ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಬೆಲೆ ‘ಡಬಲ್’‌: ಸೆಮಿಫೈನಲ್‌ಗೆ ಲಿಯೊನ್

ಚಾಂಪಿಯನ್ಸ್‌ ಲೀಗ್‌ ಕ್ವಾರ್ಟರ್‌ಫೈನಲ್‌: ಮ್ಯಾಂಚೆಸ್ಟರ್‌ ಸಿಟಿಗೆ ಆಘಾತ
Last Updated 16 ಆಗಸ್ಟ್ 2020, 7:21 IST
ಅಕ್ಷರ ಗಾತ್ರ

ಲಿಸ್ಬನ್‌ : ಮೌಸಾ ಡೆಂಬೆಲೆ ಗಳಿಸಿದ ಎರಡು ಗೋಲುಗಳ ಬಲದಿಂದ ಒಲಿಂಪಿಕ್‌ ಲಿಯೊನ್‌ ತಂಡವು ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಶನಿವಾರ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಆ ತಂಡ 3–1ರಿಂದ ಮ್ಯಾಂಚೆಸ್ಟರ್‌ ಸಿಟಿ‌ ತಂಡವನ್ನು ಮಣಿಸಿತು.

ವಿಜೇತ ತಂಡದ ಪರ ಡೆಂಬೆಲೆ ಅವರು 79 ಹಾಗೂ 87ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ಇದಕ್ಕೂ ಮೊದಲು 24ನೇ ನಿಮಿಷದಲ್ಲೇ ಮ್ಯಾಕ್ಸ್‌ವೆಲ್‌ ಕಾರ್ನೆಟ್‌ ತಂಡದ ಮೊದಲ ಗೋಲು ದಾಖಲಿಸಿದ್ದರು. ಮ್ಯಾಂಚೆಸ್ಟರ್‌ ಸಿಟಿಯ ಕೆವಿನ್‌ ಡಿ ಬ್ರ್ಯೂನ್‌ (69ನೇ ನಿಮಿಷ) ತಂಡದ ಪರ ಗೋಲು ಹೊಡೆದರು.

ಚಾಂಪಿಯನ್ಸ್‌ ಲೀಗ್‌ನಲ್ಲಿ ದಶಕದಲ್ಲಿ ಮೊದಲ ಬಾರಿ ನಾಲ್ಕರ ಘಟ್ಟ ಪ್ರವೇಶಿಸಿರುವ ಲಿಯೊನ್‌ ತಂಡವು, ಬಾಯರ್ನ್‌ ಮ್ಯೂನಿಚ್‌ ತಂಡದ ಮುಖಾಮುಖಿಯಾಗಲು ಸಜ್ಜಾಗಿದೆ. ಇದೆ ವೇಳೆ ಯೂರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಪ್ರಶಸ್ತಿ ಎತ್ತಿಹಿಡಿಯುವ ಮ್ಯಾಂಚೆಸ್ಟರ್‌ ಸಿಟಿಯ ಕನಸು ನುಚ್ಚು ನೂರಾಯಿತು.

1996ರ ನಂತರ ಮೊದಲ ಬಾರಿಗೆ ಚಾಂಪಿಯನ್ಸ್‌ ಲೀಗ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಹಾಗೂ ಸ್ಪೇನ್‌‌ ಮೂಲದ ತಂಡಗಳು ಕಾಣಿಸಿಕೊಳ್ಳುತ್ತಿಲ್ಲ.

ಶುಕ್ರವಾರ ಬಾಯರ್ನ್‌ ಮ್ಯೂನಿಚ್‌ ತಂಡವು 8–2 ಗೋಲುಗಳಿಂದ ಬಾರ್ಸಿಲೋನಾ ತಂಡಕ್ಕೆ ಆಘಾತ ನೀಡಿತ್ತು. ಬಾಯರ್ನ್‌ ಪರ ಥಾಮಸ್‌ ಮುಲ್ಲರ್‌ ಹಾಗೂ ಫಿಲಿಪ್‌ ಕುಟಿನೊ ಅವರು ತಲಾ ಎರಡು ಗೋಲು ಹೊಡೆದಿದ್ದರು. 2014ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಜರ್ಮನಿ ತಂಡವು 7–1ರಿಂದ ಬ್ರೆಜಿಲ್‌ ತಂಡವನ್ನು ಮಣಿಸಿದ್ದನ್ನುಈ ಪಂದ್ಯದ ಸ್ಕೋರ್ ನೆನಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT