ಶುಕ್ರವಾರ, ಆಗಸ್ಟ್ 19, 2022
25 °C

ಐಎಸ್ಎಲ್‌: ನಾರ್ತ್ ಈಸ್ಟ್‌ ಯುನೈಟೆಡ್‌ಗೆ ಅಜೇಯ ಓಟದ ದಾಖಲೆಯ ಕನಸು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ, ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಸತತವಾಗಿ ಅಜೇಯವಾಗಿ ಉಳಿದ ತಂಡ ಎಂಬ ಹೆಗ್ಗಳಿಕೆಯತ್ತ ನಾರ್ತ್ ಈಸ್ಟ್ ಯುನೈಟೆಡ್‌ ಚಿತ್ತ ನೆಟ್ಟಿದೆ. ತಿಲಕ್ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಈ ತಂಡ ಜೆಮ್ಶೆಡ್‌ಪುರ ಎಫ್‌ಸಿ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ತಂಡ ಮಹತ್ವದ ಮೈಲಿಗಲ್ಲು ಸ್ಥಾಪಿಸಲಿದೆ. 

ಈಗಾಗಲೇ ಆರು ಪಂದ್ಯಗಳನ್ನು ಆಡಿರುವ ನಾರ್ತ್ ಈಸ್ಟ್ ಯುನೈಟೆಡ್‌ ಎರಡಲ್ಲಿ ಗೆದ್ದಿದ್ದು ನಾಲ್ಕರಲ್ಲಿ ಡ್ರಾ ಸಾಧಿಸಿದೆ. ಶುಕ್ರವಾರ ಮೂರು ಪಾಯಿಂಟ್ ಕಲೆ ಹಾಕಿದರೆ ಪಾಯಿಂಟ್ ಪಟ್ಟಿಯ ಮೊದಲ ಎರಡು ಸ್ಥಾನಗಳಲ್ಲಿರುವ ಮುಂಬೈ ಸಿಟಿ ಎಫ್‌ಸಿ ಮತ್ತು ಎಟಿಕೆ ಮೋಹನ್ ಬಾಗನ್ ಜೊತೆ ಸ್ಥಾನ ಹಂಚಿಕೊಳ್ಳಲಿದೆ.

ಕಳೆದ ಬಾರಿಯೂ ಆರಂಭದಲ್ಲಿ ನಾರ್ತ್‌ ಈಸ್ಟ್ ಯುನೈಟೆಡ್ ಇದೇ ರೀತಿಯ ಪ್ರದರ್ಶನ ತೋರಿತ್ತು. ಆರು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿತ್ತು. ಆದರೆ ನಂತರ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಮತ್ತೆ ಚೇತರಿಸಿಕೊಳ್ಳದೆ ಒಂಬತ್ತನೇ ಸ್ಥಾನಕ್ಕೆ ಕುಸಿದಿತ್ತು.

ಜೆಮ್ಶೆಡ್‌ಪುರ ತಂಡಕ್ಕೆ ಸ್ಟ್ರೈಕರ್ ನೆರಿಜಸ್ ವಲ್ಕಿಸ್ ಅವರ ಬಲವಿದೆ. ಏಳನೇ ಆವೃತ್ತಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಗೋವಾದ ಇಗರ್ ಆಂಗುಲೊ ವಲ್ಕಿಸ್‌ ಇದ್ದಾರೆ. ತಂಡ ಗಳಿಸಿರುವ ಏಳು ಗೋಲುಗಳಲ್ಲಿ ಆರು ಗೋಲುಗಳನ್ನು ಅವರೊಬ್ಬರೇ ದಾಖಲಿಸಿದ್ದಾರೆ. ಲಿಥುವೇನಿಯಾದ ಈ ಆಟಗಾರ ನಾರ್ತ್ ಈಸ್ಟ್ ತಂಡಕ್ಕೆ ಸವಾಲಾಗಲಿದ್ದಾರೆ. ಅಮಾನತುಗೊಂಡಿರುವ ಮಿಡ್‌ಫೀಲ್ಡರ್ ಐಟರ್ ಮನ್ರೊಯ್ ಶುಕ್ರವಾರದ ಪಂದ್ಯಕ್ಕೆ ಲಭ್ಯವಿಲ್ಲ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ರೆಡ್ ಕಾರ್ಡ್ ಪಡೆದಿದ್ದರು. ಅವರ ಅನುಪಸ್ಥಿತಿಯನ್ನು ತಂಡ ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಸ್ಟೀಫನ್ ಹಾಗೂ ಪೀಟರ್ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ್ದಾರೆ. ಅವರಿಬ್ಬರನ್ನು ನಿಭಾಯಿಸುವ ಜವಾಬ್ದಾರಿ ನಾರ್ತ್ ಈಸ್ಟ್ ಫಾರ್ವರ್ಡರ್‌ಗಳ ಮೇಲೆ ಇದೆ.

ಆರು ಪಂದ್ಯಗಳಲ್ಲಿ ನಾಲ್ಕನ್ನು ಡ್ರಾ ಮಾಡಿಕೊಂಡಿರುವ ಜೆಮ್ಶೆಡ್‌ಪುರ ತಲಾ ಒಂದು ಜಯ ಮತ್ತು ಸೋಲು ಕಂಡಿದೆ. ಹೀಗಾಗಿ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲು ಅದು ಪ್ರಯತ್ನಿಸಲಿದೆ. ನಾರ್ತ್ ಈಸ್ಟ್ ವಿರುದ್ಧ ಜಯ ಗಳಿಸಿದರೆ ಒವೆನ್ ಕೊಯ್ಲೆ ಅವರ ಈ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲಿದೆ.

‘ನಾರ್ತ್‌ ಈಸ್ಟ್ ಯುನೈಟೆಡ್‌ ಉತ್ತಮ ತಂಡ. ಆದ್ದರಿಂದ ನಾವು ಹೆಚ್ಚು ಶ್ರಮವಹಿಸಬೇಕಾಗಿದೆ. ಶುಕ್ರವಾರದ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗುವುದರಲ್ಲಿ ಸಂದೇಹ ಇಲ್ಲ. ಆದರೆ ನಾವು ಜಯವನ್ನು ಬಿಟ್ಟುಕೊಡುವುದರಿಲ್ಲ’ ಎಂದು ಒವೆನ್ ಕೊಯ್ಲೆ ಹೇಳಿದ್ದಾರೆ.

‘ಗೆಲುವಿಗಾಗಿ ಕಠಿಣ ಪ್ರಯತ್ನ ನಡೆಸುತ್ತಿದ್ದೇವೆ. ಸೋಲಬಾರದು ಎಂಬುದು ನಮ್ಮ ಗುರಿ’ ಎಂದಿರುವ ನಾರ್ತ್ ಈಸ್ಟ್‌‌ ಕೋಚ್ ಜೆರಾರ್ಡ್ ನೂಸ್ ‘ಪ್ರತಿ ಪಂದ್ಯದಲ್ಲೂ ಮೂರು ಪಾಯಿಂಟ್‌ ಗಳಿಸುವುದು ನಮ್ಮ ಉದ್ದೇಶ. ತಂಡ ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆ ಕಾಣುತ್ತಿದೆ. ಆದ್ದರಿಂದ ಸೋಲಿನ ಬಗ್ಗೆ ಚಿಂತೆ ಇಲ್ಲ. ನಮ್ಮ ಸಾಮರ್ಥ್ಯ ಏನು ಎಂಬುದಕ್ಕೆ ಈ ವರೆಗಿನ ಪ್ರದರ್ಶನವೇ ಸಾಕ್ಷಿ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು