ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್: ಹಲೆಪ್‌ಗೆ ಸುಲಭ ಜಯ

ನೆಗಡಿಯಿಂದ ಬಳಲಿದ ವಿಕ್ಟೋರಿಯಾ ಅಜರೆಂಕಾ; ಬೆಲ್ಜಿಯಂನ ಡೇವಿಡ್ ಗೊಫಿನ್‌ಗೆ ಸೋಲು
Last Updated 27 ಸೆಪ್ಟೆಂಬರ್ 2020, 14:25 IST
ಅಕ್ಷರ ಗಾತ್ರ

ಪ್ಯಾರಿಸ್: ಅಗ್ರ ಶ್ರೇಯಾಂಕದ ರೊಮೇನಿಯಾ ಆಟಗಾರ್ತಿ ಸಿಮೋನಾ ಹಲೆಪ್‌ ಮತ್ತು ಅಮೆರಿಕ ಓಪನ್ ಟೂರ್ನಿಯ ರನ್ನರ್ ಅಪ್‌ ವಿಕ್ಟೋರಿಯಾ ಅಜರೆಂಕಾ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸುಲಭ ಜಯ ಗಳಿಸಿದರು. ‌

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಸಿಮೋನಾ ಅವರು ರಾಲೆಂಡ್ ಗ್ಯಾರೋಸ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸ್ಪೇನ್‌ನ ಸಾರಾ ಸೋರಿಬ್ಸ್ ಟರ್ಮೊ ಅವರನ್ನು 6–4, 6–0ಯಿಂದ ಮಣಿಸಿದರು. ಸಾರಾ ವಿಶ್ವ ಕ್ರಮಾಂಕದಲ್ಲಿ 70ನೇ ಸ್ಥಾನದಲ್ಲಿದ್ದಾರೆ.

2018ರ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಹಲೆಪ್ ಭಾನುವಾರ ಕೋರ್ಟ್ ಫಿಲಿಪ್‌ ಚಾಟ್ರಿಯರ್‌ನಲ್ಲಿ ಆರಂಭದಲ್ಲಿ 2–4ರ ಹಿನ್ನಡೆ ಅನುಭವಿಸಿದರು. ಆದರೆ ಅಮೋಘ ಆಟವಾಡಿ ಜಯದ ನಗೆ ಬೀರಿದರು. ಎರಡನೇ ಸೆಟ್‌ನಲ್ಲಿ ಎದುರಾಳಿಗೆ ಒಂದು ಗೇಮ್‌ ಕೂಡ ಬಿಟ್ಟುಕೊಡದೆ ಆಧಿಪತ್ಯ ಸ್ಥಾಪಿಸಿದರು.

ಅಜರೆಂಕಾ, ಎಲಿಸ್ ಮರ್ಟೆನ್ಸ್‌ಗೆ ಜಯ

ವಿಶ್ವದ ಮಾಜಿ ಅಗ್ರ ರ‍್ಯಾಂಕ್‌ನ ಅಟಗಾರ್ತಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 6–1, 6–2ರಲ್ಲಿ ವಿಶ್ವ ಕ್ರಮಾಂಕದಲ್ಲಿ 74ನೇ ಸ್ಥಾನದಲ್ಲಿರುವ ಡಂಕಾ ಕೋವಿನಿಕ್ ಎದುರು ಗೆಲುವು ಸಾಧಿಸಿದರು. 31 ವರ್ಷದ ಅಜರೆಂಕಾಗೆ ಇಲ್ಲಿ 10ನೇ ಶ್ರೇಯಾಂಕ ಲಭಿಸಿದೆ. ಕಳೆದ ತಿಂಗಳಲ್ಲಿ ನಡೆದ ಅಮೆರಿಕ ಓಪನ್‌ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಅವರ ಮೊದಲ ಸುತ್ತಿನ ಆಟಕ್ಕೆ ಮಳೆ ಆಗಾಗ ಅಡ್ಡಿಪಡಿಸಿತು.

ಚಳಿ ತಾಳಲಾರದೆ ನಡುಗಿದ ಅಜರೆಂಕಾ ಪಂದ್ಯದ ನಡುವೆ ಬಟ್ಟೆ ಹೊದ್ದುಕೊಂಡು ಕುಳಿತುಕೊಂಡರು. ನಾನು ಫ್ಲೋರಿಡಾದಿಂದ ಬಂದವಳು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.

ಬೆಲ್ಜಿಯಂನ ಎಲಿಸ್ ಮರ್ಟೆನ್ಸ್‌ ರಷ್ಯಾದ ಮಾರ್ಗರಿಟಾ ಗಾಸ್ಪ್ರಯನ್‌ ಎದುರು 6–2, 6–3ರಲ್ಲಿ ಗೆಲುವು ಸಾಧಿಸಿದರು. ರಷ್ಯಾದ ಕಮಿಲಾ ರಖಿಮೋವಾ 6–2, 6–3ರಲ್ಲಿ ತಮ್ಮದೇ ದೇಶದ ಶೆಲ್ಬಿ ರೋಜರ್ಸ್ ಎದುರು ಜಯ ಸಾಧಿಸಿದರು.

ಗ್ರೀಸ್‌ನ ಮರಿಯಾ ಸಕ್ಕರಿ ಮತ್ತು ಆಸ್ಟ್ರೇಲಿಯಾದ ಅಜ್ಲಾ ತೊಮ್ಜನೊವಿಚ್ ನಡುವಿನ ಹೋರಾಟದಲ್ಲಿ ಮರಿಯಾ ಗೆಲುವು ಸಾಧಿಸಿದರು. ಮೊದಲ ಸೆಟ್‌ 6–0ಯಿಂದ ತಮ್ಮದಾಗಿಸಿಕೊಂಡ ಅವರಿಗೆ ಎರಡನೇ ಸೆಟ್‌ನಲ್ಲಿ ಎದುರಾಳಿ ತಿರುಗೇಟು ನೀಡಿದರು. ಕೊನೆಗೆ 7–5ರಲ್ಲಿ ಸೆಟ್‌ ಗೆದ್ದ ಮರಿಯಾ ಎರಡನೇ ಸುತ್ತು ಪ್ರವೇಶಿಸಿದರು.

ಆಸ್ಟ್ರೇಲಿಯಾದ ಅಸ್ತ್ರ ಶರ್ಮಾ ರಷ್ಯಾಚ ಅನಾ ಬ್ಲಿಂಕೋವಾ ಎದುರು 6-3, 2-6, 7-5ರಲ್ಲಿ, ರಷ್ಯಾದ ಎಕ್ತರಿನಾ ಅಲೆಕ್ಸಾಂಡ್ರೊವಾ ಆಸ್ಟ್ರೇಲಿಯಾದ ಮ್ಯಾಡಿಸನ್ ಇಂಗ್ಲಿಸ್ ಎದುರು 6-3, 6-3ರಲ್ಲಿ, ಎಸ್ತೋನಿಯಾದ ಕೈಯಾ ಕನೇಪಿ ಜೆಕ್ ಗಣರಾಜ್ಯದ ಮರಿ ಬೋಸ್ಕೊವಾ ಎದುರು 4-6, 6-4, 6-2ರಲ್ಲಿ ಗೆಲುವು ಸಾಧಿಸಿದರು.

ಪುರುಷರ ವಿಭಾಗದಲ್ಲಿ ಫ್ರಾನ್ಸ್‌ನ ಬೆಂಜಮಿನ್ ಬೊನ್ಸಿ, ಇಟಲಿಯ ಜನಿಕ್ ಸಿನರ್ ಮತ್ತು ಅಮೆರಿಕದ ಸೆಬಾಸ್ಟಿಯನ್ ಕೊರ್ಡ ಎರಡನೇ ಸುತ್ತಿಗೆ ಲಗ್ಗೆ ಇರಿಸಿದರು. ಬೆಂಜಮಿನ್, ಫಿನ್ಲೆಂಡ್‌ನ ಎಮಿಲ್ ರುವೋರಿ ಅವರನ್ನು 6-2, 6-4, 4-6, 6-4ರಲ್ಲಿ, ಜನಿಕ್ ಬೆಲ್ಜಿಯಂನ ಡೇವಿಡ್ ಗೊಫಿನ್ ಅವರನ್ನು 7-5, 6-0, 6-3ರಲ್ಲಿ ಮತ್ತು ಸೆಬಾಸ್ಟಿಯನ್ ಇಟಲಿಯ ಆ್ಯಂಡ್ರೆಸ್ ಸೆಪ್ಪಿ ಅವರನ್ನು 6-2, 4-6, 6-3, 6-3ರಲ್ಲಿ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT