ಬುಧವಾರ, ಆಗಸ್ಟ್ 4, 2021
28 °C

ಮಿಲಾನ್‌ಗೆ ಮಣಿದ ಯುವೆಂಟಸ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಮಿಲಾನ್‌: ಆರಂಭದ ಮುನ್ನಡೆಯನ್ನು ಉಳಿಸಿಕೊಳ್ಳಲಾಗದ ಯುವೆಂಟಸ್‌ ತಂಡ ಸೀರಿ ಎ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 2–4ರಿಂದ ಎಸಿ ಮಿಲಾನ್‌ ತಂಡದ ಎದುರು ಮಣಿಯಿತು. ಇದರೊಂದಿಗೆ ಸತತ ಒಂಬತ್ತನೇ ಬಾರಿ ಟ್ರೋಫಿ ಗೆಲ್ಲಲು ಮಹತ್ವದ ಹೆಜ್ಜೆ ಇಡಲು ಇದ್ದ ಅವಕಾಶವನ್ನು ಕೈಚೆಲ್ಲಿತು. ಮಂಗಳವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಎರಡು ಗೋಲುಗಳ ಹಿನ್ನಡೆಯಿಂದ ಪುಟಿದೆದ್ದ ಮಿಲಾನ್‌ ಅಚ್ಚರಿಯ ಜಯ ತನ್ನದಾಗಿಸಿಕೊಂಡಿತು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ, ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಲಾಜಿಯೊ ತಂಡ ಲೆಚ್ಚೆ ಎದುರು 1–2ರಿಂದ ಸೋತಿತ್ತು. ಹೀಗಾಗಿ ಮಿಲಾನ್‌ ಎದುರು ಜಯಿಸಿದ್ದರೆ ಯುವೆಂಟಸ್‌ ತಂಡಕ್ಕೆ 10 ಪಾಯಿಂಟ್‌ಗಳ ಮುನ್ನಡೆ ಸಿಗುತ್ತಿತ್ತು.

ತೀವ್ರ ಪೈಪೋಟಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಯುವೆಂಟಸ್‌ ತಂಡದ ಆ್ಯಡ್ರಿಯನ್‌ ರಾಬರ್ಟ್‌ 47ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಆರು ನಿಮಿಷಗಳ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಆದರೆ ಐದು ನಿಮಿಷಗಳ ಅಂತರದಲ್ಲಿ ಮಿಲಾನ್‌ ತಂಡವು ಪಂದ್ಯವನ್ನು ಸಂಪೂರ್ಣ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಜ್ಲಾಟನ್‌ ಇಬ್ರಾಹಿಮೊವಿಚ್‌ ಅವರು ಪೆನಾಲ್ಟಿ ಅವಕಾಶದಲ್ಲಿ ಮೊದಲ ಗೋಲು (62ನೇ ನಿಮಿಷ) ದಾಖಲಿಸಿದರು. ಫ್ರಾಂಕ್‌ ಕೆಸ್ಸಿ (66ನೇ ನಿಮಿಷ) ಹಾಗೂ ಬದಲಿ ಆಟಗಾರ ರಫೆಲ್‌ ಲೆವೊ (67ನೇ ನಿಮಿಷ) ಸತತ ಯಶಸ್ಸು ಕಂಡು ಮುನ್ನಡೆ ತಂದುಕೊಟ್ಟರು. 

ಹತ್ತು ನಿಮಿಷಗಳ ಬಳಿಕ ಆ್ಯಂಟೆ ರಾಬಿಕ್‌ ಮತ್ತೊಂದು ಗೋಲು ಹೊಡೆದು ಮಿಲಾನ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು