ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಮಹಿಳಾ ಫುಟ್‌ಬಾಲ್ ಕ್ರಾಂತಿಯ ಹಿಂದೆ ಕೊಡಗಿನ ವನಿತೆ

ರಿಯಲ್ ಕಾಶ್ಮೀರ ಫುಟ್‌ಬಾಲ್ ಕ್ಲಬ್ ತಂಡದ ಮಾರ್ಗದರ್ಶಕಿ ಪೂನಂ ಚಿಟ್ಟೂ ಸಾಧನೆ
Last Updated 29 ಸೆಪ್ಟೆಂಬರ್ 2020, 17:54 IST
ಅಕ್ಷರ ಗಾತ್ರ

ಬೆಂಗಳೂರು: ಕಾಶ್ಮೀರ ಕಣಿವೆಯ ಫುಟ್‌ಬಾಲ್ ಕ್ರೀಡೆಯಲ್ಲಿ ಕ್ರಾಂತಿಯನ್ನೇ ಮಾಡಿರುವ ರಿಯಲ್ ಕಾಶ್ಮೀರ ಫುಟ್‌ಬಾಲ್ ಕ್ಲಬ್‌ (ಆರ್‌ಕೆಎಫ್‌ಸಿ) ಮಹಿಳಾ ತಂಡದ ಸಾಧನೆಯ ಹಿಂದೆ ಕರ್ನಾಟಕದ ಶಿಕ್ಷಕಿ ಪೂನಂ ಚಿಟ್ಟೂ ಅವರಿದ್ದಾರೆ.

ಈ ಕ್ಲಬ್‌ನ ಸಹಮಾಲೀಕರಾದ ಸಂದೀಪ್ ಚಟ್ಟೂ ಅವರ ಪತ್ನಿ ಪೂನಂ ಕರ್ನಾಟಕದವರು. ಮೂರು ದಶಕಗಳ ಹಿಂದೆಯೇ ಅವರು ಸಂದೀಪ್ ಅವರೊಂದಿಗೆ ಮದುವೆಯಾಗಿ ಕಾಶ್ಮೀರದಲ್ಲಿದ್ದಾರೆ. ಕಳೆದ ಕೆಲವು ಋತುಗಳಿಂದ ಆರ್‌ಕೆಎಫ್‌ಸಿಯು ಕಾಶ್ಮೀರ ಕಣಿವೆಯ ಕ್ರೀಡಾಪ್ರಿಯರ ಮನದಲ್ಲಿ ಸಂತಸದ ಅಲೆಗಳು ಏಳಲು ಕಾರಣವಾಗಿದೆ. ಐಲೀಗ್‌ನಲ್ಲಿ ಸ್ಥಾನ ಪಡೆದಿರುವ ಈ ಕ್ಲಬ್ ಸಾಧನೆಯು ಸಣ್ಣದಲ್ಲ. ಕಣಿವೆಯಲ್ಲಿರುವ ಹಲವಾರು ಸಮಸ್ಯೆಗಳ ನಡುವೆಯೂ ಕ್ಲಬ್‌ನ ತಂಡವು ಐ–ಲೀಗ್‌ ಫುಟ್‌ಬಾಲ್‌ನಲ್ಲಿ ತನ್ನ ಸ್ಥಾನ ಕಂಡುಕೊಂಡಿದೆ.

‘ನಮ್ಮ ತಂದೆ ಭಾರತ ಆಹಾರ ನಿಗಮದ ಉದ್ಯೋಗಿಯಾಗಿದ್ದರು. ಅವರ ನಿವೃತ್ತಿಯ ನಂತರ ನಮ್ಮ ಕುಟುಂಬವು ಕೊಡಗಿನಲ್ಲಿ ನೆಲೆಸಿದೆ. ಕಾಫಿ ತೋಟವೂ ಇದೆ. ಚಂಡೀಗಡದಲ್ಲಿ ಶಾಲಾ ಶಿಕ್ಷಣ ಪಡೆದೆ. ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದೆ. ಆದರೆ ಪದವಿಗಳನ್ನು ಮದುವೆಯ ನಂತರವೇ ಓದಿದ್ದು. ಕೂರ್ಗ್‌ನಿಂದ ಕಾಶ್ಮೀರದವರೆಗಿನ ಜೀವನ ಪ್ರಯಾಣ ಬಹಳ ಸುದೀರ್ಘವಾದದ್ದು. ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ನೆಲೆಯಿಂದ ಬಂದ ನನಗೆ ಇಲ್ಲಿ (ಕಾಶ್ಮೀರ) ಲಭಿಸಿದ ಪ್ರೀತಿ, ಗೌರವಗಳು ಅಪಾರ’ ಎಂದು ಪೂನಂ ಹೇಳುತ್ತಾರೆ.

ಕ್ಲಬ್‌ನಲ್ಲಿ ಬಾಲಕಿಯರ ಮತ್ತು ಮಹಿಳೆಯರ ಫುಟ್‌ಬಾಲ್‌ ಅಭಿವೃದ್ಧಿಗೆ ಶ್ರೀನಗರದ ಡಿಪಿಎಸ್‌ನೊಂದಿಗೆ ಸೇರಿ ರೂಪುರೇಷೆ ರಚಿಸುವಲ್ಲಿ ಪೂನಂ ಅವರ ಪಾತ್ರ ಪ್ರಮುಖವಾಗಿದೆ. ವೃತ್ತಿಯಿಂದ ಶಿಕ್ಷಕಿಯಾಗಿರುವ ಪೂನಂ, ಈಗ 14 ವರ್ಷ ಮತ್ತು 10 ವರ್ಷದೊಳಗಿನವರ ತಂಡಗಳ ರಚನೆಗೆ ಯೋಜನೆ ಸಿದ್ಧಪಡಿಸಿದ್ದಾರೆ. ನೋಂದಣಿ ಪ್ರಕ್ರಿಯೆ ಕೂಡ ಆರಂಭವಾಗಿದೆ. ಅವರಿಗೆ ತರಬೇತಿ ನೀಡಲು ಮೈದಾನವನ್ನೂ ನಿಗದಿಪಡಿಸಲಾಗಿದೆ.

‘ಕ್ರೀಡೆ ನನಗೆ ರಕ್ತಗತವಾಗಿಯೇ ಬಂದಿದೆ. ಕ್ರೀಡೆಗಳ ಕುರಿತ ಆಸಕ್ತಿಯು ಈ ಕಾರ್ಯಕ್ರಮ ಕೈಗೊಳ್ಳಲು ಕಾರಣವಾಯಿತು. ಇಲ್ಲಿಯ ಬಾಲಕಿಯರಿಗೆ ತಮ್ಮ ಪ್ರತಿಭೆ ಸಾಬೀತು ಮಾಡಲು ಒಂದು ವೇದಿಕೆ ನೀಡಬೇಕಿತ್ತು. ಉಳಿದಂತೆ ಅವರ ಆಸಕ್ತಿ, ಪರಿಶ್ರಮವೇ ಸಾಧನೆಗೆ ಕಾರಣ’ ಎನ್ನುತ್ತಾರೆ ಪೂನಂ.

‘ಹೋದ ವರ್ಷವು ಕ್ಲಿಷ್ಟ ಪರಿಸ್ಥಿತಿಯಿಂದ ಕೂಡಿತ್ತು. ಕಳೆದ ಕೆಲವು ದಶಕಗಳಿಂದ ಇಲ್ಲಿಯ ಪರಿಸ್ಥಿತಿಯೇನೂ ಚೆನ್ನಾಗಿರಲಿಲ್ಲ. ಅದರ ನಡುವೆ ಕ್ರೀಡೆಯು ಮಾನಸಿಕವಾಗಿ ಮತ್ತು ದೈಹಿಕವಾಗಿ ನಿರಾಳತೆಯನ್ನು ನೀಡಿದೆ. ಇಲ್ಲಿಯ ಪರಿಸ್ಥಿತಿಯಲ್ಲಿ ಮಹಿಳೆಯರೇ ಹೆಚ್ಚು ಸಂಕಷ್ಟಕ್ಕೊಳಗಾಗಿದ್ದಾರೆ. ಬಾಲಕಿಯರಿಗೆ ತಮ್ಮ ಪ್ರತಿಭೆ ತೋರಿಸಲು ಮುಕ್ತ ವಾತಾವರಣದ ಕೊರತೆ ಇದೆ ಎಂಬ ಭಾವ ನನ್ನನ್ನು ಯಾವಾಗಲೂ ಕಾಡುತ್ತಿತ್ತು’ ಎಂದು ಪೂನಂ ಹೇಳಿದರು.

ಕಾಶ್ಮೀರ ಫುಟ್‌ಬಾಲ್ ತಂಡದ ನಾಯಕಿಯಾಗಿರುವ ಅಫ್ಸಾನ್ ಆಶಿಕ್ ಈಚೆಗೆ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಫಿಟ್‌ ಇಂಡಿಯಾ ಸಂವಾದದಲ್ಲಿ ಆಮಂತ್ರಿತರಾಗಿದ್ದರು. ಅವರ ಸಾಧನೆಯನ್ನು ಪ್ರಧಾನಿ ಮೋದಿಯವರು ಮುಕ್ತಕಂಠದಿಂದ ಶ್ಲಾಘಿಸಿದ್ದರು.

‘ಇಲ್ಲಿಯ ಯುವತಿಯರ ಸಂಕಷ್ಟಗಳನ್ನು ಅರಿಯುವ ಪ್ರಯತ್ನ ಆರಂಭಿಸಿದಾಗ ಅಫ್ಸಾನಾ ಆಶಿಕ್ ಅವರೊಂದಿಗೆ ಬಹಳಷ್ಟು ಮಾತುಕತೆಗಳನ್ನು ಮಾಡಿದ್ದೆ. ಅಲ್ಲದೇ ಇಲ್ಲಿಯ ಮಹಿಳಾ ರಗ್ಬಿ ತಂಡವನ್ನು ಮುನ್ನಡೆಸುತ್ತಿರುವ ಇರ್ತಿಕಾ ಅಯೂಬಾ ಅವರೊಂದಿಗೂ ಮಾತನಾಡಿದ್ದೆ. ದೇವರ ಆಶಿರ್ವಾದದಿಂದ ಇಲ್ಲಿಯ ಕೆಲವು ಯುವತಿಯರ ಮನದಲ್ಲಿ ಭರವಸೆಯ ಬೆಳಕು ಮೂಡಿಸುವಲ್ಲಿ ಯಶಸ್ವಿಯಾದರೆ, ನಮಗೆ ಅದೇ ದೊಡ್ಡ ಹಾರೈಕೆಯಾಗಲಿದೆ’ ಎಂದು ಪೂನಂ ಹೇಳುತ್ತಾರೆ.

‘ಭವಿಷ್ಯದ ಸವಾಲುಗಳ ಅರಿವು ಇದೆ. ಫುಟ್‌ಬಾಲ್ ತಂಡವನ್ನು ನಿರ್ವಹಿಸಲು ಬೇಕಾದಷ್ಟು ಅನುಭವ ನನಗಿಲ್ಲ. ಆದರೆ ಒಬ್ಬ ಶಿಕ್ಷಕಿಯಾಗಿರುವುದರಿಂದ ಈ ಸವಾಲನ್ನು ನಿಭಾಯಿಸಬಲ್ಲೆ. ನಮ್ಮ ಕ್ಲಬ್‌ನಲ್ಲಿ ನುರಿತ ತರಬೇತುದಾರರು ಮತ್ತು ನೆರವು ಸಿಬ್ಬಂದಿ ಇದ್ದಾರೆ. ಆರ್‌ಕೆಎಫ್‌ಸಿಯಲ್ಲಿ ನಮಗೆ ದೊಡ್ಡಣ್ಣನೂ ಇದ್ದಾನೆ. ಯಾವುದೇ ಹಂತದಲ್ಲಿಯೂ ಅವರ ನೆರವು ಪಡೆಯಬಹುದು. ನಮ್ಮ ಜೀವನವನ್ನು ಯಾರಿಗೂ ನಿಲ್ಲಿಸಲು ಸಾಧ್ಯವಿಲ್ಲ. ಒಂದಿಲ್ಲಾ ಒಂದು ಮಾರ್ಗದಿಂದ ಕಾರ್ಯಸಾಧಿಸುವ ಛಲವಿದೆ’ ಎಂದು ಪೂನಂ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT