ಪ್ರಕಟಣೆ ತಿಳಿಸಿದೆ.

‘ಫುಟ್‌ಬಾಲ್‌ನ ಅಭಿವೃದ್ಧಿಯ ನಿಟ್ಟಿನಲ್ಲಿ ಫಿಫಾ ನಡೆಸುವ ಯಾವುದೇ ಕೋರ್ಸ್‌ಗಳು ಮತ್ತು ತರಬೇತಿಯಲ್ಲಿ ಪಾಲ್ಗೊಳ್ಳುವ ಅವಕಾಶವೂ ಇರುವುದಿಲ್ಲ’ ಎಂದು ವಿವರಿಸಿದೆ.

* ಅಮಾನತು ನಿರ್ಧಾರ ತಕ್ಷಣವೇ ವಾಪಸ್‌ ಪಡೆಯದಿದ್ದರೆ, ಭಾರತ ತಂಡವು ವಿಯೆಟ್ನಾಂ (ಸೆ.24) ಮತ್ತು ಸಿಂಗಪುರ (ಸೆ.27) ವಿರುದ್ಧ ಆಡಬೇಕಿರುವ ಸ್ನೇಹಪರ ಪಂದ್ಯಗಳು ರದ್ದಾಗಲಿವೆ.

* ಮಹಿಳಾ ಲೀಗ್‌ನಲ್ಲಿ ಚಾಂಪಿಯನ್‌ ಆಗಿರುವ ಗೋಕುಲಂ ಕೇರಳ ತಂಡ ಉಜ್ಬೆಕಿಸ್ತಾನದಲ್ಲಿ ನಡೆಯುವ ಎಎಫ್‌ಸಿ ಮಹಿಳಾ ಕ್ಲಬ್‌ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ.

* ಮೋಹನ್‌ ಬಾಗನ್‌ ತಂಡ ಸೆ.7 ರಂದು ಆಡಲಿರುವ ಎಎಫ್‌ಸಿ ಕಪ್‌ ಅಂತರ ವಲಯ ಸೆಮಿಫೈನಲ್‌ ಪಂದ್ಯದ ಮೇಲೂ ಕರಿನೆರಳು ಬಿದ್ದಿದೆ.

* ಇರಾಕ್‌ನಲ್ಲಿ ಸೆ.14 ರಿಂದ ಆರಂಭವಾಗುವ ಎಎಫ್‌ಸಿ 20 ವರ್ಷದೊಳಗಿನವರ ಅರ್ಹತಾ ಟೂರ್ನಿಯಲ್ಲಿ ಆಡುವ ಅವಕಾಶ ಭಾರತದ ಕೈತಪ್ಪಬಹುದು.

ಅತ್ಯಂತ ಕಠಿಣ ನಿರ್ಧಾರ: ಭುಟಿಯಾ
‘ಎಐಎಫ್‌ಎಫ್‌ಅನ್ನು ಫಿಫಾ ಅಮಾನತು ಮಾಡಿರುವುದು ದುರದೃಷ್ಟಕರ. ಇದು ಫಿಫಾ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ’ ಎಂದು ಭಾರತ ತಂಡದ ಮಾಜಿ ನಾಯಕ ಭೈಚುಂಗ್‌ ಭುಟಿಯಾ ಹೇಳಿದ್ದಾರೆ.

‘ಆದರೆ ದೇಶದಲ್ಲಿ ಫುಟ್‌ಬಾಲ್‌ ಕ್ರೀಡೆಯ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರಲು ನಮಗೆ ಸಿಕ್ಕ ಉತ್ತಮ ಅವಕಾಶ ಇದಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಜತೆಯಾಗಿ ಶ್ರಮವಹಿಸಬೇಕು’ ಎಂದು ಅಭಿಪ್ರಾಯಪಟ್ಟರು.

*

ವಿವಾದ ಬಗೆಹರಿಸಲು ಮಾತುಕತೆ ನಡೆಯುತ್ತಿರುವ ಸಮಯದಲ್ಲೇ ಫಿಫಾ ಅಮಾನತು ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಉಂಟುಮಾಡಿದೆ. ಇದು ದುರದೃಷ್ಟಕರ.
-ಸಿಒಎ ಪ್ರಕಟಣೆ

ಇವುಗಳನ್ನು ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು