ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್‌: ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣು

ಎರಡನೇ ಬಾರಿ ಫೈನಲ್‌ಗೇರಿರುವ ಬಿಎಫ್‌ಸಿ–ಎಫ್‌ಸಿಜಿ ತಂಡಗಳು
Last Updated 16 ಮಾರ್ಚ್ 2019, 20:11 IST
ಅಕ್ಷರ ಗಾತ್ರ

ಮುಂಬೈ: ಕಳೆದ ಬಾರಿ ತವರಿನಲ್ಲೇ ಪ್ರಶಸ್ತಿ ಕೈಚೆಲ್ಲಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮತ್ತು ಮೂರು ವರ್ಷಗಳ ಹಿಂದೆ ಪ್ರಶಸ್ತಿಯ ಸನಿಹದಲ್ಲಿ ಎಡವಿದ ಎಫ್‌ಸಿ ಗೋವಾ (ಎಫ್‌ಸಿಜಿ) ತಂಡಗಳು ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಭಾನುವಾರ ಕಣಕ್ಕೆ ಇಳಿಯಲಿವೆ.

ಇಂಡಿಯನ್ ಸೂಪರ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಸೆಣಸಲಿರುವ ಈ ಎರಡು ತಂಡಗಳು ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿವೆ. ಮುಂಬೈ ಫುಟ್‌ಬಾಲ್ ಅರೆನಾ, ಪ್ರಶಸ್ತಿ ಹಂತದ ಪಂದ್ಯಕ್ಕೆ ವೇದಿಕೆಯಾಗಲಿದೆ.

ಬಿಎಫ್‌ಸಿ ಮತ್ತು ಎಫ್‌ಸಿಜಿ ತಂಡಗಳು ಲೀಗ್ ಹಂತದಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿವೆ. ಎರಡೂ ತಂಡಗಳು ತಲಾ 10 ಪಂದ್ಯಗಳನ್ನು ಗೆದ್ದಿವೆ. ಬಿಎಫ್‌ಸಿ ಪಾಯಿಂಟ್ ಪಟ್ಟಿಯ ಮೊದಲ ಸ್ಥಾನಕ್ಕೇರಿದ್ದರೆ ಗೋವಾ ಎರಡನೇ ಸ್ಥಾನದಲ್ಲಿತ್ತು. ಎರಡು ಲೆಗ್‌ಗಳಲ್ಲಿ ನಡೆದ ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ಬಿಎಫ್‌ಸಿ ಸೋತಿದ್ದರೂ ಎರಡನೇ ಲೆಗ್‌ನಲ್ಲಿ ಎದುರಾಳಿಗಳ ವಿರುದ್ಧ ಭರ್ಜರಿ ಆಟವಾಡಿತ್ತು. ಗೋವಾ ಮೊದಲ ಲೆಗ್‌ನಲ್ಲಿ ಭಾರಿ ಅಂತರದಿಂದ ಗೆದ್ದಿದ್ದರೂ ಎರಡನೇ ಲೆಗ್‌ನಲ್ಲಿ ಎಡವಿತ್ತು.

ಹೀಗಾಗಿ ಗೆಲುವಿನ ಓಟ ಮುಂದುವರಿಸಿದ ಪ್ರಶಸ್ತಿಗೆ ಮುತ್ತಿಡಲು ಬಿಎಫ್‌ಸಿ ಶ್ರಮಿಸಲಿದೆ. ಗೋವಾ ಸೋಲು ಮರೆತು ಗೆಲುವನ್ನು ಒಲಿಸಿಕೊಂಡು ಟ್ರೋಫಿ ಎತ್ತಿ ಹಿಡಿಯಲು ಪ್ರಯತ್ನಿಸಲಿದೆ. ಗೋಲು ಗಳಿಕೆಯೇ ಗೋವಾ ತಂಡದ ಬಲ. ಟೂರ್ನಿಯಲ್ಲಿ ಈ ಬಾರಿ ಅತಿ ಹೆಚ್ಚು ಗೋಲು ಗಳಿಸಿದ ತಂಡ ಎಂಬ ಹೆಗ್ಗಳಿಕೆ ಈ ತಂಡದ ಪಾಲಾಗಿದೆ. ಬಿಎಫ್‌ಸಿ ಸಂಘಟಿತ ಹೋರಾಟಕ್ಕೆ ಹೆಸರಾಗಿದೆ.

ಹೀಗಾಗಿ ಫೈನಲ್‌ ಪಂದ್ಯ ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಸುನಿಲ್ ಚೆಟ್ರಿ, ಮಿಕು, ಉದಾಂತ ಸಿಂಗ್‌, ದಿಮಾಸ್ ಡೆಲ್ಗಾಡೊ, ಫ್ರಾನ್ಸಿಸ್ಕೊ ಹೆರ್ನಾಂಡಸ್‌, ಹರ್ಮನ್‌ಜೋತ್ ಖಾಬ್ರಾ, ರಾಹುಲ್ ಭೆಕೆ, ನಿಶು ಕುಮಾರ್ ಮುಂತಾದವರು ಬಿಎಫ್‌ಸಿಯ ಭರವಸೆ ಎನಿಸಿದ್ದಾರೆ.

ಗೋವಾ ತಂಡ ಕೂಡ ಯಾವುದೇ ಸವಾಲನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿ ಚಿನ್ನದ ಬೂಟ್‌ಗೆ ಅರ್ಹವಾಗಿರುವ ಫೆರಾನ್ ಕೊರೊಮಿನಾಸ್‌ ತಂಡದ ಆಕ್ರಮಣ ವಿಭಾಗದ ಬೆನ್ನೆಲುಬು. ಜಾಕಿಚಾಂದ್ ಸಿಂಗ್, ಮಂದಾರ್ ದೇಸಾಯಿ, ಎಜು ಬೇಡಿಯಾ ಮುಂತಾದವರ ಬಲ ಮಿಡ್‌ಫೀಲ್ಡ್‌ ವಿಭಾಗಕ್ಕೆ ಇದೆ. ಮೊರ್ತಡಾ ಫಾಲ್‌, ಸೆರಿಟಾನ್ ಫರ್ನಾಂಡಿಸ್‌ ಮೊದಲಾದವರ ‘ಗೋಡೆ’ಯನ್ನು ಕೆಡವಿ ಮುನ್ನುಗ್ಗುವ ಸವಾಲು ಚೆಟ್ರಿ ಬಳಗದ ಮುಂದೆ ಇದೆ.

ಪ್ರಮುಖ ಅಂಶಗಳು

* ಎರಡೂ ತಂಡಗಳಿಗೆ ಇದು ಎರಡನೇ ಫೈನಲ್‌. ಬಿಎಫ್‌ಸಿ ಕಳೆದ ಬಾರಿ ಚೆನ್ನೈಯಿನ್‌ ಎಫ್‌ಸಿ ವಿರುದ್ಧ 2–3ರಿಂದ ಸೋತಿತ್ತು. ಗೋವಾ 2015ರಲ್ಲಿ ಚೆನ್ನೈಯಿನ್ ಎದುರು 2–3ರಿಂದ ಸೋತಿತ್ತು.

* ಬಿಎಫ್‌ಸಿ ಒಮ್ಮೆ ಮಾತ್ರ ಗೋವಾ ವಿರುದ್ಧ ಸೋತಿದೆ. ಕೊರೊಮಿನಾಸ್‌ ಹ್ಯಾಟ್ರಿಕ್‌ ಬಲದಿಂದ ಗೋವಾ 4–3ರಿಂದ ಗೆದ್ದಿತ್ತು. ನಂತರ ಮೂರು ಪಂದ್ಯಗಳನ್ನು ಬಿಎಫ್‌ಸಿ ಗೆದ್ದಿದೆ.

* ಬಿಎಫ್‌ಸಿ ತಂಡ ಈ ಬಾರಿ ಕ್ರಾಸ್‌ಗಳಿಂದ ಒಟ್ಟು 12 ಗೋಲುಗಳನ್ನು ಗಳಿಸಿದ್ದರೆ ಗೋವಾ ಕ್ರಾಸ್‌ಗಳಿಂದ ಗೋಲು ಗಳಿಸಿದೆ.

* ಈ ಬಾರಿ ಲೀಗ್ ಹಂತದಲ್ಲಿ ಬಿಎಫ್‌ಸಿ ಸತತ ಆರು ಪಂದ್ಯಗಳನ್ನು ಗೆದ್ದಿದೆ. ಸತತ 11 ಪಂದ್ಯಗಳಲ್ಲಿ ಅಜೇಯವಾಗಿತ್ತು. ಕೇವಲ ಎರಡು ಪಂದ್ಯಗಳಲ್ಲಿ ಸತತ ಸೋಲು ಕಂಡಿದೆ.

* ಗೋವಾ ಸತತ ಮೂರು ಪಂದ್ಯಗಳನ್ನು ಗೆದ್ದಿದೆ. ಸತತ ಆರು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ. ಸತತ ಎರಡು ಪಂದ್ಯಗಳನ್ನು ಒಮ್ಮೆಯೂ ಸೋತಿಲ್ಲ.

***
ತಂಡದ ಆಟಗಾರರು ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ. ತಾಳ್ಮೆಯಿಂದ ಆಡಿ ಕನಸು ನನಸು ಮಾಡಿಕೊಳ್ಳುವಂತೆ ಅವರಿಗೆ ಹೇಳಿದ್ದೇನೆ.
-ಕಾರ್ಲ್ಸ್‌ ಕುದ್ರತ್‌, ಬಿಎಫ್‌ಸಿ ತಂಡದ ಕೋಚ್‌

*
ಎದುರಾಳಿಗಳ ವಿರುದ್ಧ ಹಿಂದೆ ನಡೆದ ಪಂದ್ಯಗಳ ಫಲಿತಾಂಶಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಫೈನಲ್‌ ಪಂದ್ಯದ ಮೇಲಷ್ಟೇ ಗಮನಹರಿಸಿದ್ದೇವೆ.
-ಸರ್ಜಿಯೊ ಲೋಬೆರಾ, ಗೋವಾ ಕೋಚ್‌

ಸಂಭಾವ್ಯ ಆಟಗಾರರು
ಬಿಎಫ್‌ಸಿ: ಫಾರ್ವರ್ಡ್‌:
ಮಿಕು, ಸುನಿಲ್ ಚೆಟ್ರಿ; ಮಿಡ್‌ಫೀಲ್ಡ್‌: ಫ್ರಾನ್ಸಿಸ್ಕೊ ಹರ್ನಾಂಡಸ್‌, ಉದಾಂತ ಸಿಂಗ್‌, ದಿಮಾಸ್ ಡೆಲ್ಡಾಡೊ, ಬರೇರ; ಡಿಫೆಂಡರ್ಸ್‌: ನಿಶುಕುಮಾರ್‌, ಜುವಾನನ್‌, ರಾಹುಲ್ ಭೆಕೆ, ಹರ್ಮನ್‌ಜೋತ್ ಖಾಬ್ರಾ; ಗೋಲ್‌ಕೀಪರ್‌: ಗುರುಪ್ರೀತ್ ಸಿಂಗ್ ಸಂಧು

ಎಫ್‌ಸಿ ಗೋವಾ: ಫಾರ್ವರ್ಡ್‌: ಕೊರೊಮಿನಾಸ್‌; ಮಿಡ್‌ಫೀಲ್ಡ್‌: ಬ್ರೆಂಡನ್‌, ಎಜು ಬೇಡಿಯಾ, ಜಾಕಿ ಚಾಂದ್ ಸಿಂಗ್‌, ಜಾಹೊ, ಲೆನಿ; ಡಿಫೆಂಡರ್ಸ್‌: ಮಂದಾರ್ ದೇಸಾಯಿ, ಫೆನಾ, ಫಾಲ್‌, ಸೆರಿಟಾನ್‌; ಗೋಲ್‌ಕೀಪರ್‌: ನವೀನ್‌.

ಪಂದ್ಯ ಆರಂಭ: ಸಂಜೆ 7.30
ಸ್ಥಳ: ಮುಂಬೈ ಫುಟ್‌ಬಾಲ್ ಅರೆನಾ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT