ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಯುಗದ ಸುಭದ್ರ ಕೋಟೆ ಕಟ್ಟಿದ್ದ ‘ಚುನಿ ಗೋಸ್ವಾಮಿ’

ಭಾರತ ಫುಟ್‌ಬಾಲ್ ತಂಡದ ನಾಯಕ; ಕ್ರಿಕೆಟ್‌ನಲ್ಲಿ ಬಂಗಾಳ ತಂಡದ ಸದಸ್ಯ
Last Updated 30 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಕೋಲ್ಕತ್ತ: ದೇಶದ ದಿಗ್ಗಜ ಫುಟ್‌ಬಾಲ್‌ ಆಟಗಾರರಾಗಿದ್ದ, ಚುನಿ ಗೋಸ್ವಾಮಿ (82) ಗುರುವಾರ ನಿಧನರಾದರು. ಏಷ್ಯನ್ ಗೇಮ್ಸ್‌ನ ಫುಟ್‌ಬಾಲ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡವನ್ನು ಅವರು ಮುನ್ನಡೆಸಿದ್ದರು.

ಕ್ರಿಕೆಟ್ ಆಟಗಾರ ಕೂಡ ಆಗಿದ್ದ ಚುನಿ ಅವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯಸ್ತಂಭನದಿಂದ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ.

1962ರ ಏಷ್ಯನ್ ಗೇಮ್ಸ್‌ನಲ್ಲಿ ಚುನಿ ಅವರು ಭಾರತ ತಂಡದ ನಾಯಕರಾಗಿದ್ದರು. ಅವರು ಬಂಗಾಳ ತಂಡಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್ ಕೂಡ ಆಡಿದ್ದಾರೆ. 1956ರಿಂದ 1964ರ ವರೆಗೆ ಭಾರತ ತಂಡದ ಪರ 50 ಫುಟ್‌ಬಾಲ್ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ 1962ರಿಂದ 1973ರ ವರೆಗಿನ ಅವಧಿಯಲ್ಲಿ 46 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ.

1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಆಡಿದ ಫುಟ್‌ಬಾಲ್ ತಂಡದಲ್ಲೂ ಗೋಸ್ವಾಮಿ ಆಡಿದ್ದರು. ಇಸ್ರೇಲ್‌ನಲ್ಲಿ 1964ರಲ್ಲಿ ನಡೆದ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ತಂಡದಲ್ಲೂ ಅವರ ಛಾಪು ಇತ್ತು.

ಸುವರ್ಣ ಯುಗದ ಆಟಗಾರ: ಭಾರತ ಫುಟ್‌ಬಾಲ್‌ನ ಸುವರ್ಣಯುಗ ಎಂದೇ ಕರೆಯಲಾಗುವ ಅವಧಿಯಲ್ಲಿ ಗೋಸ್ವಾಮಿ, ತುಳಸೀದಾಸ್ ಬಲರಾಮ್ ಮತ್ತು ಈಚೆಗೆ ನಿಧನರಾದ ಪಿ.ಕೆ.ಬ್ಯಾನರ್ಜಿ ಅವರು ತಂಡದ ಫಾರ್ವರ್ಡ್ ವಿಭಾಗದಲ್ಲಿಸುಭದ್ರ ಕೋಟೆ ಕಟ್ಟಿದ್ದರು. ಆಗ ಭಾರತವು ಏಷ್ಯಾ ಫುಟ್‌ಬಾಲ್‌ನ ಪ್ರಬಲ ತಂಡವಾಗಿತ್ತು.

ಅವಿಭಜಿತ ಬಂಗಾಳದ ಕಿಶೋರ್ ಗಂಜ್ ಜಿಲ್ಲೆಯಲ್ಲಿ ಜನಿಸಿದ ಚುನಿ ಗೋಸ್ವಾಮಿ ಅವರಿಗೆ ತಂದೆ–ತಾಯಿ ಇರಿಸಿದ ಹೆಸರು ಸುಬಿಮಲ್. ಆದರೆ ಚುನಿ ಗೋಸ್ವಾಮಿ ಎಂದೇ ಪ್ರಸಿದ್ಧರಾದರು. 1962ರಲ್ಲಿ ಏಷ್ಯಾದ ಅತ್ಯುತ್ತಮ ಸ್ಟ್ರೈಕರ್ ಪ್ರಶಸ್ತಿ ಅವರಿಗೆ ಒಲಿದಿತ್ತು. ಭಾರತ ಫುಟ್‌ಬಾಲ್‌ಗೆ ಸಲ್ಲಿಸಿದ ಅನುಪಮ ಸೇವೆಗೆ 1963ರಲ್ಲಿ ಅರ್ಜುನ ಮತ್ತು 1983ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.

ಜನವರಿಯಲ್ಲಿ 82ನೇ ಜನ್ಮದಿನದ ಸಂದರ್ಭದಲ್ಲಿ ಭಾರತ ಅಂಚೆ ಇಲಾಖೆ ಅವರ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿತ್ತು. ವೃತ್ತಿಜೀವನದಲ್ಲಿ ಮೋಹನ್ ಬಾಗನ್ ತಂಡವೊಂದರಲ್ಲೇ ಆಡಿದ್ದ ಅವರು 1968ರಲ್ಲಿ ನಿವೃತ್ತರಾಗಿದ್ದರು. 1960ರಿಂದ 1964ರ ವರೆಗೆ ಕ್ಲಬ್‌ನ ನಾಯಕನಾಗಿದ್ದರು. 2005ರಲ್ಲಿ ‘ಮೋಹನ್ ಬಾಗನ್ ರತ್ನ’ ಎನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT