ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಗೆಲುವಿನ ಭರವಸೆ

ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಆತಿಥೇಯ ಯುಎಇಗೆ ಜಯ ಅನಿವಾರ್ಯ
Last Updated 9 ಜನವರಿ 2019, 19:45 IST
ಅಕ್ಷರ ಗಾತ್ರ

ಅಬು ಧಾಬಿ: ಮೊದಲ ಪಂದ್ಯದಲ್ಲಿ ಬಲಿಷ್ಠ ಥಾಯ್ಲೆಂಡ್ ಎದುರು ಭರ್ಜರಿ ಜಯ ಸಾಧಿಸಿದ ಭಾರತ ತಂಡ ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಆತಿಥೇಯ ಯುಎಇ ಎದುರು ಸೆಣಸಲಿದೆ.

ಟೂರ್ನಿಯ ಎರಡನೇ ದಿನ ನಡೆದಿದ್ದ ತನ್ನ ಮೊದಲ ಪಂದ್ಯದಲ್ಲಿ ಭಾರತ 4–1ರಿಂದ ಥಾಯ್ಲೆಂಡ್‌ ಎದುರು ಗೆದ್ದಿತ್ತು. ಉದ್ಘಾಟನಾ ಪಂದ್ಯದಲ್ಲಿ ಯುಎಇ ತಂಡ ಬಹರೇನ್ ಜೊತೆ 1–1ರ ಡ್ರಾ ಗಳಿಸಿತ್ತು. ಹೀಗಾಗಿ ತಂಡ ಗೆಲುವಿನ ಖಾತೆ ತೆರೆಯಲು ಗುರುವಾರ ಪ್ರಯತ್ನಿಸಲಿದೆ. ಭಾರತ ಗುರುವಾರದ ಪಂದ್ಯದಲ್ಲಿ ಗೆದ್ದರೆ ಕ್ವಾರ್ಟರ್ ಫೈನಲ್ ಹಾದಿ ಸುಗಮವಾಗಲಿದೆ.

ಥಾಯ್ಲೆಂಡ್ ಎದುರಿನ ಪಂದ್ಯದ ಮೊದಲಾರ್ಧ 1–1ರಿಂದ ಸಮ ಆಗಿತ್ತು. ಆದರೆ ದ್ವಿತೀಯಾರ್ಧದಲ್ಲಿ ಎದುರಾಳಿಗಳ ರಕ್ಷಣಾ ವಿಭಾಗವನ್ನು ಛಿದ್ರಗೊಳಿಸಿದ ಭಾರತ ಮೂರು ಗೋಲುಗಳನ್ನು ಗಳಿಸಿ ವಿಜಯ ಪತಾಕೆ ಹಾರಿಸಿತ್ತು.

‘ಯುವ ಆಟಗಾರರೇ ಹೆಚ್ಚು ಇರುವ ತಂಡ ನಮ್ಮದು. ಯುಎಇ ವಿಭಿನ್ನ ಸಾಮರ್ಥ್ಯ ಇರುವ ತಂಡ. ಆ ತಂಡದ ಶಕ್ತಿ ಮತ್ತು ದೌರ್ಬಲ್ಯದ ಅರಿವು ನಮಗಿದೆ. ಆದರೂ ಗುರುವಾರದ ಪಂದ್ಯದಲ್ಲಿ ನಮಗೆ ಅದು ಒಂದು ಎದುರಾಳಿಯಷ್ಟೇ’ ಎಂದು ಭಾರತದ ಕೋಚ್ ಸ್ಟೀಫನ್ ಕಾನ್‌ಸ್ಟಂಟೇನ್‌ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಗೋಲು ಗಳಿಸಲು ವಿಫಲರಾಗಿದ್ದ ಸುನಿಲ್ ಚೆಟ್ರಿ ಥಾಯ್ಲೆಂಡ್‌ ಎದುರು ಲಯಕ್ಕೆ ಮರಳಿದ್ದು ತಂಡದ ಭರವಸೆ ಹೆಚ್ಚಿಸಿದೆ. ಅನಿರುದ್ಧ ಥಾಪ ಮತ್ತು ಜೆಜೆ ಲಾಲ್‌ಫೆಕ್ಲುವಾ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಶಿಶ್‌ ಕುರುಣಿಯನ್‌ ಮೊದಲ ಪಂದ್ಯದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದರು.

ಭಾರಿ ಪೈಪೋಟಿ ನಿರೀಕ್ಷೆ: ಗುಂಪು ಹಂತದಲ್ಲಿ ಭಾರತಕ್ಕೆ ಕಠಿಣ ಸವಾಲೊಡ್ಡುವ ತಂಡ ಎಂದೇ ಯುಎಇಯನ್ನು ಗುರುತಿಸಲಾಗಿದೆ. ಆದ್ದರಿಂದ ಗುರುವಾರದ ಪೈಪೋಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಯುಎಇಯ ಬಲಿಷ್ಠ ಆಕ್ರಮಣ ವಿಭಾಗವನ್ನು ತಡೆಯುವ ಸವಾಲು ಭಾರತದ ರಕ್ಷಣಾ ವಿಭಾಗದ ಮೇಲೆ ಇದೆ. ಅಲಿ ಮಬೌತ್ ಮತ್ತು ಅಹಮ್ಮದ್ ಖಲೀಲ್ ಆ ತಂಡದ ಪ್ರಮುಖ ಅಸ್ತ್ರವೆನಿಸಿದ್ದಾರೆ. ಇವರನ್ನು ತಡೆಯುವ ಸವಾಲು ಸಂದೇಶ್ ಜಿಂಗಾನ ಹಾಗೂ ಅನಾಸ್ ಎಡತೋಡಿಕಾ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT