ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುರೋ ಕಪ್‌ ಫುಟ್‌ಬಾಲ್‌: ಕ್ವಾರ್ಟರ್‌ ಫೈನಲ್‌ಗೆ ಪೋರ್ಚುಗಲ್‌

ಗೋಲ್‌ಕೀಪರ್‌ ಕೋಸ್ಟಾ ಮಿಂಚು: ಸ್ಲೊವೇನಿಯಾಗೆ ನಿರಾಸೆ
Published 2 ಜುಲೈ 2024, 16:24 IST
Last Updated 2 ಜುಲೈ 2024, 16:24 IST
ಅಕ್ಷರ ಗಾತ್ರ

ಫ್ರಾಂಕ್‌ಫರ್ಟ್, ಜರ್ಮನಿ: ಗೋಲ್‌ಕೀಪರ್‌ ಡಿಯೊಗೊ ಕೋಸ್ಟಾ ಮೂರು ಗೋಲು ಯತ್ನಗಳನ್ನು ಅಮೋಘವಾಗಿ ತಡೆದು ಪೋರ್ಚುಗಲ್‌ ಗೆಲುವಿನ ರೂವಾರಿಯಾದರು. ಸೋಮವಾರ ತಡರಾತ್ರಿ ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿಯ ರೋಚಕ ಹಣಾಹಣಿಯಲ್ಲಿ ಸ್ಲೊವೇನಿಯಾ ತಂಡವನ್ನು ‘ಪೆನಾಲ್ಟಿ’ಯಲ್ಲಿ ಸೋಲಿಸಿದ ಪೋರ್ಚುಗಲ್‌ ತಂಡ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು.

ನಿಗದಿತ ಅವಧಿಯ ಪಂದ್ಯವು ಗೋಲಿಲ್ಲದೇ ‘ಡ್ರಾ’ ಆಯಿತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಪೋರ್ಚುಗಲ್‌ 3–0 ಯಿಂದ ಜಯ ಸಾಧಿಸಿತು. ಪೋರ್ಚುಗಲ್ ತಂಡವು ಜೂನ್‌ 6ರಂದು ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಫ್ರಾನ್ಸ್‌ ತಂಡವನ್ನು ಎದುರಿಸಲಿದೆ.

ಪಂದ್ಯದ ಮೊದಲಾರ್ಧದ ‘ಇಂಜ್ಯುರಿ ಟೈಮ್‌’ ಅವಧಿಯಲ್ಲಿ ಪೋರ್ಚುಗಲ್‌ನ ಫಾರ್ವರ್ಡ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ವಿಫಲವಾಗಿ, ಮೈದಾನದಲ್ಲೇ ಕಣ್ಣೀರು ಹಾಕಿದರು. 39 ವರ್ಷದ ರೊನಾಲ್ಡೊ ಗೋಲು ದಾಖಲಿಸುತ್ತಿದ್ದರೆ ಯುರೋ ಕಪ್‌ನಲ್ಲಿ ಸ್ಕೋರ್‌ ಗಳಿಸಿದ ಅತಿ ಹಿರಿಯ ವಯಸ್ಸಿನ ಆಟಗಾರ ಎಂಬ ಹಿರಿಮೆಗೆ ಪಾತ್ರವಾಗುತ್ತಿದ್ದರು.

ಶೂಟೌಟ್‌ನಲ್ಲಿ ರೊನಾಲ್ಡೊ, ಬ್ರೂನೊ ಫರ್ನಾಂಡಿಸ್ ಮತ್ತು ಬರ್ನಾರ್ಡೊ ಸಿಲ್ವಾ ಅವರು ಫೋರ್ಚುಗಲ್‌ ಪರ ಚೆಂಡನ್ನು ಗುರಿ ಸೇರಿಸಿದರು. ಸ್ಲೊವೇನಿಯಾದ ಮೂವರು ಆಟಗಾರರೂ (ಜೋಸೆಪ್‌ ಇಲಿಸಿಕ್‌, ಜ್ಯೂರ್ ಬಾಲ್ಕೊವಿಕ್‌, ಬೆಂಜಮಿನ್ ವೆರ್ಬಿಕ್‌) ವಿಫಲರಾದರು. ಡಿಯೊಗೊ ಕೋಸ್ಟಾ ಅಮೋಘ ಪ್ರದರ್ಶನ ನೀಡಿ ಚೆಂಡನ್ನು ತಡೆದರು.

2016ರ ಆವೃತ್ತಿಯ ಚಾಂಪಿಯನ್‌ ಪೋರ್ಚುಗಲ್‌ ತಂಡದ ಆಟಗಾರರು ಆರಂಭದಿಂದಲೇ ಚೆಂಡಿನ ಮೇಲೆ ಪ್ರಾಬಲ್ಯ ಸಾಧಿಸಿದರು. ಆದರೆ, ಪ್ರಮುಖ ಟೂರ್ನಿಯೊಂದರಲ್ಲಿ ಮೊದಲ ಬಾರಿಗೆ ನಾಕೌಟ್‌ ಪ್ರವೇಶಿಸಿದ್ದ ಸ್ಲೊವೇನಿಯಾ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆಯಿತು. 

ಕೊನೆಯ ಆವೃತ್ತಿ: ಯುರೋ ಕಪ್‌ನಲ್ಲಿ ದಾಖಲೆಯ ಆರನೇ ಬಾರಿ ಆಡಿರುವ ರೊನಾಲ್ಡೊ, ಇದು ವೃತ್ತಿಜೀವನದ ಕೊನೆಯ ಆವೃತ್ತಿ ಎಂಬುದನ್ನು ಖಚಿತಪಡಿಸಿದ್ದಾರೆ. ಯುರೋ ಕಪ್‌ನಲ್ಲಿ ಅವರು 14 ಗೋಲುಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ.

ಸ್ಲೊವೇನಿಯಾ ವಿರುದ್ಧ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ‘ನಿಸ್ಸಂದೇಹವಾಗಿ, ಇದು ನನ್ನ ಕೊನೆಯ ಯುರೋಪಿಯನ್ ಚಾಂಪಿಯನ್‌ಷಿಪ್‌ ಆಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT