ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್‌ ಆಟಗಾರರಿಗೆ ಗಾಯದ ಸಮಸ್ಯೆ

ಪ್ರೀಕ್ವಾರ್ಟರ್‌ಫೈನಲ್ ಇಂದು: ಕೊರಿಯಾಗೆ ಐತಿಹಾಸಿಕ ಸಾಧನೆಯ ತವಕ
Last Updated 4 ಡಿಸೆಂಬರ್ 2022, 13:18 IST
ಅಕ್ಷರ ಗಾತ್ರ

ದೋಹಾ: ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಬ್ರೆಜಿಲ್,ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾ ತಂಡಕ್ಕೆ ಮುಖಾಮುಖಿಯಾಗಲಿದೆ.

ಸ್ಟೇಡಿಯಂ 974 ಅಂಗಣದಲ್ಲಿ ಸೋಮವಾರ ನಡೆಯುವ ಈ ಹಣಾಹಣಿಗೂ ಮುನ್ನ ದಕ್ಷಿಣ ಅಮೆರಿಕದ ತಂಡಕ್ಕೆ ಪ್ರಮುಖ ಆಟಗಾರರ ಗಾಯದ ಸಮಸ್ಯೆಯೇ ಪ್ರಮುಖ ಸವಾಲಾಗಿದೆ.

ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕ್ಯಾಮರೂನ್ ಎದುರು ಪ್ರಮುಖ ಆಟಗಾರರಿಲ್ಲದೆ ಕಣಕ್ಕಿಳಿದ ಬ್ರೆಜಿಲ್‌ 0–1ರಿಂದ ನಿರಾಸೆ ಅನುಭವಿಸಿತ್ತು.

ಸರ್ಬಿಯಾ ಎದುರಿನ ಪಂದ್ಯದ ವೇಳೆ ಗಾಯಗೊಂಡಿದ್ದ ದಿಗ್ಗಜ ಆಟಗಾರ ನೇಮರ್‌ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಕ್ಯಾಮರೂನ್ ವಿರುದ್ಧದ ಸೆಣಸಾಟದಲ್ಲಿ ಅಲೆಕ್ಸ್ ಟೆಲ್ಲೆಸ್‌ ಮತ್ತು ಗ್ಯಾಬ್ರಿಯಲ್ ಜೇಸಸ್‌ ಕೂಡ ಮೊಣಕಾಲು ಗಾಯಕ್ಕೆ ತುತ್ತಾಗಿದ್ದಾರೆ. ಟೂರ್ನಿಯ ಉಳಿದ ಪಂದ್ಯಗಳಿಗೆ ಅವರು ಲಭ್ಯರಿಲ್ಲ ಎಂದು ಬ್ರೆಜಿಲ್ ಫುಟ್‌ಬಾಲ್ ಸಂಸ್ಥೆ ಶನಿವಾರ ತಿಳಿಸಿದೆ.

ಟೂರ್ನಿಯ ಆರಂಭದಲ್ಲಿ ಗಾಯಗೊಂಡಿದ್ದ ಡ್ಯಾನಿಲೊ ಮತ್ತು ಅಲೆಕ್ಸ್ ಸ್ಯಾಂಡ್ರೊ ಕೂಡ ಈ ಪಂದ್ಯದಲ್ಲಿ ಆಡುವುದು ಅನುಮಾನ.

ಮಾರ್ಕಿನೋಸ್‌, ಡ್ಯಾನಿ ಅಲ್ವೇಸ್‌, ಎಡರ್‌ ಮಿಲಿಟಾವೊ, ರೊಡ್ರಿಗೊ, ಕ್ಯಾಸೆಮಿರೊ, ಲೂಕಾಸ್‌ ಪಕೆಟಾ, ರಿಚಾರ್ಲಿಸನ್‌ ಮೇಲೆ ಬ್ರೆಜಿಲ್‌ ತಂಡದ ಕೋಚ್‌ ಟೈಟ್‌ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

2002ರಲ್ಲಿ ಜಪಾನ್‌ ಮತ್ತು ಕೊರಿಯಾ ಟೂರ್ನಿಯ ಆತಿಥ್ಯ ವಹಿಸಿದಾಗ ದಕ್ಷಿಣ ಕೊರಿಯಾ ಸೆಮಿಫೈನಲ್‌ ತಲುಪಿತ್ತು. ಆ ಮೂಲಕ ಈ ಸಾಧನೆ ಮಾಡಿದ ಏಷ್ಯಾದ ಏಕೈಕ ತಂಡ ಎನಿಸಿಕೊಂಡಿತ್ತು. ಅದೇ ರೀತಿಯ ಸಾಧನೆಯನ್ನೂ ಇಲ್ಲಿ ಪುನರಾವರ್ತಿಸುವ ತವಕದಲ್ಲಿದೆ. ಸನ್‌ ಹೆಂಗ್‌ ಮಿನ್ ಅವರ ಮೇಲೆ ತಂಡ ಭರವಸೆ ಇಟ್ಟುಕೊಂಡಿದೆ. ಗುಂಪಿನ ಕೊನೆಯ ಪಂ‌ದ್ಯದಲ್ಲಿ ದಕ್ಷಿಣ ಕೊರಿಯಾ 2–1ರಿಂದ ಬಲಿಷ್ಠ ಪೋರ್ಚುಗಲ್ ತಂಡಕ್ಕೆ ಸೋಲುಣಿಸಿದ್ದು, ಆತ್ಮವಿಶ್ವಾಸದಲ್ಲಿದೆ.

ಉಭಯ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿ ಮುಖಾಮುಖಿಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT