ಸೋಮವಾರ, ಜುಲೈ 4, 2022
21 °C
ದಾಖಲೆ ಕನಸಿನ ಮೊದಲ ಹೆಜ್ಜೆ

ಐಎಸ್‌ಎಲ್‌ ಫುಟ್‌ಬಾಲ್ ಟೂರ್ನಿ: ಬಿಎಫ್‌ಸಿಗೆ ನಾರ್ತ್‌ ಈಸ್ಟ್ ಯುನೈಟೆಡ್ ಎದುರಾಳಿ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಐದು ಆವೃತ್ತಿಗಳನ್ನು ದಾಟಿ ಬಂದಿರುವ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ (ಐಎಸ್‌ಎಲ್‌) ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ತಂಡ ಯಾವುದೂ ಇಲ್ಲ. ಎರಡು ವರ್ಷ ಪ್ರಶಸ್ತಿಗೆ ಮುತ್ತಿಕ್ಕಿದ ತಂಡ ಎಂಬ ಹೆಗ್ಗಳಿಕೆ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಪಾಲಾಗುವುದೇ...?

ಐಎಸ್‌ಎಲ್‌ ಆರನೇ ಆವೃತ್ತಿ ಆರಂಭಗೊಂಡಾಗ ಫುಟ್‌ಬಾಲ್ ಪ್ರಿಯರನ್ನು ಕುತೂಹಲಕ್ಕೆ ತಳ್ಳಿರುವ ಪ್ರಮುಖ ಪ್ರಶ್ನೆ ಇದು. ಪ್ರಶಸ್ತಿಯ ಕನಸು ಹೊತ್ತು ಕಣಕ್ಕೆ ಇಳಿಯಲಿರುವ ಬಿಎಫ್‌ಸಿ ಈ ಹಾದಿಯಲ್ಲಿ ಶುಭಾರಂಭ ಮಾಡುವ ಕಾತರದಲ್ಲಿದೆ. ಸೋಮವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯರು ನಾರ್ತ್ ಈಸ್ಟ್ ಯುನೈಟೆಡ್ ಎದುರು ಸೆಣಸಲಿದ್ದಾರೆ. ಎರಡು ವರ್ಷಗಳ ಹಿಂದೆ ಐಎಸ್‌ಎಲ್‌ಗೆ ಪದಾರ್ಪಣೆ ಮಾಡಿದ ಬಿಎಫ್‌ಸಿ ಮೊದಲ ವರ್ಷ ಫೈನಲ್ ಪ್ರವೇಶಿಸಿದ್ದರೆ ನಂತರದ ವರ್ಷ ಪ್ರಶಸ್ತಿ ಎತ್ತಿಹಿಡಿದಿತ್ತು.

ಮೊದಲ ಆವೃತ್ತಿಯಿಂದಲೇ ಆಡುತ್ತಿರುವ ನಾರ್ತ್ ಈಸ್ಟ್ ಯುನೈಟೆಡ್ ಕಳೆದ ಬಾರಿ ಚೊಚ್ಚಲ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ 3–0ಯಿಂದ ಸೋಲಿಸಿ ತಂಡದ ಕನಸನ್ನು ಬಿಎಫ್‌ಸಿ ನುಚ್ಚು ನೂರು ಮಾಡಿತ್ತು. ಇದೇ ಅಂಗಣದಲ್ಲಿ ಮತ್ತೆ ಬಿಎಫ್‌ಸಿಯನ್ನು ಎದುರಿಸಲಿರುವ ನಾರ್ತ್ ಈಸ್ಟ್ ಯುನೈಟೆಡ್ ಪ್ರತೀಕಾರಕ್ಕಾಗಿ ಸೆಣಸಲಿದೆ.

ಮಿಕು ಮತ್ತು ಸಿಸ್ಕೊ ಹೆರ್ನಾಂಡಸ್ ಅವರನ್ನು ಕೈಬಿಟ್ಟಿರುವ ಬಿಎಫ್‌ಸಿ ಫಾರ್ವರ್ಡ್ ಆಟಗಾರ ಆಶಿಕ್ ಕುರುಣಿಯನ್‌ ಮತ್ತು ಮಿಡ್‌ಫೀಲ್ಡರ್‌ಗಳಾದ ರಾಫೆಲ್‌ ಆಗಸ್ಟೊ ಮ್ಯಾನ್ಯುಯೆಲ್ ಒನ್ವು ಅವರನ್ನು ತಂಡಕ್ಕೆ ಕರೆಸಿಕೊಂಡಿದೆ. ಹ್ಯೂಗೆನ್ಸನ್ ಲಿಂಗ್ಡೊ ತಂಡಕ್ಕೆ ಮರಳಿದ್ದಾರೆ. ಆದರೆ ಬಲಿಷ್ಠ ತಂಡದ ಎದುರಿನ ಮೊದಲ ಪಂದ್ಯದಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡಲು ಕೋಚ್ ಚಾರ್ಲ್ಸ್‌ ಕ್ವದ್ರತ್ ಮುಂದಾಗಲಾರರು ಎಂಬುದು ಫುಟ್‌ಬಾಲ್ ಪಂಡಿತರ ಲೆಕ್ಕಾಚಾರ. ಹೀಗಾಗಿ ಆಶಿಕ್ ಮತ್ತು ಲಿಂಗ್ಡೊ ಬೆಂಚು ಕಾಯಬೇಕಾಗಬಹುದು. ಮಿಕು ಸ್ಥಾನದಲ್ಲಿ ಮ್ಯಾನ್ಯುಯೆಲ್ ಒನ್ವು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. 

ರಾಬರ್ಟ್ ಜಾರ್ನಿಗೆ ಸವಾಲು: ನಾರ್ಟ್ ಈಸ್ಟ್ ಯುನೈಟೆಡ್ ತಂಡ ಹೊಸ ಕೋಚ್ ರಾಬರ್ಟ್ ಜಾರ್ನಿ ಗರಡಿಯಲ್ಲಿ ಅಭ್ಯಾಸ ಮಾಡಿ ಇಲ್ಲಿಗೆ ಬಂದಿದೆ. ಮೊದಲ ಪಂದ್ಯದಲ್ಲಿ ತಂಡವನ್ನು ಗೆಲುವಿನ ಹಾದಿಯಲ್ಲಿ ನಡೆಸುವ ಸವಾಲು ರಾಬರ್ಟ್ ಹೆಗಲ ಮೇಲಿದೆ. ಮಿಡ್‌ಫೀಲ್ಡರ್ ಜೊಸೆ ಲ್ಯೂಡೊ ನೇತೃತ್ವದ ತಂಡ ಫಾರ್ವರ್ಡ್ ವಿಭಾಗದಲ್ಲಿ ಅಸಮೊ ಗ್ಯಾನ್ ಅವರನ್ನು ನೆಚ್ಚಿಕೊಂಡಿದೆ. ಬಿಎಫ್‌ಸಿ ನಾಯಕ ಸುನಿಲ್ ಚೆಟ್ರಿ ಅವರನ್ನು ನಿಯಂತ್ರಿಸುವುದು ನಾರ್ತ್ ಈಸ್ಟ್‌ನ ಮಿಡ್‌ಫೀಲ್ಡ್ ಮತ್ತು ಡಿಫೆಂಡಿಂಗ್ ವಿಭಾಗಕ್ಕೆ ದೊಡ್ಡ ಸವಾಲು. ಗೋಲ್‌ ಕೀಪರ್ ಗುರುಪ್ರೀತ್ ಸಿಂಗ್ ಸಂಧು, ಡಿಫೆಂಡರ್‌ಗಳಾದ ನಿಶುಕುಮಾರ್‌ ಹರ್ಮನ್‌ಜ್ಯೋತ್ ಖಾಬ್ರ, ರಾಹುಲ್ ಭೆಕೆ, ಆಗಸ್ಟೊ ಮುಂತಾದವರನ್ನು ವಂಚಿಸಿ ಗೋಲು ಗಳಿಸುವುದೂ ನಾರ್ತ್ ಈಸ್ಟ್‌ಗೆ ಸುಲಭ ಸಾಧ್ಯವಾಗದು.

ಆರಂಭ: ಸಂಜೆ 7.30

ಸ್ಥಳ: ಕಂಠೀರವ ಕ್ರೀಡಾಂಗಣ, ಬೆಂಗಳೂರು

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಉಭಯ ತಂಡಗಳ ಬಲಾಬಲ

ತಂಡ; ಪಂದ್ಯ; ಜಯ; ಡ್ರಾ; ಸೋಲು

ಬಿಎಫ್‌ಸಿ; 42; 26; 6; 10

ನಾರ್ತ್‌ ಈಸ್ಟ್‌; 80; 25; 21; 34

ಕಳೆದ ವರ್ಷ ತಂಡಗಳ ಬಲಾಬಲ

ತಂಡ; ಪಂದ್ಯ; ಜಯ; ಡ್ರಾ; ಸೋಲು

ಬಿಎಫ್‌ಸಿ: 21; 12; 4; 5

ನಾರ್ತ್‌ ಈಸ್ಟ್‌: 20; 8; 8; 4

ಮುಖಾಮುಖಿ ಫಲಿತಾಂಶ

6; ಪಂದ್ಯ; 6

4; ಜಯ; 1

1; ಡ್ರಾ; 1

10; ಗೋಲು; 5

ಸುನಿಲ್ ಚೆಟ್ರಿ

ದೇಶ ಭಾರತ

ವಯಸ್ಸು 35

ಜೆರ್ಸಿ ಸಂಖ್ಯೆ 11

ಆಡುವ ಸ್ಥಾನ ಫಾರ್ವರ್ಡ್‌

ಪಂದ್ಯಗಳು 19

ನಿಮಿಷಗಳು 1685

ಗೋಲು 9

ಗೋಲು ಯಶಸ್ಸು 18./.

ಟ್ಯಾಕಲ್‌ಗಳು 33

ಜೊಸೆ ಲ್ಯೂಡೊ

ದೇಶ ಕೊಲಂಬಿಯಾ

ವಯಸ್ಸು 25

ಜೆರ್ಸಿ ಸಂಖ್ಯೆ 6

ಆಡುವ ಸ್ಥಾನ ಮಿಡ್‌ಫೀಲ್ಡ್‌

ಪಂದ್ಯಗಳು 19

ನಿಮಿಷಗಳು 1669

ಗೋಲು 0

ಪಾಸಿಂಗ್ ಯಶಸ್ಸು 85.33./.

ಟ್ಯಾಕಲ್‌ಗಳು 41

ಕಣಕ್ಕೆ ಇಳಿಯಲಿರುವ ಸಂಭಾವ್ಯ ಆಟಗಾರರು

ಬಿಎಫ್‌ಸಿ: ಗುರುಪ್ರೀತ್ ಸಿಂಗ್ ಸಂಧು (ಗೋಲ್ ಕೀಪರ್), ರಾಹುಲ್ ಭೆಕೆ, ಆಲ್ಬರ್ಟ್ ಸೆರಾನ್, ಜುವಾನನ್, ನಿಶು ಕುಮಾರ್, ದಿಮಾಸ್ ಡೆಲ್ಗಾಡೊ, ಹರ್ಮನ್‌ಜ್ಯೋತ್ ಖಾಬ್ರ, ಉದಾಂತ ಸಿಂಗ್‌, ರಾಫೆಲ್ ಆಗಸ್ಟೊ, ಸುನಿಲ್ ಚೆಟ್ರಿ (ನಾಯಕ), ಮ್ಯಾನ್ಯುಯೆಲ್ ಒನ್ವು

ನಾರ್ತ್ ಈಸ್ಟ್ ಯುನೈಟೆಡ್‌: ಪವನ್ ಕುಮಾರ್ (ಗೋಲ್ ಕೀಪರ್), ಪ್ರೊವಾತ್ ಲಾಕ್ರ, ಕಾಯ್ ಹಿರಿಂಗ್ಸ್‌, ಮಿಸ್ಲಾವ್ ಕೊಮೊರ್‌ಸ್ಕಿ, ಶೌವಿಕ್ ಘೋಷ್, ಜೊಸೆ ಲ್ಯೂಡೊ (ನಾಯಕ), ಮಿಲನ್ ಸಿಂಗ್‌, ರೆಡೀಮ್ ತ್ಲಾಂಗ್‌, ಪನಗೊಟಿಸ್ ಟ್ರಿಯಾಡಿಸ್, ಲಾಲ್‌ತ್ವತಾಂಗ ಖ್ವಾಲ್‌ರಿಂಗ್‌, ಅಸಮೊಹ್ ಗ್ಯಾನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು