ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾಲ್ಚಳಕಕ್ಕೆ ಲೀಗ್ ಬಲ

Last Updated 2 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಐಎಸ್‌ಎಲ್‌ ಫುಟ್‌ಬಾಲ್ ಟೂರ್ನಿಯ ಹಾದಿಯಲ್ಲೇ ಮಹಿಳೆಯರ ಫುಟ್‌ಬಾಲ್ ಲೀಗ್ ನಡೆಯುತ್ತಿದೆ. ಲೀಗ್‌ನಲ್ಲಿ ಬೆಳಕಿಗೆ ಬಂದ ಆಟಗಾರ್ತಿಯರ ಸಂಖ್ಯೆ ಅಪಾರ. 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ ಟೂರ್ನಿಯ ಏಳನೇ ಆವೃತ್ತಿ ಈ ಬಾರಿ ಭಾರತದಲ್ಲೇ ನಡೆಯಲಿದ್ದು ಮಹಿಳಾ ಫುಟ್‌ಬಾಲ್‌ಗೆ ಇನ್ನಷ್ಟು ರಂಗು ಮೂಡಲಿದೆ.

ಭಾರತದ ಮಹಿಳಾ ಫುಟ್‌ಬಾಲ್‌ಗೆ ಸಂಬಂಧಿಸಿ ಕಳೆದ ವಾರ ಮಹತ್ವದ್ದಾಗಿತ್ತು. ಭಾರತ ತಂಡದ ಫಾರ್ವರ್ಡ್ ಆಟಗಾರ್ತಿ, ಮಣಿಪುರದ ಬಾಲಾದೇವಿ ಸ್ಕಾಟ್ಲೆಂಡ್‌ನ ಪ್ರತಿಷ್ಠಿತ ರೇಂಜರ್ಸ್ ಫುಟ್‌ಬಾಲ್ ಕ್ಲಬ್‌ನೊಂದಿಗೆ ಸಹಿ ಮಾಡುವುದರ ಮೂಲಕ ವಿದೇಶಿ ಕ್ಲಬ್ ಒಂದರ ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.

ಈ ಮಹತ್ವದ ಬೆಳವಣಿಗೆಯನ್ನು ರೇಂಜರ್ಸ್ ಮತ್ತು ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಘೋಷಿಸಿದ್ದು ಬೆಂಗಳೂರಿನಲ್ಲಿ. ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಬಾಲಾದೇವಿ ಸತತವಾಗಿ ಹೇಳಿದ್ದು ಒಂದೇ ಮಾತು- ‘ಇದು ಭಾರತದ ಮಹಿಳಾ ಫುಟ್‌ಬಾಲ್‌ಗೆ ಸಂದ ಗೌರವ, ಇದರಿಂದ ಇಲ್ಲಿ ಮಹಿಳೆಯರ ಫುಟ್‌ಬಾಲ್ ಇನ್ನಷ್ಟು ಬೆಳೆಯುವ ಸಾಧ್ಯತೆ ಇದೆ’ ಎಂದು.

‌ಬಾಲಾದೇವಿ ಸ್ಕಾಟ್ಲೆಂಡ್ ಕ್ಲಬ್ ಸೇರುವುದರ ಹಿಂದಿನ ವಾರ ಬೆಂಬೆಮ್ ದೇವಿಯೂ ಸುದ್ದಿಯಾದರು. ಅವರು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಮೊತ್ತ ಮೊದಲ ಫುಟ್‌ಬಾಲ್ ಆಟಗಾರ್ತಿ ಎಂದೆನಿಸಿಕೊಂಡು ಗಮನ ಸೆಳೆದಿದ್ದರು.

ಈ ಎರಡೂ ಬೆಳವಣಿಗೆಗಳು ಭಾರತದಲ್ಲಿ ಮಹಿಳಾ ಫುಟ್‌ಬಾಲ್‌ನ ಪ್ರಗತಿಯನ್ನು ಸಾರಿ ಹೇಳಿದವು. ಸದ್ದಿಲ್ಲದೆ ನಡೆಯುತ್ತಿದ್ದ ಮಹಿಳೆಯರ ಕಾಲ್ಚಳಕಕ್ಕೆ ಹೊಸ ಆಯಾಮ ಕೊಟ್ಟಿದ್ದವು. ಭಾರತದಲ್ಲಿ ಮಹಿಳೆಯರ ಫುಟ್ ಬಾಲ್‌ನ ಹೆಜ್ಜೆ ಗುರುತುಗಳು ಬೀಳತೊಡಗಿದ್ದು 1975ರಲ್ಲಿ, ಅಖಿಲ ಭಾರತ ಮಹಿಳಾ ಫುಟ್ ಬಾಲ್ ಫೆಡರೇಷನ್ ಆರಂಭಗೊಂಡಾಗ. ಆದರೆ 1990ರಲ್ಲಿ ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ ಮಾನ್ಯತೆ ನೀಡುವವರೆಗೆ ಮಹಿಳಾ ಫುಟ್ ಬಾಲ್ ಬೆಳಕಿಗೆ ಬರಲಿಲ್ಲ. ಕೆಲವು ರಾಜ್ಯಗಳು ಲೀಗ್‌ಗಳನ್ನು ನಡೆಸುತ್ತಿದ್ದುದು ಬಿಟ್ಟರೆ, ಆರಂಭದಲ್ಲಿ ಮಹಿಳೆಯರ ಕಾಳ್ಚಳಕಕ್ಕೆ ವೇದಿಕೆಗಳೂ ಕಡಿಮೆ ಇದ್ದವು. ಆದರೆ ಬೆಳೆಯುತ್ತ ಬೆಳೆಯುತ್ತ ದಕ್ಷಿಣ ಏಷ್ಯಾ, ಏಷ್ಯಾ ಚಾಂಪಿಯನ್ ಷಿಪ್, ಫಿಫಾ ಮಹಿಳೆಯರ ವಿಶ್ವಕಪ್, ಒಲಿಂಪಿಕ್ಸ್ ಅರ್ಹತಾ ಟೂರ್ನಿ ಮುಂತಾದವುಗಳಲ್ಲಿ ಪಾಲ್ಗೊಳ್ಳಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಂತೆ ಸ್ತ್ರೀಶಕ್ತಿ ಪ್ರಕಾಶಿಸಿತು.

ಲೀಗ್‌ಗಳ ಬಲ

ದೇಶದಲ್ಲಿ ಫುಟ್ ಬಾಲ್ ಅಂಗಣಕ್ಕೆ ಮಹಿಳೆ ಯರನ್ನು ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಲೀಗ್‌ಗಳು. ಮಹಿಳೆಯರಿಗಾಗಿ ದೇಶಿ ಟೂರ್ನಿ ಮೊದಲು ಆರಂಭಗೊಂಡದ್ದು 1991ರಲ್ಲಿ. ಮಹಿಳೆಯರ ಫುಟ್‌ಬಾಲ್ ಚಾಂಪಿಯನ್‌ಷಿಪ್ ಹೆಸರಿನಲ್ಲಿ ನಡೆಯುತ್ತಿದ್ದ ಟೂರ್ನಿ ಪುರುಷರ ಸಂತೋಷ್ ಟ್ರೋಫಿಗೆ ಸಮಾನವಾಗಿತ್ತು. ಇದಕ್ಕೂ ಮೊದಲು 1976ರಲ್ಲಿ ಮಣಿಪುರದಲ್ಲಿ ಮಹಿಳೆಯರ ರಾಜ್ಯ ಮಟ್ಟದ ಲೀಗ್ ಆರಂಭಗೊಂಡಿತ್ತು. ನೆನಪಿರಲಿ, ಭಾರತ ಮಹಿಳಾ ಫುಟ್‌ಬಾಲ್‌ನಲ್ಲಿ ಹೆಚ್ಚು ಹೆಸರು ಮಾಡಿರುವುದು ಮಣಿಪುರದ ಆಟಗಾರ್ತಿಯರು.

1993ರಲ್ಲಿ ಕೋಲ್ಕತ್ತದಲ್ಲೂ 1998ರಲ್ಲಿ ಮುಂಬೈಯಲ್ಲೂ 1999ರಲ್ಲಿ ಗೋವಾದಲ್ಲೂ ಲೀಗ್ ಆರಂಭಗೊಂಡಿತು. ಇಲ್ಲೆಲ್ಲಮಹಿಳಾ ಫುಟ್‌ಬಾಲರ್‌ಗಳು ಈಗಾಗಲೇ ಸಾಕಷ್ಟು ಹೆಸರು ಗಳಿಸಿದ್ದಾರೆ.

ಡಬ್ಲ್ಯುಎಫ್‌ಎಲ್ ಪ್ರಭಾವ

2017ರಲ್ಲಿ ಮಹಿಳೆಯರ ಅಖಿಲ ಭಾರತ ಫುಟ್‌ಬಾಲ್ ಲೀಗ್ ಆರಂಭಗೊಂಡಿತು; ಹೊಸ ಶಕೆಗೆ ನಾಂದಿಯಾಯಿತು. ಮೊದಲ ಆವೃತ್ತಿಯಲ್ಲಿ ಹರಿಯಾಣದ ಅಲಕಾಪುರ, ಪುದುಚೇರಿಯ ಜೆಐಟಿ, ಮಿಜೋರಾಂನ ಐಜ್ವಾಲ್, ಮಹಾರಾಷ್ಟ್ರದ ಎಫ್‌ಸಿ ಪುಣೆ ಸಿಟಿ, ಒಡಿಶಾದ ರೈಸಿಂಗ್ ಸ್ಟೂಡೆಂಟ್ಸ್ ಕ್ಲಬ್, ಮಣಿಪುರದ ಈಸ್ಟರ್ನ್ ಸ್ಪೋರ್ಟಿಂಗ್ ಯೂನಿಯನ್ ಕ್ಲಬ್‌ಗಳು ಪಾಲ್ಗೊಂಡಿದ್ದವು. ದೆಹಲಿಯಲ್ಲಿ ಟೂರ್ನಿ ನಡೆದಿತ್ತು. ಮುಂದಿನ ಎರಡು ಆವೃತ್ತಿಗಳು ಕ್ರಮವಾಗಿ ಶಿಲಾಂಗ್ ಮತ್ತು ಲುಧಿಯಾನದಲ್ಲಿ ನಡೆದಿದ್ದವು. ಕಳೆದ ಬಾರಿ 12 ತಂಡಗಳು ಪಾಲ್ಗೊಂಡಿದ್ದರೆ ಈ ಬಾರಿ 13 ತಂಡಗಳಿವೆ.

17 ವರ್ಷದ ಒಳಗಿನ ಮಹಿಳೆಯರ ವಿಶ್ವಕಪ್ ಟೂರ್ನಿ ಈ ಬಾರಿ ಭಾರತದಲ್ಲಿ ನಡೆಯಲಿದೆ. ಇದರಿಂದ ದೇಶದ ಮಹಿಳಾ ಫುಟ್‌ಬಾಲ್ ಕ್ಷೇತ್ರ ಇನ್ನಷ್ಟು ಬಲ ಪಡೆದುಕೊಳ್ಳಲಿದೆ ಎಂಬ ವಿಶ್ವಾಸ ಕ್ರೀಡಾಪ್ರಿಯರಲ್ಲಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT