ಭಾನುವಾರ, ಏಪ್ರಿಲ್ 2, 2023
33 °C
ಸಂತಸದ ಹೊನಲಲ್ಲಿ ಮಿಂದೆದ್ದ ಅಭಿಮಾನಿಗಳು

FIFA World Cup: ಆಗ ಮರಡೋನಾ, ಈಗ ಮೆಸ್ಸಿ; ಅರ್ಜೆಂಟೀನಾ ಮುಡಿಗೇರಿದ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಹಾ: ಲುಸೈಲ್ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಕಂಗಳಲ್ಲಿ ಆನಂದಭಾಷ್ಪದ ಸೆಲೆ. ಅವರ ಕೈಗಳಲ್ಲಿ ದಿಗ್ಗಜ ಡಿಯೆಗೊ ಮೆರಡೋನಾ ಅವರ ಚಿತ್ರಗಳಿದ್ದ ಬ್ಯಾನರ್‌ಗಳು.

ಅರ್ಜೆಂಟೀನಾದ ಆಟಗಾರರ ಕಂಗಳಲ್ಲಿ ಆನಂದದ ಧಾರೆ ಹರಿಯುತ್ತಲೇ ಇತ್ತು. 36 ವರ್ಷಗಳ ನಂತರ ತಮ್ಮ ದೇಶಕ್ಕೆ ಫಿಫಾ ವಿಶ್ವಕಪ್‌ ಗೆದ್ದುಕೊಟ್ಟ ಸಾರ್ಥಕತೆಯಲ್ಲಿ ಮಿಂದೆದ್ದರು. ಅಲ್ಲದೇ ತಮ್ಮ ತಂಡದ ದಿಗ್ಗಜ ಲಯೊನೆಲ್ ಮೆಸ್ಸಿಗೆ  ಚಿನ್ನದ ವಿದಾಯ ನೀಡಿದ ಹೆಮ್ಮೆಯೂ ಅವರದ್ದಾಗಿತ್ತು.  ಎರಡು ವರ್ಷಗಳ ಹಿಂದೆ ನಿಧನರಾಗಿದ್ದ ಮರಡೋನಾ ಅವರಿಗೂ ಗೌರವ ಸಲ್ಲಿಸಿದರು.

ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಪಂದ್ಯಗಳ ಸಾಲಿಗೆ ಸೇರಿದ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 4–2ರಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪರಾಭವಗೊಳಿಸಿದ ಅರ್ಜೆಂಟೀನಾ ಮೂರನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿತು. ಎರಡು ಗೋಲು ಗಳಿಸಿದ ಮೆಸ್ಸಿ ಅವರು ಮೊದಲ ಟ್ರೋಫಿಯ ಸಂಭ್ರಮ ಆಚರಿಸಿದರು. ಆದರೆ ಫ್ರಾನ್ಸ್‌ ತಂಡದ ಕಿಲಿಯನ್ ಎಂಬಾಪೆ ಅವರ ಹ್ಯಾಟ್ರಿಕ್ ವ್ಯರ್ಥವಾಯಿತು. 

ಭಾನುವಾರ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2–2ರಿಂದ ಸಮಬಲ ಸಾಧಿಸಿದ್ದವು. ಮೆಸ್ಸಿ 23ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು. 36ನೇ ನಿಮಿಷದಲ್ಲಿ ಎಂಜೆಲ್ ಡಿ ಮರಿಯಾ ತೋರಿದ ಕಾಲ್ಚಳಕ ಅರ್ಜೆಂಟೀನಾ ಅಭಿಮಾನಿಗಳು ಹುಚ್ಚೆಂದು ಕುಣಿಯುವಂತೆ ಮಾಡಿತು. ಅದಾದ ಬಳಿಕ ಹೆಚ್ಚು ಹೊತ್ತು ಗೋಲು ದಾಖಲಾಗದಿದ್ದಾಗ ಅರ್ಜೆಂಟೀನಾ ಗೆದ್ದಿತೆಂದೇ ಬಹುತೇಕರು ಭಾವಿಸಿದ್ದರು.

ಆದರೆ ಯುವತಾರೆ  ಎಂಬಾಪೆ 80ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿ ಫ್ರಾನ್ಸ್‌ ತಂಡದ ನಿರೀಕ್ಷೆಗೆ ಕಾರಣರಾದರು. ಮರು ನಿಮಿಷದಲ್ಲೇ ಮತ್ತೊಮ್ಮೆ ಮೋಡಿ ಮಾಡಿದ 23 ವರ್ಷದ ಆಟಗಾರ ಅರ್ಜೆಂಟೀನಾ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರೆರೆಚಿದರು.

ಹೆಚ್ಚುವರಿ ಅವಧಿಯಲ್ಲಿ ಇನ್ನಷ್ಟು ಜಿದ್ದಾಜಿದ್ದಿ ಕಂಡುಬಂತು. 108ನೇ ನಿಮಿಷದಲ್ಲಿ ಮತ್ತೊಮ್ಮೆ ಮೋಡಿ ಮಾಡಿದ ಮೆಸ್ಸಿ ತಮ್ಮ ಎರಡನೇ ಗೋಲು ಗಳಿಸಿದರು. ಈ ವೇಳೆ ಅರ್ಜೆಂಟೀನಾ 3–2ರಿಂದ ಮುನ್ನಡೆ ಸಾಧಿಸಿತು. ಆದರೆ ಹೆಚ್ಚುವರಿ ಅವಧಿ ಕೊನೆಗೊಳ್ಳಲು ಎರಡು ನಿಮಿಷಗಳಿರುವಾಗ ಪೆನಾಲ್ಟಿ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದ ಎಂಬಾಪೆ ಹ್ಯಾಟ್ರಿಕ್ ಸಾಧಿಸಿದರು. ಈ ವೇಳೆಗೆ ಪೆನಾಲ್ಟಿ ಶೂಟೌಟ್‌ ಮೊರೆಹೋಗಲಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ಪರ ಮೆಸ್ಸಿ, ಪೌಲೊ ಡಿಬಾಲಾ, ಲಿಯಾಂಡ್ರೊ ಪೆರೆಡೆಸ್‌, ಗೊಂಜಾಲೊ ಮೊಂಟಿಯಲ್‌ ಚೆಂಡನ್ನು ಗುರಿ ಸೇರಿಸಿದರು. ಆದರೆ ಫ್ರಾನ್ಸ್ ಪರ ಎಂಬಾಪೆ ಮತ್ತು ರಂಡಲ್‌ ಕೊಲೊ ಮುವಾನಿ ಮಾತ್ರ ಯಶಸ್ಸು ಸಾಧಿಸಿದರು.

ಮಸ್ಸಿಗೆ ಗೋಲ್ಡನ್ ಬಾಲ್

ಫಿಫಾ ವಿಶ್ವಕಪ್‌ ಟೂರ್ನಿಯ ಶ್ರೇಷ್ಠ ಆಟಗಾರನಿಗೆ ನೀಡುವ ‘ಗೋಲ್ಡನ್‌ ಬಾಲ್‌’ ಪ್ರಶಸ್ತಿಯನ್ನು ಲಯೊನೆಲ್‌ ಮೆಸ್ಸಿ ಪಡೆದುಕೊಂಡರು.

ಫೈನಲ್‌ನಲ್ಲಿ ಎರಡು ಗೋಲುಗಳನ್ನು ಗಳಿಸಿದ ಅವರು ಟೂರ್ನಿಯಲ್ಲಿ ಒಟ್ಟು ಗೋಲುಗಳ ಸಂಖ್ಯೆಯನ್ನು ಏಳಕ್ಕೆ ಹೆಚ್ಚಿಸಿಕೊಂಡರು.

ಆದರೆ ಟೂರ್ನಿಯಲ್ಲಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನೀಡುವ ‘ಗೋಲ್ಡನ್‌ ಬೂಟ್‌’ ಪ್ರಶಸ್ತಿಯನ್ನು ಫ್ರಾನ್ಸ್‌ನ ಕಿಲಿಯನ್‌ ಎಂಬಾಪೆ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಹ್ಯಾಟ್ರಿಕ್‌ ಸಾಧನೆಯೊಂದಿಗೆ ಅವರು ಒಟ್ಟು ಎಂಟು ಗೋಲುಗಳನ್ನು ಗಳಿಸಿದರು.

ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್‌ಗೆ ನೀಡುವ ‘ಗೋಲ್ಡನ್‌ ಗ್ಲೋವ್‌’ ಪ್ರಶಸ್ತಿಗೆ ಅರ್ಜೆಂಟೀನಾದ ಎಮಿಲಿಯಾನೊ ಮಾರ್ಟಿನೆಜ್ ಪಾತ್ರರಾದರು. ಅರ್ಜೆಂಟೀನಾದವರೇ ಆದ 21 ವರ್ಷದ ಎಂಜೊ ಫೆರ್ನಾಂಡಿಜ್‌ ಅವರು ‘ಟೂರ್ನಿಯ ಉದಯೋನ್ಮುಖ ಆಟಗಾರ’ ಗೌರವ ತಮ್ಮದಾಗಿಸಿಕೊಂಡರು.

ಎಂಬಾಪೆ ಸಾಧನೆ: ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಫೈನಲ್‌ ಪಂದ್ಯದಲ್ಲಿ ಹ್ಯಾಟ್ರಿಕ್‌ ಗೋಲು ಗಳಿಸಿದ ಎರಡನೇ ಆಟಗಾರ ಎಂಬ ಗೌರವವನ್ನು ಕಿಲಿಯಾನ್‌ ಎಂಬಾಪೆ ಪಡೆದುಕೊಂಡರು.

ಇಂಗ್ಲೆಂಡ್‌ನ ಜೆಫ್‌ ಹಸ್ಟ್‌ ಮಾತ್ರ ಈ ಸಾಧನೆ ಮಾಡಿರುವ ಇನ್ನೊಬ್ಬ ಆಟಗಾರ. ಅವರು 1966ರ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ ಮೂರು ಗೋಲುಗಳನ್ನು ಗಳಿಸಿದ್ದರು. ಆ ಪಂದ್ಯವನ್ನು ಇಂಗ್ಲೆಂಡ್‌ 4–2 ರಲ್ಲಿ ಗೆದ್ದುಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು