ಸೋಮವಾರ, ನವೆಂಬರ್ 29, 2021
20 °C

ISL | ಡ್ರಾ ಪಂದ್ಯದಲ್ಲಿ ಕೇರಳ–ನಾರ್ತ್ ಈಸ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫತೋರ್ಡ: ಆಕ್ರಮಣಕಾರಿ ಆಟವಾಡಿದರೂ ಗೋಲು ಗಳಿಸಲು ವಿಫಲವಾದ ಕೇರಳ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ತಂಡಗಳ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು.

ಪಿಎನ್‌ಜಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಎರಡೂ ತಂಡಗಳು ಚೆಂಡಿನ ಮೇಲೆ ಆಧಿಪತ್ಯ ಸಾಧಿಸುವಲ್ಲಿ ಯಶಸ್ವಿಯಾದವು. ಕೇರಳ ಬ್ಲಾಸ್ಟರ್ಸ್ ಕೊಂಚ ಹೆಚ್ಚು ಆಕ್ರಮಣಕ್ಕೆ ಮುಂದಾಯಿತು. ಇದು ಈ ಬಾರಿಯ ಮೊದಲ ಗೋಲು ರಹಿತ ಡ್ರಾ ಪಂದ್ಯವಾಯಿತು.

ಗೋವಾ, ಜೆಎಫ್‌ಸಿ ಮುಖಾಮುಖಿ

ಬ್ಯಾಂಬೊಲಿಮ್‌ನಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡ ಜೆಮ್ಶೆಡ್‌‍ಪುರ ಎಫ್‌ಸಿಯನ್ನು ಎದುರಿಸಲಿದೆ. ಎಸ್‌ಸಿ ಈಸ್ಟ್‌ ಬೆಂಗಾಲ್ ಎದುರು ನಡೆದ ಮೊದಲ ಪಂದ್ಯವನ್ನು ಜೆಮ್ಶೆಡ್‌‍ಪುರ 1–1ರಲ್ಲಿ ಡ್ರಾ ಮಾಡಿಕೊಂಡಿತ್ತು.

ಮುಂಬೈ ಸಿಟಿ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಗೋವಾ 0–3ರಲ್ಲಿ ಸೋತಿತ್ತು. ಈ ಮೂಲಕ ಲೀಗ್ ಹಂತದಲ್ಲಿ ಸತತ 15ನೇ ಪಂದ್ಯದಲ್ಲಿ ಗೆಲ್ಲುವ ಕನಸು ಕಮರಿ ಹೋಗಿತ್ತು. ಈ ಸೋಲಿನಿಂದ ಕೋಚ್ ಜುವಾನ್ ಫೆರಾಂಡೊ ಅವರಿಗೂ ಹಿನ್ನಡೆಯಾಗಿದ್ದು ತಂಡವನ್ನು ಗೆಲುವಿನ ಲಯಕ್ಕೆ ಮರಳಿ ತರಲು ಪ್ರಯತ್ನಿಸಲಿದ್ದಾರೆ.

ಎರಡು ತಂಡಗಳು ಈ ವರೆಗೆ ಎಂಟು ಬಾರಿ ಸೆಣಸಿದ್ದು ಜೆಮ್ಶೆಡ್‌‍ಪುರ ಕೇವಲ ಎರಡು ಪಂದ್ಯಗಳಲ್ಲಿ ಗೆದ್ದಿದೆ.

‘ಒನ್‌ ಫುಟ್‌ಬಾಲ್’ ಜೊತೆ ಒಪ್ಪಂದ

ಬೆಂಗಳೂರು: ಐಎಸ್‌ಎಲ್‌ ಆಯೋಜಿಸುತ್ತಿರುವ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್‌ (ಎಫ್‌ಎಸ್‌ಡಿಎಲ್) ಜರ್ಮನಿಯ ಫುಟ್‌ಬಾಲ್ ಮಾಧ್ಯಮ ಕಂಪನಿ ‘ಒನ್‌ ಫುಟ್‌ಬಾಲ್’ ಜೊತೆ ಗುರುವಾರ ಒಪ್ಪಂದ ಮಾಡಿಕೊಂಡಿದೆ. ಇದರಿಂದ 200 ದೇಶಗಳಲ್ಲಿ ಐಎಸ್‌ಎಲ್ ‍ಪಂದ್ಯಗಳ ಪ್ರಸಾರಕ್ಕೆ ಅನುಕೂಲವಾಗಲಿದೆ.

ಎಲ್ಲ ಪಂದ್ಯಗಳ ಪ್ರಸಾರ ಮತ್ತು ಆಯ್ದ ಭಾಗಗಳ ಮರುಪ್ರಸಾರವನ್ನು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಒನ್‌ ಫುಟ್‌ಬಾಲ್ ಆ್ಯ‍ಪ್ ಮೂಲಕ ವೀಕ್ಷಿಸಬಹುದಾಗಿದೆ. ಡೆಸ್ಕ್ ಟಾಪ್ ಮತ್ತು ಒನ್‌ ಫುಟ್‌ಬಾಲ್‌ನ ವೆಬ್‌ಸೈಟ್‌ನಲ್ಲೂ ಪಂದ್ಯಗಳು ವೀಕ್ಷಣೆಗೆ ಲಭ್ಯವಿರುತ್ತವೆ ಎಂದು ಐಎಸ್‌ಎಲ್‌ ವಕ್ತಾರರು ತಿಳಿಸಿದ್ದಾರೆ. 

ಇ ಸ್ಪೋರ್ಟ್ಸ್‌ಗೆ ಮುಂಬೈ ಸಿಟಿ ತಂಡ

ಐಎಸ್‌ಎಲ್ ಹಾಲಿ ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿ ಫ್ರಾಂಚೈಸ್‌ ಇಸ್ಪೋರ್ಟ್ಸ್‌ಗೆ ಪ್ರವೇಶಿಸಿದೆ. ಫಿಫಾ ಜಾಗತಿಕ ಸೀರಿಸ್‌ಗೆ ಕ್ಲಬ್‌ ತನ್ನ ತಂಡವನ್ನು ಪ್ರಕಟಿಸಿದೆ. ಇದರೊಂದಿಗೆ ಈ ಮಾದರಿಯಲ್ಲಿ ಪಾಲ್ಗೊಳ್ಳುವ ದೇಶದ ಮೊದಲ ತಂಡ ಎಂದೆನಿಸಿಕೊಂಡಿದೆ. ಸಕ್ಷಮ್ ಸಕ್ಕಿ ರತನ್ ಮತ್ತು ಸಿದ್ಧ ಜನಸಿದ್ಧ್ ಎಫ್‌ಸಿ ಚಂದರಣದೊಂದಿಗೆ ಕ್ಲಬ್ ಒಪ್ಪಂದ ಮಾಡಿಕೊಂಡಿದ್ದು ಫಿಫಾ ಸರಣಿಯ 1ವಿ1 ಮತ್ತು 2ವಿ2 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು