ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನೆಪೋಲಿ ಮತ್ತು ಮರಡೋನಾ ಏಳುಬೀಳು...

Last Updated 28 ನವೆಂಬರ್ 2020, 12:44 IST
ಅಕ್ಷರ ಗಾತ್ರ

ಸಮೃದ್ಧ ಉದ್ಯಮಗಳನ್ನು ಹೊಂದಿರುವ ಉತ್ತರ ಇಟಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಪ್ರದೇಶ. ಶ್ರೀಮಂತ ವರ್ಗದವರೇ ಇಲ್ಲಿ ಅಧಿಕ. ಕೃಷಿಯನ್ನೇ ಹೆಚ್ಚು ನೆಚ್ಚಿಕೊಂಡಿರುವ ದಕ್ಷಿಣ ಭಾಗವು ಬಡತನ, ಅನಕ್ಷರತೆ, ನಿರುದ್ಯೋಗ, ಅನೈರ್ಮಲ್ಯ, ಮೂಲಸೌಕರ್ಯಗಳ ಕೊರತೆ ಮೊದಲಾದ ಸಮಸ್ಯೆಗಳನ್ನು ಹೊದ್ದುಕೊಂಡಿರುವ ಪ್ರದೇಶ. ಉತ್ತರ ಇಟಲಿಗೆ ಹೋಲಿಸಿದರೆ ಭೂಗತ ಜಗತ್ತಿನ ಪ್ರಭಾವವೂ ದಕ್ಷಿಣದಲ್ಲಿ ದಟ್ಟವಾಗಿದೆ.

ಈ ಆರ್ಥಿಕ ವಿಭಜನೆ ಕ್ರೀಡಾಕ್ಷೇತ್ರದಲ್ಲೂ ಇತ್ತು. ಉತ್ತರ ಇಟಲಿಯ ಯುವೆಂಟಸ್‌, ಇಂಟರ್‌ ಮಿಲಾನ್‌, ಎ.ಸಿ. ಮಿಲಾನ್‌ ಕ್ಲಬ್‌ಗಳು ಅತಿ ಪ್ರಬಲ. ಇನ್ನೊಂದೆಡೆ ನೆಪೋಲಿಯಂಥ ದಕ್ಷಿಣದ ಕ್ಲಬ್‌ಗಳು ಆರ್ಥಿಕವಾಗಿ ದುರ್ಬಲ. ಫುಟ್‌ಬಾಲ್ ಮೇಲೆ ಅತೀವ ಪ್ರೀತಿ ಎಲ್ಲೆಡೆ ಹರಡಿದ್ದ ಇಟಲಿಯಲ್ಲಿ ಉತ್ತರದ ತಂಡಗಳು ಹಾಲೆಂಡ್‌, ಫ್ರಾನ್ಸ್‌ನ ಪ್ರಬಲ ಆಟಗಾರರನ್ನು ಖರೀದಿಸುತ್ತಿದ್ದವು.

ಇಂಥ ಸಂದರ್ಭದಲ್ಲೇ, 1984ರ ಜುಲೈನಲ್ಲಿ ನೆಪೋಲಿ ತಂಡ, ಡಿಯೆಗೊ ಅರ್ಮಾಂಡೊ ಮರಡೋನಾ ಅವರನ್ನು ಖರೀದಿಸಿದಾಗ ಅದು ದೊಡ್ಡ ಸುದ್ದಿಯಾಯಿತು. ಮರಡೋನಾ ಅಷ್ಟರಲ್ಲೇ ಪ್ರತಿಭಾವಂತ, ಅಷ್ಟೇ ಅಲ್ಲ; ಜಗತ್ತಿನ ಅತ್ಯಂತ ದುಬಾರಿ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಸ್ಫೇನ್‌ನ ಬಾರ್ಸಿಲೋನಾ ಕ್ಲಬ್‌ನಿಂದ ಅವರನ್ನು ₹ 282 ಕೋಟಿಗೆ (10.48 ದಶಲಕ್ಷ ಡಾಲರ್‌) ನೆಪೋಲಿ ಕ್ಲಬ್‌ ಖರೀದಿಸಿತ್ತು.

ಆಗಿನ ಕಾಲಕ್ಕೆ ಅದು ವಿಶ್ವದಾಖಲೆ ಮೊತ್ತ. ಅದಕ್ಕೂ ಹಿಂದೆ, 1982ರಲ್ಲಿ ಬಾರ್ಸಿಲೋನಾ ತಂಡವು ಅವರ ತವರು ಆರ್ಜೇಂಟಿನಾದ ಬೋಕಾ ಜೂನಿಯರ್ಸ್‌ನಿಂದ ಮರಡೋನಾ ಅವರನ್ನು ಖರೀದಿ ಮಾಡಿದ್ದು ₹ 204 ಕೋಟಿ ಕೊಟ್ಟು!. ಅದೂ ಆಗಿನ ಕಾಲದಲ್ಲಿ ವಿಶ್ವ ದಾಖಲೆ. ಚೆಂಡಿನ ನಿಯಂತ್ರಣ, ಡ್ರಿಬ್ಲಿಂಗ್‌ ಕೌಶಲ, ಡಿಫೆಂಡರ್‌ಗಳ ಕೋಟೆ ಭೇದಿಸಿ ಮುನ್ನುಗ್ಗುವ ಛಾತಿಯಿಂದ ಅವರು ಹೆಸರು ಮಾಡಿದ್ದರು.

ಕ್ಲಬ್‌ವೊಂದರಲ್ಲಿ ಅವರು ಅತಿ ಹೆಚ್ಚು ಅವಧಿಗೆ ಆಡಿದ್ದು ನೆಪೋಲಿ ಪರ. ಸುಮಾರು ಏಳು ವರ್ಷ ಆ ಕ್ಲಬ್‌ ಪ್ರತಿನಿಧಿಸಿದ್ದರು. ಬಾರ್ಸಿಲೋನಾ ಪರ ಅವರು ಮೂರು ವರ್ಷ ಆಡಿದ್ದರು. ಕೊನೆಯ ಕೆಲವು ತಿಂಗಳಲ್ಲಿ ಪಾದದ ಗಾಯಕ್ಕೆ ಒಳಗಾದರು. ಹೆಪ‍ಟೈಟೆಸ್‌ ಬಾಧೆಯೂ ಅವರನ್ನು ಕೆಲ ತಿಂಗಳ ಕಾಲ ಆಟದಿಂದ ದೂರವಿಟ್ಟಿತು. ಈ ಹಂತದಲ್ಲಿ ಮರಡೋನಾ ಅವರೂ ಬದಲಾವಣೆ ಬಯಸಿದ್ದರು. ನೆಪೋಲಿ ಕೂಡ ತಮ್ಮನ್ನು ಮೇಲೆತ್ತಬಲ್ಲ ಅತ್ಯುತ್ತಮ ಆಟಗಾರನ ನಿರೀಕ್ಷೆಯಲ್ಲಿತ್ತು. ಇವೆರಡೂ ಹೊಂದಾಣಿಕೆಯಾಯಿತು.

ಇಟಲಿಯ ನೇಪಲ್ಸ್‌ನಲ್ಲಿ ಕಳೆದಿದ್ದ ಏಳು ವರ್ಷಗಳ ಅವಧಿ ಅವರ ಪಾಲಿಗೆ ಸುವರ್ಣ ಯುಗ. ನೇಪಲ್ಸ್‌ ಅವರನ್ನು ಪ್ರೀತಿಸಿತು. ಅವರು ತಮ್ಮ ಆಟದ ಉತ್ತುಂಗಕ್ಕೇರಿದ್ದು ಇದೇ ಅವಧಿಯಲ್ಲಿ.

ಹಿಂದುಳಿದ ನೇಪಲ್ಸ್‌ ಪಾಲಿಗೆ ಮರಡೋನಾ ಆರಾಧ್ಯ ದೈವವಾದರು. ಅವರಿಗೆ ಬಡತನ ಹೊಸದಾಗಿರಲಿಲ್ಲ. ಬ್ಯೂನೊ ಏರ್ಸ್‌ ಹೊರವಲಯದ ಕೊಳೆಗೇರಿ ಪ್ರದೇಶದಲ್ಲಿ ಬಾಲ್ಯ ಕಳೆದಿದ್ದ ಅವರಿಗೆ ಬಡತನ ಏನೆಂದು ತಿಳಿದಿತ್ತು. ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿದ್ದ ತಂದೆ ಡಾನ್‌ ಡಿಯೆಗೊ ಬೆಳಿಗ್ಗೆ 4 ಗಂಟೆಗೆ ಮನೆ ಬಿಟ್ಟವರು ಬರುವಾಗ ಸುಸ್ತುಬೀಳುತ್ತಿದ್ದರು ಎಂದು ಸಂದರ್ಶನವೊಂದರಲ್ಲಿ ಮರಡೋನಾ ಹೇಳಿದ್ದರು. ಮರಡೋನಾ ಫುಟ್‌ಬಾಲ್‌ನಲ್ಲಿ ಹೆಸರು ಮಾಡತೊಡಗಿದ ಮೇಲೆ ಕುಟುಂಬ ನೆಲೆಕಂಡಿತು.

2019ರಲ್ಲಿ ಬಿಡುಗಡೆ ಕಂಡ ‘ಮರಡೋನಾ’ ಸಾಕ್ಷ್ಯಚಿತ್ರದಲ್ಲಿ ನಿರ್ದೇಶಕ ಆಸಿಫ್‌ ಕಪಾಡಿಯಾ ಅವರು ನೇಪಲ್ಸ್‌ನಲ್ಲಿ ಮರಡೋನಾ ದಿನಗಳನ್ನು ಕಟ್ಟಿಕೊಟ್ಟಿದ್ದಾರೆ. ‘ನೇ‍ಪಲ್ಸ್‌ ಒಬ್ಬ ಹೀರೊಗಾಗಿ ಅತೀವ ಕಾತರದಿಂದ ಕಾಯುತಿತ್ತು’ ಎನ್ನುತ್ತಾರೆ ಕಪಾಡಿಯಾ.

ಬಡತನದ ಅರಿವು ಮರಡೋನಾ ಅವರಿಗೆ ಇದ್ದ ಕಾರಣ ಹಿಂದುಳಿದ ನೇಪಲ್ಸ್‌ ನಗರಕ್ಕೆ ಬಂದಾಗಆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದು ಕಷ್ಟವೇನೂ ಆಗಲಿಲ್ಲ. ನೆಪೋಲಿ ಪರ ಸಹಿಹಾಕಿದ ನಂತರ ಮೊದಲ ಬಾರಿ, ಜುಲೈ 5ರಂದು ಸಾನ್‌ ಪೌಲೊ ಕ್ರೀಡಾಂಗಣಕ್ಕೆ ಬಂದಿಳಿದಾಗ ಎದುರುಗೊಳ್ಳಲು 80 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ನೆರೆದಿದ್ದರು. 1990ರ ಇಟಾಲಿಯಾ ವಿಶ್ವಕಪ್‌ನಲ್ಲಿ ಅವರ ಅಭಿಮಾನಿಗಳು ತವರು ದೇಶ ಬಿಟ್ಟು ಮರಡೋನಾ ಅವರನ್ನು ಬೆಂಬಲಿಸಿದ್ದರು.

ಒಂದು ಸ್ಥಳೀಯ ಪತ್ರಿಕೆಯಂತೂ– ‘ನಮಲ್ಲಿ ಒಳ್ಳೆಯ ಮನೆಗಳಿಲ್ಲ, ಶಾಲೆ, ಬಸ್‌, ಉದ್ಯೋಗ, ನೈರ್ಮಲ್ಯ ಯಾವುದೂ ಇಲ್ಲ. ಆದರೆ ಇದಾವುದೂ ನಮಗೆ ಲೆಕ್ಕಕ್ಕಿಲ್ಲ. ಏಕೆಂದರೆ ನಮ್ಮಲ್ಲಿ ಮರಡೋನಾ ಇದ್ದಾರೆ’ ಎಂದು ವರದಿ ಮಾಡಿತ್ತಂತೆ.

‘ನಾನು ಏನೆಂದು ತಿಳಿದುಕೊಳ್ಳುವ ಮೊದಲೇ ನನ್ನನ್ನು ತಮ್ಮವರನ್ನಾಗಿ ಮಾಡಿಕೊಂಡರು. ಮೊದಲ ದಿನದಿಂದಲೇ ನನ್ನನ್ನು ಅವರಲ್ಲೊಬ್ಬರಾಗಿ ಗುರುತಿಸಿಕೊಂಡರು. ಈ ಪ್ರೀತಿ ಮರೆಯಲು ಸಾಧ್ಯವಿಲ್ಲ’ ಎಂದಿದ್ದರು ಮರಡೋನಾ ಆ ದಿನಗಳ ಬಗ್ಗೆ.

ನೇಪಲ್ಸ್‌ನಲ್ಲಿ ಅವರು ಅತ್ಯಂತ ಜನಪ್ರಿಯರಾದರು. ಅರ್ಧಕ್ಕರ್ಧ ಮನೆಗಳಲ್ಲಿ ಏಸುವಿನ ಚಿತ್ರದ ಪಕ್ಕದಲ್ಲೇ ಮರಡೋನಾ ಚಿತ್ರವೂ ಇರುತಿತ್ತು. 500ಕ್ಕೂ ಹೆಚ್ಚು ಮಂದಿ ನವಜಾತ ಶಿಶುಗಳಿಗೆ ’ಡಿಯೆಗೊ’ ಎಂದು ನಾಮಕರಣ ಮಾಡಿದ್ದರು. ಇನ್ನು ಕೆಲವು ಅಭಿಮಾನಿಗಳು, ಒಂದು ಹೆಜ್ಜೆ ಮುಂದೆಹೋಗಿ ತಮ್ಮ ಮಕ್ಕಳಿಗೆ ‘ಡಿಯೆಗೊ ಅರ್ಮಾಂಡೊ ಮರಡೋನಾ’ ಎಂದು ಹೆಸರಿಟ್ಟರು.

ನೆಪೋಲಿಯಲ್ಲೇ ಮರಡೋನಾ ಸಹ ತಮ್ಮ ಕ್ರೀಡಾ ಬದುಕಿನ ಉತ್ತುಂಗಕ್ಕೆ ಏರಿದರು. ಅವರ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ, ಮೆಕ್ಸಿಕೊದಲ್ಲಿ ನಡೆದ 1986ರ ವಿಶ್ವಕಪ್‌ ಟೂರ್ನಿಯಲ್ಲಿ ಟ್ರೋಫಿ ಗೆದ್ದುಕೊಂಡಿತು. ಅಷ್ಟರಲ್ಲೇ ಮರಡೋನಾ ಫುಟ್‌ಬಾಲ್‌ ದಿಗ್ಗಜರ ಸ್ಥಾನದಲ್ಲಿ ವಿರಾಜಮಾನರಾಗಿದ್ದರು. ಅವರು ನೆಪೋಲಿ ತಂಡದ ಪರ 115 ಗೋಲುಗಳನ್ನು ಗಳಿಸಿದ್ದರು. ಕೆಲವು ಇಟಲಿಯ ಲೀಗ್‌ನಲ್ಲೇ ಅವಿಸ್ಮರಣೀಯ ಎನಿಸುವಂತೆ ಇದ್ದವು. ಇಟಲಿಯ ಉನ್ನತ ಲೀಗ್‌ನಿಂದ ಹಿಂಬಡ್ತಿ ಪಡೆಯುವ ಭೀತಿಯಲ್ಲಿದ್ದ ನೆಪೋಲಿ ತಂಡ ಮರಡೋನಾ ಬಂದ ನಂತರ ಉತ್ತಮ ದಿನಗಳನ್ನು ಕಾಣತೊಡಗಿತು. 1987ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. 1990ರಲ್ಲಿ ಎರಡನೇ ಬಾರಿ ಇಟಾಲಿಯನ್‌ ಲೀಗ್ ಚಾಂಪಿಯನ್‌ ಆಯಿತು. 1989ರಲ್ಲಿ ಯುಇಎಫ್‌ಎ ಕಿರೀಟ ಧರಿಸಿತು.

ಅಧಃಪತನದ ಆರಂಭ:ಆದರೆ ದುರಂತವೆಂದರೆ ಮರಡೋನಾ ಅಧಃಪತನವೂ ಇದೇ ನೇಪಲ್ಸ್‌ನಲ್ಲಿ ಆರಂಭವಾಯಿತು. ವಾರಾಂತ್ಯ ಪಂದ್ಯಗಳು ಮುಗಿದ ನಂತರ, ಭಾನುವಾರ ರಾತ್ರಿಯಿಂದ ಬುಧವಾರದವರೆಗೆ ತಡರಾತ್ರಿಯ ಪಾರ್ಟಿಗಳಲ್ಲಿ ಅವರು ಮುಳುಗಿರುತ್ತಿದ್ದರು. ಇದನ್ನು ಅವರೇ ಒಪ್ಪಿಕೊಂಡಿದ್ದರು. ಕೊಕೇನ್‌ ಸೇವನೆಯಲ್ಲೂ ತೊಡಗಿದರು. ವೇಶ್ಯೆಯರ ಸಂಗದಲ್ಲೂ ಅವರು ಇರುವುದು ಬೆಳಕಿಗೆ ಬಂತು. ಅವರ ಫೋನ್‌ ಕರೆಗಳ ಆಧಾರದ ಮೇಲೆ ಇದು ಬಯಲಾಯಿತು. ಇಟಲಿಯ ಭೂಗತ ಜಗತ್ತು ಕೂಡ ಅವರ ಚಟುವಟಿಕೆ ಮೇಲೆ ನಿಗಾ ಇಟ್ಟಿತು. ತೆರಿಗೆ ವಿವಾದದಲ್ಲೂ ಸಿಲುಕಿಕೊಂಡರು. ಅವರಿಗೆ ಆಗ ಪೈಪೋಟಿ ನೀಡುತ್ತಿದ್ದ ಇತರ ಆಟಗಾರರೂ ಇದನ್ನೇ ಬಯಸಿದ್ದರು.

ಇದೆಲ್ಲದರಿಂದ ಪಾರಾದರೆ ಸಾಕು ಎಂದು ಅವರು ಮರಳಿ ಆರ್ಜೆಂಟಿನಾಕ್ಕೆ ಹೋದರು. ಅಮೆರಿಕದಲ್ಲಿ ನಡೆದ 1994ರ ವಿಶ್ವಕಪ್‌ ವೇಳೆ ಮಾದಕವಸ್ತು ಸೇವನೆ ಕಾರಣ ಅವರು ಬರೇ ಎರಡು ಪಂದ್ಯಗಳ ನಂತರ ಹೊರನಡೆಯಬೇಕಾಯಿತು.

ವೃತ್ತಿಪರತೆ, ಶಿಸ್ತು:ಒಳ್ಳೆಯ ಆಟವಿದ್ದರೂ ಅದರ ಜೊತೆಗೆ ಇರಬೇಕಾದ ವೃತ್ತಿಪರತೆ, ಶಿಸ್ತು ಮರಡೋನಾ ಬಳಿ ಇರಲಿಲ್ಲ. ಹೀಗಾಗಿ ತಮ್ಮ ವೃತ್ತಿಜೀವನದ ಕೊನೆಯ ಕೆಲವು ವರ್ಷ ಅವರು ಉತ್ತಮ ಆಟದ ಬದಲು ಪದೇ ಪದೇ ವಿವಾದಗಳಿಂದ ಸುದ್ದಿಯಾದರು. ನೇಪಲ್ಸ್‌ನಲ್ಲಿ ಆಟದ ನಂತರ ಅವರು ಕ್ಲಬ್‌ ಪಾರ್ಟಿಗಳಲ್ಲೇ ಮುಳುಗಿಹೋಗುತ್ತಿರುವುದು ಸಾಮಾನ್ಯವಾಗಿತ್ತು. ಪ್ರಸಿದ್ಧಿ, ಹಣ ಹರಿದುಬರುವಾಗ ಅವರು ಅದಕ್ಕೆ ಮಾನಸಿಕವಾಗಿ ಸಿದ್ಧರಿರಲಿಲ್ಲವೇನೊ ಎಂಬ ಮಾತುಗಳೂ ಕೇಳಿಬಂದಿದ್ದವು.

ಮರಡೋನಾ ಸರ್ವಶ್ರೇಷ್ಠ ಆಟಗಾರರ ಪಟ್ಟಿಗೆ ಸೇರಿದರೂ, ವ್ಯಕ್ತಿತ್ವದ ಮಟ್ಟಿಗೆ ಅವರು ಇನ್ನೊಬ್ಬ ಮಹಾನ್‌ ಆಟಗಾರ, ಬ್ರೆಜಿಲ್‌ನ ಪೆಲೆ (ಎಡ್ಸನ್‌ ಅರೆಂಟಸ್‌ ದೊ ನಾಸಿಮೆಂಟೊ) ಅವರ ಸಮಕ್ಕೆ ಏರಲಿಲ್ಲ. ಕ್ರೀಡಾಂಗಣದ ಆಚೆಯ ಚಟುವಟಿಕೆಯಿಂದಾಗಿ ಅವರು, ಜಗತ್ತಿನ ಅತೀ ಹೆಚ್ಚು ಜನ ವೀಕ್ಷಿಸುವ ಈ ಕ್ರೀಡೆಗೆ ಉತ್ತಮ ರಾಯಭಾರಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT