ಸೋಮವಾರ, ಜುಲೈ 26, 2021
23 °C

ಸೀರಿ ಎ ಫುಟ್‌ಬಾಲ್ ಟೂರ್ನಿ: ಮಾರಿಯೊ ಪೆಸಾಲಿಕ್ ಹ್ಯಾಟ್ರಿಕ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮಿಲಾನ್: ಸ್ಥಳೀಯ ಎದುರಾಳಿ ಬ್ರೆಸಿಕಾ ತಂಡದ ವಿರುದ್ಧ ಮಂಗಳವಾರ ರಾತ್ರಿ ಭರ್ಜರಿ ಗೆಲುವು ದಾಖಲಿಸಿದ ಅಟ್ಲಾಂಟ ತಂಡ ಸೀರಿ ಎ ಫುಟ್‌ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇರಿಸಿತು. ಗೆವಿಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಾರಿಯೊ ಪೆಸಾಲಿಕ್ ಅವರು ಹ್ಯಾಟ್ರಿಕ್ ಗೋಲುಗಳ ಮೂಲಕ ಮಿಂಚಿ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು.

ಬ್ರೆಸಿಕಾವನ್ನು 6–2 ಗೋಲುಗಳಿಂದ ಸೋಲಿಸಿದ ತಂಡ ಈ ಮೂಲಕ ಲೀಗ್‌ನಲ್ಲಿ ಸತತ 13 ಪಂದ್ಯಗಳಲ್ಲಿ ಅಜೇಯವಾಗಿ ಉಳಿಯಿತು. ಮೊದಲ ಸ್ಥಾನದಲ್ಲಿರುವ ಯುವೆಂಟಸ್‌ಗಿಂತ (76) ಅಟ್ಲಾಂಟ ಈಗ ಆರು ಪಾಯಿಂಟ್‌ಗಳಿಂದ ಹಿಂದೆ ಉಳಿದಿದೆ. ಇಂಟರ್ ಮಿಲಾನ್ ಮತ್ತು ಲಾಜಿಯೊ ತಂಡಗಳು (68) ಅಟ್ಲಾಂಟಕ್ಕಿಂತ ಎರಡು ಪಾಯಿಂಟ್‌ಗಳಿಂದ ಹಿಂದೆ ಉಳಿದಿದ್ದು ತಲಾ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಕೋಚ್ ಜಿಯಾನ್ ಪೀರೊ ಗಾಸ್ಪೆರಿನಿ ಅವರ ಅಟ್ಲಾಂಟ ತಂಡ ಮಂಗಳವಾರದ ಆರು ಗೋಲುಗಳೊಂದಿಗೆ ಲೀಗ್‌ನಲ್ಲಿ ಈ ವರೆಗೆ ಒಟ್ಟು 93 ಗೋಲುಗಳ ಸಾಧನೆ ಮಾಡಿತು. ಎಂಟು ಬಾರಿಯ ಚಾಂಪಿಯನ್ ಯುವೆಂಟಸ್ ಗಳಿಸಿರುವ ಗೋಲುಗಳಿಗಿಂತ 26 ಹೆಚ್ಚು ಗೋಲುಗಳು ಅಟ್ಲಾಂಟ ಖಾತೆಯಲ್ಲಿವೆ.

’ನಮ್ಮ ತಂಡ ಸಹಜವಾದ ಆಟವಾಡಿತು. ಗೋಲುಗಳು ಸಹಜವಾಗಿ ಬಂದವು. ಎದುರಾಳಿಯನ್ನು ಹೀಯಾಳಿಸುವ ಯಾವುದೇ ಉದ್ದೇಶ ಇದರಲ್ಲಿ ಇರಲಿಲ್ಲ. ನಮ್ಮ ತಂಡ ಕಳೆದ ಬಾರಿ ಅತ್ಯುತ್ತಮ ಆಕ್ರಮಣಕಾರಿ ಆಟವಾಡಿ ಗಮನ ಸೆಳೆದಿತ್ತು. ಈ ಬಾರಿ ಈ ವಿಭಾಗ ಇನ್ನಷ್ಟು ಪ್ರಬಲವಾಗಿದೆ. ಬಹುತೇಕ ಎಲ್ಲ ಆಟಗಾರರೂ ಗೋಲು ಗಳಿಸಿ ಮಿಂಚಿದ್ದಾರೆ‘ ಎಂದು ಜಿಯಾನ್ ಪೀರೊ ಹೇಳಿದರು.

ಅಟ್ಲಾಂಟ ಮತ್ತು ಬ್ರೆಸಿಕಾ ತಂಡಗಳ ತವರು ನಗರಗಳು ಕೋವಿಡ್‌ಗೆ ನಲುಗಿವೆ. ಆದ್ದರಿಂದ ಪಂದ್ಯ ಆರಂಭಕ್ಕೂ ಮೊದಲು ‘ರಿನಾಸೆರೊ, ರಿನಾಸೆರೈ‘ (ನಾನು ಮರುಹುಟ್ಟು ಪಡೆಯುವೆ; ನೀನೂ ಮರುಹುಟ್ಟು ಪಡೆಯಬಲ್ಲೆ) ಎಂಬ ಹಾಡಿನ ಸಂಗೀತವನ್ನು ನುಡಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು. ಪಾಯಿಂಟ್ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿರುವ ಬ್ರೆಸಿಕಾ ತಂಡ ಗೆದ್ದು ಮೇಲೇರುವ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದಿತ್ತು. ಆದರೆ ಅಟ್ಲಾಂಟದ ಆಕ್ರಮಣದ ಮುಂದೆ ಅದರ ಲೆಕ್ಕಾಚಾರಗಳೆಲ್ಲವೂ ವಿಫಲವಾದವು.

ಈ ಬಾರಿ ಒಟ್ಟು 17 ಗೋಲುಗಳನ್ನು ಗಳಿಸಿರುವ ಕೊಲಂಬಿಯಾದ ಲೂಯಿಸ್ ಮುರೀಲ್ ತಲೆಗೆ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದರಿಂದ ಆಡಿರಲಿಲ್ಲ. ಆದರೆ ಪಂದ್ಯ ವೀಕ್ಷಿಸಲು ಅಂಗಣಕ್ಕೆ ಬಂದಿದ್ದರು. ಅವರ ಅನುಪಸ್ಥಿತಿಯನ್ನು ಮರೆಸುವಂತೆ ಆಡಿದ ಕ್ರೊಯೇಷ್ಯಾದ ಪೆಸಾಲಿಕ್ ಎರಡು ನಿಮಿಷಗಳಾಗುವಷ್ಟರಲ್ಲಿ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. ರುಸ್ಲಾನ್ ಮಲಿನೊವ್‌ಸ್ಕಿ ನೀಡಿದ ಕ್ರಾಸ್‌ನಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸಿದರು.

ಎಂಟನೇ ನಿಮಿಷದಲ್ಲಿ ಎರ್ನೆಸ್ಟೊ ತೊರೆಗ್ರೊಸಾ ಗಳಿಸಿದ ಗೋಲಿನ ಮೂಲಕ ಬ್ರೆಸಿಕಾ ತಿರುಗೇಟು ನೀಡಿತು. ಇದರಿಂದ ಎದೆಗುಂದದ ಅಟ್ಲಾಂಟ ಅರ್ಧ ತಾಸಿನೊಳಗೆ ಮತ್ತೆ ಮೂರು ಗೋಲುಗಳನ್ನು ಗಳಿಸಿ ಮುನ್ನಡೆ ಹೆಚ್ಚಿಸಿಕೊಂಡಿತು. ಮಾರ್ಟೆನ್ ಡಿ ರೂಮ್ (25ನೇ ನಿಮಿಷ), ರುಸ್ಲಾನ್ ಮಲಿನೊವ್‌ಸ್ಕಿ (28ನೇ ನಿಮಿಷ) ಮತ್ತು ಡುವಾನ್ ಜಪಾಟ (30ನೇ ನಿಮಿಷ) ಚೆಂಡನ್ನು ಗುರಿಸೇರಿಸುವಲ್ಲಿ ಯಶಸ್ವಿಯಾದರು. 

ದ್ವಿತೀಯಾರ್ಧದಲ್ಲೂ ಮುಂದುವರಿದ ಆಕ್ರಮಣ

ವಿರಾಮದ ನಂತರವೂ ಅಟ್ಲಾಂಟದ ಆಕ್ರಮಣ ಮುಂದುವರಿಯಿತು. 55ನೇ ನಿಮಿಷದಲ್ಲಿ ರುಸ್ಲಾನ್ ಮಲಿನೊವ್‌ಸ್ಕಿ ನೀಡಿದ ಪಾಸ್‌ ನಿಯಂತ್ರಿಸಿ ಮುನ್ನುಗ್ಗಿದ ಪೆಸಾಲಿಕ್ ಎದುರಾಳಿ ತಂಡದ ಆಟಗಾರ ಲೊರೆನ್ಸೊ ಅಂಡ್ರೆನಾಸಿ ಅವರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿದರು. 58ನೇ ನಿಮಿಷದಲ್ಲಿ ಎಬ್ರಿಮಾ ಕೊಲ್ಲಿ ನೀಡಿದ ಕ್ರಾಸ್‌ನಲ್ಲಿ ಗೋಲು ಗಳಿಸಿ ಹ್ಯಾಟ್ರಿಕ್ ಪೂರೈಸಿದರು. ಬ್ರೆಸಿಕಾಗೆ 83ನೇ ನಿಮಿಷದಲ್ಲಿ ನಿಕೋಲಾ ಗೋಲು ಗಳಿಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು