ಮಂಗಳವಾರ, ಏಪ್ರಿಲ್ 13, 2021
30 °C

ಫುಟ್‌ಬಾಲ್‌: ಮಿಸಾಕ ಯುನೈಟೆಡ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರಂಭದಲ್ಲೇ ಹಿನ್ನಡೆ ಅನುಭವಿಸಿದರೂ ಪಟ್ಟು ಬಿಡದೆ ಕಾದಾಡಿ ಕೊನೆಯಲ್ಲಿ ಎದುರಾಳಿಗಳಿಗೆ ಪೆಟ್ಟು ನೀಡಿದ ಮಿಸಾಕ ಯುನೈಟೆಡ್‌ ತಂಡ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಮಹಿಳೆಯರ ಲೀಗ್‌ನಲ್ಲಿ ಬುಧವಾರ ಜಯಭೇರಿ ಮೊಳಗಿಸಿತು.

ಬೆಂಗಳೂರು ಫುಟ್‌ಬಾಲ್ ಕ್ಲಬ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಮಿಸಾಕ ಯುನೈಟೆಡ್‌ 2–1ರಲ್ಲಿ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ಎದುರು ಜಯ ಗಳಿಸಿತು.

ಅಪೂರ್ಣ ನರ್ಜರಿ ಗಳಿಸಿದ ಗೋಲಿನ ಬಲದಿಂದ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ಏಳನೇ ನಿಮಿಷದಲ್ಲೇ ಮುನ್ನಡೆ ಸಾಧಿಸಿತು. ಪಂದ್ಯದ ಕೊನೆಯ ಹಂತದ ವರೆಗೂ ಈ ಮುನ್ನಡೆಯನ್ನು ಉಳಿಸಿಕೊಂಡು ಗೆಲುವಿನತ್ತ ಹೆಜ್ಜೆ ಹಾಕಿತ್ತು. ಲಾಲ್‌ರಿನ್‌ಮುನಾಮಿ 73ನೇ ನಿಮಿಷದಲ್ಲಿ ಮಿಸಾಕಗೆ ಸಮಬಲದ ಗೋಲು ತಂದುಕೊಟ್ಟರು. 83ನೇ ನಿಮಿಷದಲ್ಲಿ ಲಾಲ್‌ನುನ್ಸಿಯಾಮಿ ಗೋಲು ಗಳಿಸಿ ಭರವಸೆ ಮೂಡಿಸಿದರು. ನಂತರ ಎದುರಾಳಿ ತಂಡವನ್ನು ಕಟ್ಟಿಹಾಕಿ ಮಿಸಾಕ ಜಯ ತನ್ನದಾಗಿಸಿಕೊಂಡಿತು.  ‌

ಗುರುವಾರ ಬೆಳಿಗ್ಗೆ 11 ಗಂಟೆಗೆ ರೆಬೆಲ್ಸ್ ವಿಮೆನ್ಸ್‌ ಮತ್ತು ಬೆಂಗಳೂರು ಬ್ರೇವ್ಸ್ ನಡುವೆ ಹಣಾಹಣಿ ನಡೆಯಲಿದೆ.

ಸೂಪರ್ ಡಿವಿಷನ್ ಪಂದ್ಯಗಳು ಪುನರಾರಂಭ

ತಂಡದ ಅಧಿಕಾರಿಗಳು, ರೆಫರಿಗಳು ಮತ್ತು ಆಟಗಾರರ ನಡುವೆ ಕಲಹದಿಂದಾಗಿ ಸ್ಥಗಿತಗೊಂಡಿದ್ದ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್ ಪಂದ್ಯಗಳು ಗುರುವಾರ ಪುನರಾರಂಭಗೊಳ್ಳಲಿವೆ. ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಮತ್ತು ಬೆಂಗಳೂರು ಡ್ರೀಮ್ಸ್‌ ಯುನೈಟೆಡ್‌ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

ಸೋಮವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಆಟಗಾರರು ಮತ್ತು ಅಧಿಕಾರಿಗಳು ರೆಫರಿಗಳ ವಿರುದ್ಧ ಆರೋಪಗಳನ್ನು ಮಾಡಿ ಹಲ್ಲೆಗೆ ಮುಂದಾಗಿದ್ದರು. ರೆಫರಿ ಕೊಠಡಿಯ ಗಾಜು ಪುಡಿ ಮಾಡಲಾಗಿತ್ತು. ಹೀಗಾಗಿ ಮಂಗಳವಾರ ರೆಫರಿಗಳು ಕಾರ್ಯನಿರ್ವಹಿಸಲು ನಿರಾಕರಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು