ಶುಕ್ರವಾರ, ಡಿಸೆಂಬರ್ 2, 2022
20 °C

FIFA world Cup 2022 Qatar: ಆಹಾ.. ಕಾಲ್ಚೆಂಡಿನ ಮಾಯೆ!

ಮಹಮ್ಮದ್‌ ನೂಮಾನ್ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್‌ ಪ್ರೇಮಿಗಳ ಮನಸ್ಸು ಇನ್ನೊಂದು ತಿಂಗಳು ಚೆಂಡಿನ ಸುತ್ತಲೇ ಗಿರಕಿ ಹೊಡೆಯಲಿದೆ. ಕತಾರ್‌ನ  ರಾಜಧಾನಿ ದೋಹಾದ ಎಂಟು ಕ್ರೀಡಾಂಗಣಗಳ ಹಸಿರು ಹಾಸಿನಲ್ಲಿ ಮೂಡಿ ಬರಲಿರುವ ಕಾ‌ಲ್ಚೆಂಡಿನಾಟದ ಸೊಬಗು ಸವಿಯಲು ಇಡೀ ಜಗತ್ತು ಕಾತರವಾಗಿದೆ.

****

ಜಗತ್ತಿನ ಜನಪ್ರಿಯ ಕ್ರೀಡೆಯ ಅತಿದೊಡ್ಡ ಹಬ್ಬದ ಆತಿಥ್ಯಕ್ಕೆ ಅರಬ್‌ ನಾಡಿನ ಪುಟ್ಟ ರಾಷ್ಟ್ರ ಕತಾರ್‌ ಸಜ್ಜಾಗಿದೆ. ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಬರುವ ಫಿಫಾ ವಿಶ್ವಕಪ್‌ ಟೂರ್ನಿ, ಫುಟ್‌ಬಾಲ್‌ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ವಿವಿಧ ದೇಶಗಳ ಖ್ಯಾತ ತಾರೆಯರು ಕ್ಲಬ್‌ ಫುಟ್‌ಬಾಲ್‌ಗೆ ಅಲ್ಪ ವಿರಾಮವನ್ನಿತ್ತು ಕತಾರ್‌ನ ದೋಹಾಕ್ಕೆ ಬಂದಿದ್ದಾರೆ. ನ.20 ರಿಂದ ಡಿ.18ರ ವರೆಗೆ ನಡೆಯಲಿರುವ ಟೂರ್ನಿಯು ಫಿಫಾ ವಿಶ್ವಕಪ್‌ನ 22ನೇ ಟೂರ್ನಿ ಆಗಿದೆ.

ಚೊಚ್ಚಲ ವಿಶ್ವಕಪ್‌ 1930ರಲ್ಲಿ ನಡೆದಿತ್ತು. ಎರಡನೇ ವಿಶ್ವಯುದ್ಧದ ಕಾರಣ 1942 ಮತ್ತು 1946ರ ಟೂರ್ನಿಗಳನ್ನು ಹೊರತುಪಡಿಸಿ, ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಕಾಲ್ಚೆಂಡಿನಾಟದ ಉತ್ಸವ ನಡೆಯುತ್ತಾ ಬಂದಿದೆ. ಪ್ರತಿಷ್ಠಿತ ಟೂರ್ನಿ ಆಯೋಜಿಸುತ್ತಿರುವ ಏಷ್ಯಾದ ಮೂರನೇ ರಾಷ್ಟ್ರ ಕತಾರ್‌. 2002ರ ಟೂರ್ನಿ ಜಪಾನ್‌ ಮತ್ತು ದಕ್ಷಿಣ ಕೊರಿಯಾದ ಜಂಟಿ ಆತಿಥ್ಯದಲ್ಲಿ ನಡೆದಿತ್ತು.

ಒಲಿಂಪಿಕ್ಸ್‌ನಂತೆ ಫಿಫಾ ಟೂರ್ನಿ ಕೂಡಾ ಒಂದು ಜಾಗತಿಕ ಉತ್ಸವ. ಅಲ್ಲಿ 32 ತಂಡಗಳು ಪೈಪೋಟಿ ನಡೆಸುತ್ತವೆಯಾದರೂ, ಅರ್ಹತಾ ಹಂತದಲ್ಲಿ ಫಿಫಾದ ಸದಸ್ಯತ್ವ ಹೊಂದಿರುವ ಎಲ್ಲ ರಾಷ್ಟ್ರಗಳಿಗೂ ಪಾಲ್ಗೊಳ್ಳುವ ಅವಕಾಶವಿರುತ್ತದೆ. ಇದೇ ಕಾರಣದಿಂದ ಫಿಫಾ ವಿಶ್ವಕಪ್‌, ಅತ್ಯಧಿಕ ಮಂದಿ ವೀಕ್ಷಿಸುವ ಟೂರ್ನಿ ಎನಿಸಿಕೊಂಡಿದೆ.

ಒಂಬತ್ತು ದಶಕಗಳ ಇತಿಹಾಸ ಹೊಂದಿರುವ ಟೂರ್ನಿ, ಫುಟ್‌ಬಾಲ್‌ ಪ್ರೇಮಿಗಳು ಮತ್ತೆ ಮತ್ತೆ ನೆನಪಿಸಿ ಸಂಭ್ರಮಪಡುವ ಹಲವು ಘಟನೆಗಳನ್ನು ಒಡಲಲ್ಲಿ ತುಂಬಿಕೊಂಡಿದೆ. ದಿಗ್ಗಜ ಆಟಗಾರ ಅರ್ಜೆಂಟೀನಾದ ಡೀಗೊ ಮರಡೋನಾ 1986ರ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗಳಿಸಿದ ಗೋಲನ್ನು ನೆನೆದು ಪುಳಕಗೊಳ್ಳುವವರು ಈಗಲೂ ಇದ್ದಾರೆ. ಸಾಕಷ್ಟು ದೂರದಿಂದ ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ತಂಡದ ಐವರು ಆಟಗಾರರನ್ನು ತಪ್ಪಿಸಿ ಅವರು ಗಳಿಸಿದ ಗೋಲು ‘ಶತಮಾನದ ಗೋಲು’ ಎಂದೇ ಪ್ರಸಿದ್ಧಿ ಹೊಂದಿದೆ. ಬ್ರೆಜಿಲ್‌ನ ಪೆಲೆಯ ‘ಮಾಂತ್ರಿಕ’ ಕಾಲುಗಳಿಂದ ಬಂದ ಗೋಲುಗಳನ್ನು ಮರೆಯಲು ಸಾಧ್ಯವೇ?

ಪ್ರತೀ ಟೂರ್ನಿಯೂ ಹೊಸ ತಾರೆಯರನ್ನು ಜಗತ್ತಿಗೆ ಪರಿಚಯಿಸಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ಸ್ಟಾರ್‌ ಆಟಗಾರರು ಮುಗ್ಗರಿಸಿದ ಉದಾಹರಣೆಗಳೂ ಇವೆ. ದುರ್ಬಲ ತಂಡಗಳು, ಬಲಿಷ್ಠ ತಂಡಗಳನ್ನು ಮಣಿಸಿವೆ. 1990ರ ವಿಶ್ವಕಪ್‌ನಲ್ಲಿ ಕ್ಯಾಮರೂನ್‌ ತಂಡ ಅರ್ಜೆಂಟೀನಾ ವಿರುದ್ಧ ಗೆದ್ದದ್ದು, 2002ರ ಟೂರ್ನಿಯಲ್ಲಿ ಸೆನೆಗಲ್‌, ಫ್ರಾನ್ಸ್‌ಗೆ ಆಘಾತ ನೀಡಿದ್ದು ಅಚ್ಚರಿಯ ಫಲಿತಾಂಶಗಳ ಕೆಲವು ಸ್ಯಾಂಪಲ್‌ ಮಾತ್ರ. ಈ ಬಾರಿಯೂ ಅಂತಹ ಅಚ್ಚರಿಗಳನ್ನು ನಿರೀಕ್ಷಿಸಬಹುದು.

ದೇಶ, ಜನಾಂಗಗಳ ಗಡಿಯನ್ನು ಮೀರಿ ಇಡೀ ಜಗತ್ತು ಒಂದು ಎಂಬ ಭಾವನೆ ಮೂಡಿಸುವ ಶಕ್ತಿ ಫಿಫಾ ವಿಶ್ವಕಪ್‌ಗೆ ಇದೆ. ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ, ಬ್ರೆಜಿಲ್‌ನ ನೇಮರ್‌, ಫ್ರಾನ್ಸ್‌ನ ಕರೀಂ ಬೆಂಜೆಮಾ ಅವರ ಅಪ್ಪಟ ಅಭಿಮಾನಿಗಳು ಎಲ್ಲ ದೇಶಗಳಲ್ಲೂ ಇದ್ದಾರೆ. ಗೋಲು ಗಳಿಸುವ ಅವಕಾಶ ಕಳೆದುಕೊಂಡು ಮೆಸ್ಸಿ, ತಲೆ ಮೇಲೆ ಕೈಯಿಟ್ಟಾಗ ಕೇರಳ, ಪಶ್ಚಿಮ ಬಂಗಾಳದಲ್ಲಿ ಟಿ.ವಿ ಮುಂದೆ ಕುಳಿತು ಪಂದ್ಯ ವೀಕ್ಷಿಸುವ ಸಾವಿರಾರು ಮಂದಿ ತಮಗರಿವಿಲ್ಲದೆಯೇ ತಲೆ ಮೇಲೆ ಕೈಯಿಡುತ್ತಾರೆ. ನೇಮರ್‌ ಗೋಲು ಗಳಿಸಿ ಸಂಭ್ರಮಿಸುವಾಗ ಕೇರಳದ ಹಲವು ಮನೆಗಳಲ್ಲಿ ಸಂಭ್ರಮ ನೆಲೆಸುತ್ತದೆ. ಅದು ಫುಟ್‌ಬಾಲ್‌ ಕ್ರೀಡೆಯ ವಿಶೇಷ, ಮಾಂತ್ರಿಕ ಶಕ್ತಿ.

‘ಫೇವರಿಟ್‌’ಗಳ ದೊಡ್ಡ ಪಟ್ಟಿ: ಪ್ರತಿ ವಿಶ್ವಕಪ್‌ ಬರುವಾಗಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿ ಸಿದ್ಧವಾಗುತ್ತದೆ. ಬ್ರೆಜಿಲ್‌, ಅರ್ಜೆಂಟೀನಾ, ಜರ್ಮನಿ, ಫ್ರಾನ್ಸ್‌, ಇಟಲಿ... ಹೀಗೆ ಅಭಿಮಾನಿಗಳು ಒಂದೊಂದು ತಂಡದ ಮೇಲೆ ಬೆಟ್‌ ಕಟ್ಟಿದ್ದಾರೆ.

ದಾಖಲೆಯ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟು ಬ್ರೆಜಿಲ್‌ ತಂಡ ದೋಹಾಕ್ಕೆ ಬಂದಿದೆ. ಸ್ಟಾರ್‌ ಸ್ಟ್ರೈಕರ್‌ ನೇಮರ್‌ ಮತ್ತು ಯುವ ಪ್ರತಿಭೆ ವಿನೀಸಿಯಸ್‌ ಜೂನಿಯರ್‌ ಮೇಲೆ ಭರವಸೆ ಇಡಲಾಗಿದೆ. 20 ವರ್ಷಗಳ ಪ್ರಶಸ್ತಿಯ ಬರ ನೀಗಿಸುವುದು ಬ್ರೆಜಿಲ್‌ ತಂಡದ ಗುರಿ. ದಕ್ಷಿಣ ಅಮೆರಿಕದ ಈ ತಂಡ 2002ರಲ್ಲಿ ಕೊನೆಯದಾಗಿ ಚಾಂಪಿಯನ್‌ ಅಗಿತ್ತು. 2014 ಮತ್ತು 2018 ರಲ್ಲಿ ನೇಮರ್‌ ಅವರಿಗೆ ತಂಡವನ್ನು ಟ್ರೋಫಿಯತ್ತ ಮುನ್ನಡೆಸಲು ಆಗಿರಲಿಲ್ಲ. ಈ ಬಾರಿ ಅವರ ವಿಶ್ವಕಪ್‌ ಕನಸು ಕೈಗೂಡಲಿದೆಯೇ ಎಂಬುದನ್ನು ನೋಡಬೇಕು.

ನಾಲ್ಕು ಬಾರಿಯ ಚಾಂಪಿಯನ್‌ ಜರ್ಮನಿ, ಇಂಗ್ಲೆಂಡ್, ಸ್ಪೇನ್ ತಂಡಗಳೂ ಬಲಿಷ್ಠವಾಗಿವೆ. ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡದ ನೊಗವನ್ನು ಕೈಲಿಯಾನ್‌ ಎಂಬಾಪೆ ಮತ್ತು ಕರೀಂ ಬೆಂಜೆಮಾ ಹೊರಲಿದ್ದಾರೆ. ವಿಶ್ವದ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ನೀಡುವ ಪ್ರತಿಷ್ಠಿತ ‘ಬ್ಯಾಲನ್‌ ಡಿಓರ್‌’ ಪ್ರಶಸ್ತಿಯನ್ನು ಗೆದ್ದಿರುವ ಬೆಂಜೆಮಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

ಈ ಋತುವಿನಲ್ಲಿ ರಿಯಲ್‌ ಮ್ಯಾಡ್ರಿಡ್‌ಗೆ ಹಲವಾರು ಗೆಲುವು ತಂದುಕೊಟ್ಟಿದ್ದಾರೆ.

ಅರ್ಜೆಂಟೀನಾ ತಂಡದ ಎಲ್ಲ ನಿರೀಕ್ಷೆಯ ಭಾರ ಲಯೊನೆಲ್‌ ಮೆಸ್ಸಿ ಎಂಬ ತಾರೆಯ ಕಾಲುಗಳಲ್ಲಿ ಅಡಗಿದೆ. ಫುಟ್‌ಬಾಲ್ ದಂತಕತೆ ಡೀಗೊ ಮರಡೋನಾ ಅವರ ಅದ್ಭುತ ಅಟದ ಬಲದಿಂದ ಅರ್ಜೆಂಟೀನಾ 1986 ರಲ್ಲಿ ಕೊನೆಯದಾಗಿ ಚಾಂಪಿಯನ್‌ ಆಗಿತ್ತು. ಮರಡೋನಾ ಅಂದು ಮಾಡಿದ್ದ ಚಮತ್ಕಾರವನ್ನು ದೋಹಾದಲ್ಲಿ ಮೆಸ್ಸಿ ಮಾಡುವರೇ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಕ್ಲಬ್‌ ಫುಟ್‌ಬಾಲ್‌ನಲ್ಲಿ ಬಹುತೇಕ ಎಲ್ಲ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ತಮ್ಮ ದೇಶಕ್ಕೆ ವಿಶ್ವಕಪ್ ಗೆದ್ದುಕೊಡಲು ಆಗಿಲ್ಲ. 37 ವರ್ಷದ ಅವರಿಗೆ ಇದು ಬಹುತೇಕ ಕೊನೆಯ ಟೂರ್ನಿ. ಅಂತಿಮ ಅವಕಾಶದಲ್ಲಿ ಅವರು ಶಕ್ತಿಮೀರಿ ಪ್ರಯತ್ನಿಸಲಿದ್ದಾರೆ. ‘ಫ್ರಾನ್ಸ್‌, ಸ್ಪೇನ್‌, ಅರ್ಜೆಂಟೀನಾ, ಜರ್ಮನಿ ಮತ್ತು ಬ್ರೆಜಿಲ್‌ನಂತಹ ತಂಡಗಳ ಜತೆ ಸೆಣಸಾಡಿ ವಿಶ್ವಕಪ್‌ ಗೆಲ್ಲುವುದು ಸುಲಭವಲ್ಲ. ಆದರೆ ನಾವು ಭರವಸೆ ಕೈಬಿಟ್ಟಿಲ್ಲ’ ಎಂದು ರೊನಾಲ್ಡೊ ಹೇಳಿದ್ದಾರೆ.

ಆಫ್ರಿಕಾ ಖಂಡದ ಘಾನಾ, ಸೆನೆಗಲ್‌, ಕ್ಯಾಮರೂನ್‌ ತಂಡಗಳು ಪ್ರಶಸ್ತಿ ಗೆಲ್ಲುವ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ. ಆದರೂ ಅಚ್ಚರಿಯ ಫಲಿತಾಂಶ ನೀಡಬಲ್ಲ ಸಾಮರ್ಥ್ಯವನ್ನಂತೂ ಹೊಂದಿವೆ.

ವಿವಾದಗಳ ಸದ್ದು: ಅರಬರ ನಾಡಿನಲ್ಲಿ ಮೊದಲ ಬಾರಿ ನಡೆಯುತ್ತಿರುವ ವಿಶ್ವಕಪ್‌, ವಿವಾದಗಳಿಂದ ಹೊರತಾಗಿಲ್ಲ. ಮಾನವ ಹಕ್ಕುಗಳ ಉ‌ಲ್ಲಂಘನೆ, ವಿದೇಶಿ ಕಾರ್ಮಿಕರನ್ನು ನಡೆಸಿಕೊಂಡ ರೀತಿ, ಸಲಿಂಗಿಗಳಿಗೆ ನಿಷೇಧ ಮತ್ತು ಎಲ್‌ಜಿಬಿಟಿ ಸಮುದಾಯವನ್ನು ಅಂಗೀಕರಿಸದೇ ಇರುವುದು ವಿವಾದದ ಮುಖ್ಯ ವಿಷಯಗಳು. ಟೂರ್ನಿಯಲ್ಲಿ ಆಡುವ ಯೂರೋಪ್‌ನ ಕೆಲವು ತಂಡಗಳ ಆಟಗಾರರು ಹಾಗೂ ಆ ದೇಶಗಳ ಅಧ್ಯಕ್ಷರು ಬಹಿರಂಗವಾಗಿ ಕತಾರ್‌ಅನ್ನು ಟೀಕಿಸಿದ್ದಾರೆ. ವಿಶ್ವಕಪ್‌ನ ಆತಿಥ್ಯ ಕತಾರ್‌ಗೆ ನೀಡಿದ್ದು ‘ದುರಂತ’ ಎಂದು ಕರೆದಿದ್ದಾರೆ.

ವಿದೇಶಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವಂತೆ ಕತಾರ್‌ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಇಂಗ್ಲೆಂಡ್‌, ಜರ್ಮನಿ ಒಳಗೊಂಡಂತೆ ಯೂರೋಪ್‌ನ ಹತ್ತು ದೇಶಗಳ ಒಕ್ಕೂಟ ಫಿಫಾಗೆ ಮನವಿಯನ್ನೂ ಮಾಡಿತ್ತು.

ಎಲ್‌ಜಿಬಿಟಿ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಲು ಅಮೆರಿಕ ತಂಡ, ದೋಹಾದಲ್ಲಿ ತಮ್ಮ ಅಭ್ಯಾಸಕ್ಕೆ ಮೀಸಲಿಟ್ಟಿರುವ ಮೈದಾನದಲ್ಲಿ ‘ರೇನ್‌ಬೋ’ ಲೋಗೊ ಪ್ರದರ್ಶಿಸಿದೆ. ವಲಸೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ನೆದರ್ಲೆಂಡ್ಸ್‌ ತಂಡದ ಸದಸ್ಯರು ಜೆರ್ಸಿಗಳನ್ನು ಹರಾಜು ಹಾಕಿದ್ದಾರೆ.

ಇದರ ನಡುವೆಯೂ ಕೆಲವು ದೇಶಗಳು ಕತಾರ್‌ಗೆ ಬೆಂಬಲ ಸೂಚಿಸಿವೆ. ‘ಟೂರ್ನಿ ಯಶಸ್ವಿಯಾಗಲಿದೆ’ ಎಂಬುದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ವಿಶ್ವಾಸದ ನುಡಿ. ‘ಕ್ರೀಡೆಯಲ್ಲಿ ರಾಜಕೀಯ ಬೆರೆಸಬೇಡಿ’ ಎಂದಿರುವ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ‘ಕತಾರ್‌ಅನ್ನು ಟೀಕಿಸುವವರು 2010 ರಲ್ಲಿ ಆ ದೇಶಕ್ಕೆ ವಿಶ್ವಕಪ್‌ನ ಆತಿಥ್ಯ ನೀಡಿದಾಗಲೇ ಮಾತನಾಡಬೇಕಿತ್ತು’ ಎಂದು ತಿರುಗೇಟು ಕೊಟ್ಟಿದ್ದಾರೆ.

ಯೂರೋಪ್‌ ತಂಡಗಳ ನಾಯಕರು ‘ತಾರತಮ್ಯ ವಿರೋಧಿ’ ಆರ್ಮ್‌ಬ್ಯಾಂಡ್‌ ಧರಿಸಿ ಅಂಗಳಕ್ಕಿಳಿಯಲ್ಲಿದ್ದರೆ, ಫ್ರಾನ್ಸ್‌ ತಂಡದ ನಾಯಕ ಹ್ಯೂಗೊ ಲಾರಿಸ್‌, ಆರ್ಮ್‌ಬ್ಯಾಂಡ್‌ ಧರಿಸುವುದಿಲ್ಲ ಎಂದಿದ್ದಾರೆ. ‘ವಿದೇಶಿ ಪ್ರವಾಸಿಗರನ್ನು ಫ್ರಾನ್ಸ್‌ಗೆ ಆಹ್ವಾನಿಸುವಾಗ ಅವರು ನಮ್ಮ ದೇಶದ ಕಾನೂನು ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಬಯಸುತ್ತೇವೆ. ಕತಾರ್‌ಗೆ ಹೋದಾಗ ನಾನು ಅದನ್ನೇ ಮಾಡುತ್ತೇನೆ’ ಎಂಬುದು ಅವರ ಸ್ಪಷ್ಟ ನುಡಿ. ಕತಾರ್‌ನ ಆಡಳಿತ ಟೀಕೆಗಳಿಗೆ ಬಹಳ ಎಚ್ಚರಿಕೆಯಿಂದಲೇ ಪ್ರತಿಕ್ರಿಯಿಸುತ್ತಾ ಬಂದಿದೆ.

ಏನೇ ಇರಲಿ, ಭಾರತೀಯ ಕಾಲಮಾನ ಭಾನುವಾರ (ನ.20) ರಾತ್ರಿ 9.30ಕ್ಕೆ ಸರಿಯಾಗಿ ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ಕತಾರ್‌– ಈಕ್ವೆಡಾರ್‌ ನಡುವಣ ಉದ್ಘಾಟನಾ ಪಂದ್ಯದ ಆರಂಭದೊಂದಿಗೆ ಎಲ್ಲ ವಿವಾದಗಳ ಸದ್ದು ದೋಹಾದ ಸುತ್ತ ಆವರಿಸಿರುವ ಮರಳ ರಾಶಿಯಲ್ಲಿ ಅಡಗಬಹುದು ಎಂಬುದು ಈ ತೈಲ ಸಂಪನ್ನ ರಾಷ್ಟ್ರದ ದೃಢ ವಿಶ್ವಾಸ.

21 ಟೂರ್ನಿಗಳು 8 ಚಾಂಪಿಯನ್ನರು

ಇದುವರೆಗೆ 21 ವಿಶ್ವಕಪ್‌ ಟೂರ್ನಿಗಳು ನಡೆದಿವೆ. ಒಟ್ಟು 79 ರಾಷ್ಟ್ರಗಳಿಗೆ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುವ ಅವಕಾಶ ದೊರೆತಿದ್ದು, ಎಂಟು ತಂಡಗಳು ವಿಶ್ವಕಪ್‌ ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿವೆ.

ಐದು ಪ್ರಶಸ್ತಿ ಜಯಿಸಿರುವ ಬ್ರೆಜಿಲ್‌, ವಿಶ್ವಕಪ್‌ ಟೂರ್ನಿಯ ಅತ್ಯಂತ ಯಶಸ್ವಿ ತಂಡ ಎಂಬ ಹೆಗ್ಗಳಿಕೆ ಹೊಂದಿದೆ. ಇದುವರೆಗೆ ನಡೆದಿರುವ ಎಲ್ಲ 21 ವಿಶ್ವಕಪ್‌ಗಳಲ್ಲಿ ಆಡಿದ ಏಕೈಕ ತಂಡ ಬ್ರೆಜಿಲ್‌. ಜರ್ಮನಿ ಮತ್ತು ಇಟಲಿ ತಲಾ ನಾಲ್ಕು ಬಾರಿ ಟ್ರೋಫಿಗೆ ಮುತ್ತಿಕ್ಕಿದೆ.

ಇಟಲಿ (1934 ಮತ್ತು 1938) ಹಾಗೂ ಬ್ರೆಜಿಲ್‌ (1958 ಮತ್ತು 1962) ಮಾತ್ರ ಸತತ ಎರಡು ವಿಶ್ವಕಪ್‌ ಗೆದ್ದ ಸಾಧನೆ ಮಾಡಿವೆ. ಜರ್ಮನಿ ತಂಡ ಅತಿಹೆಚ್ಚು ಫೈನಲ್‌ಗಳಲ್ಲಿ (8) ಆಡಿದೆ. ಬ್ರೆಜಿಲ್‌ ಒಟ್ಟು ಏಳು ಸಲ ಫೈನಲ್‌ ಪ್ರವೇಶಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು