ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿ: ಪೋರ್ಚುಗಲ್‌ಗೆ ಜಾರ್ಜಿಯಾ ಆಘಾತ

ಝೆಕ್‌ ರಿಪಬ್ಲಿಕ್‌ ವಿರುದ್ಧ ಟರ್ಕಿಗೆ ಗೆಲುವು
Published 27 ಜೂನ್ 2024, 16:14 IST
Last Updated 27 ಜೂನ್ 2024, 16:14 IST
ಅಕ್ಷರ ಗಾತ್ರ

ಗೆಲ್ಸೆನ್ಕಿರ್ಚೆನ್‌, ಜರ್ಮನಿ: ಜಾರ್ಜಿಯಾ ತಂಡವು ಬುಧವಾರ ರಾತ್ರಿ ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿಯ ‘ಎಫ್‌’ ಗುಂಪಿನ ಪಂದ್ಯದಲ್ಲಿ 2–0 ಯಿಂದ ಬಲಿಷ್ಠ ಪೋರ್ಚುಗಲ್‌ ವಿರುದ್ಧ ಚಾರಿತ್ರಿಕ ಗೆಲುವು ಸಾಧಿಸಿತು. ಜೊತೆಗೆ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಮೊದಲ ಬಾರಿ ಅಂತಿಮ 16ರ ಘಟ್ಟಕ್ಕೆ ಪ್ರವೇಶ ಪಡೆಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಪೋರ್ಚುಗಲ್‌ ತಂಡವು ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿ, 6 ಅಂಕಗಳೊಂದಿಗೆ ಈಗಾಗಲೇ ನಾಕೌಟ್‌ಗೆ ಅರ್ಹತೆ ಪಡೆದಿತ್ತು. ಕೊನೆಯ ಪಂದ್ಯದ ಆಘಾತಕಾರಿ ಸೋಲಿನ ಹೊರತಾಗಿಯೂ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.

ವಿಶ್ವ ಕ್ರಮಾಂಕದಲ್ಲಿ 74ನೇ ಸ್ಥಾನದಲ್ಲಿರುವ ಜಾರ್ಜಿಯಾ ಮೊದಲೆರಡು ಪಂದ್ಯಗಳ ಪೈಕಿ ಒಂದರಲ್ಲಿ ಡ್ರಾ ಸಾಧಿಸಿದ್ದರೆ, ಮತ್ತೊಂದರಲ್ಲಿ ಸೋಲು ಕಂಡಿತ್ತು. ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಒಟ್ಟು ನಾಲ್ಕು ಅಂಕ ಸಂಪಾದಿಸಿರುವ ತಂಡವು ಗುಂಪಿನಲ್ಲಿ ಮೂರನೇ ಸ್ಥಾನ ಪಡೆದು, ಪ್ರಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯಿತು.

ಪಂದ್ಯ ಆರಂಭವಾದ ಎರಡೇ ನಿಮಿಷದಲ್ಲಿ ಖ್ವಿಚಾ ಕ್ವಾರಾತ್‌ಸ್ಖೇಲಿಯಾ ಅವರು ಚೆಂಡನ್ನು ಗುರಿ ಸೇರಿಸಿ ಜಾರ್ಜಿಯಾಕ್ಕೆ ಆರಂಭದಲ್ಲೇ ಮುನ್ನಡೆ ಒದಗಿಸಿದರು. 57ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಜಾರ್ಜಸ್ ಮಿಕೌಟಾಡ್ಜೆ ಅವರು ಗೋಲಾಗಿ ಪರಿವರ್ತಿಸಿ ಜಾರ್ಜಿಯಾ ತಂಡದ ಮುನ್ನಡೆಯನ್ನು ಹೆಚ್ಚಿಸಿ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು.

‘ನಾವು ಇತಿಹಾಸ ನಿರ್ಮಿಸಿದ್ದೇವೆ. ಪೋರ್ಚುಗಲ್‌ ತಂಡವನ್ನು ಸೋಲಿಸುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ನಾವೂ ಬಲಿಷ್ಠ ಆಟಗಾರರ ತಂಡವನ್ನು ಹೊಂದಿದ್ದೇವೆ’ ಎಂದು ಕ್ವಾರಾತ್‌ಸ್ಖೇಲಿಯಾ ಪ್ರತಿಕ್ರಿಯಿಸಿದರು.

ಭಾನುವಾರ (ಜೂನ್‌ 30) ನಡೆಯುವ ಪ್ರಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜಾರ್ಜಿಯಾ ತಂಡವು, ಸ್ಪೇನ್‌ ತಂಡವನ್ನು ಎದುರಿಸಲಿದೆ. ಪೋರ್ಚುಗಲ್‌ ಜುಲೈ 2ರಂದು ಸ್ಲೊವೇನಿಯಾ ವಿರುದ್ಧ ಸೆಣಸಲಿದೆ.

ಟರ್ಕಿಗೆ ಗೆಲುವು: ಸಾಂಘಿಕ ಪ್ರದರ್ಶನ ನೀಡಿದ ಟರ್ಕಿ ತಂಡವು ‘ಎಫ್‌’ ಗುಂಪಿನ ಮತ್ತೊಂದು ಪ‍ಂದ್ಯದಲ್ಲಿ 2–1ರಿಂದ ಝೆಕ್‌ ರಿಪಬ್ಲಿಕ್‌ ತಂಡವನ್ನು ಮಣಿಸಿ, ಮುಂದಿನ ಘಟ್ಟಕ್ಕೆ ಅರ್ಹತೆಯನ್ನು ಪಡೆಯಿತು.

ಹಕನ್ ಕಲ್ಹಾನೋಗ್ಲು (51ನೇ ನಿಮಿಷ) ಮತ್ತು ಸೆಂಕ್ ಟೋಸುನ್ (90+4ನೇ ನಿಮಿಷ) ಅವರ ಟರ್ಕಿ ಪರವಾಗಿ ಗೋಲು ಗಳಿಸಿದರು. ಥಾಮಸ್ ಚೋರಿ (66ನೇ ನಿಮಿಷ) ಅವರು ಝೆಕ್‌ ಪರ ಏಕೈಕ ಗೋಲು ತಂದಿತ್ತರು. ‌

ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿದ ಟರ್ಕಿ ತಂಡವು 6 ಅಂಕಗಳೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಝೆಕ್‌ ತಂಡವು ಒಂದರಲ್ಲಿ ಡ್ರಾ ಸಾಧಿಸಿ, ಮತ್ತೆರಡರಲ್ಲಿ ಸೋಲು ಅನುಭವಿಸಿ ಒಂದು ಅಂಕ ಪಡೆದು ಟೂರ್ನಿಯಿಂದ ಹೊರಬಿತ್ತು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಟರ್ಕಿ ಜುಲೈ 3ರಂದು ಆಸ್ಟ್ರಿಯಾ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT