ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ : ಆಸ್ಟ್ರೇಲಿಯಾ ಮಣಿಸಿದ ನೈಜೀರಿಯಾ

Published 27 ಜುಲೈ 2023, 14:28 IST
Last Updated 27 ಜುಲೈ 2023, 14:28 IST
ಅಕ್ಷರ ಗಾತ್ರ

ಬ್ರಿಸ್ಬೇನ್‌ : ಒಸಿನಚಿ ಒಹಾಲೆ ಮತ್ತು ಅಸಿಸತ್ ಒಶೋಲಾ ಅವರು ಎರಡನೇ ಅವಧಿಯಲ್ಲಿ ತಂದಿತ್ತ ಗೋಲುಗಳ ನೆರವಿನಿಂದ ನೈಜೀರಿಯಾ ತಂಡ, ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಆತಿಥೇಯ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿತು.

ಬ್ರಿಸ್ಬೇನ್‌ ಕ್ರೀಡಾಂಗಣದಲ್ಲಿ 50 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ನೈಜೀರಿಯಾ 3–2 ಗೋಲುಗಳ ಗೆಲುವು ಸಾಧಿಸಿತು.

ಈ ಸೋಲಿನ ಕಾರಣ ಆಸ್ಟ್ರೇಲಿಯಾ, ಲೀಗ್‌ ಹಂತದಲ್ಲೇ ಹೊರಬೀಳುವ ಅಪಾಯಕ್ಕೆ ಸಿಲುಕಿದೆ. 16ರ ಘಟ್ಟ ಪ್ರವೇಶಿಸಬೇಕಾದರೆ ಅಂತಿಮ ಲೀಗ್‌ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಗುರುವಾರ ನಡೆದ ಪಂದ್ಯದಲ್ಲಿ ವಿರಾಮದ ವೇಳೆಗೆ ಉಭಯ ತಂಡಗಳು 1–1 ಗೋಲಿನಿಂದ ಸಮಬಲ ಸಾಧಿಸಿದ್ದವು. ಎಮಿಲಿ ವಾನ್‌ ಎಗ್ಮಂಡ್‌ ಅವರು ಆಸ್ಟ್ರೇಲಿಯಾ ಪರ ಹಾಗೂ ಯುಚೆನಾ ಕಾನು ಅವರು ನೈಜೀರಿಯಾಕ್ಕೆ ಗೋಲು ತಂದಿತ್ತರು.

ಎರಡನೇ ಅವಧಿಯಲ್ಲಿ ಒಸಿನಚಿ (65ನೇ ನಿ.) ಮತ್ತು ಒಶೋಲಾ (72 ನೇ ನಿ.) ಅವರು ಏಳು ನಿಮಿಷಗಳ ಅಂತರದಲ್ಲಿ ಗೋಲು ಗಳಿಸಿ ನೈಜೀರಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂಜುರಿ ಅವಧಿಯಲ್ಲಿ ಗೋಲು ಗಳಿಸಿದ ಅಲನಾ ಕೆನೆಡಿ, ಆತಿಥೇಯರ ಸೋಲಿನ ಅಂತರ ತಗ್ಗಿಸಿದರು.

ಹೊರಬಿದ್ದ ವಿಯೆಟ್ನಾಂ (ಹ್ಯಾಮಿಲ್ಟನ್‌ ವರದಿ): ಗುರುವಾರ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ಪೋರ್ಚುಗಲ್ 2–0 ಗೋಲುಗಳಿಂದ ವಿಯೆಟ್ನಾಂ ವಿರುದ್ಧ ಗೆದ್ದಿತು. ಸೋಲು ಅನುಭವಿಸಿದ ವಿಯೆಟ್ನಾಂ, 16ರ ಘಟ್ಟ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು. ಟೆಲ್ಮಾ ಎನ್ಕರ್ನೇಸಾವೊ (7ನೇ ನಿ.) ಮತ್ತು ಕಿಕಾ ನಜರೆತ್ (21ನೇ ನಿ.) ಅವರು ಪೋರ್ಚುಗಲ್‌ ಗೆಲುವಿನಲ್ಲಿ ಗಮನ ಸೆಳೆದರು.

ಡ್ರಾ ಪಂದ್ಯದಲ್ಲಿ ಅಮೆರಿಕ: ನಾಯಕಿ ಲಿಂಡ್ಸೆ ಹೊರಾನ್ ಅವರು ಎರಡನೇ ಅವಧಿಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್‌ ಅಮೆರಿಕ ತಂಡ, ನೆದರ್ಲೆಂಡ್ಸ್ ಜತೆ 1–1 ಗೋಲಿನ ಡ್ರಾ ಸಾಧಿಸಿತು.

ಮಿಡ್‌ಫೀಲ್ಡರ್‌ ಜಿಲ್‌ ರೂರ್ಡ್ ಅವರು 17ನೇ ನಿಮಿಷದಲ್ಲಿ ನೆದರ್ಲೆಂಡ್ಸ್‌ಗೆ ಮುನ್ನಡೆ ತಂದುಕೊಟ್ಟರು. ಲಿಂಡ್ಸೆ, 62ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು.

‘ಇ’ ಗುಂಪಿನಲ್ಲಿ ಉಭಯ ತಂಡಗಳು ತಲಾ ನಾಲ್ಕು ಪಾಯಿಂಟ್ಸ್‌ ಕಲೆಹಾಕಿವೆ. ಮಂಗಳವಾರ ನಡೆಯಲಿರುವ ಕೊನೆಯ ಲೀಗ್‌ ಪಂದ್ಯಗಳಲ್ಲಿ ಅಮೆರಿಕ– ಪೋರ್ಚುಗಲ್‌ ಮತ್ತು ನೆದರ್ಲೆಂಡ್ಸ್– ವಿಯೆಟ್ನಾಂ ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT