ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಸೆಮಿಗೆ ಚಿಲಿ

Last Updated 29 ಜೂನ್ 2019, 19:45 IST
ಅಕ್ಷರ ಗಾತ್ರ

ಸಾವೊ ಪಾಲೊ (ಎಎಫ್‌ಪಿ): ಹಾಲಿ ಚಾಂಪಿಯನ್‌ ಚಿಲಿ ತಂಡವು ಕೊಪಾ ಅಮೆರಿಕ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ.

ಕೊರಿಂತಿಯನ್ಸ್‌ ಅರೇನಾದಲ್ಲಿ ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಚಿಲಿ 5–4 ಗೋಲುಗಳಿಂದ ಕೊಲಂಬಿಯಾ ತಂಡವನ್ನು ಪರಾಭವಗೊಳಿಸಿತು.

ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ನಿಗದಿತ ಅವಧಿ ಗೋಲು ರಹಿತವಾಗಿತ್ತು. ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಈ ಅವಕಾಶದಲ್ಲಿ ಚಿಲಿ ತಂಡ ಮಿಂಚಿತು. ಈ ತಂಡದ ಆಟಗಾರರು ಐದು ಗೋಲು ಗಳಿಸಿ ಸಂಭ್ರಮಿಸಿದರು. ಕೊಲಂಬಿಯಾ ನಾಲ್ಕು ಬಾರಿಯಷ್ಟೇ ಚೆಂಡನ್ನು ಗುರಿ ಮುಟ್ಟಿಸಿತು.

ನಿರ್ಣಾಯಕ ಹಂತದಲ್ಲಿ ಗೋಲು ದಾಖಲಿಸಿದ ಅಲೆಕ್ಸಿಸ್‌ ಸ್ಯಾಂಚೆಸ್‌ ಅವರು ಚಿಲಿ ತಂಡದ ಗೆಲುವಿನ ರೂವಾರಿಯಾದರು.

ನಾಲ್ಕರ ಘಟ್ಟಕ್ಕೆ ಅರ್ಜೆಂಟೀನಾ: ಅರ್ಜೆಂಟೀನಾ ತಂಡ ಕೂಡಾ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು.

ರಿಯೊ ಡಿ ಜನೈರೊದ ಮರಕಾನ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಅರ್ಜೆಂಟೀನಾ 2–0 ಗೋಲುಗಳಿಂದ ವೆನಿಜುವೆಲಾ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಅರ್ಜೆಂಟೀನಾ ತಂಡವು 10ನೇ ನಿಮಿಷದಲ್ಲಿ ಖಾತೆ ತೆರೆಯಿತು. ಲವುಟಾರೊ ಮಾರ್ಟಿನೆಜ್‌ ಗೋಲು ಬಾರಿಸಿ ಸಂಭ್ರಮಿಸಿದರು. ಮಾರ್ಟಿನೆಜ್‌ ಅವರು ಬ್ಯಾಕ್‌ ಫ್ಲಿಕ್‌ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದ್ದು ಅಭಿಮಾನಿಗಳ ಮನ ಸೆಳೆಯಿತು. ನಂತರ ವೆನಿಜುವೆಲಾ ತಂಡದ ಆಟಗಾರರು ಪರಿಣಾಮಕಾರಿ ಸಾಮರ್ಥ್ಯ ತೋರಿದರು. ಹೀಗಿದ್ದರೂ ಗೋಲು ಗಳಿಸಲು ಮಾತ್ರ ಆಗಲಿಲ್ಲ.

ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾ ತಂಡವು ವೇಗದ ಆಟಕ್ಕೆ ಮುಂದಾಯಿತು. 74ನೇ ನಿಮಿಷದಲ್ಲಿ ಜಿಯೊವಾನಿ ಲೊ ಸೆಲ್ಸೊ ಕಾಲ್ಚಳಕ ತೋರಿದರು. ಸಹ ಆಟಗಾರ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ಅವರು ಚುರುಕಾಗಿ ಗುರಿ ಮುಟ್ಟಿಸಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ಆತಿಥೇಯ ಬ್ರೆಜಿಲ್‌ ಎದುರು ಸೆಣಸಲಿದೆ. ಗುರುವಾರ ನಡೆದಿದ್ದ ಪೈಪೋಟಿಯಲ್ಲಿ ಬ್ರೆಜಿಲ್‌ ತಂಡವು ಪರುಗ್ವೆ ಎದುರು ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT